-ಅರವಿಂದ ಸಿಗದಾಳ್, ಮೇಲುಕೊಪ್ಪ
ಬೆಂಗಳೂರು: ಜುಲೈ ಕೊನೆಯಲ್ಲಿ ಬಯಲು ಸೀಮೆಯ ಅಡಿಕೆ ಬರಲು ಪ್ರಾರಂಭವಾಗುವ ಕಾಲ. ಆಗಸ್ಟ್‌ನಿಂದ ಸಹಜವಾಗಿ ಅಡಿಕೆ ಪ್ರಮಾಣ ಮಾರುಕಟ್ಟೆಗೆ ಬರುವುದು ಹೆಚ್ಚುವುದರಿಂದ ಅಡಿಕೆ ಧಾರಣೆ ಇಳಿಯಲು ಪ್ರಾರಂಭವಾಗುತ್ತದೆ. ಕಳೆದ ವರ್ಷ ಜುಲೈನಲ್ಲಿ ₹ 55,000 ದಾಟಿದ ಅಡಿಕೆ ದರ, ಸೆಪ್ಟೆಂಬರ್‌ನಲ್ಲಿ ₹.50,000 ಕ್ಕಿಂತ ಕೆಳಕ್ಕೆ ಬರಲು ಪ್ರಾರಂಭವಾಯಿತು. ಇಳಿದ ಅಡಿಕೆ ಧಾರಣೆ ₹ 47,000 ದಲ್ಲಿ ಕೆಲಕಾಲ ಸ್ಥಿರತೆಯಲ್ಲಿ ಉಳಿದಿತ್ತು. ಈ ವರ್ಷ ಮೇ ತಿಂಗಳ ಪ್ರಾರಂಭದಲ್ಲಿ ₹ 55,000 ದ ಸಮೀಪಕ್ಕೆ ಏರಿ ಬಂದ ರಾಶಿ ಇಡಿ ಅಡಿಕೆ ಧಾರಣೆ ಮತ್ತೆ ಇಳಿಯುವುದಕ್ಕೆ ಶುರವಾಗಿತ್ತು (Arecanut Price).
ಅಡಿಕೆ ಬೆಳೆಗಾರರ ನಿರೀಕ್ಷೆ, ಸಮೀಕ್ಷೆ, ಪರೀಕ್ಷೆಗಳ ಲೆಕ್ಕಾಚಾರಕ್ಕೆ ‘ಯಾಕೆ ಹೀಗೆ ಅನ್ನುವ’ ಪ್ರಶ್ನೆಗೆ ಅಡ್ಡ ಬಂದಿದ್ದು ಈ ಬಾರಿಯ ಲೋಕಸಭಾ ಚುನಾವಣೆ! ಈಗ ಅದೂ ಮುಗಿದು, ಪಲಿತಾಂಶಕ್ಕೆ ಕಾಯುತ್ತಿರುವಾಗ, ಅಡಿಕೆ ದರ ಮೇಲ್ಮುಖವಾಗಿದೆ. ಪುನಃ ₹ 55,000 ಗಡಿ ಸಮೀಪ ಬಂದಿದೆ.
ನೀತಿ ಸಂಹಿತೆಯ ಬ್ಯಾರಿಕೇಡ್‌ಗಳು ತೆರವುಗೊಂಡ ಮೇಲೆ ಅಡಿಕೆ ಧಾರಣೆ ಗಣನೀಯವಾಗಿ ಏರಬಹುದು ಎಂದು ಲೆಕ್ಕಾಚಾರದಲ್ಲಿ ರೈತರು ಕಾಯುತ್ತಿದ್ದಾರೆ.
ಅಡಿಕೆ ಧಾರಣೆಯ ವಿಚಾರದಲ್ಲಿ ಇರುವ ‘ನಂಬಿಕೆ’ಗಳು
ಅಡಿಕೆ ಧಾರಣೆಯ ಏರಿಕೆಯ ವಿಚಾರದಲ್ಲಿ ಮಲೆನಾಡಿನಲ್ಲಿ ಕೆಲವು ನಂಬಿಕೆಗಳು ಇವೆ. ವೈಜ್ಞಾನಿಕ ವಿಶ್ಲೇಷಣೆಗೆ ಹೊರತಾಗಿದ್ದರೂ, ನಂಬಿಕೆಗಳನ್ನು ಇಟ್ಟುಕೊಂಡೇ ಅನೇಕ ಅಡಿಕೆ ಬೆಳೆಗಾರರು ಇಂದಿಗೂ ವ್ಯವಹಾರ ನೆಡೆಸುತ್ತಾರೆ.
