Site icon Vistara News

ರಾಜ ಮಾರ್ಗ ಅಂಕಣ : ನಮಗೆ ಸ್ವಾತಂತ್ರ್ಯ ಸುಲಭದಲ್ಲಿ ದೊರಕಿದ್ದು ಅಂತೀರಾ? ಈ ಲೇಖನ ಓದಿದ ಮೇಲೆ ಹೇಳಿ!

Indian Independence day Raja Marga column

ಸಮಸ್ತ ರಾಷ್ಟ್ರಪ್ರೇಮಿ ಬಂಧುಗಳಿಗೆ 77ನೇ ಸ್ವಾತಂತ್ರ್ಯ ಉತ್ಸವದ (Independence day 2023) ಸಂದರ್ಭದಲ್ಲಿ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ಅನ್ನುವುದು ಒಂದು ಕ್ಷಣದ ಭಾವೋದ್ರೇಕ ಎಂದು ನಾನು ಭಾವಿಸಿಲ್ಲ. ಅದು ನಮ್ಮೊಳಗೆ ನಿರಂತರ ಹರಿಯುವ ಸಿಹಿ ನೀರಿನ ಬುಗ್ಗೆ. ನಮ್ಮನ್ನು ಸದಾ ಕಾಲ ಎಚ್ಚರವಾಗಿ ಇಡುವ ಒಂದು ಜಾಗೃತ ವ್ಯವಸ್ಥೆ. ನಮ್ಮನ್ನು ಭಾರತಕ್ಕೆ ಮತ್ತೆ ಮತ್ತೆ ಸಮರ್ಪಣೆ ಮಾಡಲು ಸಿದ್ಧಪಡಿಸುವ ಒಂದು ಅದ್ಭುತವಾದ ಸಂಕಲ್ಪ (ರಾಜ ಮಾರ್ಗ ಅಂಕಣ).

1947 ಆಗಸ್ಟ್ 14ರ ಮಧ್ಯರಾತ್ರಿ..

ಅಂದು ಮಧ್ಯರಾತ್ರಿ ದೆಹಲಿಯ ಕೆಂಪುಕೋಟೆಯಲ್ಲಿ ಬ್ರಿಟಿಷರ ಯೂನಿಯನ್ ಜಾಕ್ ಕೆಳಗೆ ಇಳಿಸಿ ಭಾರತದ ತ್ರಿವರ್ಣ ಧ್ವಜವನ್ನು ಏರಿಸಿದ ಕ್ಷಣ ನಮಗೆ ಕೊಟ್ಟ ರೋಮಾಂಚನ ಅದು ಅದ್ಭುತವೇ ಆಗಿತ್ತು. ಆದರೆ ಕೆಲವೇ ಜನರ ಸ್ವಾರ್ಥಕ್ಕೆ ಬಲಿಯಾಗಿ ನಮ್ಮ ಅಖಂಡ ಭಾರತ ಎರಡು ಹೋಳಾಗಿ ವಿಭಜನೆ ಆಗಿತ್ತು. ಜಗತ್ತಿನ ಯಾವ ರಾಷ್ಟ್ರವೂ ಸ್ವಾತಂತ್ರ್ಯ ದೊರೆತಾಗ ವಿಭಜನೆ ಆದ ಉದಾಹರಣೆ ಸಿಗುವುದಿಲ್ಲ. ಬ್ರಿಟಿಷರ ವಸಾಹತು ಆಗಿದ್ದ ಇನ್ನೂ ಹಲವು ರಾಷ್ಟ್ರಗಳು ಸ್ವಾತಂತ್ರ್ಯವನ್ನು ಪಡೆದಾಗ ವಿಭಜನೆ ಆದ ಉದಾಹರಣೆ ಸಿಗುವುದಿಲ್ಲ. ಯಾಕೆ ಹೀಗಾಯಿತು?

1938ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸುಭಾಸ್ ಚಂದ್ರ ಬೋಸರು ಭಾರತವು ಮುಂದೆ ಸ್ವಾತಂತ್ರ್ಯ ಪಡೆಯುವಾಗ ವಿಭಜನೆ ಆಗಲಿದೆ ಎಂದು ಭವಿಷ್ಯ ಹೇಳಿದ್ದರು. ಅವರು ನುಡಿದ ಹಾಗೆ ಭಾರತವು ವಿಭಜನೆ ಆಗಿ ಸ್ವಾತಂತ್ರ್ಯ ಪಡೆಯಿತು. ಮುಂದೆ ಭಾರತವು ಜಗತ್ತಿನ ಮಹಾಶಕ್ತಿ ಆಗಿ ಬೆಳಗಲಿದೆ, ಅದು ಆಗಬಾರದು ಎಂದು ಬ್ರಿಟಿಷರ ಮನಸಲ್ಲಿ ಇತ್ತೆ? ಅಥವಾ ಬೇರೆ ಯಾರದ್ದಾದರೂ ಹುನ್ನಾರ ಇತ್ತೆ? ಯೋಚನೆ ಮಾಡುವಾಗ ದುಃಖ ಆಗುತ್ತದೆ.

