-ಅರವಿಂದ ಸಿಗದಾಳ್, ಮೇಲುಕೊಪ್ಪ
ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ (Cocoa Prices) ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಪರಣಾಮ, ಅಡಿಕೆ ಬೆಳೆಯ ಜತೆ ಉಪ ಬೆಳೆಯಾಗಿ ಬೆಳೆಯುತ್ತಿದ್ದ ಕೋಕೋದಿಂದ ಒಂದಿಷ್ಟು ರೈತರಿಗೆ ಅನಿರೀಕ್ಷಿತವಾಗಿ ದೊಡ್ಡ ಬೋನಸ್ ದೊರೆತಂತಾಗಿದೆ.
2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು.
ಕೊಕೋ ಧಾರಣೆ ತೀರಾ ಕುಸಿತ ಕಂಡಾಗ, ಕೊಕೋ ಕೃಷಿಯ ಬಗ್ಗೆ ಮಲೆನಾಡು ಕರಾವಳಿ ಭಾಗದ ಕೃಷಿಕರು ಕೋಕೋವನ್ನು ನಿರ್ಲಕ್ಷಿಸಿದ್ದರು. ಮೂರ್ನಾಲ್ಕು ವರ್ಷಗಳ ಹಿಂದೆ ʼಎಂದೂ ಧಾರಣೆ ಏರದ ಇದು ಲಾಭದಾಯಕವಲ್ಲದ ಬೆಳೆ’ ಎಂಬ ಹಣೆ ಪಟ್ಟಿಯೂ ಕೋಕೋ ಬೆಳೆಗೆ ಅಂಟಿಕೊಂಡಿತ್ತು. ಬೆಲೆ ಇಲ್ಲದ ಕೋಕೋ ಗಿಡಗಳು ಅಡಿಕೆ ತೋಟದಲ್ಲಿ ಇರುವುದೇ ಒಂದು ಸಮಸ್ಯೆ ಅನ್ನುವಂತಾಗಿತ್ತು!
ಜತೆಗೆ ಕೋಕೋ ಹಣ್ಣುಗಳನ್ನು ತಿನ್ನಲು ದಾಂಗುಡಿ ಇಡುತ್ತಿದ್ದ ಮಂಗ, ಅಳಿಲು, ಕೆಲವು ಪಕ್ಷಿಗಳು ಬರಿ ಕೋಕೋ ಹಣ್ಣುಗಳನ್ನು ಹಾಳು ಮಾಡುವುದಲ್ಲದೆ, ಅಡಿಕೆ ಬೆಳೆಯನ್ನೂ ನಾಶ ಮಾಡುತ್ತಿದ್ದವು. ಬೆಲೆಯೂ ಇಲ್ಲದ, ತೊಂದರೆಯೂ ಜಾಸ್ತಿ ಇದ್ದ ಕೋಕೋ ಮರಗಳನ್ನು ಮಲೆನಾಡು ಕರಾವಳಿಯ ನೂರಾರು ಅಡಿಕೆ ಬೆಳೆಗಾರರು ಕಡಿದು, ಅಡಿಕೆ ಮರಗಳಿಗೆ ಮಲ್ಚಿಂಗ್ ಮಾಡಿ ಕೈ ತೊಳೆದುಕೊಂಡಿದ್ದು ಇತಿಹಾಸ. ಈಗ ಅದೇ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಕೋಕೋ ಬೆಳೆಯ ಧಾರಣೆ ಅಡಿಕೆ ಮರದ ಎತ್ತರಕ್ಕೆ ಏರುತ್ತಿರುವುದು ಕಂಡು ಅನೇಕ ರೈತರು ಸಂಕಟ ಅನುಭವಿಸುವಂತಾಗಿರುವುದೂ ಸತ್ಯ.
ಕಳೆದ ದಶಕದಲ್ಲಿ ಹಸಿ ಕೋಕೋ 40 ರೂ. ಇದ್ದಿದ್ದು, ಇವತ್ತು ಬರೋಬರಿ 320 ರೂ.ಗೆ ತಲುಪಿದೆ. ಅಂದರೆ 800% ಹೆಚ್ಚಳ! ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.
ಧಾರಣೆ ಏರಿಕೆಗೆ ಕಾರಣ ಏನು?
