ಹುಬ್ಬಳ್ಳಿ: ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಯ (Hubballi APMC Market) ಬಳಿ ಶನಿವಾರ ಯುವಕನೊಬ್ಬ ಟ್ರ್ಯಾಕ್ಟರ್ ಮೇಲೆ ನಿಂತು ಎಲ್ಲಾ ಫ್ರೀ.. ಎಲ್ಲಾ ಫ್ರೀ ಎನ್ನುತ್ತಿದ್ದ. ಯಾರು ಎಷ್ಟು ಬೇಕಾದರೂ ತೆಗೆದುಕೊಳ್ಳಿ ಎಂದು ಕೂಗುತ್ತಿದ್ದ. ಎರಡೂ ಕೈಗಳನ್ನು ಮೇಲೆತ್ತಿ ಕೂಗುತಿದ್ದ ಆತನ ಮುಖದಲ್ಲಿ ನಗುವೇ ಇತ್ತು. ಆದರೆ ಎದೆಯಲ್ಲಿ ನೋವಿತ್ತಾ?
ಇದು ಮಾರ್ಕೆಟ್‌ನಲ್ಲಿ ಮೆಂತೆ ಸೊಪ್ಪನ್ನು ಫ್ರೀಯಾಗಿ (Menthe soppu Free!) ಹಂಚಿದ ಯುವ ರೈತನ ಕಥೆ (Young Farmer) ಇದು. ಮಾರುಕಟ್ಟೆಯಲ್ಲಿ ಮೆಂತೆ ಸೊಪ್ಪಿಗೆ ಬೆಲೆಯೇ ಇಲ್ಲ. ಹಾಗಂತ ಮಾರ್ಕೆಟ್‌ಗೆ ತಂದ ಸೊಪ್ಪನ್ನು ಏನು ಮಾಡುವುದು ಎಂದು ತಿಳಿಯದೆ ಬೇಕು ಬೇಕಾದವರಿಗೆಲ್ಲ ಅವನು ಪುಕ್ಕಟೆಯಾಗಿ ಹಂಚಿ ಖಾಲಿ ಮಾಡಿದ್ದಾನೆ.
ಯುವ ರೈತನೊಬ್ಬ ಘಟಪ್ರಭಾದಿಂದ ಟ್ರ್ಯಾಕ್ಟರ್‌ನಲ್ಲಿ ಮೆಂತೆಸೊಪ್ಪು (Fenu Greek) ತುಂಬಿಕೊಂಡು ಹುಬ್ಬಳ್ಳಿ ಎಪಿಎಮ್‌ಸಿ ಮಾರುಕಟ್ಟೆಗೆ ಮಾರಲು ಬಂದಿದ್ದ. ಆದರೆ ಮಾರುಕಟ್ಟೆಯಲ್ಲಿ ಸೊಪ್ಪಿನ ದರ ತೀವ್ರ ಕುಸಿತವಾಗಿದೆ. ಹೇಗೂ ಮಾರ್ಕೆಟ್‌ಗೆ ತಂದಾಗಿದೆ. ಇನ್ನು ಅದನ್ನು ಮರಳಿ ಒಯ್ದು ಮಾಡುವುದೇನು ಎಂದು ಯೋಚಿಸಿದ ಯುವಕ ಹತಾಶನಾಗಿ ಉಚಿತವಾಗಿ ಹಂಚಿದ್ದಾನೆ. ನಗು ಮೊಗದಿಂದಲೇ ಫ್ರೀ ಎಂದು ಹಂಚುತ್ತಿದ್ದರೂ ಆತ ಕೆಲವು ನಡೆಗಳಲ್ಲಿ ನೋವು ಕಾಣಿಸುತ್ತಿತ್ತು.
ಮೆಂತೆ ಸೊಪ್ಪನ್ನು ಶೇಖರಿಸಿಟ್ಟರೆ ಕೊಳೆಯುತ್ತದೆ. ಇವತ್ತು ಬಿಟ್ಟು ನಾಳೆ ತಂದರೂ ಮಾರುಕಟ್ಟೆಯಲ್ಲಿ ದರ ಹೆಚ್ಚಾಗುವ ಲಕ್ಷಣಗಳೇನೂ ಇಲ್ಲ. ಹೀಗಾಗಿ ವಾಪಸ್ಸು ತೆಗೆದುಕೊಂಡು ಹೋಗಲಾಗದೆ ಯುವ ರೈತ ಎಲ್ಲಾ ಫ್ರೀ ಎನ್ನುತ್ತಾ ಜನರಿಗೆ ಸೊಪ್ಪು ಹಂಚಿದ್ದಾನೆ.
