ಹೂವಪ್ಪ ಐ ಹೆಚ್, ಬೆಂಗಳೂರು
ಮಾರುಕಟ್ಟೆಗೆ ಸಮೃದ್ಧ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಬೆಲೆ ಗಣನೀಯ ಇಳಿಕೆಯಾಗಿದೆ.
ಹೊರ ರಾಜ್ಯಗಳ ಆಲೂಗಡ್ಡೆ ಮತ್ತು ಈರುಳ್ಳಿ ಯಥೇಚ್ಛವಾಗಿ ಸರಬರಾಜಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಇಳಿಕೆಗೆ ಕಾರಣವಾಗಿದೆ. ಮೂರು ತಿಂಗಳ ಹಿಂದೆ ಈರುಳ್ಳಿಯ ಸಗಟು ಬೆಲೆ ಕ್ವಿಂಟಾಲ್‌ಗೆ 2200-2400 ರೂ.ನಷ್ಟಿತ್ತು. ಈಗ 1100-1200 ರೂ. ಗೆ ಇಳಿಕೆಯಾಗಿದೆ. (Onion price reduction) ಮಧ್ಯಮ ದರ್ಜೆಯ ಈರುಳ್ಳಿ ದರ 1500-1600 ರೂ.ಗಳಿಂದ 750-900 ರೂ. ಗೆ ಇಳಿದಿದೆ. ಸಣ್ಣ ಈರುಳ್ಳಿ ದರ 600-800 ರೂ.ಗಳಿಂದ 300-400 ರೂ.ಗೆ ಮಾರಾಟವಾಗುತ್ತಿದೆ. ಸಗಟು ಬೆಲೆಯಲ್ಲಿ ಅರ್ಧದಷ್ಟು ಬೆಲೆ ಇಳಿದಿದೆ.
ಕಾರಣವೇನು?
ಮಹಾರಾಷ್ಟ್ರದಲ್ಲಿ ಎರಡನೇ ಬೆಳೆ ಕಟಾವಿಗೆ ಬಂದಿದೆ. ಪರಿಣಾಮ ರಾಜ್ಯಕ್ಕೆ ಭಾರಿ ಈರುಳ್ಳಿ ಹರಿದು ಬರುತ್ತಿದೆ. ಹೀಗಾಗಿ ಬೆಲೆ ಕುಸಿದಿದೆ ಎನ್ನುತ್ತಾರೆ ಎಪಿಎಂಸಿಯ ಈರುಳ್ಳಿ ಮಂಡಿಯ ವ್ಯಾಪಾರಿಯಾಗಿರುವ ಬಿಎಲ್ಎಸ್ ಕೃಷ್ಣ ಮೂರ್ತಿ. ಮಹಾರಾಷ್ಟ್ರದಿಂದ ಪ್ರತಿ ದಿನ 50-70 ಸಾವಿರ ಚೀಲ ಈರುಳ್ಳಿ ಪೂರೈಕೆಯಾಗುತ್ತಿದೆ. ಜತೆಗೆ ವಿಜಯಪುರ, ಗುಲ್ಬರ್ಗ, ಚಳ್ಳಕೆರೆ ಪ್ರದೇಶಗಳಿಂದ 15-20 ಸಾವಿರ ಚೀಲ ಆವಕವಾಗುತ್ತಿದೆ. ಚಿಲ್ಲರೆ ದರದಲ್ಲಿ ಈ ಹಿಂದೆ ಈರುಳ್ಳಿ ಕೆಜಿಗೆ 30-35 ರೂ.ಗೆ ಮಾರಾಟವಾಗುತ್ತಿತ್ತು. ಈಗ 20-25 ರೂ. ಗೆ ಮಾರಾಟವಾಗುತ್ತಿದೆ.
ಹೊರ ರಾಜ್ಯಗಳಿಂದ ಆಲೂಗಡ್ಡೆ ಪೂರೈಕೆಯೂ ಸಮೃದ್ಧವಾಗಿದೆ. ಪ್ರತಿ ದಿನ ಸುಮಾರು 50-60 ಸಾವಿರ ಚೀಲ ಆಲೂಗಡ್ಡೆ ಬರುತ್ತಿದೆ. ಜತೆಗೆ ಕೋಲಾರ, ಚಿಕ್ಕಬಳ್ಳಾಪುರದಿಂದಲೂ ಬರುತ್ತಿದೆ. ಹೀಗಾಗಿ ಬೆಲೆ ಇಳಿಕೆಯಾಗಿದೆ. ಎನ್ನುತ್ತಾರೆ ಬೆಂಗಳೂರು ಎಪಿಎಂಸಿ ಆಲೂಗಡ್ಡೆ ವ್ಯಾಪಾರಿ ಎಸ್ ವಿಟಿ ಬಾಬು.
ಕಳೆದ ತಿಂಗಳ ಹಿಂದೆ ಚಿಪ್ಸ್‌ಗೆ ಬಳಸುವ ಆಲೂಗಡ್ಡೆ ದರ ಕ್ವಿಂಟಾಲ್‌ಗೆ 2800-3000 ರೂ. ಗೆ ತಲುಪಿತ್ತು. ಈಗ ದಪ್ಪ 1600-1800 ರೂ.ಗೆ ಇಳಿದಿದೆ. ಮಧ್ಯಮ ದರ್ಜೆ ಆಲೂಗಡ್ಡೆ ದರ 1200-1400 ರೂ. ಗೆ ತಗ್ಗಿದೆ. ಚಿಲ್ಲರೆ ದರ ಪ್ರತಿ ಕೆ.ಜಿಗೆ 35-40 ರೂ.ಗಳಿಂದ 20-15 ರೂ.ಗೆ ತಗ್ಗಿದೆ.
ಆಲೂಗಡ್ಡೆ ಬಿತ್ತನೆ:
ಉತ್ತರ ಭಾರತದಲ್ಲಿ ಆಲೂಗಡ್ಡೆ ಬಿತ್ತನೆ ಸಾಮಾನ್ಯವಾಗಿ ನವೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ. ಜನವರಿಯಲ್ಲಿ ಬೆಳೆ ಕೊಯ್ಲು ಮಾಡಲಾಗುತ್ತದೆ. ಅತಿದೊಡ್ಡ ಉತ್ಪಾದಕ ರಾಜ್ಯವಾದ ಉತ್ತರ ಪ್ರದೇಶದಲ್ಲಿ 15% ಹೆಚ್ಚಳ ದಾಖಲಾಗಿದೆ.
ಉತ್ತರ ಭಾರತದ ಆಲೂಗಡ್ಡೆ ಹೆಚ್ಚು ಬರುತ್ತಿರುವ ಕಾರಣ ಸ್ಥಳೀಯ ಆಲೂಗಡ್ಡೆ ಬೆಲೆ ಕಳೆದುಕೊಳ್ಳುತ್ತಿದೆ.
ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಆಲೂಗಡ್ಡೆ ಬೆಳೆಗಾರಿಗೆ ನಷ್ಟವಾಗುತ್ತಿದೆ.