Site icon Vistara News

Sunday read | ಹೊಸ ಪುಸ್ತಕ | ಭೀಷ್ಮರು ಹೇಳಿದ ಕಥೆ | ಕರುಣೆ ಅಸಾಮರ್ಥ್ಯವಲ್ಲ

stories of bhishma

ಅದೊಂದು ಬೂರುಗದ ಮರ. ಅದು ಇದ್ದದ್ದು ಹಿಮಗಿರಿಯಲ್ಲಿ. ಅದು ಇರುತ್ತಾ ಅದೆಷ್ಟೋ ವರ್ಷ ಕಳೆದಿತ್ತು. ದಪ್ಪವಾದ ಕಾಂಡ, ದಶದಿಕ್ಕಿಗೂ ಹರಡಿದ ಲೆಕ್ಕವಿಲ್ಲದಷ್ಟು ಕೊಂಬೆಗಳು, ತುಂಬಿದ ಎಲೆಗಳು, ಹೀಗಿದ್ದ ಆ ಮರ ಒಂದು ಪ್ರದೇಶವನ್ನೇ ವ್ಯಾಪಿಸಿತ್ತು. ಬಿಸಿಲಿಗೆ ಬಸವಳಿದ ಆನೆಯಂತಹ ಪ್ರಾಣಿಯೂ ಅದರ ಅಡಿಯಲ್ಲಿ ನೆರಳು ಬಯಸುತ್ತಿತ್ತು ಎಂದ ಮೇಲೆ ಉಳಿದ ಪ್ರಾಣಿಗಳ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಅದರಲ್ಲಿ ಗೂಡು ಕಟ್ಟಿದ ಪಕ್ಷಿಗಳಿಗೆ ಲೆಕ್ಕವಿರಲಿಲ್ಲ. ಆ ದಾರಿಯಲ್ಲಿ ಸಂಚರಿಸುವ ವ್ಯಾಪಾರಿಗಳಿಗೂ, ಕಾಡಲ್ಲೇ ಇರುವ ತಪಸ್ವಿಗಳಿಗೂ ಅದು ನೆರಳಾಗಿತ್ತು. ಅದು ರಮ್ಯವಾಗಿಯೂ ಇತ್ತು.

ಜಗದೀಶ ಶರ್ಮಾ ಸಂಪ

ಎಷ್ಟೋ ಕಾಲದಿಂದ ನಾರದರು ಈ ಮರವನ್ನು ನೋಡುತ್ತಿದ್ದರು. ತ್ರಿಲೋಕಸಂಚಾರಿಯಾದ ಅವರು ಅತ್ತ ಸಂಚರಿಸುವಾಗೆಲ್ಲ ಇದನ್ನು ಕಾಣುತ್ತಿದ್ದರು. ಅವರಿಗೆ ಇದೊಂದು ಅಚ್ಚರಿಯೇ ಆಗಿತ್ತು. ಒಂದು ದಿನ ಅವರು ಮರವನ್ನು ಮಾತನಾಡಿಸಿದರು. ʻಅಬ್ಬಾ, ಎಂತಹ ಸೌಂದರ್ಯ ನಿನ್ನದು! ಮನೋರಮ ನೀನು! ಪಕ್ಷಿ ಪ್ರಾಣಿ ಮನುಷ್ಯ ಎಲ್ಲರಿಗೂ ಆಶ್ರಯ. ನಿನ್ನ ಬಗ್ಗೆ ಮನಸ್ಸು ಪ್ರಸನ್ನವಾಗಿದೆ. ನನಗೊಂದು ಕೌತುಕ. ಎಂದಿನಿಂದಲೋ ನೋಡುತ್ತಿದ್ದೇನೆ, ನಿನ್ನ ಒಂದು ಕೊಂಬೆಯೂ ಮುರಿದದ್ದು ಕಾಣಿಸಿಲ್ಲ. ವಾಯುವಿಗೆ ನಿನ್ನ ಬಗ್ಗೆ ಪ್ರೀತಿಯೇ? ಅಥವಾ ಅವನು ನಿನ್ನ ಗೆಳೆಯನೇ? ನಿನ್ನನ್ನು ಅವನು ಕಾಪಾಡಲು ಕಾರಣವೇನು? ಅವನು ಮಹಾವೃಕ್ಷಗಳನ್ನೇ ಬೀಳಿಸುವವ ಶಿಖರಗಳನ್ನು ಅಲ್ಲಾಡಿಸುವವ. ಮಡು, ನದಿ, ಸಾಗರಗಳನ್ನು ಒಣಗಿಸುವವ. ಅವನು ಪಾತಾಳವನ್ನೂ ಬಿಡುವುದಿಲ್ಲ. ಅವನ ರಕ್ಷಣೆಯೇ ನಿನ್ನ ಬಲ. ಹಾಗಾಗಿಯೇ ನೀನು
ರೆಂಬೆ, ಕೊಂಬೆ, ಎಲೆ, ಹಣ್ಣು ಎಲ್ಲದರಿಂದ ಸದಾ ಸಮೃದ್ಧನಾಗಿ ಇರುವೆ’ ಎಂದರು.

