Site icon Vistara News

ಸುಳ್ಳು ಕ್ಯಾನ್ಸರ್‌ ಕಳ್ಳಿಗೆ ಕಂಬಿ ಎಣಿಸುವ ಚಿಕಿತ್ಸೆ!

fake cancer

ದುರಿತ ಕಾಲದಲ್ಲಿ ನೆರವಿನ ಹಸ್ತ ಚಾಚುವ ಕೆಲವು ವ್ಯಕ್ತಿಗಳು, ಸಂಸ್ಥೆಗಳು ಇರುವ ಹಾಗೆಯೇ, ಆಪತ್ತಿನ ಮಿತ್ರನಂತೆ ಹಲವಾರು ಕ್ರೌಡ್‌ಫಂಡಿಂಗ್‌ ಜಾಲತಾಣಗಳೂ ಕೆಲಸ ಮಾಡುತ್ತಿವೆ. ಇದರಿಂದ ಪ್ರಯೋಜನ ಪಡೆದು ಕಾಯಿಲೆಯಿಂದ ಗುಣಮುಖರಾದವರ ಹಲವಾರು ಕಥೆಗಳು ನಮ್ಮ ಮುಂದಿವೆ. ಹಾಗೆಯೇ ಬೆಳೆಯಿದ್ದಲ್ಲಿ ಕಳೆ ಎಂಬಂತೆ ಇಂಥ ವ್ಯವಸ್ಥೆಗಳನ್ನು ಲೂಟಿ ಹೊಡೆಯಲು ಖದೀಮರೂ ಹುಟ್ಟಿಕೊಳ್ಳುತ್ತಾರೆ. ಇಂಥದ್ದೇ ಕಳ್ಳಿಯೊಬ್ಬಳು ಪೊಲೀಸರ ಅತಿಥಿಯಾಗಿರುವ ಕಥೆಯಿದು.

ಬ್ರಿಟನ್‌ನ ಕೆಂಟ್‌ ಪ್ರಾಂತ್ಯದ ಬ್ರಾಡ್‌ಸ್ಟೇರ್ಸ್‌ ನಿವಾಸಿ, ೪೪ ವರ್ಷದ ನಿಕೋಲ್‌ ಎಲ್ಕಬಾಸ್‌ ಕ್ರೌಡ್‌ಫಂಡಿಂಗ್‌ ಮೂಲಕ ನೂರಾರು ಜನರನ್ನು ವಂಚಿಸಿ, ಈಗ ಕಂಬಿ ಎಣಿಸುತ್ತಿದ್ದಾಳೆ. ತಾನೊಬ್ಬಳು ಕ್ಯಾನ್ಸರ್‌ ಪೀಡಿತೆ ಎಂಬಂತೆ ನಟಿಸಿ, ಸುಳ್ಳು ದಾಖಲೆಗಳನ್ನೂ ಸೃಷ್ಟಿಸಿ, ʻಗೋ ಫಂಡ್‌ ಮಿʼ ಎನ್ನುವ ಜಾಲತಾಣದ ಮೂಲಕ ನೆರವು ಕೋರಿದ್ದಳು. ತನಗೆ ಅಂಡಾಶಯದ ಕ್ಯಾನ್ಸರ್‌ ಇದ್ದು, ಚಿಕಿತ್ಸೆಗಾಗಿ ಸ್ಪೇನ್‌ಗೆ ತೆರಳಬೇಕು. ತನ್ನ ಜೀವ ಉಳಿಸಲು ಅದೊಂದೇ ದಾರಿ ಎಂದು ಆಕೆ ಹೇಳಿಕೊಂಡಿದ್ದಳು. ಆಕೆಯ ಮೊರೆಗೆ ಸ್ಪಂದಿಸಿದ ಸುಮಾರು ೭೦೦ ಜನ, ೪೩ ಲಕ್ಷ ರೂ.ಗಳನ್ನು ಆಕೆಗೆ ನೆರವಿನ ರೂಪದಲ್ಲಿ ನೀಡಿದ್ದರು.

ಆದರೆ ಆಕೆ ಹಣವನ್ನು ಯಾವ ಚಿಕಿತ್ಸೆಗೂ ಉಪಯೋಗಿಸಲಿಲ್ಲ. ಬದಲಿಗೆ, ಶಾಪಿಂಗ್‌, ಜೂಜು, ಮೋಜು ಮತ್ತು ಸುತ್ತಾಟಕ್ಕೆ ಬಳಸಿದಳಂತೆ. ಈ ಪ್ರಕರಣದ ಬಗ್ಗೆ ಬ್ರಿಟನ್‌ ನ್ಯಾಯಾಲಯದಲ್ಲಿ ತನಿಖೆ ನಡೆಯುವಾಗ, ತನಗೆ ಕ್ಯಾನ್ಸರ್‌ ಇದೆಯೆಂದು ತಿಳಿದುಕೊಂಡಿದ್ದೆ. ಇದಕ್ಕಾಗಿ ಸ್ಪೇನ್‌ನಲ್ಲಿ ಮೂರು ಶಸ್ತ್ರಚಿಕಿತ್ಸೆ ಮತ್ತು ಆರು ಕಿಮೋ ಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದೆ ಎಂದು ಹೇಳಿದ್ದಾಳೆ.  ಆದರೆ ಆಕೆ ಹೇಳಿದ ಆಸ್ಪತ್ರೆಯಲ್ಲಿ ನಿಕೋಲ್‌ ಎಲ್ಕಬಾಸ್‌ ಹೆಸರಿನ ಯಾವ ಮಹಿಳೆಯೂ ಚಿಕಿತ್ಸೆ ತೆಗೆದುಕೊಂಡಿಲ್ಲ. ಯಾವ ಔಷಧವನ್ನೂ ನೀಡಲಾಗಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಉಪ್ಪು ತಿಂದವ ನೀರು ಕುಡಿಯಲೇಬೇಕೆಂಬ ಹಾಗೆ, ೨ ವರ್ಷ ೯ ತಿಂಗಳ ಕಾಲ ಆಕೆಗೀಗ ಕಂಬಿ ಎಣಿಸುವ ಕೆಲಸ.

ಇದನ್ನೂ ಓದಿ: ಸುನಾಮಿ ಬಂದರೂ ಜಗ್ಗದ ತೇಲುವ ಮನೆ ನೋಡಿದಿರಾ?

Exit mobile version