Site icon Vistara News

ಭಾರತದ ಸ್ವಾತಂತ್ರ್ಯ ದಿನ ಗೂಗಲ್‌ನಲ್ಲಿ ಕಾಣಿಸಿಕೊಂಡ ಗಾಳಿಪಟದ ಡೂಡಲ್ ಅರ್ಥವೇನು?

kites

ದಿನ ಬೆಳಗಾದರೆ, ಹಾಸಿಗೆಯಿಂದೇಳುವ ಹೊತ್ತಿಗೇ ಅನಾಯಾಸವಾಗಿ ಕೈ ಮೊಬೈಲು ಹುಡುಕುತ್ತದೆ. ಮುದುಕರಿಂದ ಮಕ್ಕಳಾದಿಯಾಗಿ ಅವರವರ ಆಸಕ್ತಿ ಅಗತ್ಯಗಳಿಗನುಗುಣವಾಗಿ ದಿನದಲ್ಲಿ ಏನಿಲ್ಲವೆಂದರೂ ಹಲವಾರು ಬಾರಿ ಏನಾದರೊಂದು ವಿಷಯಕ್ಕೆ ನಮ್ಮ ಬೆರಳುಗಳು ಗೂಗಲ್‌ ಹುಡುಕುತ್ತವೆ. ಆಗ ನಮ್ಮ ಕುತೂಹಲಕ್ಕೆ ಮೊದಲು ಕಾಣುವುದೇ ಡೂಡಲ್.‌ ಗೂಗಲ್‌ ಸರ್ಚ್‌ ಬಾರಿನ ಮೇಲೆ ಡೂಡಲ್‌ ಚಿತ್ರಗಳ ಮೂಲಕ ದೇಶ, ಅಂತಾರಾಷ್ಟ್ರೀಯ ಪ್ರಾಮುಖ್ಯತೆಗಳ್ನು ಕಲಾತ್ಮಕವಾಗಿ, ಕ್ರಿಯಾಶೀಲವಾಗಿ ನಮ್ಮ ಮುಂದೆ ತೆರೆದಿಟ್ಟು, ʻಅರೆ, ಇಂದಿನ ವಿಶೇಷ ಏನು?ʼ ಎಂದು ನಮ್ಮ ಕಣ್ಣು ಆ ದಿನದ ಪ್ರಾಮುಖ್ಯತೆಯನ್ನು ಹುಡುಕುವಂತೆ ಮಾಡುವ ರೇಖಾಚಿತ್ರ ʻಡೂಡಲ್‌ʼ ಎಲ್ಲರಿಗೂ ಪ್ರಿಯ.

ದೇಶ ಸ್ವತಂತ್ರವಾಗಿ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ನಿಂತಾಗ ಗೂಗಲ್‌ ಡೂಡಲ್‌ ಮೂಲಕ ಹೇಗೆ ತೋರಿಸಿರಬಹುದು ಎಂಬ ಕುತೂಹಲ ಡೂಡಲ್‌ ಅನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದಿರುವ ಎಲ್ಲರಿಗೂ ಇದ್ದೇ ಇರುತ್ತದೆ. ಅಂತೆಯೇ ಇಂದು ಗೂಗಲ್‌ನಲ್ಲಿ ಭಾರತದ ಸ್ವಾತಂತ್ರ್ಯದ ಅಮೃತಮಹೋತ್ಸವವೇ ಹೈಲೈಟ್‌ ಆಗಿದೆ. ೭೫ ವರ್ಷಗಳನ್ನು ಪೂರೈಸಿದ ಹೊಸ್ತಿಲಲ್ಲಿ ನಿಂತು ಸ್ವಾತಂತ್ರ್ಯದ ಸವಿ ಅನುಭವಿಸುತ್ತಿರುವ ದೇಶವೊಂದು ಡೂಡಲ್‌ನಲ್ಲಿ ವರ್ಣಮಯವಾಗಿ ಕಂಡಿದೆ.