ಕೋಕೋವನ್ನು ಐಸ್‌ಕ್ರೀಮ್, ಚಾಕೊಲೇಟ್, ಮಿಠಾಯಿ, ಬೇಕಿಂಗ್ ಮತ್ತು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಈ ಉದ್ಯಮಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ, ಬರ ಮತ್ತು ನೀರಿನ ಕೊರತೆಯಿಂದ ವಿಶ್ವದಾದ್ಯಂತ ಕೋಕೋ ಬೆಳೆ ಗಣನೀಯವಾಗಿ ಇಳಿಮುಖವಾಗಿರುವುದು ಇವತ್ತಿನ ಕೋಕೋ ಧಾರಣೆ ಏರಿಕೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಜಾಗತಿಕ ಪೂರೈಕೆಯ 70%ರಷ್ಟಿರುವ ಆಫ್ರಿಕಾದ ಕೋಕೋ ಉತ್ಪಾದನೆಯು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಜಾಗತಿಕ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗದೆ ಬೆಳೆ ನೆಲ ಕಚ್ಚಿರುವುದು ಭಾರತವೂ ಸೇರಿದಂತೆ ವಿಶ್ವ ಮಾರುಕಟ್ಟೆಯಲ್ಲಿ ಕೋಕೋ ಧಾರಣೆ ಏರಿಕೆ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲೂ ಹವಾಮಾನ ವ್ಯತ್ಯಾಸದಿಂದ ಕೋಕೋ ಬೆಳೆ ಇಳಿಮುಖವಾಗಿದೆ.
ಕ್ವಿಂಟಾಲ್ ಡ್ರೈ ಕೋಕೋಗೆ ಈಗ ಲಕ್ಷ ಬೆಲೆ
ಹಸಿ ಕೋಕೋ ದರ 320 ರೂ. ಗಡಿ ದಾಟುತ್ತಿರುವಾಗಲೇ, ಒಣಗಿದ ಡ್ರೈ ಕೋಕೋ ಧಾರಣೆಯೂ ಅದೇ ಪ್ರಮಾಣದಲ್ಲಿ ಏರುತ್ತಿದ್ದು ಗರಿಷ್ಠ ಒಣ ಕೋಕೋ ದರ ಈಗ ಕೆ.ಜಿ.ಗೆ 960 ರೂ. ಅನ್ನು ತಲುಪಿದೆ. ದರ ಏರಿಕೆ ಹೀಗೆ ಮುಂದುವರಿದರೆ ಮೂರ್ನಾಲ್ಕು ದಿನಗಳಲ್ಲಿ ಅದು ನಾಲ್ಕಂಕೆಯನ್ನು ಮುಟ್ಟಿ, ಕ್ವಿಂಟಾಲ್ ಡ್ರೈ ಕೋಕೋ ಬೆಲೆ ದಾಖಲೆಯ 1,00,000 ರೂ. ತಲುಪುವ ಸಾಧ್ಯತೆ ಇದೆ.
ಕೋಕೋ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಈಗ ದುಸ್ತರ
ಕೋಕೋ ಧಾರಣೆ ಮಿಂಚಿ ವೇಗದಲ್ಲಿ ಏರುತ್ತಿರುವಾಗ ಫಸಲಿಗೆ ಬರುತ್ತಿರುವ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಸಣ್ಣ ರೈತರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಮಂಗ, ಅಳಿಲು, ಕೆಂಜಳಿಲು, ಕಬ್ಬೆಕ್ಕು, ಪಕ್ಷಿಗಳಿಂದ ಬೆಳೆಯನ್ನು ರಕ್ಷಣೆ ಮಾಡಿಕೊಂಡು ಹಣ್ಣಾದಾಗ ಕಟಾವು ಮಾಡಬೇಕು. ಆದರೆ ಕಟಾವು ಮಾಡುವ ಮೊದಲೇ ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಇದಲ್ಲದೆ ಕೋಕೋ ಹಣ್ಣುಗಳನ್ನು ತೋಟದಿಂದಲೇ ಕದಿಯುತ್ತಿರುವ ವರದಿಗಳೂ ಹರಿದಾಡುತ್ತಿವೆ.
ಇದನ್ನೂ ಓದಿ: Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?
ಒಟ್ಟಿನಲ್ಲಿ ಒಂದು ಕಾಲದಲ್ಲಿ ಐಸ್‌ಕ್ರೀಮ್, ಚಾಕಲೇಟ್‌ಗಳಲ್ಲಿ ಬಳಸುತ್ತಿದ್ದ ವೆನಿಲಾ ಬೆಳೆಯ ದರ ಏರಿಕೆಯಿಂದ ಆಗುತ್ತಿದ್ದ ಪರಿಣಾಮಗಳು ಈಗ ಕೋಕೋಗೆ ರಾಜ ಮರ್ಯಾದೆಯ ದರ ಬರುತ್ತಿದೆ. ಜಾಗತಿಕ ಮಟ್ಟದಲ್ಲಿ ಕೋಕೋ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇರುವ ಕಾರಣ ಸಧ್ಯಕ್ಕಂತು ಅದರ ದರ ಇಳಿಯುವ ಸಾಧ್ಯತೆ ಕಡಿಮೆ ಎಂದು ಚರ್ಚೆ ನೆಡೆಯುತ್ತಿದೆ.