Site icon Vistara News

World Heart day | ವಾಲ್ನಟ್‌ ತಿನ್ನಿ, ಹೃದಯದ ಆರೋಗ್ಯ ಕಾಪಾಡಿಕೊಳ್ಳಿ!

walnut benefits

ಭಾರತದಲ್ಲಿ ಸಂಭವಿಸುತ್ತಿರುವ ಸ್ವಾಭಾವಿಕ ಮೃತ್ಯುಗಳ ಪೈಕಿ ಶೇ. ೨೭ರಷ್ಟು ಸಾವುಗಳಿಗೆ ಹೃದ್ರೋಗಗಳು ಕಾರಣ. ಅದರಲ್ಲೂ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಹೊಡೆತ ಅತಿಹೆಚ್ಚು. ನಮ್ಮ ಕುಟುಂಬದ ಚರಿತ್ರೆ ಮತ್ತು ಜೀವನಶೈಲಿ ಇದಕ್ಕೆ ಪ್ರಮುಖ ಕಾರಣ ಎಂಬುದು ಹೌದಾದರೂ, ನಮ್ಮ ಆಹಾರ ಪದ್ಧತಿಗಳಿಂದ ಕೆಲವು ಮಟ್ಟಿಗೆ ನಮ್ಮ ಹೃದಯವನ್ನು ಕ್ಷೇಮವಾಗಿ ಇಟ್ಟುಕೊಳ್ಳಲು ಸಾಧ್ಯ. ಬೊಜ್ಜು, ಕೊಲೆಸ್ಟ್ರಾಲ್ ಹೆಚ್ಚಳದಂಥ ಕೆಲವು ಸಮಸ್ಯೆಗಳನ್ನು ನಿಯಂತ್ರಣಕ್ಕೆ ತಂದುಕೊಂಡರೆ ಹೃದಯ ಜೋಪಾನ ಮಾಡುವುದು ಕಷ್ಟವಲ್ಲ.

ಆಹಾರವಾಗಲಿ ಸಂಜೀವಿನಿ: ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ಎಳ್ಳಷ್ಟೂ ಸುಳ್ಳಲ್ಲ. ಅದರೊಂದಿಗೆ ಸೂಕ್ತ ವ್ಯಾಯಾಮವೂ ಸೇರಿದರೆ ಆರೋಗ್ಯವೆಂಬ ಭಾಗ್ಯ ಒದಗುವುದು ಕಷ್ಟವಲ್ಲ.ಈ ನಿಟ್ಟಿನಲ್ಲಿ ವಾಲ್ನಟ್‌ಗಳು ನಮಗೆ ಹೇಗೆ ಸಹಾಯ ಮಾಡಬಲ್ಲವು ಎಂಬುದನ್ನು ನೋಡೋಣವೇ?

ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬು ಅಥವಾ ಒಳ್ಳೆಯ ಕೊಬ್ಬನ್ನು ಯಥೇಚ್ಛವಾಗಿ ಹೊಂದಿರುವ ಈ ಪುಟ್ಟ ನಟ್ಗಳು, ದೇಹದಲ್ಲಿ ಕೊಲೆಸ್ಟ್ರಾಲ್ ಶೇಖರಣೆ ಆಗುವುದನ್ನು ತಡೆಗಟ್ಟಿ, ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುತ್ತವೆ. ಹೃದಯ ಸಮಸ್ಯೆಗಳಿಗೆ ಮೂಲವಾಗುವಂಥ ಎರಡು ಮುಖ್ಯಕಾರಣಗಳಿವು.

ದೇಹದಲ್ಲಿ ಉರಿಯೂತ ಶಮನಗೊಳಿಸಿ, ರಕ್ತನಾಳಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ವಾಲ್ನಟ್ ಗಳು ನೆರವಾಗುತ್ತವೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಈ ಎಲ್ಲಾ ಕಾರಣಗಳಿಗಾಗಿ ವಾಲ್ನಟ್ ನಂಥ ಸಸ್ಯಜನ್ಯ ಒಮೇಗಾ-೩ ಮೂಲಗಳು ನಮ್ಮ ಆಹಾರದ ಭಾಗವಾಗಲೇಬೇಕು. ಅಮೆರಿಕ ಹೃದಯ ಸಂಸ್ಥೆ (ಎ ಎಚ್ ಎ) ಪ್ರಕಾರ, ಅತ್ಯಂತ ಹೃದಯ-ಸ್ನೇಹಿ ಆಹಾರಗಳ ಪೈಕಿ ವಾಲ್ನಟ್ ಸಹ ಒಂದು.

