Site icon Vistara News

Blood Type | ಈ ರಕ್ತದ ಗುಂಪಿನ ಮಂದಿಗೆ ಸಣ್ಣ ಪ್ರಾಯದಲ್ಲೇ ಲಕ್ವ ಹೊಡೆವ ಸಾಧ್ಯತೆ ಹೆಚ್ಚಂತೆ!

blood type and stroke risk

ನೀವು ‘A’ ರಕ್ತದ ಗುಂಪಿನವರಾ? ಹಾಗಾದರೆ, ನಿಮಗೆ ಸಣ್ಣ ವಯಸ್ಸಿನಲ್ಲಿಯೇ ಲಕ್ವ (ಪಾರ್ಶ್ವವಾಯು/ಸ್ಟ್ರೋಕ್) ಬರುವ ಸಂಭವ ಹೆಚ್ಚು ಎನ್ನುತ್ತದೆ ಹೊಸ ಸಂಶೋಧನೆ. ಅಮೆರಿಕದ ವಿಶ್ವವಿದ್ಯಾನಿಲಯದ ನೂತನ ಸಂಶೋಧನೆಯೊಂದು ರಕ್ತದ ಗುಂಪಿಗೂ ಬರುವ ಕೆಲವು ರೋಗಗಳಿಗೂ ಸಂಬಂಧ ಇದೆ ಎಂದು ವಿವರವಾಗಿ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ಇತ್ತೀಚೆಗೆ ಬಾಲ್ಟಿಮೋರ್‌ನ ಮೇರಿಲ್ಯಾಂಡ್‌ ಸ್ಕೂಲ್‌ ಆಫ್‌ ಮೆಡಿಸಿನ್‌ ನಡೆಸಿದ ಸಂಶೋಧನೆಗಳ ಪ್ರಕಾರ, ರಕ್ತದ ಗುಂಪಿಗೂ ರೋಗಗಳಿಗೆ ತುತ್ತಾಗುವುದಕ್ಕೂ ಖಂಡಿತ ಸಂಬಂಧವಿದೆ. A ರಕ್ತದ ಗುಂಪು ಹೊಂದಿದ ಮಂದಿಗೆ ಸಣ್ಣ ವಯಸ್ಸಿನಲ್ಲಿಯೇ ಲಕ್ವಕ್ಕೆ ತುತ್ತಾಗುವ ಸಂಭವ ಉಳಿದವರಿಗಿಂತ ಶೇ.೧೮ರಷ್ಟು ಹೆಚ್ಚಿದೆ. ಹಾಗೆಯೇ ಇತರ ರಕ್ತದ ಗುಂಪಿಗೆ ಹೋಲಿಸಿದರೆ, O ರಕ್ತದ ಗುಂಪು ಹೊಂದಿದ ಮಂದಿಗೆ ಇತರರಿಗಿಂತಲೂ ಈ ತೊಂದರೆ ಉಂಟಾಗುವ ಸಂಭವ ಶೇ.೧೨ರಷ್ಟು ಕಡಿಮೆ ಇರುತ್ತದೆ ಎಂದು ಹೇಳಿದೆ.