ʻದೇವರ್ಷಿ, ವಾಯುವು ನನಗೆ ಗೆಳೆಯನೂ ಅಲ್ಲ, ಬಂಧುವೂ ಅಲ್ಲ, ಆತ್ಮೀಯನೂ ಅಲ್ಲ. ನನ್ನನ್ನು ರಕ್ಷಿಸಲು ಅವನೇನು ಬ್ರಹ್ಮನೇ? ನನ್ನ ಪರಾಕ್ರಮದ ಹದಿನೆಂಟನೇ ಒಂದು ಭಾಗವೂ ಅವನಿಗಿಲ್ಲ. ಪರ್ವತ, ವೃಕ್ಷಗಳನ್ನೆಲ್ಲ ಬೆದರಿಸುತ್ತಾ ಹಲವು ಬಾರಿ ನನ್ನ ಮೇಲೂ ದಾಳಿ ಮಾಡಿದ್ದನು. ತಡೆದು ಓಡಿಸಿದ್ದೆ. ಜೊತೆಗೆ ಅವನ ಬಲವನ್ನೂ ಕುಗ್ಗಿಸಿದ್ದೆ. ಅವನಿಗೋ ಅವನ ಕೋಪಕ್ಕೋ ಅಂಜುವ ಮಾತೇ ಇಲ್ಲ’ ಎಂದಿತು ಬೂರುಗ.

ʻಇದು ವಿಪರೀತದ ಮಾತು. ವಾಯುವಿನ ಬಲಕ್ಕೆ ಸರಿಸಮವಾದದ್ದು ಯಾವುದೂ ಇಲ್ಲ. ಇಂದ್ರ, ಯಮ, ಕುಬೇರ, ವರುಣ ಇವರೇ ಅವನಿಗೆ ಸಾಟಿಯಲ್ಲವಂತೆ, ಇನ್ನು ನೀನೆಷ್ಟರವನು? ಯಾವುದೇ ಜೀವಿಯ ಸಣ್ಣ ಚಲನೆಗೂ ವಾಯುವೇ ಕಾರಣ. ಎಲ್ಲ ಜೀವಿಗಳಿಗೂ ಆಶ್ರಯನಾದ ಅವನನ್ನು ನೀನು ಗೌರವಿಸದಿರುವುದು ನಿನ್ನ ಕ್ಷುಲ್ಲಕತೆ. ಒಳಗೆ ಟೊಳ್ಳು ನೀನು, ಹೊರಗೆ ಭಾರೀ ಮಾತನಾಡುವೆ. ಸಿಟ್ಟು, ಸುಳ್ಳು, ಸೊಕ್ಕು ಎಲ್ಲವೂ ಇದೆ ನಿನಗೆ, ನಿನ್ನ ಮೇಲೆ ತಡೆಯಲಾಗದಷ್ಟು ಕೋಪ ಬರುತ್ತಿದೆ. ನಿನ್ನ ಈ ದುಷ್ಟ ಮಾತನ್ನು ಖಂಡಿತವಾಗಿ ವಾಯುವಿಗೆ ತಿಳಿಸುತ್ತೇನೆ. ಚಂದನ, ಶಾಲ, ಸರಲ, ಬೆತ್ತ, ದೇವದಾರುವಿನಂತಹ ಶ್ರೇಷ್ಠ ವೃಕ್ಷಗಳೇ ಅವನಿಗೆ ಬಾಗುತ್ತವೆ. ಯಾಕೆಂದರೆ ಅವಕ್ಕೆ ಅವನ ಸಾಮರ್ಥ್ಯ ಗೊತ್ತು. ನಿನಗೆ ಸೊಕ್ಕು. ಹಾಗಾಗಿ ಅವನ ಬಲ ನಿನಗೆ ಗೊತ್ತಿಲ್ಲ’ ಎಂದು ಬೂರುಗದ ಮೇಲೆ ಸಿಟ್ಟಾದರು ನಾರದರು.

