Site icon Vistara News

ರಾಜ ಮಾರ್ಗ ಅಂಕಣ : ನಂಬಿಕೆ, ಭರವಸೆ ಎಂಬ ಮಹಾಮಂತ್ರ; ನಂಬಿ ಕೆಟ್ಟವರಿಲ್ಲವೋ ಎಂದರು ಪುರಂದರದಾಸರು

Belief and hope

ನೀವು ಏನು ಆರೋಗ್ಯದ ಸಮಸ್ಯೆಗಳು ಬಂದರೂ ಒಟ್ಟಾರೆ ಯಾರೋ ಒಬ್ಬ ವೈದ್ಯರ ಬಳಿಗೆ ಹೋಗುವುದಿಲ್ಲ. ನೀವು ಹೋಗುವುದು ನಿಮ್ಮ ಫ್ಯಾಮಿಲಿ ವೈದ್ಯರ (Family doctor) ಬಳಿ! ಅದಕ್ಕೆ ಕಾರಣ ಅವರ ಮೇಲೆ ನಿಮಗೆ ಇರುವ ಅಗಾಧ ನಂಬಿಕೆ (ರಾಜ ಮಾರ್ಗ ಅಂಕಣ). ಎಷ್ಟೋ ಬಾರಿ ಅವರು ಕೊಡುವ ಔಷಧಕ್ಕಿಂತ ಅವರ ಮೇಲೆ ನೀವು ಇಟ್ಟಿರುವ ನಂಬಿಕೆಯೇ (Belief System) ಹೆಚ್ಚು ಪರಿಣಾಮ ಬೀರುತ್ತದೆ ಅನ್ನುತ್ತದೆ ಮನೋವಿಜ್ಞಾನ (Psychological Effect)!

ನೀವು ನಿಮ್ಮದೇ ಟೇಲರ್, ನಿಮ್ಮದೇ ಸೆಲೂನ್, ನಿಮ್ಮದೇ ಕಾಯಂ ಹೋಟೆಲು, ನಿಮ್ಮದೇ ಬ್ಯುಟಿಷಿಯನ್, ನಿಮ್ಮದೇ ಚಾರ್ಟರ್ಡ್ ಅಕೌಂಟೆಂಟ್, ನಿಮ್ಮದೇ ಡೆಕೋರೆಟರ್…… ಹೀಗೆ ಹುಡುಕಿಕೊಂಡು ಹೋಗಲು ಕಾರಣ ಏನು? ಅದಕ್ಕೆ ಕಾರಣ ನೀವು ಅವರ ಮೇಲೆ ಇಟ್ಟಿರುವ ಅಪಾರ ನಂಬಿಕೆ!

ಆ ದರ್ಜಿಯು ಹೊಲಿದು ಕೊಟ್ಟರೆ ನನಗೆ ಡ್ರೆಸ್ ಸರಿಯಾಗಿಯೇ ಹೊಂದಿಕೊಳ್ಳುತ್ತದೆ ಎನ್ನುವ ಭರವಸೆಯು ನಿಮ್ಮನ್ನು ಮುನ್ನಡೆಸುತ್ತದೆ. ನಮ್ಮ ಆಯ್ಕೆಯ ಸೆಲೂನಿಗೆ ಹೋಗಿ ನಾವು ಆತನ ಮುಂದೆ ಕಣ್ಣುಮುಚ್ಚಿ ಕೂತುಬಿಡುತ್ತೇವೆ! ಅದಕ್ಕೆ ಕಾರಣ ಮತ್ತೆ ನಂಬಿಕೆ! ಆ ಬ್ಯುಟಿಷಿಯನ್ ಬಗ್ಗೆ ನಂಬಿಕೆ ಇದ್ದ ಕಾರಣ ನಾವು ಮತ್ತೆ ಮತ್ತೆ ಅವರ ಬಳಿಗೇ ಹೋಗುವುದು. ನಿಮ್ಮ ಬೆಸ್ಟ್ ಕ್ಯಾಟರರ್, ಅರೆಂಜರ್, ಫೋಟೋಗ್ರಾಫರ್, ನಿಮ್ಮ ಬೆಸ್ಟ್ ಟೀಚರ್… ಕೂಡ ನಿಮ್ಮ ಭರವಸೆಯ ಸಂಕೇತವೇ ಆಗಿರುತ್ತಾರೆ! ಹೌದಲ್ಲ?