ಫ್ರೀ ಎಂದಾಕ್ಷಣ ಜನರು ಕೂಡ ಮುಗಿ ಬಿದ್ದು ಸೊಪ್ಪು ಎತ್ತಿಕೊಂಡು ಹೋಗಿದ್ದಾರೆ. ಕೆಲವರು ʻಇಷ್ಟೊಂದು ಸೊಪ್ಪು ತೆಗೆದುಕೊಂಡು ಹೋಗಿ ಏನು ಮಾಡುವುದುʼ ಎಂದು ಮಾತನಾಡಿಕೊಂಡಿದ್ದಾರೆ. ಆಗ ಕೆಲವರು, ʻದನ ಕರುಗಳಿಗೆ ಆಗುತ್ತದೆ, ಎತ್ಕೊʼ ಎಂದು ಸಲಹೆ ಕೊಟ್ಟಿದ್ದಾರೆ! ಫ್ರೀಯಾಗಿ ಹಂಚಿದರೂ ಉಳಿದ ಸೊಪ್ಪನ್ನು ರೈತ ತಾನೇ ಟ್ರ್ಯಾಕ್ಟರ್‌ಗೆ ಹಾಕಿಕೊಂಡು ಹೋಗಿದ್ದಾನೆ. ನನ್ನ ಮನೆಯ ದನ ಕರುಗಳಿಗೆ ಹಾಕ್ತೇನೆ ಅಂದಿದ್ದಾನೆ.
ಇದನ್ನೂ ಓದಿ : Tomato market : ಟೊಮ್ಯಾಟೊ ಮಾರಿ ಒಂದೇ ತಿಂಗಳಿಗೆ 3 ಕೋಟಿ ಸಂಪಾದಿಸಿದ ಆಂಧ್ರಪ್ರದೇಶದ ರೈತ
ಅತಿವೃಷ್ಟಿ, ಅನಾವೃಷ್ಟಿಯ ನಡುವೆ ಅನ್ನದಾತ ಬೆಳೆದಿದ್ದ ಬೆಳೆಗೆ ಸೂಕ್ತ ಬೆಲೆ ಸಿಕ್ಕಿಲ್ಲ. ಕನಿಷ್ಠ ಟ್ರ್ಯಾಕ್ಟರ್ ಡೀಸೆಲ್‌ಗೆ ಸಹಿತ ದುಡ್ಡು ಬಂದಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಸಿಗದೆ ರೈತರು ಪರದಾಡುತ್ತಿದ್ದಾರೆ. ಸಾಲಸೂಲ ಮಾಡಿ ಬೆಳೆದ ಬೆಳೆಗೆ ಈ ರೀತಿ ಬೆಲೆಯೇ ಇಲ್ಲದೆ ಬೀದಿಗೆ ಎಸೆಯುವ ಸ್ಥಿತಿ ಎದುರಾಗಿದೆ. ಮಧ್ಯವರ್ತಿಗಳ ಏಕಸ್ವಾಮ್ಯತೆ ಕೂಡ ರೈತರ ಈ ಸ್ಥಿತಿಗೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ಸರ್ಕಾರ ರೈತರ ಬಗ್ಗೆ ಗಮನ ಹರಿಸಲಿ ಎನ್ನುವ ಆಗ್ರಹ ಕೇಳಿ ಬಂದಿದೆ.
ಮೊನ್ನೆ ಮೊನ್ನೆಯಷ್ಟೆ ಟೊಮ್ಯಾಟೊ ಬೆಳೆಗಾರರಿಗೆ ಅಷ್ಟು ದುಡ್ಡು ಬಂತು, ಕೋಟ್ಯಧೀಶರಾದರು ಎಂದೆಲ್ಲ ಮಾತನಾಡಿಕೊಂಡಿದ್ದೆವು. ಈಗ ಈ ಪರಿಸ್ಥಿತಿ. ಕೃಷಿಕರ ಬದುಕಿನ ಅನಿಶ್ಚಿತತೆಗಳೇ ಹೀಗೆ!