ಅದೇ ಕೋಪದಲ್ಲಿ ವಾಯುವಿನ ಬಳಿಗೆ ಹೋದರು. ʻಹಿಮವತ್ ಪರ್ವತದ ತಪ್ಪಲಿನಲ್ಲಿ ಒಂದು ಬೂರುಗ ಮರವಿದೆ. ಆಳಕ್ಕಿಳಿದ ಬೇರು, ವಿಶಾಲವಾಗಿ ಹರಡಿದ ರೆಂಬೆ ಕೊಂಬೆಗಳ ಬೃಹತ್ ವೃಕ್ಷವದು. ಅದು ನಿನ್ನನ್ನು ಅವಮಾನಿಸುತ್ತಿದೆ. ನಿನ್ನ ಬಗ್ಗೆ ಸಲ್ಲದ ಮಾತನ್ನಾಡುತ್ತಿದೆ. ಆ ಮಾತುಗಳನ್ನು ನಾನಂತೂ ನಿನ್ನೆದುರು ಹೇಳಲಾರೆ. ನೀನು ಪ್ರಾಣಿಗಳಲ್ಲೇ ಶ್ರೇಷ್ಠ. ನೀನು ವರಿಷ್ಠ, ನೀನೇ ಗರಿಷ್ಠ. ನಿನಗೆ ಸಿಟ್ಟು ಬಂದರೆ ಅದು ಯಮನಂತೆ’ ಎಂದರು.

ಇದನ್ನೂ ಓದಿ | ಹೊಸ ಪುಸ್ತಕ | LTTE ಮೂರ್ತಿ Calling | ನೈಜ ಘಟನೆಯ ರೋಚಕ ಕಥೆ

ನಾರದರ ಮಾತಿನಿಂದ ವಾಯುವಿಗೆ ಕೋಪವೇರಿತು. ಬೂರುಗದ ಎದುರು ಬಂದನವ. ʻಬೂರುಗ, ನಾರದರ ಬಳಿ ಏನೋ ಹೇಳಿದೆಯಂತೆ? ನನ್ನನ್ನು ತುಚ್ಚೀಕರಿಸಿ ಮಾತನಾಡಿದೆಯಂತೆ? ವಾಯುವಿನ ಪ್ರಭಾವವನ್ನು ನಿನಗೆ ಇವತ್ತು ತೋರಿಸುತ್ತೇನೆ. ನಿನ್ನ ಬಗ್ಗೆ ನನಗೆ ತಿಳಿದಿಲ್ಲ ಎಂದುಕೊಳ್ಳಬೇಡ. ಎಲ್ಲ ಗೊತ್ತಿದೆ ನನಗೆ. ಹಿಂದೆ ಸೃಷ್ಟಿಕಾರ್ಯ ಮಾಡುವಾಗ ಬ್ರಹ್ಮ ನಿನ್ನ ನೆರಳಲ್ಲಿ ವಿಶ್ರಾಂತಿ ಪಡೆದಿದ್ದ. ಆ ಗೌರವದಿಂದಾಗಿ ನಿನ್ನನ್ನು ರಕ್ಷಿಸಿಕೊಂಡು ಬಂದೆ. ಅದು ನಿನ್ನ ಸಾಮರ್ಥ್ಯವಲ್ಲ, ನನ್ನ ಸದಭಿಪ್ರಾಯ. ಯಾರೋ ಕ್ಷುದ್ರನಂತೆ ನನ್ನನ್ನು ಅವಮಾನಿಸಿದೆಯಲ್ಲವೇ? ತೋರಿಸುತ್ತೇನೆ ಈಗ. ನಾನಾರೆಂದು ಅರಿಯಬಹುದಂತೆ’ ಎಂದು ಅಬ್ಬರಿಸಿದ.