ನಮಗೆ ನೂರಾರು ಗೆಳೆಯರು ಇದ್ದರೂ ನಾವು ನಮ್ಮ ಎಲ್ಲ ಭಾವನೆಗಳನ್ನು ಹಂಚಿಕೊಳ್ಳುವುದು ಕೆಲವೇ ಜನರ ಬಳಿ ಮಾತ್ರ. ಯಾಕೆಂದರೆ ಅವರ ಬಳಿ ನಾವು ಹೇಳುವ ಗೌಪ್ಯ ವಿಷಯಗಳು ಸೆಕ್ಯೂರ್ ಆಗಿರುತ್ತವೆ ಅನ್ನುವ ನಂಬಿಕೆಯು ನಮ್ಮ ಮನಸಲ್ಲಿ ಗಟ್ಟಿಯಾಗಿರುತ್ತದೆ. ನಿಮ್ಮ ಬೆಸ್ಟ್ ಫ್ರೆಂಡ್, ಬೆಸ್ಟ್ ಟೀಚರ್ ಹೇಳಿದ ‘ನಾನು ನಿನ್ನನ್ನು ನಂಬುತ್ತೇನೆ’ ಎಂದು ಹೇಳಿದ ಮಾತು ನಿಮ್ಮ ಮೇಲೆ ಬೀರುವ ಪ್ರಭಾವ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ!

ಈ ನಂಬಿಕೆಯೇ ನಮ್ಮ ಹಲವು ಸಂಬಂಧಗಳ ಪಂಚಾಂಗ ಆಗಿರುತ್ತದೆ. ಇಂದು ಜಗತ್ತಿನ ಎಷ್ಟೋ ವೈಜ್ಞಾನಿಕವಾದ ಸಂಗತಿಗಳು ಕೂಡ ನಂಬಿಕೆ ಆಧಾರಿತ ಆಗಿರುತ್ತವೆ! ನಿಮಗೆ ನಂಬಲು ಕಷ್ಟವೇ ಆಗಬಹುದು. ಜಗತ್ತಿನ ಮಹಾವಿಜ್ಞಾನಿ ಆಗಿದ್ದ ಐನ್‌ಸ್ಟೀನ್ ದೇವರ ಬಗ್ಗೆ ಹೇಳಿದ ಮಾತು ಕೇಳಿ!: ‘ಯಾವುದೋ ಒಂದು ಅತೀಂದ್ರಿಯವಾದ ಶಕ್ತಿ ಜಗತ್ತನ್ನು ನಿಯಂತ್ರಿಸುತ್ತಿದೆ. ನಾನು ಅದನ್ನು ನಂಬುತ್ತೇನೆ. ನೀವು ಅದನ್ನು ದೇವರು ಎಂದು ಕರೆಯಬಹುದು! ‘

