ವಿಶಿಷ್ಟವಾದ ಗೋತಳಿ ʻಮಲೆನಾಡು ಗಿಡ್ಡʼದ ಕುರಿತು ಕಳೆದ ವಾರ ಸಾಕಷ್ಟು ಮಾಹಿತಿ ತಿಳಿದುಕೊಂಡಿದ್ದೇವೆ. ಈ ಗೋ ತಳಿ ಅಳಿವಿನಂಚಿನಲ್ಲಿರುವ ಅಪರೂಪದ ಅಮೂಲ್ಯ ತಳಿ ಎಂದರೆ ತಪ್ಪಾಗಲಾರದು. ಇವುಗಳ ಗಿಡ್ಡ ದೇಹವು ಮಲೆನಾಡಿನ ಏರಿಳಿತ ಪ್ರದೇಶಗಳಲ್ಲಿ ಇವುಗಳಿಗೆ ಸಂಚರಿಸಲು ಹೇಳಿ ಮಾಡಿಸಿದಂತದ್ದು. ಇವುಗಳ ಬಲವಾದ ಗೊರಸು, ಚಂಗನೆ ನೆಗೆಯುವ ಸಾಮರ್ಥ್ಯವೇ ಇವುಗಳ ಶಕ್ತಿ. ಕಡಿಮೆ ಆಹಾರ ತಿಂದು ರೋಗವಿಲ್ಲದೆ ದೀರ್ಘಕಾಲ ಬದುಕುವಂತಹ ಯಾವುದೇ ತಳಿಗಳಿಗಿಲ್ಲದ ವಿಶೇಷತೆ ಇವುಗಳದ್ದು.
ಇಂತಹ ತಳಿಗಳು ಈ ಭಾಗದ ಪ್ರಕೃತಿಯ ಮಡಿಲಿನಲ್ಲಿ ಅಲ್ಲಲ್ಲಿ ಆನಂದದಿಂದ ಮೇಯುತ್ತಿದ್ದ ದೃಶ್ಯ ಒಂದೆರಡು ದಶಕದ ಹಿಂದಿನವರೆಗೂ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿತ್ತು. ಎತ್ತರದ ಗುಡ್ಡ ಬೆಟ್ಟಗಳ ಅಪರೂಪದ ಸಸ್ಯಗಳ ಚಿಗುರು ಮತ್ತು ಹಸಿಹುಲ್ಲನ್ನು ಮೇಯ್ದು ಅಮೃತ ಸಮಾನವಾದ ಹಾಲನ್ನು ನೀಡುತ್ತಿತ್ತು. ಹಾಗೆಯೇ ಈ ಭಾಗದಲ್ಲಿ ಬೆಳೆಯಲಾಗುತ್ತಿದ್ದ ಪಚ್ಚೆ ಪೈರುಗಳಿಗೆ ಗೊಬ್ಬರವನ್ನು ನೀಡುತ್ತಾ ಪರಿಸರದ ಸಮತೋಲನವನ್ನು ಕಾಪಾಡುತ್ತಿದ್ದ ಏಕೈಕ ಜೀವಿಯಾಗಿತ್ತು.
