ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್ ಈ ಸಲ ಕಿಂಗ್ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.
ವಿಐಪಿ ಅಭ್ಯರ್ಥಿಗಳಿಗೆ ಮುನ್ನಡೆ
ಮೈಸೂರಿನಲ್ಲಿ ಅಂಚೆ ಮತ ಎಣಿಕೆ ಪ್ರಾರಂಭವಾಗಿದೆ. ವರುಣಾದ ಕೌಂಟಿಂಗ್ ಆರಂಭವಾಗುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮುನ್ನಡೆ ಸಾಧಿಸಿದ್ದಾರೆ. ಬಬಲೇಶ್ವರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲ್, ಚೆನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ, ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ಮುನ್ನಡೆ ಸಾಧಿಸಿದ್ದಾರೆ. ಹಿರಿಯೂರಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಮುಂದಿದ್ದಾರೆ.
ಮತ ಎಣಿಕೆ ಕೇಂದ್ರ ರಸ್ತೆಗಳಲ್ಲಿ ಸಂಚಾರವಿಲ್ಲ
ಬೆಂಗಳೂರು: ಮತ ಎಣಿಕೆ ನಡೆಯುತ್ತಿರುವ ಕೇಂದ್ರಗಳಲ್ಲಿ ಪೊಲೀಸರೊಂದಿಗೆ ಅರೆಸೇನಾ ಪಡೆಗಳ ಕಾವಲು ಹಾಕಲಾಗಿದೆ. ಮತ ಎಣಿಕೆ ಕೇಂದ್ರಗಳ ರಸ್ತೆಗಳಲ್ಲಿ ಬೆಳಗ್ಗೆ 6ರಿಂದ ಸಂಜೆ ಎಣಿಕೆ ಮುಗಿಯುವವರೆಗೂ ಸಂಚಾರ ನಿಷೇಧಿಸಲಾಗಿದೆ.
ರಾಜ್ಯಾದ್ಯಂತ ಅಂಚೆ ಮತ ಎಣಿಕೆ ಕಾರ್ಯಾರಂಭ
ಅಂಚೆ ಮತಗಳ ಎಣಿಕೆ
ಬೆಂಗಳೂರು: ರಾಜ್ಯಾದ್ಯಂತ 7.30ಕ್ಕೆ ಸ್ಟ್ರಾಂಗ್ ರೂಮ್‌ಗಳನ್ನು ತೆರೆಯಲಾಗಿದೆ. ಮೊದಲಿಗೆ ಅಂಚೆ ಮತಗಳನ್ನು ಎಣಿಕೆ ಮಾಡಲಾಯಿತು. ಅಂಚೆ ಮತಗಳ ಎಣಿಕೆ ಬಹುತೇಕ ಮುಗಿದಿದ್ದು, ಮತಯಂತ್ರಗಳನ್ನು ತೆರೆಯಲಾಗುತ್ತಿದೆ.
ಮೈಸೂರಿನಲ್ಲಿ ಸಿದ್ದರಾಮಯ್ಯ
ಚುನಾವಣಾ ಫಲಿತಾಂಶ ಹಿನ್ನೆಲೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಮೈಸೂರಿನ ಟಿ.ಕೆ.ಲೇಔಟ್ ನಿವಾಸದಲ್ಲಿ ಬೀಡುಬಿಟ್ಟಿದ್ದಾರೆ. ನಿನ್ನೆ ರಾತ್ರಿಯೇ ಅವರು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದಾರೆ. ವರುಣ ಕ್ಷೇತ್ರ ಅವರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದರಿಂದ ಮೈಸೂರಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ನಿವಾಸದ ಬಳಿ ಬಿಗಿ ಭದ್ರತೆ ಇದೆ.