ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ, ಹಿರಿಯ ನಾಗರಿಕ ಗರಂ
ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದ ವಿಜಯನಗರ ವಾರ್ಡ್‌ನ ಮತಗಟ್ಟೆ ಸಂಖ್ಯೆ 38, 39ರ ಬಳಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾದ ಹಿರಿಯ ನಾಗರಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ʼನಾನು ಸುಮಾರು 30 ವರ್ಷಗಳಿಂದ ಇಲ್ಲಿಂದಲೇ ವೋಟ್ ಮಾಡುತ್ತಿದ್ದೇನೆ, ಈ ಬಾರಿ ಮತದಾನ ಮಾಡಲು ತೆರಳಿದಾಗ ಹೆಸರು ಮಿಸ್ ಆಗಿದೆ ಎನ್ನುತ್ತಿದ್ದಾರೆʼ ಎಂದು ವಿಜಯನಗರ ವಾರ್ಡ್ ನಗರ ಹಿರಿಯ ಮತದಾರ ಪಾಂಡುರಂಗ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಫೋಟೋ ಹಂಚಿಕೆ ದೂರು
ವಿಜಯಪುರ: ಮತದಾರರ ಚೀಟಿ ಜೊತೆಗೆ ದೇವರಹಿಪ್ಪರಗಿ ಕಾಂಗ್ರೆಸ್ ಅಭ್ಯರ್ಥಿಯ ಭಾವಚಿತ್ರದ ಚೀಟಿಗಳ ಹಂಚಿಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಪೋಟೋ ಹಾಗೂ ಮತ ನೀಡಿ ಎನ್ನುವ ಒಕ್ಕಣೆ ಇರುವ ಚೀಟಿ ಹಂಚಲಾಗುತ್ತಿದೆ ಎನ್ನಲಾಗಿದೆ.
ಆಂಜನೇಯನ ದರ್ಶನ ಮಾಡಿ, ಮತದಾನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಬಳಿಕ ಮತದಾನ ಮಾಡಿದರು.
ನಟಿ ಅಮೂಲ್ಯ ಮತದಾನ
ಬೆಂಗಳೂರು: ನಟಿ ಅಮೂಲ್ಯ ರಾಜರಾಜೇಶ್ವರಿ ನಗರದ ಬೂತ್‌ಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ʼʼಪ್ರತಿ ಚುನಾವಣೆಯಲ್ಲೂ ನನ್ನ ಕರ್ತವ್ಯ ಮಾಡುತ್ತಿದ್ದೇನೆʼʼ ಎಂದರು.
ಚಳ್ಳಕೆರೆಯಲ್ಲಿ ಶತಾಯುಷಿ ಅಜ್ಜಿ ಮತ ಚಲಾವಣೆ
ಚಿತ್ರದುರ್ಗ: ಚಳ್ಳಕೆರೆ ಕ್ಷೇತ್ರದ ಮತಗಟ್ಟೆ 91ರಲ್ಲಿ ಶತಾಯುಷಿ ಮೆಹಬೂಬೀ ಮತದಾನ ಮಾಡಿದರು. 101 ವರ್ಷದ ಈ ಅಜ್ಜಿ ಮನೆಯಿಂದ ಮಗಳು ಹಾಗೂ ಅಳಿಯನ ಜೊತೆ ನಡೆದುಕೊಂಡು ಬಂದು ಮತ ಹಾಕಿದರು.