Site icon Vistara News

Maha politics: ಸಂಜೆ 4.30ಕ್ಕೆ ಫಡ್ನವಿಸ್‌, ಶಿಂಧೆಯಿಂದ ರಾಜ್ಯಪಾಲರ ಭೇಟಿ, ಹಕ್ಕುಮಂಡನೆ

Shindhe arrives in Mumbai

ಮುಂಬಯಿ: ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರಕಾರದ ಪತನದ ಬಳಿಕ ಹೊಸ ಸರಕಾರ ರಚನೆಯ ಪ್ರಕ್ರಿಯೆಗಳು ಗುರುವಾರ ವೇಗ ಪಡೆದುಕೊಂಡಿದೆ. ಜೂನ್‌ ೨೦ರಂದು ಮುಂಬಯಿಯಿಂದ ಹೊರಟಿದ್ದ ಏಕನಾಥ್‌ ಶಿಂಧೆ ಬಣದ ಶಿವಸೇನಾ ಶಾಸಕರು ಹತ್ತು ದಿನಗಳ ಬಳಿಕ ಮತ್ತೆ ವಾಣಿಜ್ಯ ನಗರಿಗೆ ಕಾಲಿಟ್ಟಿದೆ. ಈ ನಡುವೆ, ಸಂಜೆ ೪.೩೦ಕ್ಕೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ ಮತ್ತು ಶಿವಸೇನೆಯ ಬಂಡಾಯ ನಾಯಕ ಏಕನಾಥ್‌ ಶಿಂಧೆ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡನೆ ಮಾಡಲಿದ್ದಾರೆ.

ಹಕ್ಕು ಮಂಡನೆಗೆ ಸಮಯ ನಿಗದಿ
ಮುಂಬಯಿಗೆ ಮರಳಿರುವ ಏಕನಾಥ್‌ ಶಿಂಧೆ ಬಣ ತಾಜ್‌ ಹೋಟೆಲ್‌ನಲ್ಲಿ ತಂಗಿದೆ. ಈ ನಡುವೆ ದೇವೇಂದ್ರ ಫಡ್ನವಿಸ್‌ ಅವರು ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಭಾಗವಹಿಸಿ ಪಕ್ಷದ ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ತಾಜ್‌ ಹೋಟೆಲ್‌ನಲ್ಲಿ ದೇವೇಂದ್ರ ಫಡ್ನವಿಸ್‌ ಮತ್ತು ಏಕನಾಥ್‌ ಶಿಂಧೆ ಮಧ್ಯೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಆ ಬಳಿಕ ರಾಜಭವನವನ್ನು ಸಂಪರ್ಕಿಸಲಾಗಿದ್ದು, ಸಂಜೆ ೪.೩೦ಕ್ಕೆ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರನ್ನು ಭೇಟಿಯಾಗಲು ಸಮಯ ನಿಗದಿಪಡಿಸಲಾಯಿತು.

ಇದರೊಂದಿಗೆ ಎರಡೂವರೆ ವರ್ಷಗಳ ಮಹಾ ವಿಕಾಸ ಅಘಾಡಿ ಸರಕಾರ ಪತನದ ಬಳಿಕ ಬಿಜೆಪಿ ಮತ್ತು ಶಿವಸೇನೆ ಬಂಡಾಯ ಗುಂಪಿನ ಮೈತ್ರಿಯೊಂದಿಗೆ ಹೊಸ ಸರಕಾರ ರಚನೆಯ ಹಕ್ಕು ಮಂಡನೆಗೆ ವೇದಿಕೆ ಸಿದ್ಧವಾದಂತಾಗಿದೆ.

ನಾಳೆಯೇ ಅಧಿಕಾರ ಸ್ವೀಕಾರ
ಹೊಸ ಸರಕಾರದ ಅಧಿಕಾರ ಗ್ರಹಣ ಶುಕ್ರವಾರವೇ ನಡೆಯುವ ಸಾಧ್ಯತೆ ಇದೆ. ದೇವೇಂದ್ರ ಫಡ್ನವಿಸ್‌ ಅವರು ಮುಖ್ಯಮಂತ್ರಿಯಾಗಿ, ಏಕನಾಥ ಶಿಂಧೆ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ.

ಮುಂದೆ ಏನೇನು ನಡೆಯಲಿದೆ?
-ಗುರುವಾರ ಸಂಜೆ ೪.೩೦ಕ್ಕೆ ಫಡ್ನವಿಸ್‌ ಮತ್ತು ಶಿಂಧೆ ಅವರು ತಮ್ಮನ್ನು ಬೆಂಬಲಿಸಲಿರುವ ಅವಳಿ ಪಕ್ಷದ ಶಾಸಕರು ಮತ್ತು ಬೆಂಬಲಿಸುವ ಪಕ್ಷೇತರ ಶಾಸಕರ ಪಟ್ಟಿಯನ್ನು ಸಲ್ಲಿಸಿ ಸರಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.
– ಶುಕ್ರವಾರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಾಗಿ ಫಡ್ನವಿಸ್‌ ಮತ್ತು ಶಿಂಧೆ ಅಧಿಕಾರ ಗ್ರಹಣ ಮಾಡಲಿದ್ದಾರೆ.
– ಬಳಿಕ ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
– ಶಿಂಧೆ ಬಣಕ್ಕೆ ವಿಧಾನಸಭೆಯಲ್ಲಿ ಮಾನ್ಯತೆ ನೀಡುವ ಬಗ್ಗೆ ಚರ್ಚೆ ನಡೆಯಲಿದೆ.
– ವಿಧಾನಸಭೆಯಲ್ಲಿ ಎಲ್ಲ ಪಕ್ಷಗಳಿಗೆ ವಿಪ್‌ಗಳ ಆಯ್ಕೆಯನ್ನು ಪ್ರಕಟಿಸಬೇಕು.
– ರಾಜ್ಯಪಾಲರು ವಿಧಾನಸಭೆಯಲ್ಲಿ ವಿಶ್ವಾಸಸೂಚಕ ಗೊತ್ತುವಳಿ ಮಂಡನೆಗೆ ಅವಕಾಶ ನೀಡಲಿದ್ದಾರೆ.
– ಅಂತಿಮವಾಗಿ ಸಂಪುಟ ವಿಸ್ತರಣೆ ನಡೆದು ಸರಕಾರ ಪೂರ್ಣ ಸ್ವರೂಪ ಪಡೆಯಲಿದೆ.

ಇದನ್ನೂ ಓದಿ| Maha politics | ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ

Exit mobile version