Site icon Vistara News

ಭಾರತ ಪ್ರವೇಶಿಸಿದ ಸದ್ಗುರು: 26 ದೇಶ ಸುತ್ತಿ ಬಂದ ಮಣ್ಣು ಉಳಿಸಿ ಅಭಿಯಾನಕ್ಕೆ ಅದ್ಧೂರಿ ಸ್ವಾಗತ

ಮಣ್ಣು ಉಳಿಸಿ

ಜಾಮ್‌ನಗರ: ಮೈಮೂಳೆನ್ನು ಹೆಪ್ಪುಗಟ್ಟಿಸುವ ಯೂರೋಪ್‌ನ ಚಳಿ ಮತ್ತು ಅರೇಬಿಯಾದ ಮರುಭೂಮಿಯ ಕುಲುಮೆಯ ಬಿಸಿಯಲ್ಲಿ ಹಾಯ್ದು ಬಂದ ಈಶಾ ಪ್ರತಿಷ್ಠಾನದ ಸಂಸ್ಥಾಪಕರಾದ ಸದ್ಗುರು, ಮಣ್ಣು ಉಳಿಸಿ ಅಭಿಯಾನದ ಮೂಲಕ ಭಾನುವಾರ ಭಾರತ ಪ್ರವೇಶಿಸಿದ್ದಾರೆ. ಯೂರೋಪ್‌, ಮಧ್ಯ ಏಷ್ಯಾ ಮತ್ತು ಮಧ್ಯಪೂರ್ವದ 26 ದೇಶಗಳನ್ನು ಹಾದು ಒಮನ್‌ನ ಪೋರ್ಟ್‌ ಸುಲ್ತಾನ್‌ ಕಾಬೂಸ್‌ನಿಂದ ಹೊರಟು ಹಿಂದೂ ಮಹಾಸಾಗರದಲ್ಲಿ ಮೂರು ದಿನಗಳ ಸಮುದ್ರಯಾನ ಮಾಡಿ ಭಾರತ ಸೇರಿದ್ದಾರೆ.

ಭಾರತೀಯ ನೌಕಾಪಡೆಯು ತಮ್ಮ ಸಂಗೀತ ವಾದನದಲ್ಲಿ ಸದ್ಗುರು ಅವರಿಗೆ ಅಭೂತಪೂರ್ವ ಸ್ವಾಗತ ನೀಡಿತು. ಮಣ್ಣು ಉಳಿಸಿ ಅಭಿಯಾನದ ಉದ್ದೇಶವನ್ನು ಕಟ್ಟಿಕೊಡುವ “ಭೂಮಾತೆಯ ಕರೆ, ಭೂಮಾತೆಯ ಸವಾಲು, ಭೂಮಾತೆಯ ಘರ್ಜನೆ_ಮಣ್ಣು ಉಳಿಸಿ- ಮರ ನೆಡಿ” ಘೋಷಣೆಗಳೊಂದಿಗೆ ಆಗಮಿಸಿದ್ದ ಜನಸ್ತೋಮ ಸದ್ಗುರು ಅವರನ್ನು ಸ್ವಾಗತಿಸಿತು. ಭಾರತದಲ್ಲಿ “ಮಣ್ಣು ಉಳಿಸಿ” ಅಭಿಯಾನದ ಆರಂಭದ ದ್ಯೋತಕವಾಗಿ ಸಸಿಯೊಂದನ್ನು ಸದ್ಗುರು ನೆಟ್ಟರು.

ಇದನ್ನೂ ಓದಿ | ಆಕ್ರಮಣಕ್ಕೆ ಒಳಗಾದ ಎಲ್ಲ ದೇಗುಲಗಳ ಮರುನಿರ್ಮಾಣ ಬೇಕಿಲ್ಲ ಎಂದ ಸದ್ಗುರು

ವಿವಿಧ ರಾಜ್ಯಗಳಿಂದ ಬಂದು ಸೇರಿದ್ದ ಸಾವಿರಾರು ಉತ್ಸಾಹಿಗಳ ಮುಗಿಲು ಮುಟ್ಟುವ ಘೋಷಣೆಗಳ ಕಲರವ, ಮೈನವಿರೇಳಿಸುವ ಡೋಲು ವಾದನ ಮತ್ತು ರೋಮಾಂಚಕ ಜಾನಪದ ಪ್ರದರ್ಶನಗಳ ನಡುವೆ ಸದ್ಗುರು ಅವರು ನೆರೆದಿದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ಮುಂದಿನ 30 ದಿನಗಳ ಕಾಲ ನೀವು ನಿಮ್ಮ ಧ್ವನಿಯನ್ನು ಮುಗಿಲು ಮುಟ್ಟುವಂತೆ ಏರಿಸಬೇಕು. ಕೇವಲ ಒಂದು ದಿನದ ಘೋಷಣೆ ಕೂಗುವುದಲ್ಲ. ಜಗತ್ತಿನ ಎಲ್ಲ ಸರ್ಕಾರಗಳೂ ಮಣ್ಣಿನ ಪುನರುಜ್ಜೀವನ ಮಾಡಲು ನೀತಿ-ನಿರೂಪಣೆಯ ಬದಲಾವಣೆ ಮಾಡಿದೆ ಎಂದು ತಿಳಿದು ಬರುವ ತನಕ, ನಿರಂತರವಾಗಿ ಈ ಅಭಿಯಾನದ ಘೋಷವನ್ನು ಪ್ರತಿದಿನ 15-20 ನಿಮಿಷಗಳ ಕಾಲ ಎಲ್ಲರಿಗೂ ಕೇಳುವಂತೆ ಮಾಡಿ. ಪ್ರತಿಯೊಬ್ಬರೂ ಸೋಷಿಯಲ್‌ ಮೀಡಿಯಾ ಬಳಸಿ ಮಣ್ಣಿನ ಬಗ್ಗೆ ಮಾತನಾಡಬೇಕು. ಇಂತಹ ಶಕ್ತಿಯುತ ಸಾಧನ ಮೊಬೈಲ್‌ ನಿಮ್ಮ ಕೈಯಲ್ಲಿದ್ದಾಗ, ಈ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಯಾಗುವಂತೆ ಮಾಡಬೇಕು ಎಂದು ಕರೆ ನೀಡಿದರು.

ಟಗ್‌ಬೋಟ್‌ನಲ್ಲಿ ಬಂದ ತಮ್ಮ ಮೋಟಾರ್‌ಸೈಕಲ್‌ ಅನ್ನೂ ಹೊತ್ತು ತಂದರು. ಸದ್ಗುರು ಇದೀಗ 100 ದಿನಗಳ 30,000 ಕಿಲೋಮೀಟರ್‌ಗಳ ಮೊಟಾರ್‌ಬೈಕ್‌ ಪಯಣದಲ್ಲಿ ಈ ವರ್ಷದ ವರ್ಷದ ಮಾರ್ಚ್‌ನಿಂದ ತೊಡಗಿಕೊಂಡಿದ್ದಾರೆ. ಅವರ ಪಯಣ ಮಾರ್ಚ್‌ 21 ರಂದು ಲಂಡನ್‌ನಿಂದ ಆರಂಭವಾಗಿದೆ. ಜೂನ್‌ ತಿಂಗಳ ಕೊನೆಯಲ್ಲಿ ಕಾವೇರಿ ನದಿ ಕೊಳ್ಳದಲ್ಲಿ ಸಂಪನ್ನವಾಗಲಿದೆ.

ಇದನ್ನೂ ಓದಿ | ಇವರ ಮೈಮೇಲೆ ಸಾಯಿಬಾಬಾ ಬರುತ್ತಾರಾ? ಸದ್ಗುರು ಮಧುಸೂದನ ಸಾಯಿ ಇನ್ನೊಂದು ಸಾಮ್ರಾಜ್ಯ ಕಟ್ಟಿದ ರೋಚಕ ಕತೆ!