ಮೆದುಳಿಗೆ ರಕ್ತಪೂರಣ ನಿಂತಾಗ ಪಾರ್ಶ್ವವಾಯು ಸಂಭವಿಸುತ್ತದೆ. ರಕ್ತಪೂರಣ ಮಾಡುವ ರಕ್ತನಾಳ ಮಧ್ಯದಲ್ಲೆಲ್ಲೋ ತುಂಡಾಗಿರುವ ಸಾಧ್ಯತೆಯಿಂದ ಅಥವಾ ಸಣ್ಣ ಯಾವುದೋ ಹೆಪ್ಪುಗಟ್ಟಿದ ರಕ್ತನಾಳದ ಮಧ್ಯದಲ್ಲೆಲ್ಲೋ ಸಿಕ್ಕಿ ಹಾಕಿಕೊಂಡು ಸರಾಗ ರಕ್ತ ಹರಿಯುವಿಕೆಗೆ ತೊಂದರೆ ಉಂಟು ಮಾಡುತ್ತಿರಬಹುದು. ಇದರಿಂದ ರಕ್ತಪೂರಣದಲ್ಲಿ ವ್ಯತ್ಯಯ ಉಂಟಾಗಿ ಸ್ಟ್ರೋಕ್‌ ಸಂಭವಿಸುತ್ತದೆ. ಇಂಥ ಸಂದರ್ಭದಲ್ಲಿ ಬಹಳಷ್ಟು ಸಾರಿ ಎಷ್ಟರಮಟ್ಟಿಗಿನ ತೊಂದರೆ ಇದೆ ಹಾಗೂ ಮಿದುಳಿಗೆ ಎಷ್ಟು ಹಾನಿಯಾಗಿದೆ ಎಂಬುದರ ಮೇಲೆ ನಿಂತಿರುತ್ತದೆ. ಅಷ್ಟೇ ಅಲ್ಲ, ಎಷ್ಟು ತುರ್ತಾಗಿ ರೋಗಿಗೆ ಚಿಕಿತ್ಸೆ ದೊರೆಯುತ್ತದೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ ಎಂದಿದೆ.

ಸಣ್ಣ ವಯಸ್ಸಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುವವರ ಪ್ರಮಾಣ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇವರಲ್ಲಿ ಬಹುತೇಕ ಮಂದಿ ಸಾವಿಗೀಡಾಗುತ್ತಿದ್ದು, ಬದುಕಿ ಉಳಿವವರಲ್ಲಿ ಹಲವರು ದಶಕಗಳ ಕಾಲ ಅಂಗ ನ್ಯೂನತೆಯಿಂದ ಬಳಲುತ್ತಾರೆ. ಈ ಸಂಶೋಧನೆಯ ಮುಖ್ಯ ಉದ್ದೇಶವೇ ಅರುವತ್ತು ವರ್ಷದೊಳಗಿನ ಮಂದಿಯಲ್ಲಿ ಇತ್ತೀಚೆಗೆ ಕಾಡುತ್ತಿರುವ ಪಾರ್ಶ್ವವಾಯುವಿಗೆ ಕಾರಣಗಳನ್ನು ಹುಡುಕುವುದೂ ಆಗಿತ್ತು.

ಈ ಸಂಶೋಧನಾ ವರದಿಯಲ್ಲಿ, ಯಾಕೆ A ರಕ್ತದ ಗುಂಪು ಹೊಂದಿದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಎಂಬುದಕ್ಕೆ ಮಾತ್ರ ಸರಿಯಾದ ವಿವರಗಳಿಲ್ಲ. ಆದರೆ, ಇದು ಬಹುಶಃ ರಕ್ತದಲ್ಲಿರುವ ಪ್ಲೇಟ್‌ಲೆಟ್‌ಗಳು ಹಾಗೂ ರಕ್ತದ ಮೂಲಕ ಸರಬರಾಜಾಗುವ ಪ್ರೋಟೀನ್‌ ಸಂಬಂಧದಿಂದಲೂ ಆಗಿರಬಹುದು. ಅಥವಾ ರಕ್ತದ ಹೆಪ್ಪುಗಟ್ಟುವಿಕೆಯಿಂದಲೂ ಆಗಿರಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳಾಗಬೇಕಿದೆ ಎಂದು ವಿಶ್ವವಿದ್ಯಾನಿಲಯ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ | Processed Food | ಸಂಸ್ಕರಿಸಿದ ಆಹಾರ ವಸ್ತುಗಳಿಂದ ಸಣ್ಣ ವಯಸ್ಸಿಗೇ ಕ್ಯಾನ್ಸರ್‌, ಹೃದ್ರೋಗ!