ಮನುಷ್ಯನ ದೇಹಕ್ಕೆ ಲ್ಯಾಕ್ಟೋಫೆರೀನ್ ಎಂಬುದೊಂದು ಮಹತ್ವದ ಪೋಷಣೆ ನೀಡುವ ಪೌಷ್ಠಿಕಾಂಶ. ಈ ಲ್ಯಾಕ್ಟೋಪೇರಿನ್ ಮಲೆನಾಡು ಗಿಡ್ಡ ತಳಿಯ ಹಾಲಿನಲ್ಲಿ ಅಧಿಕ ಪ್ರಮಾಣದಲ್ಲಿರುವುದು ಸಾಬೀತಾಗಿದೆ. ಹಾಗೆಯೇ ಸರ್ಕಾರದ ಅಧಿಕೃತ ಸಂಸ್ಥೆಯಾದ ನ್ಯಾಷನಲ್ ಡೈರಿ ರಿಸರ್ಚ್ ಇನ್ಸಿಟ್ಯೂಷನ್ ನಡೆಸಿರುವ ಸಂಶೋಧನೆಯಲ್ಲಿ ಅತ್ಯಧಿಕ ಆ್ಯಂಟಿ ಡಯಾಬೀಟಿಕ್ ಗುಣವಿರುವುದು ಈ ಮಲೆನಾಡು ಗಿಡ್ಡ ತಳಿಯಲ್ಲಿ ಎಂಬುದು ದೃಢಪಟ್ಟಿದೆ. ಸಹಜವಾಗಿ ಕಾಡು-ಮೇಡು, ಬೆಟ್ಟ-ಗುಡ್ಡಗಳಲ್ಲಿ ಮೇಯುವ ಕಾರಣ ಇವುಗಳು ನೀಡುವ ಹಾಲಿನಲ್ಲೂ ಔಷಧೀಯ ಗುಣಗಳು ಕಂಡು ಬಂದಿರುವುದನ್ನು ವೈಜ್ಞಾನಿಕ ಜಗತ್ತು ಕಂಡುಕೊಂಡಿದೆ. ಹೀಗಾಗಿ ಇದರ ಹಾಲನ್ನು ಕುಡಿಯುವ ಈ ಭಾಗದ ಜನರು ಅತಿ ಸ್ವಸ್ಥರು ಹಾಗೂ ದೀರ್ಘಾಯುಷಿಗಳಾಗಿರುತ್ತಾರೆ ಎಂಬುದಾಗಿಯೂ ಹೇಳಲಾಗುತ್ತದೆ.
ರೋಗ ನಿರೋಧಕ ಶಿಕ್ತ ಹೊಂದಿದ ತಳಿ!
ಅತಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ತಳಿ ಇದು. ಇವುಗಳಿಗೆ ರೋಗ ರುಜಿನಗಳು ಬರುವುದು ಅಪರೂಪ. ಬಂದರೂ ಬಹು ಬೇಗನೇ ಗುಣವಾಗಿ ಬಿಡುತ್ತದೆ. ಸಾಮಾನ್ಯವಾಗಿ ಕಾಡುವ ಕಾಲು ಬಾಯಿ ಜ್ವರ ಇವುಗಳಿಗೆ ಬಾಧಿಸುವುದೇ ಇಲ್ಲ. ಬಂದರೂ ಮೂರ್ನಾಲ್ಕು ದಿನಗಳಲ್ಲಿ ವಾಸಿಯಾಗುತ್ತದೆ. ಇವು ಅತಿ ಕಡಿಮೆ ಆಹಾರವನ್ನು ತಿಂದು ಸಾಕುವವರಿಗೆ ಹೊರೆಯಾಗದೆ ಅಲ್ಪ ಪ್ರಮಾಣದಲ್ಲಿ ಹಾಲನ್ನು ನೀಡುತ್ತಾ ಗೊಬ್ಬರ ಹಾಗೂ ಉಳುಮೆಯಲ್ಲಿ ತಮ್ಮ ಸಹಭಾಗಿತ್ವವನ್ನು ನೀಡುತ್ತಿವೆ.
ಹಾಲಿನ ಗುಣಮಟ್ಟಕ್ಕೆ ಬೆಲೆ ಕೊಡದೆ ಹೆಚ್ಚಿನ ಇಳುವರಿಗೆ ಒತ್ತು ಕೊಟ್ಟಿರುವ ಇಂದಿನ ಮಾನಸಿಕತೆಗೆ ಹೋಲಿಸಿದ್ದಲ್ಲಿ ಇವುಗಳ ಹಾಲಿನ ಇಳುವರಿ ಕಡಿಮೆ ಎಂದೇ ಹೇಳಬಹುದು. ಆದರೆ ಕೆಲವೊಂದು ದನಗಳು ಸುಮಾರು 4 ರಿಂದ 5 ಲೀಟರ್‌ವರೆಗೂ ಹಾಲನ್ನು ನೀಡಿರುವುದು ಕಂಡುಬಂದಿದೆ. ಇದರ ಹಾಲಿನಲ್ಲಿ ದೇಹಕ್ಕೆ ಅವಶ್ಯಕವಾದ ಕೊಬ್ಬಿನಾಂಶ ಸುಮಾರು ಶೇಕಡಾ 4 ರಿಂದ 5 ರಷ್ಟಿರುವುದು ದೃಢಪಟ್ಟಿದೆ. ಹೀಗಾಗಿ ಈ ಹಾಲಿಗಿಂತ ಮುಖ್ಯವಾಗಿ ಗೊಬ್ಬರದ ಬಳಕೆಗಾಗಿ ಮತ್ತು ಹೊಲ ಗದ್ದೆಯ ಬಳಕೆಯಲ್ಲಿ ಬಳಸಲಾಗುತ್ತದೆ.