ಸ್ವಾತಂತ್ರ್ಯದ ಯಜ್ಞದಲ್ಲಿ ಆಹುತಿ ಆದವರು ಸಾವಿರಾರು ಜನ

1) ಮಂಗಳೂರಿನ ಅತ್ಯಂತ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಕಾರ್ನಾಡ್ ಸದಾಶಿವ ರಾಯರು ತಮ್ಮ ಎಲ್ಲಾ ಆಸ್ತಿಪಾಸ್ತಿಗಳನ್ನು ಹೋರಾಟಕ್ಕಾಗಿ ಕಳೆದುಕೊಂಡರು. ಅವರು ಮುಂಬೈಯಲ್ಲಿ ಪ್ರಾಣ ಕಳೆದುಕೊಂಡಾಗ ಅವರ ಅಂತಿಮ ಸಂಸ್ಕಾರ ಮಾಡಲು ಕೂಡ ಜನ ಸಿಗಲಿಲ್ಲ. ಅವರ ಕಿಸೆಯಲ್ಲಿ ಒಂದು ರೂಪಾಯಿ ದುಡ್ಡೂ ಇರಲಿಲ್ಲ!

2) ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ರ‍್ಯಾಂಕ್‌ ಜೊತೆಗೆ ಪಾಸ್ ಮಾಡಿ ಬ್ರಿಟಿಷ್ ಸರಕಾರದಲ್ಲಿ ಅತ್ಯುನ್ನತ ವೇತನದ ಉದ್ಯೋಗದ ಆಮಿಷ ಪಡೆದ ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಅದನ್ನು ಧಿಕ್ಕರಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಭಾರತವನ್ನು ಸ್ವಾತಂತ್ರ್ಯದ ಹೆಬ್ಬಾಲಿಗೆ ತಂದು ನಿಲ್ಲಿಸಿದ್ದು ಅದ್ಭುತ ಅಲ್ಲವೇ?

3) ಇಂಗ್ಲೆಂಡಿನಲ್ಲಿ ಕರ್ಜನ್ ವ್ಯಾಲಿ ಹತ್ಯೆ ಮಾಡಿ ಹುತಾತ್ಮನಾದಾಗ ಮದನ್ ಲಾಲ್ ಧಿಂಗ್ರಾ ವಯಸ್ಸು ಕೇವಲ 17 ವರ್ಷ!

ಇದನ್ನೂ ಓದಿ : Independence Day 2023 : ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾದ ಸ್ಥಳಗಳಿವು

4) ಪಾರ್ಲಿಮೆಂಟ್ ಭವನದಲ್ಲಿ ಬಾಂಬ್ ಎಸೆದು ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಿ ನಗು ನಗುತ್ತ ಗಲ್ಲಿಗೇರಿದಾಗ ಭಗತ್ ಸಿಂಗ್ ವಯಸ್ಸು ಕೇವಲ 23 ವರ್ಷ!

5) ಎರಡೆರಡು ಕರಿ ನೀರಿನ ಶಿಕ್ಷೆಯನ್ನು ಪಡೆದು ಅಂಡಮಾನ್ ಸೆಲ್ಯುಲರ್ ಜೈಲಿನ ಒಳಗೆ ನರಕ ಯಾತನೆ ಅನುಭವಿಸಿದ ಸಾವರ್ಕರ್ ಜೈಲಿಂದ ಹೊರಗೆ ಬಂದಾಗ ಅವರ ಅರ್ಧ ಆಯಸ್ಸು ಮತ್ತು ಅರ್ಧ ಕುಟುಂಬವನ್ನು ಕಳೆದುಕೊಂಡಿದ್ದರು.

ಇದನ್ನೂ ಓದಿ : Independence Day 2023: ಸ್ವಾತಂತ್ರ್ಯೋತ್ಸವ ದಿನ ನೋಡಲೇಬೇಕಾದ ಕನ್ನಡ ಚಿತ್ರಗಳಿವು

6) ನಗು ನಗುತ್ತ ಗಲ್ಲಿಗೇರುವ ಧೈರ್ಯ ತೋರಿದ ರಾಸ ಬಿಹಾರಿ ಬೋಸ್, ರಾಜಗುರು, ಸುಖದೇವ್ ಇಂತಹ ಸಾವಿರಾರು ಕ್ರಾಂತಿಕಾರಿಗಳು ತಮ್ಮ ಭವಿಷ್ಯದ ಬಗ್ಗೆ ಎಂದಿಗೂ ಯೋಚನೆ ಮಾಡಲಿಲ್ಲ.

7) ಗಾಂಧೀಜಿಯವರ ಕರೆಗೆ ಸ್ಪಂದಿಸಿ ಭಾರತದ ಬೇರೆ ಬೇರೆ ನಗರಗಳಲ್ಲಿ ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಬೀದಿಗೆ ಇಳಿದು ಹೋರಾಟ ಮಾಡಿದರು. ಅವರ್ಯಾರೂ ಪದವಿಯ ಆಸೆ ಇಟ್ಟುಕೊಳ್ಳಲಿಲ್ಲ ಮತ್ತು ಪದವಿಯನ್ನು ಪಡೆಯಲೇ ಇಲ್ಲ.

8) ಆದಿವಾಸಿಗಳನ್ನು ಬಿಹಾರದಲ್ಲಿ ಸಂಘಟನೆ ಮಾಡಿ ರಕ್ತ ಚೆಲ್ಲಿದ ಹೋರಾಟ ಮಾಡಿದ ಆದಿವಾಸಿ ನಾಯಕ ಬಿರ್ಸಾ ಮುಂಡಾ ಸಾಯುವಾಗ ಆತನ ವಯಸ್ಸು ಕೇವಲ 24 ಆಗಿತ್ತು!

ಇದನ್ನೂ ಓದಿ : ‌Independence Day 2023: ಹಿಂದುಸ್ತಾನ್‌ ಜಿಂದಾಬಾದ್‌ ಥಾ, ಜಿಂದಾಬಾದ್‌ ರಹೇಗಾ!

9) 1919ರಲ್ಲಿ ಪಂಜಾಬಿನ ಜಲಿಯನ್ ವಾಲಾ ಬಾಗ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಸಾವಿರಾರು ನಾಗರಿಕರು ಪ್ರಾಣ ಕಳೆದುಕೊಂಡರು ಮತ್ತು ಅದರ ಎರಡು ಪಟ್ಟು ಜನರು ಗಾಯಗೊಂಡರು.

10) ಕರ್ನಾಟಕದ ವಿದುರಾಶ್ವತ್ಥ ಎಂಬಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಲು ಹೋದ 35 ಸ್ವಾತಂತ್ರ್ಯ ಹೋರಾಟಗಾರರ ಮಾರಣ ಹೋಮವು ಬ್ರಿಟಿಷ್ ಪೊಲೀಸರಿಂದ ಆಯಿತು.

11) ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನಿಗೆ ವಿರುದ್ಧವಾಗಿ ಹೋರಾಟ ಮಾಡಿ ಯುದ್ಧ ಭೂಮಿಗೆ ಇಳಿದ ಕಿತ್ತೂರು ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಬೆಳವಡಿ ಮಲ್ಲಮ್ಮ ಇವರ್ಯಾರೂ ಜೀವದ ಆಸೆ ಇಟ್ಟುಕೊಳ್ಳಲಿಲ್ಲ.

12) ಎಲ್ಲಕ್ಕಿಂತ ದೊಡ್ಡ ದುರಂತ ಎಂದರೆ ಯಾರು ಸ್ವಾತಂತ್ರ್ಯದ ಹೋರಾಟದಲ್ಲಿ ಸರ್ವಸ್ವವನ್ನೂ ಕಳೆದುಕೊಂಡರೋ ಅವರಲ್ಲಿ ಹೆಚ್ಚಿನವರು ಸ್ವಾತಂತ್ರ್ಯದ ಬೆಳಕನ್ನು ನೋಡಲಿಲ್ಲ. ನೋಡಿದರೂ ಅಧಿಕಾರದ ಸ್ಥಾನಕ್ಕೆ ಬರಲಿಲ್ಲ! ಅವರಲ್ಲಿ ಹೆಚ್ಚಿನವರು ನಮ್ಮ ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆಯಲಿಲ್ಲ. ಅವರು ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಕೂಡ ನಿರಾಕರಿಸಿ ದೂರ ಉಳಿದರು.

ಇಂತಹ ನೂರಾರು ಘಟನೆಗಳು, ತ್ಯಾಗ, ಬಲಿದಾನಗಳು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಡೆದಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಇನ್ನೂ ಅಜ್ಞಾತವಾಗಿ ಉಳಿದಿವೆ. ಈಗ ಹೇಳಿ ಭಾರತದ ಸ್ವಾತಂತ್ರ್ಯವು ಸುಲಭದಲ್ಲಿ ದೊರಕಿದ್ದಾ?

Exit mobile version