ಬೆಂಗಳೂರು: ರಾಜ್ಯ ಸರ್ಕಾರವು ರೈತರ ಬಡ್ಡಿ ರಹಿತ ಸಾಲವನ್ನು 3 ರಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಈ ಯೋಜನೆ ಮೂಲಕ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಸಾಲ ನೀಡಲಾಗುತ್ತದೆ. ಒಟ್ಟು 25 ಸಾವಿರ ಕೋಟಿ ರೂ. ಸಾಲ ವಿತರಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ (Karnataka Budget 2023) ಘೋಷಿಸಲಾಗಿದೆ.
ಕೃಷಿಯ ಖರ್ಚು ಹೆಚ್ಚಾಗುತ್ತಿರುವುದರಿಂದ ಸಾಲದ ಮೊತ್ತವನ್ನು ಹೆಚ್ಚಿಸಬೇಕೆಂದು ರೈತರು ಒತ್ತಾಯಿಸುತ್ತಲೇ ಬಂದಿದ್ದರು. ಸರ್ಕಾರ ಅವರ ಬೇಡಿಕೆಯನ್ನು ಈಡೇರಿಸಿದಂತಾಗಿದೆ.
ಸಿರಿ ಧಾನ್ಯಕ್ಕೆ ಪ್ರೊತ್ಸಾಹ
ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023ರ ಅಂಗವಾಗಿ ಕಿರುಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ‘ರೈತಸಿರಿ’ ಯೋಜನೆಯಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ 10,000 ಗಳ ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಅಲ್ಲದೆ, ಸಿರಿಧಾನ್ಯಗಳನ್ನು ಕ್ಷೇತ್ರಮಟ್ಟದಲ್ಲಿ ಸಂಸ್ಕರಣೆ, ಗ್ರೇಡಿಂಗ್, ಪ್ಯಾಕಿಂಗ್ ಮಾಡುವ ರೈತ ಉತ್ಪಾದಕ ಸಂಸ್ಥೆಗಳಿಗೆ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ಸಹಾಯಧನಕ್ಕೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.
ಹೈಟೆಕ್ ಹಾರ್ವೆಸ್ಟರ್ ಗಳಿಗೆ 50 ಲಕ್ಷ ರೂ.
2023-24 ಸಾಲಿನಲ್ಲಿ ರೈತರಿಗೆ ಹೈಟೆಕ್ ಹಾರ್ವೆಸ್ಟರ್ ಗಳಿಗೆ ತಲಾ 50 ಲಕ್ಷ ರೂಪಾಯಿಯಂತೆ 50 ಕೋಟಿ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಇಸ್ರೋ ಸಂಸ್ಥೆಯ ಸಹಾಯೋಗದೊಂದಿಗೆ ಡಿಜಿಟಲ್ ಕೃಷಿಯಲ್ಲಿ ಜಿಯೋ-ಸ್ಪೇಷಿಯಲ್ ತಾಂತ್ರಿಕತೆಯನ್ನ ಅಳವಡಿಸಲು 50 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ರೈತ ಉತ್ಪಾದಕ ಸಂಸ್ಥೆಗಳನ್ನ ಪ್ರೋತ್ಸಾಹಿಸಲು 10 ಲಕ್ಷ ರೂಪಾಯಿವರಿಗಿನ ಬಂಡವಾಳಕ್ಕೆ 5 ವರ್ಷಗಳ ಅವಧಿಗೆ ಬ್ಯಾಂಕ್ ಗಳ ಮೂಲಕ ಮುಖ್ಯಮಂತ್ರಿಗಳ ರೈತ ಉನ್ನತಿ ಯೋಜನೆಯಡಿಯಲ್ಲಿ ಬಡ್ಡಿ ಸಹಾಯಧನ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.