ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಹಾಗೂ ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸಲು ಕೃಷಿ ನವೋದ್ಯಮ (Agriculture Startup) ಕಾರ್ಯಕ್ರಮವನ್ನು 2023-24ನೇ ಸಾಲಿನಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಈ ಸಂಬಂಧ ಕೃಷಿ ನವೋದ್ಯಮ ಯೋಜನೆಯಡಿ (Krishi navodhyama yojana) ಆರ್ಥಿಕ ಸೌಲಭ್ಯವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ರಾಜ್ಯಾದ್ಯಂತ ಕೃಷಿ ವಲಯದಲ್ಲಿ ನೂತನ ಆವಿಷ್ಕಾರಗಳು, ನವೀನ ಉತ್ಪನ್ನಗಳು ಹಾಗೂ ಸೇವೆಗಳನ್ನು ಒಳಗೊಂಡಿರುವ ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಸದರಿ ಯೋಜನೆಯನ್ನು ರೂಪಿಸಲಾಗಿದೆ.
ಅರ್ಜಿ ಸಲ್ಲಿಸಲಾದ ಕೃಷಿ ನವೋದ್ಯಮಗಳ ಪೈಕಿ ಅರ್ಹ ಕೃಷಿ ನವೋದ್ಯಮಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿ ಹೊಸ ಕೃಷಿ ನವೋದ್ಯಮಗಳಿಗೆ ಕನಿಷ್ಠ ರೂ. 5 ಲಕ್ಷದಿಂದ ಗರಿಷ್ಠ ರೂ. 20 ಲಕ್ಷ ಹಾಗೂ ಈಗಾಗಲೇ ಸ್ಥಾಪಿಸಲಾದ ಕೃಷಿ ನವೋದ್ಯಮಗಳ ವಿಸ್ತರಣೆಗೆ ಕನಿಷ್ಠ ರೂ. 20 ಲಕ್ಷದಿಂದ ಗರಿಷ್ಠ ರೂ. 50 ಲಕ್ಷದವರೆಗಿನ ಸಹಾಯಧನವನ್ನು ಶೇ. 50 ರಷ್ಟು ರಿಯಾಯಿತಿಯೊಂದಿಗೆ ಖಜಾನೆ-2 ಮೂಲಕ (Back-ended subsidy through bank loan) ನೀಡಲಾಗುವುದು. ಹೀಗೆ ಆಯ್ಕೆಯಾದ ಕೃಷಿ ನವೋದ್ಯಮಗಳ ಸಾಮರ್ಥ್ಯಾಭಿವೃದ್ಧಿಗಾಗಿ ವಿವಿಧ ತರಬೇತಿ ಕೇಂದ್ರಗಳಲ್ಲಿ ಹಾಗೂ ಇನ್ಕ್ಯುಬೇಷನ್ ಸೆಂಟರ್ (Incubation Centre) ಗಳಲ್ಲಿ ತರಬೇತಿ ನೀಡಲಾಗುವುದು.
ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಆಸಕ್ತ ಪ್ರಗತಿಪರ ರೈತರು, ನವೋದ್ಯಮಿಗಳು ಮತ್ತು ಇತರೆ ಫಲಾನುಭವಿಗಳಿಗಾಗಿ ಈ ಯೋಜನೆ ಅಡಿ ಅರ್ಜಿ ಸಲ್ಲಿಸಬಹುದಾಗಿದೆ.
ಕೃಷಿಯಲ್ಲಿನ ನೂತನ ತಾಂತ್ರಿಕತೆ ಮತ್ತು ಪರಿಕಲ್ಪನೆಗೆ ಉತ್ತೇಜನ
ಆಹಾರ ಬೆಳೆಗಳ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬನೆಯನ್ನು ಈಗಾಗಲೇ ಸಾಧಿಸಿದ್ದು ಉತ್ಪಾದಕತೆಯ ಹೆಚ್ಚಳ, ಸಂಪನ್ಮೂಲಗಳ ಸದ್ಬಳಕೆ, ಸುಧಾರಿತ ಕೃಷಿ ಜೊತೆಗೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯಿಂದ ರೈತರ ಆದಾಯ ಹೆಚ್ಚಿಸುವಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಈಗಾಗಲೇ ಹಲವಾರು ರೈತರು ಉದ್ಯಮಿಗಳಾಗಿ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯಿಂದ ತಮ್ಮ ಉತ್ಪನ್ನವನ್ನು ಮಧ್ಯವರ್ತಿಗಳಿಲ್ಲದೆ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಹಾಗೂ ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸಲು ಕೃಷಿ ನವೋದ್ಯಮ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತ ಯುವಕರು ಕೃಷಿಯಲ್ಲಿ ಉದ್ಯಮ ಕೈಗೊಳ್ಳುವುದರಿಂದ ಉದ್ಯೋಗ ಸೃಜನೆಯಾಗಿ ನಿರುದ್ಯೋಗದ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ. ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಆಸಕ್ತ ಪ್ರಗತಿಪರ ರೈತರು ಕೃಷಿಯಲ್ಲಿನ ನವೀನ ತಾಂತ್ರಿಕತೆಗಳು ಹಾಗೂ ನೂತನ ಪರಿಕಲ್ಪನೆಗಳಿಂದ ಕೃಷಿಯಲ್ಲಿ ನವೋದ್ಯಮಗಳನ್ನು ಪ್ರಾರಂಭಿಸುವುದರಿಂದ ಗ್ರಾಮೀಣ ಪ್ರದೇಶದ ಆದಾಯ ಹೆಚ್ಚಿಸುವುದರ ಜತೆಗೆ ಜನರು ಗ್ರಾಮೀಣ ಪ್ರದೇಶಗಳಲ್ಲಿಯೇ ನೆಲೆಸುವಲ್ಲಿ ಈ ಯೋಜನೆಯು ಸಹಕಾರಿಯಾಗಲಿದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಉದ್ದೇಶ ಏನು?