ಬಹಳ ಶತಮಾನಗಳ ಹಿಂದೆ ಹಲವು ಧಾರ್ಮಿಕ ನಾಯಕರು ಪ್ರಮೋಟ್ ಮಾಡುತ್ತಿದ್ದ ಭೂಮಿಯೇ ಸೃಷ್ಟಿಯ ಕೇಂದ್ರ ಎನ್ನುವ ಸುಳ್ಳು ಸಿದ್ಧಾಂತವು ನೂರಾರು ವರ್ಷಗಳ ಕಾಲ ಜಗತ್ತನ್ನು ಆಳುತ್ತಿತ್ತು! ಮುಂದೆ ‘ಸೂರ್ಯನೇ ಸೃಷ್ಟಿಯ ಕೇಂದ್ರ’ ಎಂದು ಸಾಕ್ರೆಟಿಸ್ ಗಟ್ಟಿಯಾಗಿ ಸತ್ಯವನ್ನು ಹೇಳಿದರೂ ಜನರ ನಂಬಿಕೆಯು ತುಂಬಾ ವರ್ಷಗಳ ಕಾಲ ಬದಲಾಗಲೇ ಇಲ್ಲ! ಈಗಲೂ ನಮ್ಮ ನೂರಾರು ವೈಜ್ಞಾನಿಕ ಫಲಿತಾಂಶಗಳು ನಮ್ಮ ನಂಬಿಕೆ ಆಧಾರಿತ ಆಗಿವೆ. ವಿಜ್ಞಾನ ಮತ್ತು ನಂಬಿಕೆಗಳು ಜೊತೆ ಜೊತೆಗೆ ಕೈ ಹಿಡಿದು ಹೋಗಬೇಕು ಅನ್ನುವುದೇ ಸತ್ಯ!
ಹಾಗೆಂದು ನಾನು ಮೌಢ್ಯಗಳನ್ನು ಬೆಂಬಲಿಸುವುದಿಲ್ಲ.

ಅದಕ್ಕೆ ಋಷಿಸದೃಶವಾದ ವ್ಯಕ್ತಿತ್ವದ ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದು ಹೀಗೆ – ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನ ಜೀವನಕೆ! ಅವರ ಪ್ರಕಾರ ಋಷಿವಾಕ್ಯ ಎಂದರೆ ನಂಬಿಕೆಯೇ ಆಗಿದೆ.

ನೀವು ಬಸ್ಸಿನಲ್ಲಿ ಅಥವ ರೈಲಿನಲ್ಲಿ ಕೂತು ದೂರ ಪ್ರಯಾಣ ಹೊರಟಾಗ ನಿಮ್ಮ ಸಂಬಂಧಿಕರಿಗೆ ಅಥವಾ ಗೆಳೆಯರಿಗೆ ಇಷ್ಟು ಹೊತ್ತಿಗೆ ತಲಪುತ್ತೇನೆ ಎಂದು ಹೇಳುತ್ತೇವಲ್ಲ! ನಿಮ್ಮನ್ನು ಆ ಸ್ಥಳಕ್ಕೆ ತಲುಪಿಸುವ ಗ್ಯಾರಂಟೀ ಕೊಟ್ಟವರು ಯಾರು?ಎಷ್ಟೋ ಸಂದರ್ಭಗಳಲ್ಲಿ ನಮ್ಮ ಈ ರೀತಿಯ ನಂಬಿಕೆಗಳು ನಮಗೆ ಅರಿವೇ ಇಲ್ಲದ ಹಾಗೆ ನಮ್ಮ ಬದುಕಿಗೆ ದಾರಿಯನ್ನು ತೋರಿಸುತ್ತಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು.

ಇನ್ನು ದೇವರು, ದೈವಗಳು, ನಾಗದೇವರು, ನಮ್ಮ ನಮ್ಮ ಆರಾಧನಾ ಸ್ಥಳಗಳ ಬಗ್ಗೆ ಇರುವ ನಾಡಿನ ಬಹುಸಂಖ್ಯಾತ ಜನರ ನಂಬಿಕೆಗಳು ಹಲವು ಶತಮಾನಗಳಿಂದ ಅಚಲವಾಗಿ ನಿಂತಿವೆ. ಅವುಗಳ ಬಗ್ಗೆ ಸಾಕ್ಷಿಯನ್ನು ಕೊಡಿ ಎಂದು ಕೇಳುವ ಧೈರ್ಯವನ್ನು ಹೆಚ್ಚಿನವರು ಮಾಡುವುದಿಲ್ಲ. ನಮ್ಮ ಬೆನ್ನಿಗೆ ಯಾವುದೋ ದೈವಿಕ ಶಕ್ತಿಯು ನಿಂತು ನಮ್ಮನ್ನು ಕಾಯುತ್ತ ಇರುತ್ತದೆ ಎಂಬ ನಂಬಿಕೆಯನ್ನು ಯಾರೂ ಅಲ್ಲಗಳೆಯಲು ಹೋಗುವುದಿಲ್ಲ!