ಈ ಸಂಶೋಧನಾ ವರದಿಗೆ ಸುಮಾರು ೫೦ ವಿಶ್ವವಿದ್ಯಾನಿಲಯಗಳ ತಜ್ಞರು ಸಹಮತ ವ್ಯಕ್ತಪಡಿಸಿದ್ದು, ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಹೆಲ್ತ್‌ ಹಾಗೂ ಯುಎಸ್‌ನ ವೆಟೆರನ್‌ ಅಫೇರ್ಸ್‌ ವಿಭಾಗ ಕೂಡಾ ತಮ್ಮ ಸಹಕಾರವನ್ನು ತಿಳಿಸಿವೆ.

ಹಾಗಾದರೆ, ರಕ್ತದ ಗುಂಪಿಗೂ ಯಾವ ಯಾವ ಕಾಯಿಲೆಗಳಿಗೂ ಸಂಬಂಧವಿದೆ ಅನ್ನುತ್ತೀರಾದರೆ ಈ ವರದಿ ಸಂಪೂರ್ಣವಾಗಿ ಓದಬೇಕು. ಅದರ ಪ್ರಕಾರ, O ರಕ್ತದ ಗುಂಪಿನ ಮಂದಿಗೆ ಹೋಲಿಸಿದರೆ, A, B ರಕ್ತದ ಗುಂಪಿನ ಮಂದಿಯಲ್ಲಿ ನರ ಸಂಬಂಧೀ ಥ್ರೋಂಬೋಸಿಸ್‌ ಉಂಟಾಗುವ ಸಂಭವ ಹೆಚ್ಚು. ಥ್ರೋಂಬೋಸಿಸ್‌ ಎಂದರೆ, ರಕ್ತನಾಳದ ಮಧ್ಯದಲ್ಲಿ ರಕ್ತ ಹೆಪ್ಪುಗಟ್ಟಿ ಸಿಕ್ಕಿ ಹಾಕಿಕೊಳ್ಳುವುದು ಹಾಗೂ ಸರಾಗ ರಕ್ತಪರಿಚಲನೆಗೆ ತಡೆಯೊಡ್ಡುವುದು. ಇದು ಹೆಚ್ಚು ಕಾಲಿನ ನರಗಳಲ್ಲಿ ಉಂಟಾಗುವ ಸಮಸ್ಯೆಯಾಗಿದ್ದು, ಇದು ಹೀಗೇ ಮುಂದುವರಿದು ಒಂದು ದಿನ ಹೃದಯಕ್ಕೆ ರಕ್ತಪೂರಣ ಮಾಡುವ ನಾಳದಲ್ಲೂ, ಮೆದುಳಿನ ರಕ್ತನಾಳಕ್ಕೂ ಮುಂದುವರಿಯುವ ಸಂಭವವೂ ಇದೆ ಎಂದಿದೆ.

೨೦೧೭ರಲ್ಲಿ ಇಂಥದ್ದೇ ಒಂದು ಸಂಶೋಧನೆ, ರಕ್ತದ ಗುಂಪಿಗೂ ಕ್ಯಾನ್ಸರ್‌ ಕಾಯಿಲೆಗೂ ಸಂಬಂಧವಿದೆ ಎಂದು ವರದಿ ಮಾಡಿತ್ತು. A ರಕ್ತದ ಗುಂಪಿಗೆ ಹೋಲಿಸಿದರೆ, B ಹಾಗೂ AB ರಕ್ತದ ಗುಂಪಿನ ಮಂದಿಗೆ ಎಲ್ಲ ಬಗೆಯ ಕ್ಯಾನ್ಸರ್‌ ಬರುವ ಸಂಭವ ತೀರಾ ಕಡಿಮೆ ಎಂದು ಯುನಿವರ್ಸಿಟಿ ಆಫ್‌ ಪಿಟ್ಸ್‌ಬರ್ಗ್‌ ಕ್ಯಾನ್ಸರ್‌ ಇನ್ಸ್‌ಟಿಟ್ಯೂಟ್‌ ಸಂಶೋಧನೆಯ ವರದಿಯಲ್ಲಿ ತಿಳಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ | Tech Neck | ಗೆಜೆಟ್‌ ಎಂಬ ಬ್ರಹ್ಮಕಪಾಲ ತಂದಿಟ್ಟ ಗಂಡಾಂತರ:‌ ಏನಿದು?

Exit mobile version