ಮಣ್ಣು ಸವೆತ ಹೆಚ್ಚಳ

ಭಾರತದಲ್ಲಿ ಕೃಷಿ ಭೂಮಿಯ ಸರಾಸರಿ ಸಾವಯವ ಇಂಗಾಲದ ಪ್ರಮಾಣವು 0.68% ಮಾತ್ರ ಇದ್ದು, ದೇಶವು ಮರುಭೂಮೀಕರಣದ ಮತ್ತು ಮಣ್ಣಿನ ಸಂಪೂರ್ಣ ವಿನಾಶದ ಅಪಾಯದಲ್ಲಿದೆ ಎಂದು ಅಂದಾಜಿಸಲಾಗಿದೆ. ದೇಶದ 30% ಫಲವತ್ತಾದ ಮಣ್ಣು ಈಗಾಗಲೇ ಬರಡಾಗಿದ್ದು, ಯಾವುದೇ ಕೃಷಿಗೆ ಅನುಪಯುಕ್ತವಾಗಿದೆ. ಜಾಗತಿಕವಾಗಿಯೂ 25% ಫಲವತ್ತಾದ ಮಣ್ಣು ಮರುಭೂಮಿ ಆಗಿಬಿಟ್ಟಿದೆ ಎಂದು ಅಂದಾಜು ಮಾಡಲಾಗಿದೆ. ಈಗ ಘಟಿಸುತ್ತಿರುವ ಪ್ರಮಾಣದಲ್ಲಿಯೇ ಮಣ್ಣು ಸತ್ವಹೀನವಾಗುವುದು ಮುಂದುವರೆದರೆ, ಪ್ರಪಂಚದ 90% ಭೂಮಿಯು 2050ನೇ ವರ್ಷಕ್ಕೆ ಮರುಭೂಮಿಯೇ ಆಗಿಬಿಡುತ್ತದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಇದು ಘಟಿಸಲು ಕೇವಲ ಮೂರು ದಶಕ ಮಾತ್ರವೇ ಉಳಿದಿದೆ. ಆದ್ಧರಿಂದ, ಮಣ್ಣು ರಕ್ಷಿಸಿ ಎಂದು ಕರೆ ನೀಡಿ ಸದ್ಗುರು ಅಭಿಯಾನ ನಡೆಸುತ್ತಿದ್ದಾರೆ.

ಇದನ್ನೂ ಓದಿ | PM Narendra Modi: ರಾಷ್ಟ್ರಸೇವೆ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದ ಪ್ರಧಾನಿ ಮೋದಿ

ವಿಜಯಪುರದಲ್ಲಿ ಸಂಭ್ರಮ

ಭಾರತ ಪ್ರವೇಶಿಸಿದ ಸಂಭ್ರಮವನ್ನು ವಿಜಯಪುರದ ಈಶಾ ಫೌಂಡೇಶನ್ ಸ್ವಯಂಸೇವಕರು ಸಂಭ್ರಮಿಸಿದರು. ಶ್ರೀ ಸಿದ್ದೇಶ್ವರ ದೇವಸ್ಥಾನದ ಎದುರು ಈ ಸ್ವಾಗತ ಕಾರ್ಯಕ್ರಮ ನಡೆಯಿತು. ಭಾನುವಾರದಿಂದ 25 ದಿನಗಳ ಕಾಲ ಭಾರತದಲ್ಲಿ ಅಭಿಯಾನ‌ ನಡೆಯಲಿದೆ. ಸ್ವಾಗತ ಕಾರ್ಯಕ್ರಮದಲ್ಲಿ ಈಶಾ ಫೌಂಡೇಶನ್ ಕಾರ್ಯಕರ್ತರು ‘ಸೇವ್ ಸಾಯಿಲ್’ ಜಾಗೃತಿ ಫಲಕ ಪ್ರದರ್ಶಿಸಿ ‘ಮಣ್ಣು ಉಳಿಸಿ’ ಆಂದೋಲನದ ಕುರಿತು ನೆರೆದ ಜನಕ್ಕೆ ಅರಿವು ಮೂಡಿಸಿದರು. ‘ಮಣ್ಣು ಉಳಿಸಿ’ ಅಭಿಯಾನ‌ ಹಮ್ಮಿಕೊಂಡಿರುವ ಸದ್ಗುರು ಅವರ ಕುರಿತು ಹಾಗೂ ಮಣ್ಣಿನ‌ ಮಹತ್ವದ ಕುರಿತು ಕವನ ವಾಚಿಸಿ ತಮ್ಮ ಅಭಿಪ್ರಾಯ ಹಮ್ಮಿಕೊಂಡರು.

Exit mobile version