ದೇವರನ್ನು, ದೈವಗಳನ್ನು ನಂಬದವರು ಸಾಕಷ್ಟು ಮಂದಿ ಇದ್ದರೂ ಮಂದಿರ, ಮಸೀದಿ, ಚರ್ಚು, ದೈವಸ್ಥಾನಗಳು, ಶಕ್ತಿ ಪೀಠಗಳು, ಶ್ರದ್ಧಾ ಕೇಂದ್ರಗಳು ನಮಗೆ ನೀಡುವ ಅಭಯ ವಾಕ್ಯ ಹಾಗೂ ಸಾಂತ್ವನಗಳನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ! ಈ ಎರಡು ಅಂಶಗಳು ಸೈಕಾಲಜಿಯ ಪ್ರಕಾರವೂ ನಮ್ಮನ್ನು ಬಲಿಷ್ಠ ಮಾಡುತ್ತವೆ ಎನ್ನುವುದು ವೈಜ್ಞಾನಿಕ ಆಗಿ ಪ್ರೂವ್ ಆಗಿವೆ! ಕ್ರಿಶ್ಚಿಯನ್ ಧರ್ಮ ನಂಬುವ CONFESSION ನಮ್ಮ ಮಾನಸಿಕ ಒತ್ತಡವನ್ನು ಮತ್ತು ಗಿಲ್ಟ್‌ಗಳನ್ನು ಗೆಲ್ಲುವ ವೈಜ್ಞಾನಿಕ ತಂತ್ರಗಳೇ ಆಗಿವೆ!

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಮಕ್ಕಳ ಮೇಲೆ ಜಾಸ್ತಿ ನಂಬಿಕೆ ಇಡಬೇಡಿ; ಮೊಬೈಲ್‌ ಬಂದ ಮೇಲೆ ಯಾವ ಮಗುವೂ ಇನ್ನೋಸೆಂಟ್‌ ಅಲ್ಲ!

ಇಷ್ಟೆಲ್ಲ ವಿಷದವಾಗಿ ಹೇಳಿದ ನಂತರವೂ ನನ್ನ ಒಬ್ಬರು ಗೆಳೆಯರು ನನಗೆ ಕೇಳಿದ ಪ್ರಶ್ನೆ – ಹಾಗಿದ್ದರೆ ಎಷ್ಟೋ ಜನರು ನಂಬಿಕೆ ದ್ರೋಹ ಮಾಡಿ ನಮಗೆ ನೋವು ಕೊಡುತ್ತಾರಲ್ಲ! ಅದಕ್ಕೇನು ಹೇಳುತ್ತೀರಿ?

ನಾನು ಕೊಟ್ಟ ಉತ್ತರವೂ ಅಷ್ಟೇ ಸ್ಟ್ರಾಂಗ್ ಆಗಿತ್ತು – ನಂಬಿಕೆ ದ್ರೋಹ ಆಯಿತು ಅಂತಾದರೆ ಅದು ಅವರ ತಪ್ಪು ಅಲ್ಲ. ನಂಬಿಕೆಯ ತಪ್ಪು ಕೂಡ ಅಲ್ಲ! ನಂಬಿಕೆ ಇರಿಸಲು ನೀವು ಆರಿಸಿದ ಕೆಲವು ವ್ಯಕ್ತಿಗಳು ರಾಂಗ್ ಆಗಿರುತ್ತಾರೆ! ವ್ಯಕ್ತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೀವು ಸೋತಿರುವುದು ಅದು ನಿಮ್ಮದೇ ತಪ್ಪು!
ನಿಮಗೆ ಹಾಗೆ ಅನ್ನಿಸುತ್ತಿದೆಯಾ?

Exit mobile version