ಹೀಗಾಗಿಯೇ ಇದೊಂದು ಕೆಲಸಗಾರರ ತಳಿ ಎಂದೇ ಹೇಳಬಹುದು. ಇವು ಪ್ರತಿ ಒಂದು ಇಲ್ಲವೇ ಒಂದೂವರೆ ವರ್ಷಕ್ಕೊಂದು ಕರುವನ್ನು ಹಾಕುತ್ತವೆ. ಹೀಗೆ ವರ್ಷ ಒಂದರಲ್ಲಿ ಒಂದು ಕರುವನ್ನು ಹಾಕುವುದರಿಂದಲೇ ಇವುಗಳಿಗೆ ವರ್ಷಗಂಧಿ ಎಂಬ ಹೆಸರು ಬಂದಿರುವುದು. ಇವುಗಳಲ್ಲಿ ಕೆಲವು ತಮ್ಮ ಜೀವಿತಾವಧಿಯಲ್ಲಿ ಸುಮಾರು 20 ಕರುಗಳನ್ನು ಕೊಟ್ಟ ಸಾಕಷ್ಟು ಉದಾಹರಣೆಗಳು ಸಹ ಕಂಡುಬರುತ್ತವೆ.
ಕಷ್ಟಸಹಿಷ್ಣು ಹಸುಗಳು
ಇವುಗಳು ಒಂದು ರೀತಿಯಲ್ಲಿ ಕಷ್ಟಸಹಿಷ್ಣುಗಳು. ದಿನಗಟ್ಟಲೆ ಸತತವಾಗಿ ಸುರಿಯುವ ಮಳೆಯಲ್ಲಿ, ಬಿಸಿಲಿನಲ್ಲಿ ಹಾಗೂ ಚಳಿಯಲ್ಲಿ ಎಂದಿನಂತೆ ಕಾಡಿಗೆ ಹೋಗಿ ಮೇದು ಬರುವಂತಹವು. ಭತ್ತ ಕೊಯ್ಲು ಆದ ನಂತರ ಉಳಿಯುವ ಹುಲ್ಲು ಹೊಟ್ಟುಗಳನ್ನು ತಿಂದು ಬದುಕುವ ವಿಶಿಷ್ಟ ಗುಣ ಇವುಗಳಿಗಿದೆ. ಇದನ್ನು ರೈತಸ್ನೇಹಿ ರಾಸು ಎಂದು ಸಹ ಹೇಳಲಾಗುತ್ತದೆ.
ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಸಿಗುವ ಭತ್ತದ ಹಸಿ ಹುಲ್ಲು, ಹೊಂಬಾಳೆ, ಅಡಿಕೆ ಹಾಳೆ ಎಲ್ಲವನ್ನು ಇವು ಆಹಾರದ ರೂಪದಲ್ಲಿ ಸೇವಿಸುತ್ತವೆ. ಇವು ಅತಿ ಕಡಿಮೆ ನೀರನ್ನು ಸೇವಿಸುತ್ತವೆ. ಇವುಗಳು ಪಶ್ಚಿಮ ಘಟ್ಟಕ್ಕೆ ಹೇಳಿ ಮಾಡಿಸಿದ ತಳಿಗಳು. ಇವುಗಳನ್ನು ಹೆಚ್ಚಾಗಿ ಎಲ್ಲೆಂದರಲ್ಲಿ ಕಟ್ಟಿ ಹಾಕುತ್ತಾ ಇಲ್ಲವೇ ಕೂಡಿ ಹಾಕುತ್ತ ಸಾಕಲಾಗುತ್ತದೆ. ಕೆಲವೊಮ್ಮೆ ಮರಗಳೇ ಇವುಗಳಿಗೆ ತಲೆಯ ಮೇಲಿನ ಶಾಶ್ವತ ಛಾವಣಿಯಾಗಿರುತ್ತದೆ. ಇವುಗಳು ಹೆಚ್ಚಾಗಿ ಕಪ್ಪು ಇಲ್ಲವೇ ಬಿಳಿಯ ಬಣ್ಣದವಾಗಿರುತ್ತವೆ. ಬೂದು ಬಣ್ಣದ ಗೋವುಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ವೇದಗಳಲ್ಲೂ ಇದರ ಉಲ್ಲೇಖವಿರುವುದು ಕಂಡುಬರುತ್ತದೆ.
ಮಾಯವಾಗುತ್ತಿವೆ ಗಿಡ್ಡಿಗಳು!
2007ರ ಜಾನುವಾರು ಗಣತಿಯಲ್ಲಿ12,81,493 ರಷ್ಟಿದ್ದ ಈ ತಳಿಗಳ ಸಂಖ್ಯೆ, 2012-13ರ ಜಾನುವಾರು ಗಣತಿಯಲ್ಲಿ 8,99,091ಕ್ಕೆ ಬಂದಿಳಿದಿತ್ತು. ಹಾಗೆಯೇ 2012 ಹಾಗೂ 2017ರ ಜಾನುವಾರು ಗಣತಿ ಅನ್ವಯ ಈ ತಳಿಗಳ ಸಂಖ್ಯೆ ಶೇಕಡಾ 25 ರಿಂದ 30 ರಷ್ಟು ಇಳಿಕೆಯಾಗಿತ್ತು. ಶಿವಮೊಗ್ಗ ಒಂದರಲ್ಲೇ 2012ರಲ್ಲಿ ಸುಮಾರು 6 ಲಕ್ಷದಷ್ಟಿದ್ದ ಇವುಗಳ ಸಂಖ್ಯೆ 4.45 ಲಕ್ಷಕ್ಕೆ ಇಳಿದಿದ್ದು ಸಮೀಕ್ಷೆಯಿಂದ ಸಾಬೀತಾಗಿದ್ದಷ್ಟೇ ಅಲ್ಲದೆ 2017ರ ನಂತರ ಸುಮಾರು 50 ಸಾವಿರಕ್ಕೂ ಹೆಚ್ಚು ತಳಿಗಳು ಪ್ರತಿ ವರ್ಷ ಕಡಿಮೆಯಾಗುತ್ತಿರುವುದನ್ನು ಹಲವು ಸಮೀಕ್ಷೆಗಳು ಬಹಿರಂಗಪಡಿಸಿದ್ದವು.
ಇದರೊಂದಿಗೆ ಉತ್ತರ ಕನ್ನಡದಲ್ಲಿ 3.36 ಲಕ್ಷದಿಂದ 2.18 ಲಕ್ಷಕ್ಕೆ ಇವುಗಳ ಸಂತತಿ ಇಳಿದಿದ್ದರೆ, ಚಿಕ್ಕಮಗಳೂರಿನಲ್ಲಿ 85,854 ಮತ್ತು ಉಡುಪಿಯಲ್ಲಿ 1,55,309 ರಷ್ಟಿದ್ದ ಇವುಗಳ ಸಂಖ್ಯೆ ಶೇಕಡಾ 25 ರಿಂದ 30ರಷ್ಟು ಕಡಿಮೆಯಾಗಿದ್ದುದು ಕಂಡುಬಂದಿತ್ತು. ಹಾಗೆಯೇ 2019ರ ಜಾನುವಾರು ಗಣತಿಯಲ್ಲಿ ಒಟ್ಟಾರೆ ದೇಶಿ ತಳಿಗಳ ಸಂಖ್ಯೆಯಲ್ಲಿ ಹಿಂದಿನ ಜಾನುವಾರು ಗಣತಿಗೆ ಹೋಲಿಸಿದ್ದಲ್ಲಿ ಶೇಕಡಾ 6 ರಷ್ಟು ಇಳಿಕೆಯಾಗಿರುವುದು ಸ್ಪಷ್ಟವಾಗಿದೆ.
