ಬೆಂಗಳೂರು: ಮೂರೂ ಪಕ್ಷಗಳ ಅಭ್ಯರ್ಥಿಗಳೂ ಕರ್ನಾಟಕ ವಿಧಾನಸಭೆ ಚುನಾವಣೆ ಕಣದಲ್ಲಿ ತುರುಸಿನ ಪ್ರಚಾರ ನಡೆಸುತ್ತಿದ್ದು, ಕೇಂದ್ರ ನಾಯಕರು, ಸಚಿವರು ಕೂಡ ಈ ಪ್ರಚಾರದಲ್ಲಿ ಬಂದು ಭಾಗವಹಿಸುತ್ತಿದ್ದಾರೆ.
ಕಾಂಗ್ರೆಸ್ ಸಮಾವೇಶದಲ್ಲಿ ಖಾಲಿ ಖಾಲಿ ಕುರ್ಚಿಗಳು
ಮಂಗಳೂರಿನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಕುರ್ಚಿಗಳು ಖಾಲಿ ಖಾಲಿಯಾಗಿ ಕಾಣಿಸುತ್ತಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಇದರಿಂದ ಖರ್ಗೆ ಅವರಿಗೆ ಮುಜುಗರ ಉಂಟಾಗಿದೆ.
ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಸಿದ್ದರಾಮಯ್ಯ
ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ್ಖುರ್ದ್ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಲಿಂಗಾಯಿತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಹೇಳಿಕೆಯಿಂದಾದ ಡ್ಯಾಮೇಜ್ ಕಂಟ್ರೋಲ್ಗೆ ಅವರು ಮುಂದಾಗಿದ್ದಾರೆ.
ಬೊಮ್ಮಾಯಿ ಲಿಂಗಾಯತರಿಗೆ ಕಳಂಕ ತಂದ ಬಹಳ ಭ್ರಷ್ಟ ಸಿಎಂ ಅಂತಾ ಹೇಳಿದ್ದೆ. ಅದನ್ನ ತಿರುಚಿ ಲಿಂಗಾಯತ ವಿರೋಧಿ ಅನ್ನವರಂತೆ ನನ್ನ ಬಿಂಬಿಸಲು ಹೊರಟರು. ಎಂತಹ ನೀಚರೂರೀ ಇವರು ಎಂದಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಪ್ರಚಾರ ಆರಂಭಿಸಿದ್ದಾರೆ.
ತಿ. ನರಸೀಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 40% ಕಮಿಷನ್ ಸರ್ಕಾರವು ಒಟ್ಟು 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಮಹಾನಾಯಕರ ಪ್ರಚಾರ
ಮೈಸೂರು: ಮೈಸೂರು ಜಿಲ್ಲೆಯಲ್ಲಿಂದು ಮೂರೂ ಪಕ್ಷಗಳ ಘಟಾನುಘಟಿ ನಾಯಕರಿಂದ ಮತಯಾಚನೆ ನಡೆಯಲಿದೆ. ಜೆಡಿಎಸ್ ಪರ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಪರವಾಗಿ ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ಬಿಜೆಪಿ ಪರವಾಗಿ ಉತ್ತರ ಪ್ರದೇಶ ಡಿಸಿಎಂ ಬ್ರಿಜೇಶ್ ಪಠಾಕ್ ಪ್ರಚಾರ ಸಭೆ, ರೋಡ್ ಶೋ ನಡೆಸಲಿದ್ದಾರೆ.
ಬೆಳಗಾವಿಯಲ್ಲಿ ಹಾಲಿ- ಮಾಜಿ ಸಿಎಂಗಳ ಮತಬೇಟೆ ಇಂದು
ಬೆಳಗಾವಿ: ಬೆಂಗಳೂರು ಬಳಿಕ ಅತಿದೊಡ್ಡ ಜಿಲ್ಲೆ ಬೆಳಗಾವಿ ಮೇಲೆ ಕೈ- ಕಮಲ ನಾಯಕರ ಕಣ್ಣು ಬಿದ್ದಿದ್ದು ಬೆಳಗಾವಿಯಲ್ಲಿ ಇಂದು ಹಾಲಿ-ಮಾಜಿ ಸಿಎಂಗಳ ಭರ್ಜರಿ ಮತಬೇಟೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿಗಳ ಪರ ಸಿಎಂ ಬಸವರಾಜ ಬೊಮ್ಮಾಯಿ ರೋಡ್ ಶೋ, ಸಾರ್ವಜನಿಕ ಸಭೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ.