Site icon Vistara News

ವಿಸ್ತಾರ ಸಂಪಾದಕೀಯ: ಬೃಹತ್ ಕಾಮಗಾರಿ ವೇಳೆ ಕಾರ್ಮಿಕರ ಸುರಕ್ಷತೆ ಖಾತರಿಪಡಿಸಿ

Vistara Editorial, Ensure safety of workers during massive projects

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದೇಶದಾದ್ಯಂತ ನಿರ್ಮಾಣ ಹಂತದಲ್ಲಿರುವ ಎಲ್ಲಾ 29 ಸುರಂಗಗಳ ಸುರಕ್ಷತೆ ಮತ್ತು ಅತ್ಯುನ್ನತ ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸುರಕ್ಷತಾ ಆಡಿಟ್ ಅನ್ನು ಕೈಗೊಳ್ಳಲಿದೆ ಎಂದು ಅದರ ಅಧಿಕೃತ ಹೇಳಿಕೆ ಬುಧವಾರ ತಿಳಿಸಿದೆ. ಎನ್‌ಎಚ್‌ಎಐ ಅಧಿಕಾರಿಗಳು, ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ತಜ್ಞರ ತಂಡ ಮತ್ತು ಇತರ ಸುರಂಗ ತಜ್ಞರು ಈಗ ನಡೆಯುತ್ತಿರುವ ಸುರಂಗ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ ಮತ್ತು ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರಂತೆ. ನವೆಂಬರ್ 12ರಂದು ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದ ಕುಸಿತ ಹಾಗೂ ಅದರ ಒಳಗೆ 41 ಕಾರ್ಮಿಕರು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಈ ಕ್ರಮ ಕೈಗೊಳ್ಳುತ್ತಿದೆ(Vistara editorial).

ದೇಶದಾದ್ಯಂತ ಸುಮಾರು 79 ಕಿ.ಮೀ ಉದ್ದದ ಒಟ್ಟು 29 ಸುರಂಗಗಳು ನಿರ್ಮಾಣ ಹಂತದಲ್ಲಿವೆ. ಹಿಮಾಚಲ ಪ್ರದೇಶದಲ್ಲಿ 12, ಜಮ್ಮು ಮತ್ತು ಕಾಶ್ಮೀರದಲ್ಲಿ ಆರು, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲಿ ತಲಾ ಎರಡು, ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಢ, ಉತ್ತರಾಖಂಡ ಮತ್ತು ದೆಹಲಿಯಲ್ಲಿ ತಲಾ ಒಂದೊಂದು ಸುರಂಗಗಳಿವೆ. NHAI ಸಹ ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL)ನೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಒಪ್ಪಂದದ ಭಾಗವಾಗಿ, ಸುರಂಗ ನಿರ್ಮಾಣ ಮತ್ತು NHAI ಯೋಜನೆಗಳ ಇಳಿಜಾರು ಸ್ಥಿರೀಕರಣಕ್ಕೆ ಸಂಬಂಧಿಸಿದ ವಿನ್ಯಾಸ, ರೇಖಾಚಿತ್ರ ಮತ್ತು ಸುರಕ್ಷತೆ ಅಂಶಗಳನ್ನು KRCL ಪರಿಶೀಲಿಸುತ್ತದೆ.

ಯಾವುದೇ ಸರ್ಕಾರಿ ಕಾಮಗಾರಿ, ನಿರ್ಮಾಣ ಕಾರ್ಯಕ್ಕೆ ʼಭಾರತೀಯ ಮಾನಕʼ (Indian standard) ಅನ್ನು ಅನ್ವಯಿಸಲಾಗುತ್ತದೆ. ಇದೊಂದು ಬೃಹತ್‌ ದಾಖಲೆ ಮತ್ತು ಎಲ್ಲ ಕಾಮಗಾರಿಗೂ ಸಂಬಂಧಿಸಿದ ಸುರಕ್ಷತಾ ಸೂತ್ರಗಳು ಇದರಲ್ಲಿವೆ. ಮಣ್ಣಿನ ಪರೀಕ್ಷೆ ಮಾಡುವುದು, ಅದು ಗಟ್ಟಿ ನೆಲವೋ ಮೆದು ನೆಲವೋ ಎಂದು ಪರೀಕ್ಷಿಸುವುದರಿಂದ ಆರಂಭಿಸಿ, ಆ ಮಣ್ಣಿನಲ್ಲಿ ಯಾವ ಖನಿಜಾಂಶಗಳಿವೆ, ಅದು ಬೇಗನೆ ಕುಸಿಯಬಹುದೇ, ಸುರಂಗ ಕಾಮಗಾರಿಯ ಸಂದರ್ಭ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ತುರ್ತು ಸಂದರ್ಭ ಒದಗಿದಾಗ ಒಳಗಿರುವ ಕಾರ್ಮಿಕರ ರಕ್ಷಣೆಗೆ ಯಾವ ಸೂತ್ರ ಅನುಸರಿಸಬೇಕು, ಒಳಗಿರುವವರಿಗೆ ವೆಂಟಿಲೇಶನ್‌ ಹಾಗೂ ಬೆಳಕಿನ ವ್ಯವಸ್ಥೆ ಹೇಗಿರಬೇಕು- ಎಂಬಿತ್ಯಾದಿ ಎಲ್ಲ ಅಂಶಗಳನ್ನೂ ಈ ಐಎಸ್‌ ಸಮಗ್ರವಾಗಿ ನಿರ್ದೇಶನ ರೂಪದಲ್ಲಿ ನೀಡಿದೆ. ಸುರಂಗ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ಪರಿಣತಿ ಹಾಗೂ ದಕ್ಷತೆ ಹೊಂದಿರುವ ಕಂಪನಿಗಳಿಗೆ, ತಜ್ಞರಿಗೆ ಅದನ್ನು ಒಪ್ಪಿಸಲಾಗುತ್ತದೆ. ತುಂಬಾ ಆಳಕ್ಕೆ ಕೊರೆಯುವ ಗಣಿಗಳಲ್ಲಿ ಭೂಕುಸಿತ ಉಂಟಾಗಿ ಕಾರ್ಮಿಕರು ಸಾಯುವ ಘಟನೆಗಳು ಭಾರತದಲ್ಲಿ ಸಾಕಷ್ಟು ನಡೆದಿವೆ. ಆದರೆ ಸುರಂಗ ಕೊರೆತದ ವೇಳೆ ಇಂಥ ಘಟನೆಗಳು ಆಗಿರುವುದು ತುಂಬಾ ಕಡಿಮೆ. ದಿಲ್ಲಿ ಮೆಟ್ರೋ, ಬೆಂಗಳೂರು ಮೆಟ್ರೋ ಮುಂತಾದವುಗಳ ರಚನೆಯ ಮೇಲೆ ಈ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ ಪರಿಣಾಮ ಯಾವುದೇ ಅವಘಡ ಸಂಭವಿಸಿಲ್ಲ.

ಆದರೆ ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ನಡೆದಿರುವ ಘಟನೆಯ ಮೂಲ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಡಿಲವಾದ, ಮೆದುವಾದ ಮಣ್ಣಿನ ರಚನೆಯನ್ನು ಸರಿಯಾಗಿ ಗಮನಿಸದೆ ಕಾಮಗಾರಿ ನಡೆಸಿದ ಕಾರಣ ಹೀಗಾಗಿದೆಯೇ ಅಥವಾ ದಿಡೀರ್‌ ಎಂದು ಬಂದ ಮಳೆಯ ಕಾರಣ ಹೀಗಾಗಿದೆಯೇ ಎಂಬುದು ತಿಳಿದುಬಂದಿಲ್ಲ. ಅದೇನೇ ಇದ್ದರೂ, ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದುದಕ್ಕಾಗಿ ಸುರಂಗ ಕಾಮಗಾರಿ ನಡೆಸುತ್ತಿರುವ ಕಂಪನಿಯ ಕ್ರಮ ಕೈಗೊಳ್ಳಬೇಕಾಗಿದೆ. ಹೈದರಾಬಾದ್‌ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಸುರಂಗದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ. ಜತೆಗೆ ಸುರಕ್ಷತಾ ಕ್ರಮಗಳಲ್ಲಿ ರಾಜಿ ಮಾಡಿಕೊಳ್ಳಲು ಬಜೆಟ್‌ನಲ್ಲಿ ಕಡಿತವಾಗುವಂತೆ ಅಧಿಕಾರಿಗಳಿಗೆ ಲಂಚ ನೀಡಿದ್ದರೆ ಅವರಿಗೂ ಶಿಕ್ಷೆಯಾಗಬೇಕು. ಮೊದಲು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರು ಹೊರಗೆ ಬರಲಿ; ನಂತರ ಸಮಗ್ರ ತನಿಖೆ ನಡೆಯಲಿ. ಇದೇ ವೇಳೆಗೆ ದೇಶದಲ್ಲಿ ನಡೆಯುತ್ತಿರುವ ಇತರ ಸುರಂಗ ಕಾಮಗಾರಿಗಳ ಸುರಕ್ಷತಾ ಪರೀಕ್ಷೆಯೂ ಅಗತ್ಯವಾಗಿ ನಡೆಯಬೇಕಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಮಾಯಣ, ಮಹಾಭಾರತ ಕಲಿಕೆ ಶಿಫಾರಸು ಸ್ವಾಗತಾರ್ಹ

Exit mobile version