ಇದನ್ನೂ ಓದಿ | World heart day | ಕಾಪಾಡಿಕೊಳ್ಳಲು ಹೃದಯವನ್ನು, ಸೇವಿಸಿ ಪ್ರತಿದಿನ ಇವನ್ನು

ಯಾವಾಗ ತಿನ್ನಬೇಕು?: ಸಾಮಾನ್ಯವಾಗಿ ನಮ್ಮನ್ನು ಕಾಡುವ ಪ್ರಶ್ನೆಯಿದು. ಇದನ್ನು ದಿನದ ಯಾವ ಹೊತ್ತಿನಲ್ಲಾದರೂ ತಿನ್ನಬಹುದು. ಆದರೆ ದೇಹದಲ್ಲಿ ಸೆರೊಟೋನಿನ್ ಪ್ರಮಾಣವನ್ನಿದು ಹೆಚ್ಚಿಸುವುದರಿಂದ, ಸಂಜೆಯ ಹೊತ್ತಿಗೆ ವಾಲ್ನಟ್ ಬಾಯಾಡಬಹುದು.ದಿನವೊಂದಕ್ಕೆ ಅಂದಾಜು ೨೮ ಗ್ರಾಂನಷ್ಟು ವಾಲ್ನಟ್ ನಮ್ಮ ಆಹಾರದಲ್ಲಿ ಇರುವುದು ಸೂಕ್ತ ಎನ್ನಲಾಗಿದೆ. ಇದರಿಂದ, ೨.೫ ಗ್ರಾಂ ನಷ್ಟು ಒಮೇಗಾ-೩, ೪ ಗ್ರಾಂ ನಷ್ಟು ಪ್ರೊಟೀನ್, ೨ ಗ್ರಾಂ ನಷ್ಟು ನಾರು ನಿಶ್ಚಿತವಾಗಿ ದೊರೆಯುತ್ತದೆ.

ಉಪಯೋಗ ಹೇಗೆ?: ಹೀಗೆಯೇ ಅಂತಿಲ್ಲ. ವಾಲ್ನಟ್ ಗಳನ್ನು ಯಾವುದೇ ರೀತಿಯಲ್ಲೂ ಉಪಯೋಗಿಸಬಹುದು, ಥೇಟ್ ಶೇಂಗಾ, ಬಾದಾಮಿ, ಗೋಡಂಬಿಗಳ ಹಾಗೆಯೇ. ಸುಮ್ಮನೆ ಬಾಯಾಡಬಹುದು, ಪುಡಿ ಮಾಡಿ ಬೇಕಾದ ಆಹಾರಗಳ ಮೇಲೆ ಉದುರಿಸಬಹುದು ಅಥವಾ ಪಾಕ ಹಾಕಿ ಲಡ್ಡು ಮಾಡಬಹುದು, ಒಗ್ಗರಣೆಗೆ ಹಾಕಬಹುದು, ಪ್ರೊಟೀನ್ ಶೇಕ್ ಗಳ ಜೊತೆಗೆ ಸೇರಿಸಿಕೊಳ್ಳಬಹುದು. ಇದಿಷ್ಟೇ ಎಂದಲ್ಲ, ನಿಮಗೆ ಆಸಕ್ತಿಯಿದ್ದರೆ ಹೊಸ ದಾರಿಗಳನ್ನು ನೀವೇ ಹುಡುಕಬಹುದು. ಅಂತೂ ದಿನವೂ ವಾಲ್ನಟ್ ತಿಂದು ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ | World Hypertension Day | ಹೈಪರ್‌ಟೆನ್ಷನ್‌ ಗೆಲ್ಲಲು 5 ಸೂತ್ರಗಳು

Exit mobile version