ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (Bangalore Agricultural University) ಆಶ್ರಯದಲ್ಲಿ ನ. 17ರಿಂದ 20ರವರೆಗೆ ನಾಲ್ಕು ದಿನಗಳ ಕೃಷಿ ಮೇಳ (Krishi Mela) ನಡೆಯಲಿದೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (Gandhi Krishi Vijnana Kendra-GKVK) ಆವರಣದಲ್ಲಿ ನಡೆಯುವ ಈ ಕೃಷಿ ಮೇಳವನ್ನು ‘ಆಹಾರ, ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯಗಳು’ ಎಂಬ ಘೋಷವಾಕ್ಯದಡಿ ಆಯೋಜಿಸಲಾಗಿದೆ ಎಂದು ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ (SV Suresh) ತಿಳಿಸಿದ್ದಾರೆ.
ಕೃಷಿ ಮೇಳದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಬೀಜ ಸಂತೆ’ ಆಯೋಜಿಸಲಾಗುತ್ತಿದೆ. ಈ ವರೆಗಿನ ಮೇಳಗಳಲ್ಲಿ ಐಐಎಚ್‌ಆರ್, ಕರ್ನಾಟಕ ರಾಜ್ಯ ಬೀಜ ನಿಗಮ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬಿತ್ತನೆ ಬೀಜಗಳನ್ನು ಪ್ರದರ್ಶನಕ್ಕಷ್ಟೇ ಇಡುತ್ತಿದ್ದವು. ಆದರೆ ಈ ಬಾರಿ ಪ್ರದರ್ಶನದ ಜೊತೆಗೆ ಬಿತ್ತನೆ ಬೀಜಗಳ ಮಾರಾಟವೂ ಇರುತ್ತದೆ.
ಕೃಷಿ ಮೇಳದಲ್ಲಿ ಏನೇನು ಸ್ಪೆಷಲ್?
- ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ, 5 ಹೊಸ ತಳಿಗಳಾದ ಸಾಮೆ– ಜಿಪಿಯುಎಲ್ 11, ಬರಗು–ಜಿಪಿಯುಪಿ 32, ರಾಗಿ– ಎಂ.ಎಲ್ 22, ಸೂರ್ಯಕಾಂತಿ ಕೆಬಿಎಸ್‌ಎಚ್–85 ಮತ್ತು ಕೆಂಪು ಹಲಸು ತಳಿಗಳು ಬಿಡುಗಡೆಯಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ.
- ರೈತರಿಗೆ ಕ್ಷೇತ್ರ ಸಂದರ್ಶನ, ಕೃಷಿ ವಿಜ್ಞಾನಿ-ತಜ್ಞರೊಂದಿಗೆ ಸಮಾಲೋಚನೆ, ಮಾರ್ಗದರ್ಶನ, ತಾಕುಗಳಲ್ಲಿ ಪ್ರಾತ್ಯಕ್ಷಿಕೆ, ಹೊಸ ತಳಿಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.
- ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು ಹಾಗೂ ವಿವಿಗಳ ಎಲ್ಲ ವಿಭಾಗಗಳಲ್ಲಿ ನಡೆದಿರುವ ಸಂಶೋಧನೆ, ಆವಿಷ್ಕಾರದ ಮಾಹಿತಿಯನ್ನು ವಸ್ತುಪ್ರದರ್ಶನದಲ್ಲಿ ತಿಳಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.
- ವಿಜ್ಞಾನಿಗಳ ಸಹಯೋಗದಲ್ಲಿ ನೂರಾರು ರೈತರು 1,500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೀಜ ಉತ್ಪಾದನೆಯನ್ನು ಕೈಗೊಂಡಿದ್ದಾರೆ.
- ವರ್ಚುವಲ್ ಸಭೆಗಳ ಮೂಲಕ ಕೃಷಿ ಸಂಬಂಧಿತ ಪ್ರಶ್ನೆಗಳ ನೇರ ಪರಿಹಾರ, ಸಾಮಾಜಿಕ ಜಾಲತಾಣಗಲ್ಲಿಯೂ ಕಾರ್ಯಕ್ರಮಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
- ಬಾಡಲ್ ಬದನೆ, ಚೆರ್‍ರಿ ಟೊಮೆಟೊ ತರಕಾರಿಗಳು ಮತ್ತು ಅಲಂಕಾರಿಕ (ಆರ್ನಮೆಂಟಲ್) ಸೂರ್ಯಕಾಂತಿ ಹೂವಿನ ಪ್ರಾತ್ಯಕ್ಷಿಕೆಗಳ ಪ್ರದರ್ಶನ ಈ ಬಾರಿಯ ವಿಶೇಷ.
- ಬರಗಾಲದಲ್ಲಿ ಸೂಕ್ಷ್ಮ ನೀರಾವರಿ ತಂತ್ರಜ್ಞಾನದ ಮೂಲಕ ಸಿರಿಧಾನ್ಯಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳುವ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಲಾಗುವುದು.
ಬರ ಸ್ನೇಹಿ ಕೃಷಿ ತಂತ್ರಜ್ಞಾನಗಳು ಮತ್ತು ಸಿರಿಧಾನ್ಯಕ್ಕೆ ಆದ್ಯತೆ
ಈ ಬಾರಿಯ ಕೃಷಿ ಮೇಳದಲ್ಲಿ ಬರ ಸ್ನೇಹಿ ಕೃಷಿ ತಂತ್ರಜ್ಞಾನ, ಸಿರಿಧಾನ್ಯಕ್ಕೆ ಪ್ರಮುಖ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಮೇಳದಲ್ಲಿ ವಿಭಿನ್ನ ಬಗೆಯ ಪ್ರಾಣಿ, ಪಕ್ಷಿಗಳ ಪ್ರದರ್ಶನವೂ ಇರಲಿದೆ. ಡಾರ್ಪರ್, ಬನ್ನೂರು ಮತ್ತಿತರ ಕುಲಿ ತಳಿ, ದುಬಾರಿ ಹೋರಿ, ಹಸುಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಇದನ್ನೂ ಓದಿ: Krishi Khajane : ಕೃಷಿಯಲ್ಲಿ ಕೋಟಿ ನೋಡಲು ದಾಳಿಂಬೆ ಬೆಳೆಯಿರಿ!
ಆಧುನಿಕ ಕೃಷಿ ಸಲಕರಣೆ, ಕೀಟನಾಶಕ, ಬಿತ್ತನೆ ಬೀಜ, ರಸಗೊಬ್ಬರ, ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ, ಸಮಗ್ರ ಕೃಷಿ ಪದ್ಧತಿಗಳ ಪ್ರಾತ್ಯಕ್ಷಿಕೆ ಇರಲಿದೆ.
ಮಳೆ ನೀರು ಕೊಯ್ಲು, ಒಣ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿ, ಸುಧಾರಿತ ಕೃಷಿ ಯಂತ್ರೋಪಕರಣಗಳನ್ನು ಪ್ರಾತ್ಯಕ್ಷಿಕೆ, ಹೊಸದಾಗಿ ಬಿಡುಗಡೆಯಾದ ಬೆಳೆ ತಳಿಗಳ ಪ್ರಾತ್ಯಕ್ಷಿಕೆ ನಡೆಯಲಿದೆ.
ಸುಗ್ಗಿಯ ನಂತರದ ತಂತ್ರಜ್ಞಾನ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ತೋಟಗಾರಿಕೆ ಬೆಳೆಗಳು, ಕೃಷಿ ಮತ್ತು ಇತರ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ..