ನವ ದೆಹಲಿ: ಉದ್ಯಮಿ ಸೈರಸ್ ಮಿಸ್ತ್ರಿ ಅವರು ಕಾರ್ ಅಪಘಾತದಲ್ಲಿ ಇತ್ತೀಚೆಗೆ ನಿಧನರಾದರು. ಕಾರಿನ ಹಿಂಬದಿಯಲ್ಲಿ ಕುಳಿತ್ತಿದ್ದ ಅವರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರೆ ಬದುಕಿರುತ್ತಿದ್ದರು ಎಂಬ ಚರ್ಚೆಗಳು ಜೋರಾಗಿವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು, ಸೀಟ್‌ಬೆಲ್ಟ್ (Seatbelt) ಅಲಾರಾಮ್ ಬ್ಲಾಕರ್ಸ್ ಮಾರಾಟ ಮಾಡದಂತೆ ಇ ಕಾಮರ್ಸ್ ತಾಣ ಅಮೆಜಾನ್‌ಗೆ ಕೇಳಿಕೊಂಡಿದೆ. ಈ ವಿಷಯವನ್ನು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.
ಸೀಟ್‌ಬೆಲ್ಟ್ ಅಲಾರಾಮ್ ಬ್ಲಾಕರ್ಸ್‌ನಂಥ ಸಾಧನಗಳನ್ನು ಮಾರಾಟ ಮಾಡುವುದು ಅಕ್ರಮವಲ್ಲ. ಆದರೆ, ಅದು ಸುರಕ್ಷತೆಗೆ ಸವಾಲು ಒಡ್ಡಲಿದೆ ಎಂದು ಗಡ್ಕರಿ ಅವರು ತಿಳಿಸಿದ್ದಾರೆ.
ಅಮೆಜಾನ್‌ನಲ್ಲಿ ಮಾರಾಟವಾಗುವ ಸೀಟ್‌ಬೆಲ್ಟ್ ಅಲಾರಾಮ್ ಬ್ಲಾಕರ್ಸ್, ಎಚ್ಚರಿಕೆಯ ಸೌಂಡ್ ಹೊರಬರದಂತೆ ತಡೆಯುತ್ತವೆ. ಜಾಲತಾಣದಲ್ಲಿ ಮೆಟಲ್ ಕ್ಲಿಪ್ಸ್ ಮಾರಾಟಕ್ಕೆ ಸಿಗುತ್ತವೆ, ಇವುಗಳನ್ನು ಸೀಟ್ ಬೆಲ್ಟ್ ಸ್ಲಾಟ್‌ನಲ್ಲಿ ಸೇರಿಸಿದರೆ, ಆಗ ಅಲಾರಾಮ್ ಆಗುವುದಿಲ್ಲ. ಕಾರ್ ಡ್ರೈವ್ ಮಾಡುತ್ತಿದ್ದಾಗ ಸೀಟ್ ಬೆಲ್ಟ್ ಧರಿಸದಿದ್ದರೂ ಸೀಟ್ ಬೆಲ್ಟ್ ಅಲಾರಾಮ್ ಮೊಳಗುವುದಿಲ್ಲ.
ಸೀಟ್ ಬೆಲ್ಟ್ ಅಲಾರಾಮ್ ತಪ್ಪಿಸುವುದಕ್ಕಾಗಿ ಜನರು ಈ ಕ್ಲಿಪ್ಸ್ ಖರೀದಿಸುತ್ತಾರೆ. ಹಾಗಾಗಿ, ಈ ಕ್ಲಿಪ್ಸ್ ಮಾರಾಟ ಮಾಡದಂತೆ ನಾವು ಅಮೆಜಾನ್ ಕಂಪನಿಗೆ ನೋಟಿಸ್ ಕಳುಹಿಸಿದ್ದೇವೆ ಎಂದು ಗಡ್ಕರಿ ಅವರು ತಿಳಿಸಿದ್ದಾರೆ.
ಹಿಂಬದಿ ಸೀಟ್ ಪ್ರಯಾಣಿಕರು ಸೀಟ್ ಬೆಲ್ಟ್ ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗುತ್ತದೆ. ಫ್ರಂಟ್ ಸೀಟ್ಸ್‌ಗೆ ಪರಿಚಯಿಸಲಾಗಿರುವ ರೀತಿಯಲ್ಲೇ ಹಿಂಬದಿ ಸೀಟ್‌ಗಳಿಗೂ ಸೀಟ್ ಬೆಲ್ಟ್ ಅಲಾರಾಮ್ ನೀಡುವಂತೆ ವಾಹನ ತಯಾರಿಕಾ ಕಂಪನಿಗಳಿಗೆ ಕೇಳಿಕೊಳ್ಳಲಾಗುವುದು ಎಂದು ಗಡ್ಕರಿ ಅವರು ತಿಳಿಸಿದ್ದಾರೆ.
2021ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ 150,000 ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಾರೆ ಎಂದು ವಿಶ್ವ ಬ್ಯಾಂಕ್ ಇತ್ತೀಚೆಗೆ ತನ್ನ ವರದಿಯಲ್ಲಿ ತಿಳಿಸಿತ್ತು.
ಇದನ್ನೂ ಓದಿ | Seat Belt | ಕಾರಿನ ಹಿಂಬದಿ ಸೀಟಲ್ಲಿ ಕುಳಿತವರೂ ಸೀಟ್ ಬೆಲ್ಟ್ ಧರಿಸದಿದ್ದರೆ ಇನ್ನು ಬೀಳುತ್ತೆ ಫೈನ್!