ಕೃಷಿಗೆ ಸಂಬಂಧಿಸಿದ ಲೇಖನ, ವರದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್ ಮಾಡಿ.
ಇದರಿಂದ ಸಹಜವಾಗಿ ಮಲೆನಾಡು ಗಿಡ್ಡ ತಳಿಗಳ ಸಂಖ್ಯೆಯಲ್ಲೂ ಸಹ ಭಾರಿ ಪ್ರಮಾಣದ ಇಳಿಕೆಯಾಗಿರುವುದನ್ನು ನಾವು ಅಂದಾಜಿಸಬಹುದಾಗಿದೆ. ದುರಾದೃಷ್ಟವೆಂದರೆ ಇದೇ ೨೦ನೇ ಜಾನುವಾರು ಗಣತಿಯಲ್ಲಿ ವಿದೇಶಿ ಹಾಗೂ ಮಿಶ್ರ ತಳಿಗಳ ಸಂಖ್ಯೆಯಲ್ಲಿ ಶೇಕಡಾ 26.9 ರಷ್ಟು ಏರಿಕೆ ಕಂಡುಬಂದಿದೆ. ಸ್ಥಳೀಯರ ಹಾಲೆಂಬ ಬಿಳಿ ದ್ರಾವಣದ ವ್ಯಾಮೋಹದಿಂದ ವಿದೇಶಿ ಹಾಗೂ ಮಿಶ್ರ ತಳಿಗಳು ಇವುಗಳ ಕೊಟ್ಟಿಗೆಯನ್ನು ಕ್ರಮೇಣ ಆಕ್ರಮಿಸುತ್ತಾ ಬೆಲೆ ಕಟ್ಟಲಾಗದ ಈ ತಳಿಗಳನ್ನು ಕಸಾಯಿಖಾನೆಯ ದಾರಿ ತೋರಿಸುತ್ತಿವೆ.
ಇದೆಲ್ಲವನ್ನು ಗಮನಿಸಿದಾಗ ಕ್ಷೀರಕ್ರಾಂತಿ ಎಂಬುದು ಈ ದೇಶಕ್ಕೆ ಉಪಯೋಗಕ್ಕಿಂತ ನಷ್ಟವನ್ನು ಮಾಡಿರುವುದೇ ಹೆಚ್ಚು ಎಂಬುದು ಸ್ಪಷ್ಟವಾಗುತ್ತದೆ. ಇದರ ಪರಿಣಾಮ ನಾವುಗಳಿಂದು ಹಾಲೆಂಬ ಬಿಳಿ ದ್ರಾವಣದ ಹಿಂದೆ ಬಿದ್ದು ಬೆಲೆ ಕಟ್ಟಲಾಗದ ನೂರಾರು ಉತ್ಕೃಷ್ಟ ಗೋತಳಿಗಳನ್ನು ಕಳೆದುಕೊಂಡಿದ್ದೇವೆ, ಇಂದಿಗೂ ಕಳೆದುಕೊಳ್ಳುತ್ತಲೇ ಇದ್ದೇವೆ. ಈ ಸಾಲಿನಲ್ಲಿ ಮಲೆನಾಡು ಗಿಡ್ಡ ತಳಿಯೂ ಸಹ ಒಂದು.
