ನವ ದೆಹಲಿ: ನೂತನ ಆಕಾಶ ಏರ್ ಕಂಪನಿಯು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ (DGCA) ಗುರುವಾರ ವಾಯುಯಾನ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಸಂಸ್ಥೆಯು ಏರ್‌ಲೈನ್ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂದು ಡಿಜಿಸಿಎ ಹೇಳಿದೆ.
ಸಂಸ್ಥೆಯ ಮಾಲಿಕ, ಏಸ್ ಸ್ಟಾಕ್ ಮಾರುಕಟ್ಟೆ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರು ಹೇಳಿರುವಂತೆ ಸಂಸ್ಥೆಯು ಜುಲೈ ಅಂತ್ಯದಲ್ಲಿ ಸೇವೆಗಳನ್ನು ಪ್ರಾರಂಭಿಸಲಿದೆ. “ಇದೊಂದು ಮಹತ್ವದ ಮೈಲಿಗಲ್ಲು. ನಮ್ಮ ವಿಮಾನಗಳ ಹಾರಾಟ ಹಾಗೂ ವಾಣಿಜ್ಯ ಕಾರ್ಯಾಚರಣೆಗಳ ಪ್ರಾರಂಭಕ್ಕೆ ಇದು ದಾರಿ ಮಾಡಿಕೊಟ್ಟಿದೆ” ಎಂದು ಸಂಸ್ಥೆಯು ಹೇಳಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಂಪನಿಯು ತನ್ನ ಬ್ರಾಂಡ್ ಲೋಗೋವನ್ನು ಅನಾವರಣಗೊಳಿಸಿದೆ. ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತಿ ಗಳಿಸಿರುವ ಪ್ರಸಿದ್ಧ ಷೇರು ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಮಾಲಿಕತ್ವದ ಹೊಸ ಏರ್‌ಲೈನ್ ಆಕಾಶ ಏರ್. ಈ ಏರ್‌ಲೈನ್ ತನ್ನ ಮೊದಲ ಬೋಯಿಂಗ್ ೭೩೭ ಮ್ಯಾಕ್ಸ್ ವಿಮಾನವನ್ನು ಕಳೆದ ಜೂನ್ ೧೫ರಂದು ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿದೆ. ಒಟ್ಟು ೭೨ ಬೋಯಿಂಗ್ ವಿಮಾನಗಳಿಗೆ ಕಂಪನಿ ಆರ್ಡರ್ ಮಾಡಿದೆ. ಎಸ್‌ಎನ್‌ವಿ ಏವಿಯೇಶನ್ ಸಂಸ್ಥೆಯ ಬ್ರ್ಯಾಂಡ್ ಆಗಿ ಆಕಾಶ ಏರ್ ೨೦೨೧ರ ಡಿಸೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಮುಂಬಯಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಅಗ್ಗದ ದರದಲ್ಲಿ ವಿಮಾನಯಾನ ಸೇವೆ ಒದಗಿಸುವ ಏರ್‌ಲೈನ್ (Low cost airline). ಈ ವರ್ಷಾಂತ್ಯದ ವೇಳೆಗೆ ಆಕಾಶ ಏರ್ ತೆಕ್ಕೆಗೆ ೧೮ ವಿಮಾನಗಳು ಬಂದು ಸೇರುವ ನಿರೀಕ್ಷೆ ಇದೆ. ಇನ್ನು ೫ ವರ್ಷಗಳೊಳಗೆ ಏರ್‌ಲೈನ್ ೭೨ ವಿಮಾನಗಳನ್ನು ಹೊಂದಿರಲಿದೆ.
ಆಕಾಶ ಏರ್ ಸಂಸ್ಥೆ ಸೋಮವಾರ ತನ್ನ ಸಿಬ್ಬಂದಿಯ ಸಮವಸ್ತ್ರದ ಮೊದಲ ನೋಟವನ್ನು ಅನಾವರಣಗೊಳಿಸಿತು. ಕಸ್ಟಮ್ ಪ್ಯಾಂಟ್ ಮತ್ತು ಜಾಕೆಟ್‌ಗಳನ್ನು ಪರಿಚಯಿಸಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ತಮ್ಮದು ಎಂದು ಕಂಪನಿ ಹೇಳಿದೆ. ಅವುಗಳ ಫ್ಯಾಬ್ರಿಕ್ ವಿಶೇಷವಾಗಿ ಆಕಾಶ ಏರ್‌ಗಾಗಿ ತಯಾರಿಸಲ್ಪಟ್ಟಿದೆ.
ಇದನ್ನೂ ಓದಿ: ವಿಸ್ತಾರ Explainer| ಭಾರತದ ಆಕಾಶದಲ್ಲಿ ಆಕಾಶ್ ಏರ್ ಕ್ರಾಂತಿಗೆ ದಿನಗಣನೆ ಶುರು!