‘ವರ್ಷದ ಯಾವುದೇ ತಿಂಗಳಲ್ಲಿ ಮಂಗಳವಾರ ಅಮವಾಸ್ಯೆ ಬಂದರೆ ಆ ವರ್ಷ ಅಡಿಕೆಗೆ ಅತ್ಯಧಿಕ ಬೆಲೆ’, ‘ಶ್ರಾವಣ ಮಾಸದಲ್ಲಿ ಅಡಿಕೆಗೆ ರೇಟಾಗುವುದು’, ‘ಮುತ್ತುಗದ ಮರದ ನೆತ್ತಿಯಲ್ಲಿ ಮಾತ್ರ ಹೂವಾದರೆ ಅಡಿಕೆ ದರ ಎತ್ತರಕ್ಕೇರುತ್ತದೆ’ ಕಾಡು ಕೋಳಿ ಕಾಡಂಚಿಗೆ ಬಂದು ಕೂಗಿದರೆ. ಅದು ಅಡಿಕ ದರ ಏರುವಿಕೆಯ ಸೂಚನೆಯಂತೆ! ಪಂಚಾಂಗದ ಪ್ರಕಾರ ‘ಕುಜ’ ರಾಜನಾದಾಗ ಅಡಿಕೆ ದರ ನಿರೀಕ್ಷೆ ಮಟ್ಟವನ್ನು ಮೀರಿ ಏರುತ್ತದೆ… ಇತ್ಯಾದಿ ಹತ್ತಾರು ನಂಬಿಕೆಗಳು ಮಲೆನಾಡಿನ ಅಡಿಕೆ ಬೆಳೆಗಾರರಲ್ಲಿವೆ. ಅಡಿಕೆ ಧಾರಣೆಯ ವಿಷಯ ಚರ್ಚೆಗೆ ಬಂದಾಗ ಇಂತಹ ನಂಬಿಕೆಗಳು ಗಾದೆ ಮಾತಿನಂತೆ ಹೊರಗೆ ಬರುತ್ತವೆ.
ಈ ನಂಬಿಕೆಗಳಿಗೆ ಪೂರಕವಾಗಿ ಎಂಬಂತೆ ಹತ್ತು ವರ್ಷಗಳ ಹಿಂದೆ ಅಡಿಕೆ ಧಾರಣೆ ಲಕ್ಷ ರೂ. ದಾಟಿದಾಗ ಪಂಚಾಂಗದ ಪ್ರಕಾರ ಕುಜ ರಾಜನಾಗಿದ್ದನಂತೆ! ಈ ವರ್ಷವೂ ಕುಜನೇ ಅಧಿಪತಿಯಂತೆ. ಅನಿರೀಕ್ಷಿತ ಅಡಿಕೆ ಧಾರಣೆ ಈ ವರ್ಷವೂ ಏರಲಿದೆ ಅನ್ನುವುದು ಜ್ಯೋತಿಷ್ಯ ನಂಬಿಕೆಯ ಅಭಿಪ್ರಾಯ. ಈ ನಂಬಿಕೆಗೆ ಬೇಷರತ್ ಬೆಂಬಲದಂತೆ ಈ ವರ್ಷ ಅನೇಕ ಕಡೆ ಮುತ್ತುಗದ ಮರದ ನೆತ್ತಿಯಲ್ಲಿ ಹೋವು ಅರಳಿತ್ತಂತೆ.
ಏರುಮುಖ ನಿರೀಕ್ಷೆ
ಎಲೆಕ್ಷನ್ ಮುಗಿದ ಮೇಲೆ ಅಡಿಕೆ ವ್ಯವಹಾರದಲ್ಲಿ ದರ ಏರುಮುಖ ಕಾಣಲಿದೆ ಎನ್ನುವುದಕ್ಕೆ ಪೂರಕವಾಗಿ, ಚುನಾವಣೆಯ ಪಲಿತಾಂಶದ ಹಿಂದಿನೆರಡು ದಿನಗಳಲ್ಲಿ ಅಡಿಕೆ ಏರಿಕೆಯ ಗ್ರಾಫ್‌ನ ಬಾಣ! ಕುಜ ಅಡಿಕೆಯ ದರ ಎತ್ತಲಿದ್ದಾನಾ? ಮುತ್ತುಗದ ಹೂವಿನ ಸೂಚನೆ ನಿಜವಾ? ನಂಬಿಕೆಗಳು ಕೆಲಸ ಮಾಡುತ್ತವಾ? ಚುನಾವಣೆಯ ನಂತರ ಅಡಿಕೆಗೆ ಬೇಡಿಕೆ ಹೆಚ್ಚಲಿದೆಯಾ? ಅಡಿಕೆ ಧಾರಣೆಯಲ್ಲಿ ರೈತರ ನಂಬಿಕೆಗಳ ಮತ್ತು ಅಭಿಪ್ರಾಯಗಳ ಎಕ್ಸಿಟ್ ಪೋಲ್ ನಿಜ ಆಗಲಿದೆಯಾ? ಕಾದು ನೋಡೋಣ.
ಇದನ್ನೂ ಓದಿ: Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್ ಕಿ ಬಾರ್ ₹60,000 ಪಾರ್ ಆಗಲಿದೆಯಾ?