| ವಿವೇಕ ಮಹಾಲೆ
ಶಿವಮೊಗ್ಗ: ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ, ಕೊಳೆ ರೋಗ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ಉತ್ತಮ ಧಾರಣೆಯಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆ ಮಾರುಕಟ್ಟೆ ಈಗ ಮತ್ತೆ ಏರು-ಪೇರಾಗುತ್ತಿದ್ದು (Arecanut Price), ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಬಂಗಾರದ ಬೆಳೆ ಎಂದೇ ಖ್ಯಾತಿ ಪಡೆದಿರುವ ಅಡಿಕೆಗೆ ಇದುವರೆಗೆ ಉತ್ತಮ ಧಾರಣೆಯೇ ಮಾರುಕಟ್ಟೆಯಲ್ಲಿತ್ತು. ಅಡಿಕೆ ಕೊಯ್ಲು ಅರಂಭವಾಗುತ್ತಿದ್ದಂತೆಯೇ ಬೆಲೆ ಇಳಿಕೆ ಆರಂಭವಾಗಿದೆ. ಅಡಿಕೆ ಕೊಯ್ಲು ಮುಗಿಸಿ ಬೆಳೆಗಾರರು ಹೊಸ ಅಡಿಕೆ ಮಾರಾಟ ಮಾಡುವ ಸಂದರ್ಭದಲ್ಲಿ ಧಾರಣೆ ಕುಸಿತ ಆಗುತ್ತಿರುವುದರಿಂದ “ಕೈಗೆ ಬಂದ ತುತ್ತು ಬಾಯಿಗಿಲ್ಲʼʼ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಅಡಿಕೆ ಧಾರಣೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಕ್ವಿಂಟಲ್‌ಗೆ 20,000 ರೂ. ಗಳವರೆಗೆ ಕುಸಿತ ಕಂಡಿದೆ. ಸೆಪ್ಟೆಂಬರ್ ಮೊದಲ ವಾರ ರಾಶಿ ಇಡಿ ಬೆಲೆ ಕ್ವಿಂಟಲ್ ಗೆ 58,000 ರೂ.ವರೆಗೂ ಇತ್ತು. ಅಕ್ಟೋಬರ್‌ನಲ್ಲಿ 50.000 ರೂ.ಗೆ ಇಳಿದು ನಂತರ ಕಡಿಮೆಯಾಗುತ್ತಾ ಬಂದಿದ್ದು, ಡಿಸೆಂಬರ್ ಎರಡನೇ ವಾರದಲ್ಲಿ 39 ಸಾವಿರ ರೂ.ಗೆ ಇಳಿಕೆ ಕಂಡಿದೆ.
2014 -15ರಲ್ಲಿ ರಾಶಿ ಇಡಿ ಅಡಿಕೆ ದರ ಒಂದು ಲಕ್ಷ ರೂ.ವರೆಗೂ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ನಂತರ ದಿನಗಳಲ್ಲಿ ಕುಸಿತ ಕಂಡು ಕಳೆದ ನಾಲ್ಕು ವರ್ಷಗಳಿಂದ 50 ಸಾವಿರ ರೂ. ಆಸುಪಾಸಿನಲ್ಲಿತ್ತು. ಆದರೆ ಈ ವರ್ಷ ಸುಗ್ಗಿ ಕಾಲದಲ್ಲಿಯೇ ಅಡಿಕೆ ಧಾರಣೆ ಕುಸಿದಿರುವುದು ರೈತರನ್ನು ಕಂಗಾಲಾಗಿಸಿದೆ.
ಭೂತಾನ್ ಅಡಿಕೆ ಕಾರಣವೇ?
ಅಡಿಕೆ ಬೆಲೆ ಕುಸಿತಕ್ಕೆ ಕಾರಣ ಏನೆಂಬುದು ಸ್ಪಷ್ಟವಾಗುತ್ತಿಲ್ಲ. ಆದರೆ ನಿರೀಕ್ಷೆಗೂ ಮೀರಿ ಹೆಚ್ಚುತ್ತಿರುವ ಅಡಿಕೆ ಉತ್ಪಾದನೆ ಮತ್ತು ವಿದೇಶದಿಂದ ಅಡಿಕೆ ಆಮದು ಕಾರಣದಿಂದ ಬೆಲೆ ಕುಸಿತವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗೆ ಭೂತಾನ್ ಸೇರಿದಂತೆ ಕೆಲವು ದೇಶಗಳಿಂದ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಾಗ ರೈತ ಸಂಘಟನೆಗಳು ವಿರೋಧಿಸಿದ್ದವು. ಪ್ರತಿಪಕ್ಷಗಳೂ ಇದನ್ನು ಖಂಡಿಸಿದ್ದವು. ಆದರೆ ಆಡಳಿತ ಪಕ್ಷದವರು ಇದನ್ನು ಸಮರ್ಥಿಸಿಕೊಂಡಿದ್ದರು. ಹಸಿ ಅಡಿಕೆ ಆಮದಿಗೆ ಮಾತ್ರ ಅವಕಾಶ ಕೊಟ್ಟಿರುವುದರಿಂದ ದೇಶದ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗದು ಎಂದು ಹೇಳಿಕೊಂಡಿದ್ದರು. ಆದರೀಗ ಆಗುತ್ತಿರುವುದೇ ಬೇರೆ. ಅಡಿಕೆ ಧಾರಣೆ ನಿರಂತರ ಕುಸಿಯುತ್ತ ಸಾಗಿದೆ. ಹಸಿ ಅಡಿಕೆ ಆಮದು ಹೆಸರಿನಲ್ಲಿ ಒಣ ಅಡಿಕೆ ಆಮದು ಆಗುತ್ತಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸುತ್ತಿದ್ದಾರೆ.
