ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷದ ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕರ್ನಾಟಕ ಪ್ರವಾಸ (Modi In Karnataka) ಮಾಡಲಿದ್ದು, ಒಂದೇ ದಿನ ಆರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ 11.30 ಕ್ಕೆ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 2023 ರ ಇಂಧನ ಸಪ್ತಾಹವನ್ನು ಉದ್ಘಾಟನೆ ಮಾಡಲಿದ್ದಾರೆ. ಫೆಬ್ರವರಿ 6 ರಿಂದ 8 ರ ವರೆಗೆ ಐಇಡಬ್ಲ್ಯೂ ಆಯೋಜನೆಗೊಂಡಿದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಜಾಗತಿಕ ತೈಲ ಮತ್ತು ಅನಿಲ ವಲಯದ ಸಿಇಒಗಳ ದುಂಡು ಮೇಜಿನ ಸಭೆಯಲ್ಲಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಹಸಿರು ಇಂಧನ ಕ್ಷೇತ್ರದಲ್ಲಿ ಬಹುಹಂತದ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಪ್ರಧಾನಮಂತ್ರಿ, ಹಸಿರು ಸಾಗಣೆ ಜಾಥಾಗೆ ಚಾಲನೆ ನೀಡಲಿದ್ದಾರೆ. ನಂತರ ಪ್ರಧಾನಮಂತ್ರಿ ಅವರು ಭಾರತೀಯ ತೈಲ ನಿಮಗದ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಅವಳಿ ಕುಕ್ ಟಾಪ್ ಮಾದರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಬೆಂಗಳೂರು ಕಾರ್ಯಕ್ರಮದ ಬಳಿಕ ತುಮಕೂರಿಗೆ ಪ್ರಧಾನಿ ಪ್ರಯಾಣ ಮಾಡಲಿರುವ ಮೋದಿ, ಮಧ್ಯಾಹ್ನ 3.30 ಕ್ಕೆ ತುಮಕೂರಿನಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆ ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ. ಈ ವೇಳೆ ಹಲವಾರು ಅಭಿವೃದ್ದಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. 2016ರಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದ್ದ ಮೋದಿ, ಹಸಿರು ವಲಯ ಸಮರ್ಪಿತ ಹೆಲಿಕಾಪ್ಟರ್ ಕಾರ್ಖಾನೆಯಾಗಿ ನಿರ್ಮಾಣವಾಗಿದೆ. ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯವಿರುವ ಕಾರ್ಖಾನೆಯಾಗಲಿದೆ.
ಮುಂದಿನ 20 ವರ್ಷಗಳಲ್ಲಿ ಎಚ್ಎಎಲ್ ತುಮಕೂರಿನಲ್ಲಿ 3 ರಿಂದ 15 ಟನ್ ಸಾಮರ್ಥ್ಯದ 1000 ಕ್ಕೂ ಹೆಚ್ಚು ಹೆಲಿಕಾಪ್ಟರ್ ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ವಲಯದಲ್ಲಿ 6000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ. ಇದರ ಬಳಿಕ ಪ್ರಧಾನಮಂತ್ರಿ ಅವರು ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಇದನ್ನೂ ಓದಿ : Bill Gates Makes Roti: ಬಿಲ್ ಗೇಟ್ಸ್ ರೊಟ್ಟಿ ಲಟ್ಟಿಸಿದ್ದಕ್ಕೆ ಮೋದಿ ಮೆಚ್ಚುಗೆ, ಸಿರಿಧಾನ್ಯದ ರೊಟ್ಟಿ ಮಾಡಿ ಎಂದೂ ಸಲಹೆ
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮದಡಿ ತುಮಕೂರಿನಲ್ಲಿ ಮೂರು ಹಂತಗಳಲ್ಲಿ 8,484 ಎಕರೆ ಪ್ರದೇಶದಲ್ಲಿ ಮೂರು ಹಂತಗಳ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ನ ಭಾಗವಾಗಿದೆ. ನಂತರ ತುಮಕೂರಿನ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿನಲ್ಲಿ ಜಲ್ ಜೀವನ್ ಅಭಿಯಾನದ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ತಿಪಟೂರಿನ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು 430 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಚಿಕ್ಕನಾಯಕನಹಳ್ಳಿಯ 147 ಜನವಸತಿ ಪ್ರದೇಶಗಳಿಗೆ 115 ಕೋಟಿ ರೂಪಾಯಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ವಲಯದ ಜನರಿಗೆ ಶುದ್ದ ಕುಡಿಯುವ ನೀರು ಪೂರೈಸುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.
ನವದೆಹಲಿಗೆ ಸಿಎಂ, ಬಿಎಸ್ವೈ
ಭಾನುವಾರ ಮದ್ಯಾತ್ನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿಶೇಷ ವಿಮಾನದಲ್ಲಿ ಇಬ್ಬರರೂ ಒಟ್ಟಿಗೆ ಪ್ರಯಾಣಿಸಲಿದ್ದು, ಕೇಂದ್ರ ನಾಯಕರನ್ನು ಭೇಟಿ ಮಾಡಲಿದ್ದಾರೆ. ಸೋಮವಾರವೇ ಪ್ರಧಾನಿ ಆಗಮಿಸುತ್ತಿದ್ದರೂ ಭಾನುವಾರ ಇಬ್ಬರನ್ನೂ ವಿಶೇಷ ವಿಮಾನದ ಮೂಲಕ ಕರೆಸಿಕೊಳ್ಳುತ್ತಿರುವುದ ಕುರಿತು ಕುತೂಹಲ ಮನೆಮಾಡಿದೆ.