ಪಶ್ಚಿಮಘಟ್ಟ ಪ್ರದೇಶದ ರೈತರ ಕೃಷಿ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ ಈ ತಳಿ ಇಂದು ತನ್ನ ಅಸ್ತಿತ್ವವನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ ಎಂಬುದಂತು ಸತ್ಯ. ಇವುಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿರು ವುದಕ್ಕೆ ಹತ್ತು ಹಲವು ಕಾರಣಗಳು ಪ್ರಮುಖವಾಗಿ ಕಂಡುಬರುತ್ತವೆ. ಅವುಗಳಲ್ಲಿ ಪ್ರಮುಖವಾಗಿ ಅರಣ್ಯ ಭೂಮಿಯಲ್ಲಿ ದನ ಮೇಯಿಸಲು ತೊಂದರೆಯಾಗುತ್ತಿರುವುದು, ಗೋಮಾಳಗಳು ಕಣ್ಮರೆಯಾಗುತ್ತಿರುವುದು, ಕೃಷಿಯಲ್ಲಿ ಯಂತ್ರಗಳ ಉಪಯೋಗ ಹೆಚ್ಚಾಗಿ ಇವುಗಳು ನಿಷ್ಪ್ರಯೋಜಕವಾಗುತ್ತಿರುವುದು ಮತ್ತು ಒಂದೇ ಪ್ರದೇಶದಲ್ಲಿರುವ ಹೋರಿಗಳಿಂದ ಒಳ ಸಂಕರಣ ಮಾಡುತ್ತಿರುವುದು ಪ್ರಮುಖ ಕಾರಣವೆನ್ನಲಾಗಿದೆ. ಇದರಿಂದ ಈ ತಳಿಯ ದೇಹ ಮತ್ತು ಉತ್ಪಾದನಾ ಸಾಮರ್ಥ್ಯ ಹಾಗೂ ಗಾತ್ರ ಇಂದು ಕುಗ್ಗಿದೆ.
ಇದನ್ನೂ ಓದಿ : ಗೋ ಸಂಪತ್ತು: ವಿದೇಶಗಳಲ್ಲಿ ಮಿಂಚುತ್ತಿವೆ ಭಾರತೀಯ ಗೋ ತಳಿಗಳು!
ಅಷ್ಟೇ ಅಲ್ಲದೇ ತಳಿ ಸಂವರ್ಧನೆಗೆ ಬಳಸುವ ಹೋರಿಗಳು ಕಳಪೆಯಾಗಿರುವುದರಿಂದ ಉತ್ತಮ ಪೀಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಕಡಿಮೆ ಹಾಲಿನ ಇಳುವರಿ ಹಾಗೂ ಸ್ಥಳೀಯರ ಮತ್ತು ಸರ್ಕಾರದ ನಿರ್ಲಕ್ಷ್ಯ ಒಂದೆಡೆಯಾದರೆ, ಬಹು ಮುಖ್ಯವಾಗಿ ಇವುಗಳನ್ನು ಕದ್ದು ಮಾಂಸಕ್ಕಾಗಿ ಮಾರಾಟ ಮಾಡುವ ಬಹು ದೊಡ್ಡ ದಂಧೆ ಅತ್ಯಂತ ಸಕ್ರಿಯವಾಗಿರುವುದೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ಈ ಭಾಗದ ಜನರು ಸ್ವದೇಶಿ ತಳಿಯಾದ ಈ ಗಿಡ್ಡ ತಳಿಗಿಂತ ಮಿಶ್ರ ತಳಿಗಳ ಪಾಲನೆಗೆ ಒತ್ತು ನೀಡುತ್ತಿರುವುದು ಮತ್ತೊಂದು ಮುಖ್ಯ ಕಾರಣವಾಗಿದೆ.
ಹೀಗೆ ಮಲೆನಾಡಿಗರೇ ಇಂದು ಮಲೆನಾಡು ಗಿಡ್ಡ ತಳಿಯನ್ನು ಸಾಕಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದರ ಪರಿಣಾಮ ಈ ತಳಿಯಿಂದು ಮಲೆನಾಡಿನಿಂದ ಮರೆಯಾಗಿ ಕಟುಕನ ಕತ್ತಿಗೆ ಕೊರಳೊಡ್ಡುತ್ತಿರುವುದು ಸಾಮಾನ್ಯದಲ್ಲಿ ಸಾಮಾನ್ಯ ಸಂಗತಿಯಂತಾಗಿದೆ.