Site icon Vistara News

Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

Success Story

ಕೃಷಿ ಕೆಲಸಗಳಲ್ಲಿ ಕೇವಲ ಕಷ್ಟ ಪಟ್ಟು ದುಡಿದರೆ ಸಾಲದು, ಬುದ್ದಿವಂತಿಕೆಯೂ ಬೇಕು. ಆಗ ಮಾತ್ರ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ರೈತನೊಬ್ಬ (Success Story) ಸಾಬೀತು ಮಾಡಿದ್ದಾನೆ. ಈ ರೈತ ಬೇರೆಯಾರೂ ಅಲ್ಲ ನಮ್ಮ ಕರ್ನಾಟಕದವರೇ (karnataka) ಆಗಿದ್ದಾರೆ. ಮಾವಿನ ಕೃಷಿ (Mango Cultivation) ಮಾಡಿ ರಾಯಚೂರಿನ (Raichur) ಗುಡಿಪಾಡು ಆಂಜನೇಯ (Gudipadu Anjaneya) ಅವರು ಈಗ ಎಲ್ಲೆಡೆ ಸುದ್ದಿ ಮಾಡುತ್ತಿದ್ದಾರೆ. ಗುಡಿಪಾಡು ಆಂಜನೇಯ ಅವರು ಆನ್‌ಲೈನ್‌ನಲ್ಲಿ ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿ ಸುದ್ದಿಯಾಗುತ್ತಿದ್ದಾರೆ. ಡಿಪ್ಲೊಮಾ ಪೂರ್ಣಗೊಳಿಸಿರುವ ಆಂಜನೇಯ ಅವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು.

ತೋಟಗಾರಿಕೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಹಣ್ಣು, ತರಕಾರಿ, ಹೂವು, ಅಲಂಕಾರಿಕ ಸಸ್ಯಗಳನ್ನು ಬೆಳೆಯುವ ವಿಜ್ಞಾನ ಮತ್ತು ಕಲೆಯನ್ನು ಕಲಿತು ಆನ್‌ಲೈನ್ ಪೋರ್ಟಲ್ ಮೂಲಕ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆಂಜನೇಯ ಅವರು ಆನ್‌ಲೈನ್ ನಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಮಾವಿನ ತಳಿಗಳಲ್ಲಿ ಪ್ರಮುಖವಾದವು ಬನಗನಪಲ್ಲಿ, ಮಲ್ಲಿಕಾ ಮತ್ತು ಕೇಸರಿ ಮಾವುಗಳು. ಇವರು ತಮ್ಮ ಮಾವಿನ ಹಣ್ಣುಗಳ ಮಾರಾಟ ಜಾಲವನ್ನು ರಾಯಚೂರಿನ ಹೊರಗೂ ವಿಸ್ತರಿಸಿದ್ದಾರೆ. ಬೆಂಗಳೂರಿನ ಜಯನಗರ, ವೈಟ್‌ಫೀಲ್ಡ್ ಮತ್ತು ಲಾಲ್ ಬಾಗ್‌ನ ಎಂಇಎಸ್ ಮೈದಾನದಲ್ಲಿ ಮಾವು ಮೇಳದಲ್ಲಿ ಪಾಲ್ಗೊಂಡಿರುವ ಇವರು, ಆನ್ ಲೈನ್ ಮೂಲಕ ರಾಜ್ಯದ ಮೂಲೆಮೂಲೆ ಮಾತ್ರವಲ್ಲ ಹೊರರಾಜ್ಯ, ವಿದೇಶಗಳಿಗೂ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ರೂಪಿಸುವ ಗುರಿ ಹೊಂದಿರುವ ಅವರು ಇತರ ಕೃಷಿಕರಿಗೂ ಪ್ರೇರಣೆಯಾಗಿದ್ದಾರೆ.

ಸಾಕಷ್ಟು ಶ್ರಮ

ಆಂಜನೇಯ ತಮ್ಮ ವ್ಯವಹಾರದ ಆರಂಭದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅವರು ಗ್ರಾಹಕರ ವಿಳಾಸವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿ, ಪ್ರತಿಯೊಂದು ಹಂತವನ್ನು ಅನುಸರಿಸಿ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅದನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಮಾರ್ಗಗಳನ್ನು ಹುಡುಕುತ್ತಿದ್ದರು. ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೊದಲು, ಆಂಜನೇಯ ಅವರು ಮೋಸಂಬಿ ಮತ್ತು ನಿಂಬೆಯನ್ನು ಮಾರುಕಟ್ಟೆ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರು.

ಆನ್ ಲೈನ್ ಪೋರ್ಟಲ್ ಪ್ರಾರಂಭ

ಬಳಿಕ ಆಂಜನೇಯ ಅವರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ (KSMDMCL) ಅಂಚೆ ಇಲಾಖೆಯ ಸಹಯೋಗದೊಂದಿಗೆ ತಮ್ಮ ಪೋರ್ಟಲ್ ಅನ್ನು ಪ್ರಾರಂಭಿಸಿದರು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ ಪ್ರಾರಂಭಿಸಿರುವ ಕರ್ ಸಿರಿ ಮ್ಯಾಂಗೋಸ್ (https://www.karsirimangoes.karnataka.gov.in) ವೆಬ್‌ಸೈಟ್ 2022ರಲ್ಲಿ ವಿವಿಧ ಬಗೆಯ ಹಣ್ಣುಗಳಿಗಾಗಿ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು. ಈ‌ ವೆಬ್ ಸೈಟ್ ಮೂಲಕವೇ ಈ ರೈತ ಮಾವು ಮಾರಿ ಲಾಭ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Mysore News: ಮೈಸೂರಿನಲ್ಲಿ ಪಾಲಿಕೆಯಿಂದ ನಿಷೇಧಿತ ಪ್ಲಾಸ್ಟಿಕ್‌ ವಶ; 1.61 ಲಕ್ಷ ರೂ. ದಂಡ

ಇದು ಗ್ರಾಹಕರ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುತ್ತದೆ. ಹಣ್ಣುಗಳ ಚಿತ್ರಗಳು ಮತ್ತು ಹೆಸರುಗಳ ಜೊತೆಗೆ ವೆಬ್‌ಸೈಟ್ ಮಾವಿನ ಸರಬರಾಜಿಗೆ ಕಾರಣರಾದ ರೈತರ ಹೆಸರು ಮತ್ತು ಸಂಖ್ಯೆಗಳನ್ನು ಸಹ ಪ್ರದರ್ಶಿಸುತ್ತದೆ. ಮಾವು ಬೆಳೆಗಾರರಿಗೆ ಈ ವೆಬ್‌ಸೈಟ್ ಆಶಾದಾಯಕವಾಗಿದೆ. ಇದನ್ನು ಬಳಸಿಕೊಂಡೇ ಆಂಜನೇಯ ಅವರು ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿದ್ದಾರೆ.

Exit mobile version