“ಒಣ ಅಡಿಕೆಗಳ ಮೇಲೆ ಹಸಿ ಅಡಿಕೆ ಸುರಿದು ಆಮದು ಮಾಡಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಇದು ಗೊತ್ತಿದ್ದೂ ಸುಮ್ಮನಿದ್ದಾರೆ. ಕೇಂದ್ರ ಸರ್ಕಾರ ಕೂಡ ಜಾಣ ಮೌನ ವಹಿಸಿದೆ. ಕಡಿಮೆ ಬೆಲೆ ಕಳಪೆ ಅಡಿಕೆ ದೊರೆಯುತ್ತಿರುವುದರಿಂದ ನಮ್ಮ ಅಡಿಕೆಗೆ ಬೇಡಿಕೆ ಕಡಿಮೆಯಾಗುತ್ತಿದೆʼʼ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜಪ್ಪ ಹೇಳಿದ್ದಾರೆ.
ಅಡಿಕೆ ಧಾರಣೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ನೀತಿ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ದೇಶದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆ ಆಗುತ್ತಿದೆ. ಶೇ. 80 ರಷ್ಟು ಬೆಳೆ ಕರ್ನಾಟಕದ ಅಡಿಕೆ ಉತ್ಪಾದನೆಯಿಂದ ಪೂರೈಸಲಾಗುತ್ತಿದೆ. 13 ಸಾವಿರ ಮೆಟ್ರಿಕ್ ಟನ್ ಭೂತಾನ್ ನಿಂದ ಪ್ರತಿ ವರ್ಷ ಆಮದಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ರಾಜ್ಯದ ಅಡಿಕೆಗೆ ಬೆಲೆ ಕುಸಿಯುವಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ ಹೇಳಿದ್ದಾರೆ.
59 ಸಾವಿರ ರೂ. ಇದ್ದ ಅಡಿಕೆ ಬೆಲೆ ಇಂದು 39 ಸಾವಿರ ರೂ. ಕ್ವಿಂಟಾಲ್‌ಗೆ ಕುಸಿದಿದೆ. ಮಿಜೋರಾಂ, ಮಣಿಪುರದ ಮೂಲಕ ಅಡಿಕೆ ಕಳ್ಳಸಾಗಾಣಿಕೆ ಆಗುತ್ತಿದೆ. ಮಿಜೋರಾಂನ ಕಾಂಗ್ರೆಸ್ ನಾಯಕರು ಮೋದಿಗೆ ಪತ್ರೆ ಬರೆದು ಇದನ್ನು ತಡೆಯಲು ಕೋರಿದ್ದರು. ಆದರೆ ಉತ್ತರ ಭಾರತ ಅದರಲ್ಲೂ ಗುಜರಾತ್, ರಾಜಸ್ಥಾನ ಮೊದಲಾದ ರಾಜ್ಯಗಳ ಗುಟ್ಕಾ ಮಾರಾಟಗಾರರ ಬೆಂಬಲಕ್ಕೆ ನಿಂತ ಬಿಜೆಪಿ ಸರ್ಕಾರ ಕಳ್ಳ ಮಾಲುಗಳನ್ನ ತಡೆಯಲು ವಿಫಲವಾಗಿದೆ. ಇಂಡೋನೇಷಿಯಾದ ಕಳಪೆ ಗುಣಮಟ್ಟದ ಅಡಿಕೆಗಳು ಶ್ರೀಲಂಕಾದಿಂದ ಭಾರತಕ್ಕೆ ಲಗ್ಗೆ ಇಡುತ್ತಿವೆ ಎಂದು ರಮೇಶ್ ಹೆಗ್ಡೆ ಆರೋಪಿಸಿದ್ದಾರೆ.
ಸದ್ಯ ಹೊಸ ಅಡಿಕೆ ಈಗ ಮಾರುಕಟ್ಟೆಗೆ ಬರುತ್ತಿದೆ. ಅಡಿಕೆ ಧಾರಣೆಯ ಏರಳಿತದಿಂದಾಗಿ ಅಡಿಕೆ ಈಗ ಮಾರಾಟ ಮಾಡಬೇಕೋ ಸ್ವಲ್ಪ ದಿನ ಕಾಯಬೇಕೋ ಎಂಬ ಗೊಂದಲ ಬೆಳೆಗಾರರಲ್ಲಿದೆ. ಬೆಲೆ ಕುಸಿತದಿಂದಾಗಿ ಅಡಿಕೆ ವ್ಯಾಪಾರಾಸ್ಥರೂ ದಿಕ್ಕು ಕಾಣದಂತಾಗಿದ್ದಾರೆ. ಈ ನಡುವೆ, ಅಡಿಕೆ ಕೊಯ್ಲಿನ ಸಮಯದಲ್ಲಿ ಹೀಗೆ ಬೆಲೆ ಇಳಿಸಿ, ಬೆಳೆಗಾರರನ್ನು ವಂಚಿಸುವ ಕೆಲಸವನ್ನು ವ್ಯಾಪಾರಿ ವರ್ಗ ಮಾಡಿಕೊಂಡು ಬಂದಿದ್ದು, ಈಗಲೂ ಇದೇ ಆಗಿದೆ ಎಂದು ಕೆಲ ಬೆಳೆಗಾರರು ಆರೋಪಿಸುವುದೂ ನಡೆದಿದೆ.
ಇದನ್ನೂ ಓದಿ | Leaf Spot Disease | ಅಡಿಕೆ ಎಲೆ ಚುಕ್ಕಿ ರೋಗದ ಕುರಿತು ಇಸ್ರೇಲ್ ವಿಜ್ಞಾನಿಗಳ ಜತೆ ಚರ್ಚಿಸಲಿರುವ ಸಚಿವ ಮುನಿರತ್ನ