ಈ ಡೂಡಲ್‌ ತನ್ನ ಚಿತ್ರದ ಮೂಲಕ ಸಾಕಷ್ಟು ವಿಚಾರಗಳನ್ನು ಸೂಕ್ಷ್ಮವಾಗಿ ದಾಟಿಸಿದೆ. ಬಣ್ಣ ಬಣ್ಣದ ಗಾಳಿಪಟಗಳು, ಗಾಳಿಪಟ ಮಾಡಲು ಕುಳಿತ ಮಹಿಳೆ, ೭೫ ಎಂದು ಬರೆದ ಗಾಳಿಪಟ ಹಾರಿಸುತ್ತಿರುವ ಮಕ್ಕಳು ಈ ಡೂಡಲ್‌ನಲ್ಲಿವೆ. ಗಾಳಿಪಟಗಳೆಂಬ ಸಾಂಸ್ಕೃತಿಕ ಪರಂಪರೆಯನ್ನು ದೇಶ ೭೫ರ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಇನ್ನಷ್ಟು ಮತ್ತಷ್ಟು ಮೇಲಕ್ಕೇರುತ್ತಿರುವುದನ್ನು ಸಾಂಕೇತಿಕವಾಗಿ ಡೂಡಲ್‌ ಮೂಲಕ ಹೇಳಲಾಗಿದೆ. ಈ ಬಾರಿ ಈ ಡೂಡಲ್‌ ವಿನ್ಯಾಸಗೊಳಿಸಿದವರು ಕೇರಳದ ಆರ್ಟಿಸ್ಟ್‌ ನೀತಿ.

ನೀತಿ ಅವರು ಹೇಳುವಂತೆ, ಗಾಳಿಪಟ ಎನ್ನುವ ಕಲೆಗೆ ಬಹಳ ಪುರಾತನ ಕಾಲದಿಂದಲೂ ಸಾಂಸ್ಕೃತಿಕ ಮಹತ್ವವಿದೆ. ಇದು ಕೇವಲ ಮಕ್ಕಳ ಆಟವಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಳಿಪಟವನ್ನು ಸ್ವಾತಂತ್ರ್ಯ ಹೋರಾಟದಲ್ಲೂ ಹಲವು ಮಾದರಿಗಳಲ್ಲಿ ಬಳಸಲಾಗಿತ್ತು. ಗಾಳಿಪಟಗಳ ಮೂಲಕ ಸ್ವಾತಂತ್ರ್ಯ ರಾಟ ಸಂಬಂಧೀ ಘೋಷವಾಕ್ಯಗಳನ್ನು ಬರೆದು ಹಾರಿಸಿ ಬಿಡಲಾಗುತ್ತಿತ್ತು. ಆ ಮೂಲಕ ದೇಶದ ಜನರ ಮನೆಮನಗಳಲ್ಲಿ ದೇಶಪ್ರೇಮದ ಕೆಚ್ಚು ಹೆಚ್ಚುವಲ್ಲಿ ಗಾಳಿಪಟಗಳ ಕಾಣಿಕೆಯೂ ಇದೆ. ಹಾಗಾಗಿ ಗಾಳಿಪಟವನ್ನು ನನ್ನ ಡೂಡಲ್‌ನಲ್ಲಿ ಬಳಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಅಮೃತ ನೆನಪು-75 | ಸ್ವಾತಂತ್ರ್ಯ ಹೋರಾಟದ ಜ್ವಾಲೆಯಲ್ಲಿ ಹವಿಸ್ಸಾದವರು ಇವರು!

೭೫ ವರ್ಷ ಪೂರ್ಣಗೊಳಿಸಿ ೭೬ಕ್ಕೆ ಬಂದು ನಿಂತಿದ್ದೇವೆ. ಈ ಸಂದರ್ಭ ತ್ರಿವರ್ಣಗಳ ಗಾಳಿಪಟಗಳ ಮೂಲಕ ನಾನು ಇಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಕಾಣಿಕೆಯನ್ನೂ ನೀಡಿದ, ಮನಮನಗಳನ್ನು ಸಾಂಸ್ಕೃತಿಕವಾಗಿ ಬೆಸೆಯುವ ಗಾಳಿಪಟಗಳನ್ನು ಮುಖ್ಯವಾಗಿ ತೆಗೆದುಕೊಂಡು ಸಾಂಸ್ಕೃತಿಕವಾಗಿ ಭವ್ಯ ಪರಂಪರೆಯಿರುವ ದೇಶಕ್ಕೆ ನಮನ ಸಲ್ಲಿಸಲು ಪ್ರಯತ್ನಿಸಿದ್ದೇನೆ. ಎಲ್ಲರಿಗೂ ಇಷ್ಟವಾಗಿರಬಹುದು ಎಂದು ನಂಬಿದ್ದೇನೆ ಎಂದಿದ್ದಾರೆ.

ಈ ಸಾರಿಯ ಉತ್ಸವಕ್ಕೆ ಹೆಸರೇ ಆಜಾದೀ ಕಾ ಅಮೃತ್‌ಮಹೋತ್ಸವ. ಹೆಸರಿಗೆ ತಕ್ಕಂತೆ ಸ್ವತಂತ್ರವಾಗಿ ನಾವು ಹಂಗು, ಬಂಧನಗಳನ್ನು ಮೀರಿ ಏರಬೇಕಾದ ಎತ್ತರ, ವಿಸ್ತರಿಕೊಳ್ಳಬೇಕಾದ ಮಿತಿಗಳು ಎಲ್ಲವನ್ನೂ ಈ ಗಾಳಿಪಟಗಳ ಹಾರಾಟವೇ ಧ್ವನಿಸುತ್ತದೆ. ಗಾಳಿಪಟ ಎಂದರೆ ಪ್ರಗತಿ. ದೇಶವಾಗಿ ನಾವು ೭೫ ವರ್ಷಗಳಲ್ಲಿ ಸಾಧಿಸಿದ ಪ್ರಗತಿ ಹಾಗೂ ಇನ್ನೂ ನಾವು ಸಾಗಬೇಕಾದ ಹಾದಿ ಎರಡನ್ನೂ ಗಾಳಿಪಟ ಸೂಚ್ಯವಾಗಿ ಹೇಳುತ್ತದೆ ಎಂದು ನೀತಿ ಹೇಳಿದ್ದಾರೆ.

ನನಗೆ ಬಾಲ್ಯದಲ್ಲಿ ಸ್ವಾತಂತ್ರ್ಯ ದಿನದಂದು ಗಾಳಿಪಟ ಹಾರಿಸಿದ ನೆನಪುಗಳಿವೆ. ಸ್ವಾತಂತ್ರ್ಯೋತ್ಸವ ಎಂದರೆ ಗಾಳಿಪಟದ ಹಾರಾಟ ಅದರ ಭಾಗ. ಹೀಗಾಗಿ, ಸಾಂಕೇತಿಕವಾಗಿ ಗಾಳಿಪಟದ ಪ್ರಾಮುಖ್ಯತೆ ನನಗೆ ಹೆಚ್ಚು ಹತ್ತಿರವಾಯಿತು ಎಂದು ಅವರು ಗಾಳಿಪಟವನ್ನೇ ಮುಖ್ಯವಾಗಿ ಬಳಸಿದ್ದರ ಬಗೆಗೆ ವಿವರಿಸಿದ್ದಾರೆ. ತನ್ನ ಡೂಡಲ್‌ನಲ್ಲಿ ಬಳಸಿದ ಸೂರ್ಯ, ಬಹುಮಹಡಿ ಕಟ್ಟಡಗಳ ಹಿನ್ನೆಲೆಯೂ ಕೂಡಾ ಕಟ್ಟಡಗಳ ಮಿತಿಯನ್ನೂ ದಾಟಿ ಸೂರ್ಯನೆತ್ತರಕ್ಕೆ ಹಾರಬೇಕೆನ್ನುವುದೇ ಆಗಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ | ಸ್ವಾತಂತ್ರ್ಯ ಸೇನಾನಿಗಳ ರುಧಿರಾಭಿಷೇಕ

Exit mobile version