- ಕೃಷಿಯಲ್ಲಿನ ನವೀನ ತಾಂತ್ರಿಕತೆಗಳು ಹಾಗೂ ನೂತನ ಪರಿಕಲ್ಪನೆಗಳಿಂದ ಕೃಷಿಯಲ್ಲಿ ನವೋದ್ಯಮಗಳನ್ನು ಪ್ರಾರಂಭಿಸಿ ಕೃಷಿ ವಲಯದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವುದು.
- ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಆಸಕ್ತ ಪ್ರಗತಿಪರ ರೈತರು ಕೃಷಿಯಲ್ಲಿ ನವೋದ್ಯಮ ಆರಂಭಿಸಿಸಲು ಸಹಾಯ ನೀಡಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಜನೆ ಮಾಡುವುದು.
- ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಹಾಗೂ ಇತರ ಸಂಶೋದನಾ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಲಾದ ನೂತನ ವಾಣಿಜ್ಯೀಕರಣವನ್ನು ಉತ್ತೇಜಿಸುವುದು.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಈ ಕೃಷಿ ನವೋದ್ಯಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ (Agri startup application) ಆಸಕ್ತ ಅಭ್ಯರ್ಥಿಗಳು ತಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.
ಯೋಜನೆಯ 3 ಪ್ರಮುಖ ಘಟಕಗಳು
1. ಹೊಸ ಕೃಷಿ ನವೋದ್ಯಮಗಳಿಗೆ (Startups at Incubation Stage) ಆರ್ಥಿಕ ನೆರವು: ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇಕಡಾ 50ರಷ್ಟು ಸಹಾಯಧನವನ್ನು (ಕನಿಷ್ಠ- ರೂ. 5 ಲಕ್ಷದಿಂದ ಗರಿಷ್ಠ ರೂ. 20 ಲಕ್ಷಗಳವರೆಗೆ) ಬ್ಯಾಂಕ್ ಮುಖಾಂತರ (Backended subsidy) ನೀಡಲಾಗುವುದು.
2. ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸಲು (Scale up of business/Expansion of established Startups) ಆರ್ಥಿಕ ನೆರವು: ಕೃಷಿ ವಲಯದಲ್ಲಿ ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆಗಾಗಿ ಹಾಗೂ ‘ಉನ್ನತೀಕರಣಕ್ಕಾಗಿ ಯೋಜನಾ ವರದಿಯ ಶೇಕಡಾ 50ರಷ್ಟು ಸಹಾಯಧನವನ್ನು (ಕನಿಷ್ಠ- ರೂ. 20 ಲಕ್ಷದಿಂದ ಗರಿಷ್ಠ ರೂ. 50 ಲಕ್ಷಗಳವರೆಗೆ) ಕೃಷಿ ವಲಯದ ನವೋದ್ಯಮಿಗಳಿಗೆ ಬ್ಯಾಂಕ್ ಸಾಲದ ಮುಖಾಂತರ (Backended subsidy) ನೀಡಲಾಗುವುದು.
3. ಕೃಷಿ ನವೋದ್ಯಮಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ (Mentoring and Acceleration Programme -MAP): ಆಯ್ಕೆಯಾದ ನವೋದ್ಯಮಿಗಳ ಸಾಮರ್ಥ್ಯಾಭಿವೃದ್ಧಿಗೆ ಕೃಷಿ ವಿಶ್ವವಿದ್ಯಾಲಯ, ICAR, CFTRI, CSIR, C- CAMP ಹಾಗೂ ಇತರೆ ಸಂಶೋಧನಾ ಸಂಸ್ಥೆಗಳಾದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಸ್ಥಾಪಿತವಾಗಿರುವ ಕೃಷಿ ನಾವೀನ್ಯತೆಗಾಗಿ ಶ್ರೇಷ್ಠತೆಯ ಕೇಂದ್ರಗಳ ಮೂಲಕ ತರಬೇತಿಗಳನ್ನು ನೀಡಲಾಗುತ್ತದೆ.
ಕೃಷಿ ನವೋದ್ಯಮ ಯೋಜನೆಯ ಮಾರ್ಗಸೂಚಿಯ ಪಿಡಿಎಫ್ ಕಾಪಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಬಹುದು.