ಹೈದರಾಬಾದ್: ತೊಗರಿ ಬೆಳೆ ಸಾರು ಎಲ್ಲರಿಗೂ ಇಷ್ಟ. ಚಪಾತಿ, ರೊಟ್ಟಿ ಮಾಡಿದರೆ ದಾಲ್ ಇರಲೇಬೇಕು. ತೊಗರಿಯನ್ನು ಅತಿಹೆಚ್ಚಾಗಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ನಮ್ಮ ಕಲುಬುರಗಿ ಜಿಲ್ಲೆಯನ್ನು “ತೊಗರಿ ಕಣಜʼʼ ಎಂದೇ ಕರೆಯಲಾಗುತ್ತದೆ. ಇಲ್ಲಿಯ ತೊಗರಿಗೆ ಜಿಐ ಕೂಡ ಸಿಕ್ಕಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ತೊಗರಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ನಮ್ಮೆಲ್ಲರ ದಿನ ನಿತ್ಯದ ಆಹಾರವಾಗಿರುವ ತೊಗರಿಯ ಕುರಿತ ಇತ್ತೀಚಿನ ಸಂಶೋಧನೆಯೊಂದು ಬೆಲ್ಲದಂತಹ ಸಿಹಿ ಸುದ್ದಿಯೊಂದನ್ನು ನೀಡಿದೆ. ತೊಗರಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇದರ ಜತೆಗೆ ಕ್ಯಾಲ್ಸಿಯಂ ಕೂಡ ಹೆಚ್ಚಾಗಿರುತ್ತದೆಯಂತೆ. ಎಷ್ಟೆಂದರೆ ಹಾಲಿಗಿಂತ ಆರು ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದರಲ್ಲಿದೆ ಎಂದು ಈ ಸಂಶೋಧನೆ ಹೇಳಿದೆ.
ಅಂತಾರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆ ಐಸಿಆರ್‌ಐಎಸ್‌ಎಟಿಯ (ICRISAT) ಕೃಷಿ ವಿಜ್ಞಾನಿಗಳು ಸಿಪ್ಪೆಯಿರುವ ತೊಗರಿಯನ್ನು ಅಧ್ಯಯನಕ್ಕೊಳಪಡಿಸಿದ್ದು, ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೂಡ ಇರುವುದು ಬೆಳಕಿಗೆ ಬಂದಿದೆ. ನೂರು ಗ್ರಾಂ ತೊಗರಿಕಾಳಿನಲ್ಲಿ 652 ಎಂಜಿಯಷ್ಟು ಕ್ಯಾಲ್ಸಿಯಂ ಇರುತ್ತದೆಯಂತೆ. ನೂರು ಮಿಲಿ ಹಾಲಿನಲ್ಲಿ ಕೇವಲ 120 ಎಂಜಿ ಕ್ಯಾಲ್ಸಿಯಂ ಇರುತ್ತದೆ ಎಂದು ಈ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
ಆದರೆ ದುರದೃಷ್ಟವಶಾತ್ ತೊಗರಿಯನ್ನು ಸಂಸ್ಕರಿಸುವ ಸಂದರ್ಭದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಸಿಪ್ಪೆಯನ್ನು ತೆಗೆದುಹಾಕಲಾಗುತ್ತದೆ. ಇದರಿಂದ ಇದರಲ್ಲಿರುವ ಭಾರಿ ಪ್ರಮಾಣದ ಕ್ಯಾಲ್ಸಿಯಂ ನಷ್ಟವಾಗುತ್ತಿದೆ ಎಂದು ವರದಿ ಬೊಟ್ಟು ಮಾಡಿದೆ.
