ಬೆಂಗಳೂರು: ಮಳೆಯಿಂದ ಟಿ.ಕೆ.ಹಳ್ಳಿ ಪಂಪ್ ಹೌಸ್‌ಗೆ ನೀರು ನುಗ್ಗಿದ್ದರಿಂದ ಬೆಂಗಳೂರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಆತಂಕ ಇತ್ತು. ಆದರೆ ಈಗ ಎಲ್ಲವೂ ಸರಿಯಾಗಿದ್ದು, ನೀರಿನ ಪೂರೈಕೆಯಲ್ಲಿ ವ್ಯತ್ಯವಾಗುವುದಿಲ್ಲ. ಭೀಕರ ಮಳೆಯಿಂದ ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ನಗರದ ವಿವಿಧೆಡೆ ಮಂಗಳವಾರ ರಾತ್ರಿ ಮಳೆ ಹಾನಿ ಪರಿಶೀಲಿಸಿದ ಅವರು, ಪಂಪ್ ಹೌಸ್ ಸಮಸ್ಯೆಯನ್ನು ಬೇಗನೆ ಪರಿಹರಿಸಿರುವ ಜಲಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾಳೆಯಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಆತಂಕವಿಲ್ಲ. ನಗರದ ಮಹದೇವಪುರ ಕ್ಷೇತ್ರ, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮಳೆಯಿಂದ ಹೆಚ್ಚಿನ ಹಾನಿಯಾಗಿದೆ. ಇಡೀ ದಿನ ಮಹದೇವಪುರದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ, ಪ್ರವಾಹ ನಿರ್ವಹಣೆಗೆಗಾಗಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ | ಪರಿಶಿಷ್ಟ ಕುಟುಂಬಗಳ ಉಚಿತ ವಿದ್ಯುತ್ ಯೋಜನೆ ವಾಪಸ್ ಪಡೆದಿಲ್ಲ: ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ
ದಶಕದಲ್ಲೇ ಅತಿ ಹೆಚ್ಚು ಮಳೆ ಈ ಬಾರಿ ಸುರಿದಿದೆ. ಸರ್ಕಾರ ಈ ಸಂಕಷ್ಟದ ಸವಾಲನ್ನು ಎದುರಿಸಲು ಸನ್ನದ್ಧವಾಗಿದೆ. ಇದು ಮಾನವ ನಿರ್ಮಿತವಲ್ಲ, ಪ್ರಕೃತಿ ವಿಕೋಪವಾಗಿದೆ. ಎಲ್ಲವನ್ನೂ ಸರಿದೂಗಿಸುವ ಕೆಲಸ ಮಾಡಲಾಗುತ್ತಿದೆ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ.
ಬೆಂಗಳೂರು ಜನ ಒಗ್ಗಟ್ಟಾಗಿ ನಿಲ್ಲುವ ಸಮಯವಿದು, ವಿಪಕ್ಷಕ್ಕೂ ಮನವಿ ಮಾಡುತ್ತೇನೆ ಎಂದರು.
ಇಂತಹ ಸಂಕಷ್ಟ ಸಮಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಹಿರಿಯ, ನಿವೃತ್ತ ಎಂಜಿನಿಯರ್‌ಗಳು ಸಲಹೆ ಸೂಚನೆ ನೀಡಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ | ನನ್ನ ಬೆಳವಣಿಗೆಯಲ್ಲಿ ಎಜೆಆರ್ ಪಾತ್ರ ದೊಡ್ಡದು ಎಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