ನಸು ನಕ್ಕಿತು ಬೂರುಗ. ʻವಾಯು, ನಿನ್ನ ಕೋಪತಾಪವನ್ನು ಬೇರೆಡೆ ತೋರಿಸು. ನನ್ನ ಎದುರು ಇವೆಲ್ಲ ಬೇಡ. ಸಿಟ್ಟಾಗಿ ನನಗೇನು ಮಾಡಬಲ್ಲೆ ನೀನು? ನೀನು ಸ್ವಯಂ ಪ್ರಭುವೇ ಆದರೂ ನನಗೇನೂ ಭಯವಿಲ್ಲ’ ಎಂದಿತದು. ʻನಾಳೆ ತೋರಿಸುತ್ತೇನೆ ನಿನಗೆ ನಾನು ಯಾರೆಂದು’ ಎಂದ ವಾಯು ಹಿಂದಿರುಗಿದ. ಆ ಹೊತ್ತಿಗೆ ರಾತ್ರಿಯೂ ಆಗಿತ್ತು.

ವಾಯು ಹೋದಮೇಲೆ ಬೂರುಗ ತನ್ನಲ್ಲೇ ಯೋಚಿಸಿತು. ವಾಯುವಿನ ಉತ್ಪಾತಗಳನ್ನು ನೆನಪಿಸಿಕೊಂಡಿತು. ತಾನು ವಾಯುವಿಗೆ ಸಮವಲ್ಲ ಎನಿಸಿತು. ʻನಾರದರ ಬಳಿ ನಾನು ಹೇಳಿದ್ದೆಲ್ಲ ಸರಿಯಲ್ಲ. ವಾಯುವೇ ನನಗಿಂತ ಬಲಿಷ್ಠ. ಅವರು ಹೇಳಿದ್ದೇ ಸರಿ. ವಾಸ್ತವವಾಗಿ ಬೇರೆ ವೃಕ್ಷಗಳಿಗಿಂತ ನಾನು ದುರ್ಬಲ. ಆದರೂ ಇಷ್ಟು ಕಾಲ ಹೀಗೆ ಬದುಕಿದ್ದೇನೆಂದರೆ ಅದಕ್ಕೆ ನನ್ನ ಜಾಣ್ಮೆ ಕಾರಣ. ಅವುಗಳಿಗಿಂತ ನಾನೇ ಬುದ್ಧಿವಂತ. ಈಗ ನಾನು ಬುದ್ಧಿಯಿಂದಲೇ ಗೆಲ್ಲಬೇಕು. ಈ ಹುಡುಗುಬುದ್ಧಿಯ ಮರಗಳಿಗೆ ಬುದ್ಧಿಯಿಲ್ಲ. ಹಾಗಾಗಿಯೇ ವಾಯುವಿಗೆ ಸೋಲುತ್ತವೆ. ಅವನು ನಮ್ಮನ್ನು ಬೀಳಿಸುವುದು ಹೇಗೆ ಎಂದು ಯೋಚಿಸಿದರೆ ಪರಿಹಾರ ಸಿಗುತ್ತದೆ. ನಮ್ಮ ರೆಂಬೆಕೊಂಬೆಗಳು, ನಮ್ಮ ಎಲೆಹಣ್ಣುಗಳು ಅವನ ಕೆಲಸವನ್ನು ಸುಲಭ ಮಾಡಿಕೊಡುತ್ತವೆ. ಅವೇ ಇಲ್ಲವಾದರೆ ಅವನೇನು ಮಾಡಿಯಾನು? ಈ ಪೆದ್ದುಗಳಿಗೆ
ಇಷ್ಟೂ ಅರ್ಥವಾಗದು’ ಎಂದು ಆಲೋಚಿಸಿತು. ಕಷ್ಟಪಟ್ಟು ತನ್ನ ಎಲೆ, ಹೂವು, ಕೊಂಬೆ ಎಲ್ಲವನ್ನೂ ಮುರಿದುಕೊಂಡಿತು. ಈಗ ಅದು ಒಣ ಮರವಾಗಿ ಕಾಣಿಸುತ್ತಿತ್ತು. ವಾಯುವಿನ ನಿರೀಕ್ಷೆಯಲ್ಲಿತ್ತು.