ತೊಗರಿ ಕಾಳನ್ನು ಬೇಳೆಯಾಗಿ ಸಂಸ್ಕರಿಸುವ ಸಂದರ್ಭದಲ್ಲಿ ಪಾಲಿಶ್‌ಮಾಡಿದಾಗ ಸಿಪ್ಪೆಯನ್ನು ಉಜ್ಜಿ ತೆಗೆಯಲಾಗುತ್ತದೆ. ಕೊನೆಗೆ ಹೀಗೆ ತೆಗೆದ ಸಿಪ್ಪೆಯನ್ನು ತ್ಯಾಜ್ಯವಾಗಿ ಎಸೆಯಲಾಗುತ್ತದೆ ಅಥವಾ ಮೇವಾಗಿ ಬಳಸಲಾಗುತ್ತದೆ. ಇದರಿಂದ ಮಾನವನಿಗೆ ದೊರೆಯಬೇಕಾಗಿದ್ದ ಅಪಾರ ಪ್ರಮಾಣದ ಕ್ಯಾಲ್ಸಿಯಂ ನಷ್ಟವಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಕಲಬರುಗಿಯ ತೊಗರಿಯಲ್ಲಿ ಕ್ಯಾಲ್ಸಿಯಂ ಇನ್ನೂ ಹೆಚ್ಚು?
ಕಲಬುರಗಿ ತೊಗರಿಗೆ ಭೌಗೋಳಿಕ ಮಾನ್ಯತೆ ಪಡೆಯುವ ಸಂದರ್ಭದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಭಾಗದಲ್ಲಿ ಬೆಳೆಯಲಾಗುವ ತೊಗರಿಯ ವಿಶೇಷತೆಗಳನ್ನು ಪಟ್ಟಿ ಮಾಡಿದ್ದರು. ಆಗ ಕೂಡ ಈ ಭಾಗದ ತೊಗರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುತ್ತದೆ ಎಂದು ಗಮನ ಸೆಳೆದಿದ್ದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಂ, ಚಿತ್ತಾಪುರ, ಶಹಾಬಾದ್ ಭಾಗದಲ್ಲಿ ಹೆಚ್ಚಾಗಿ ತೊಗರಿ ಬೆಳೆಯಲಾಗುತ್ತದೆ. ಇಲ್ಲಿಯ ಭೂಮಿಯಲ್ಲಿ ಸುಣ್ಣದ ಕಲ್ಲಿನ ಪ್ರಮಾಣ ಹೆಚ್ಚಿದೆ. ಇದರಿಂದಾಗಿ ತೊಗರಿ ಬೆಳೆಯಲ್ಲಿ ಸಹಜವಾಗಿಯೇ ಕ್ಯಾಲ್ಸಿಯಂ, ಪೊಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದರು.
ಮಾನವನಿಗೆ ನಿತ್ಯವೂ 800-1000 ಎಂಜಿ ಕ್ಯಾಲ್ಸಿಯಂ ಬೇಕಾಗಿರುತ್ತದೆ. ಆದರೆ ನಮ್ಮ ದೇಶದಲ್ಲಿನ ಆಹಾರ ಪದ್ಧತಿಯು ಇಷ್ಟೊಂದು ಪ್ರಮಾಣದ ಕ್ಯಾಲ್ಸಿಯಂ ಅನ್ನು ಮಾನವನ ದೇಹಕ್ಕೆ ಒದಗಿಸುತ್ತಿಲ್ಲ. ಹೀಗಾಗಿ ತೊಗರಿಯಲ್ಲಿ ಲಭ್ಯವಿರುವ ಎಲ್ಲ ಕ್ಯಾಲ್ಸಿಯಂ ಅನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕೆಂದು ಎಂದು ವಿಜ್ಞಾನಿಗಳು ಈ ವರದಿಯಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ | Processed Food | ಸಂಸ್ಕರಿಸಿದ ಆಹಾರ ವಸ್ತುಗಳಿಂದ ಸಣ್ಣ ವಯಸ್ಸಿಗೇ ಕ್ಯಾನ್ಸರ್, ಹೃದ್ರೋಗ!