ಬೆಳಗಾಯಿತು. ವಾಯು ಪ್ರಚಂಡವಾಗಿ ಬೀಸುತ್ತಾ ಬಂದ. ಸಿಟ್ಟು ಆವರಿಸಿತ್ತು ಅವನನ್ನು. ಬೂರುಗವನ್ನು ಕಂಡವ ನಕ್ಕುಬಿಟ್ಟ. ಎಲೆ, ಕಾಯಿ, ಹಣ್ಣು, ಕೊಂಬೆ ಏನೂ ಇಲ್ಲದ ಬೋಳು ಮರ ಅಲ್ಲಿತ್ತು. ಮುರಿಯಲು ಅಲ್ಲೇನೂ ಇರಲಿಲ್ಲ. ʻಬೂರುಗ, ನಾನು ಇದನ್ನೇ ಮಾಡಬೇಕೆಂದಿದ್ದೆ. ನೀನೇ ಮಾಡಿಕೊಂಡೆ. ಅಂತೂ ನನ್ನ ಬಲಕ್ಕೆ ಬಾಗಿದೆ’ ಎಂದ. ನಾಚಿಕೆಯೆನಿಸಿತು ಬೂರುಗಕ್ಕೆ. ನಾರದರ ಮಾತನ್ನು ಅದು ನೆನಪಿಸಿಕೊಂಡಿತು.

ಇದನ್ನೂ ಓದಿ : Sunday read | ಹೊಸ ಪುಸ್ತಕ | ಹೀರೋಯಿನ್‌ ಹಾಗೆ ಇದ್ದ ಹುಡುಗಿ

ಸಿಕ್ಕ ಹುದ್ದೆ, ಯಾರೂ ಎಡತಾಕದಿರುವುದು, ತನ್ನಷ್ಟಕ್ಕೆ ನಡೆದುಕೊಳ್ಳಲು ಸ್ವಾತಂತ್ರ್ಯವಿರುವುದು ಇವೆಲ್ಲ ತಲೆಯ ಮೇಲೆ ಕಿರೀಟ ತೊಡಿಸಿಬಿಡುತ್ತದೆ. ತನ್ನನ್ನು ಬಿಟ್ಟರಿಲ್ಲ ಎನಿಸುತ್ತದೆ. ತನಗೆ ಸಾವಿರ ತಲೆಯಿದೆ, ಎರಡು ಸಾವಿರ ಕೈಯಿದೆ, ತಾನು ಸರ್ವಶಕ್ತ, ಸರ್ವಜ್ಞ ಎಂದು ಮೆರೆಯತೊಡಗುತ್ತಾರೆ. ಹೀಗೆ ಮಾಡುತ್ತಲೇ ಒಂದು ದಿನ ದೊಡ್ಡ ಬಂಡೆಗೆ ಡಿಕ್ಕಿ ಹೊಡೆಯುತ್ತಾರೆ. ಅಲ್ಲಿಗೆ ಮುಗಿಯಿತು. ನೂರು ಜನರೆದುರು ಬೆತ್ತಲಾದಂತೆ. ಹಾಗಾಗಿ ಮೇಲೇರಿದಂತೆ ಎಚ್ಚರಿಕೆ ಬೇಕು. ಯಾರೋ ಸುಮ್ಮನಿರುವುದು ನಮ್ಮ ಸಾಮರ್ಥ್ಯವಾಗಿರದು. ಅದು ಅವರ ಕರುಣೆಯೇ ಆಗಿರಬಹುದು. ಹಾಗಾಗಿ ದುರಹಂಕಾರದ ವರ್ತನೆ ಎಂದಿಗೂ ಸಲ್ಲ. ಏರಿದವನು ಚಿಕ್ಕವನಿರಬೇಕು ಎಂದು ಸೂರ್ಯ ತೋರಿಸಿಕೊಡುತ್ತಾನೆ ಎನ್ನುವ ಜನಪದದ ಸಾಲಿಗೆ ಹೊಂದುವಂತೆ ಇರಬೇಕು.

ಪುಸ್ತಕ: ಭೀಷ್ಮ ಹೇಳಿದ ಮ್ಯಾನೇಜ್‌ಮೆಂಟ್‌ ಕಥೆಗಳು
ಲೇಖಕರು: ಜಗದೀಶ ಶರ್ಮಾ ಸಂಪ
ಪ್ರಕಾಶನ: ಸಾವಣ್ಣ
ಪುಟ ೧೭೬, ಬೆಲೆ ೧೮೦ ರೂ.

Exit mobile version