Site icon Vistara News

ಪುಸ್ತಕ ವಿಮರ್ಶೆ: ಪದಗಳಿಗೆ ನಿಲುಕದ ಭಾವವೇ ಪ್ರೀತಿ

ಪುಸ್ತಕ: ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ
ಪ್ರಕಾರ: ಕಾದಂಬರಿ
ಲೇಖಕರು: ಪೂರ್ಣಿಮಾ ಮಾಳಗಿಮನಿ
ಪ್ರಕಾಶಕರು: ಸಾವಣ್ಣ ಪ್ರಕಾಶನ
ಬೆಲೆ: ₹200

ಪ್ರೀತಿ-ಪ್ರೇಮ ಪುಸ್ತಕದಾಚೆಯ ಬದನೇಕಾಯಿ ಎಂಬ ಶೀರ್ಷಿಕೆಯನ್ನು ನೋಡಿದರೆ ಈ ಪುಸ್ತಕದಲ್ಲಿ ಏನಿರಬಹುದು ಎಂಬ ಕುತೂಹಲ ಹೆಚ್ಚುತ್ತದೆ. ಅದಕ್ಕೆ ಕಾರಣ ಈ ಹಿಂದೆ ರಿಯಲ್‌ ಸ್ಟಾರ್‌ ಉಪೆಂದ್ರ ಪ್ರೀತಿ ಪ್ರೇಮವೆಂದರೆ ಪುಸ್ತಕದ ಬದನೇಕಾಯಿ ಎಂದು ಹೆಳಿದ ಮಾತು. ಹಾಗದರೆ, ಈ ಪುಸ್ತಕದ ಲೇಖಕಿ ಪ್ರೀತಿ ಪ್ರೇಮವನ್ನು ಪುಸ್ತಕದಾಚೆಯ ಬದನೇಕಾಯಿ ಎಂದು ಹೇಳಲು ಏನು ಕಾರಣವಿರಬಹುದು ಎಂಬ ಪ್ರಶ್ನೆ ಮೂಡುತ್ತದೆ.

ಪದಗಳಿಗೆ ನಿಲುಕದ, ಯಾವುದೇ ಮಿತಿಯೊಳಗೆ ಬಂದಿಸಿಡಲು ಕಷ್ಟವಾಗುವ, ಕೇವಲ ಮನಸ್ಸಿಗೆ ಮಾತ್ರ ಅರಿವಾಗುವ ಭಾವ ಪ್ರೀತಿ.

ಪ್ರೀತಿ ಎಂಬ ಭಾವವನ್ನು ಒಬ್ಬೊಬ್ಬರು ಅನುಭವಿಸುವ ರೀತಿ ವಿಭಿನ್ನ. ಕೆಲವರು ತಾವು ಪ್ರೀತಿಸುವ ವ್ಯಕ್ತಿಯ ಕುರಿತು ಕವಿತೆ ಬರೆಯುತ್ತಾರೆ, ಹಾಡು ಹಾಡುತ್ತಾರೆ, ಅವರ ಸುಂದರವಾದ ನಗು ಮುಖದ ಚಿತ್ರ ಬಿಡಿಸಿ ಅದರಲ್ಲಿ ತಮ್ಮ ಸಂತೋಷ ಕಾಣುತ್ತಾರೆ. ಆದರೆ, ಈ ಭಾವವನ್ನು ವ್ಯಕ್ತ ಪಡಿಸಲು ನಿರ್ದಿಷ್ಟ ಹಾದಿ ಯಾವುದು ಎಂದು ತಿಳಿಯುವುದು ಕಷ್ಟ. ನಮ್ಮ ಹಿಂದಿನ ತಲೆಮಾರಿನವರು ಪ್ರೀತಿಸುವ ರೀತಿ ಹಾಗೂ ನಮ್ಮ ಜನರೇಷನ್ ಪ್ರೀತಿಯನ್ನು ಕಾಣುವ ಪರಿ ಎರಡೂ ಬೇರೆ ಬೇರೆ ಆಗಿರಬಹುದು. ಎಷ್ಟೇ ಬೇರೆ ಎಂದುಕೊಂಡರೂ ಅದು ಯಾವುದೋ ಒಂದು ಘಳಿಗೆಯಲ್ಲಿ, ಯಾವುದೋ ದಾರಿಯ ನಡುವೆ ಸೇರಬಹುದು. ಒಂದಾಗಬಹುದು. ಆ ಪಾಯಿಂಟ್ ಯಾವುದು ಎಂದು ಖಚಿತವಾಗಿ ಹೇಳಲಾಗುವುದಿಲ್ಲ.

ಈ ಎಲ್ಲಾ ಅಂಶಗಳನ್ನು ಸುಂದರವಾಗಿ ಅಕ್ಷರರೂಪಕ್ಕೆ ಇಳಿಸಿ, ಪ್ರೀತಿ ಪ್ರೇಮವನ್ನು ತಮ್ಮ ದೃಷ್ಟಿಕೋನದಿಂದ ಮಾತ್ರ ನೋಡದೇ, ಹಲವು ಆಯಾಮಗಳಿಂದ ಕಂಡು ಅದಕ್ಕೊಂದು ಸ್ವರೂಪ ಕೊಡುವ ಪ್ರಯತ್ನ ಪೂರ್ಣಿಮಾ ಮಾಳಗಿಮನಿಯವರು ಮಾಡಿದ್ದಾರೆ. ಅದರಲ್ಲಿ ಯಶಸ್ವಿಯಾಗಿದ್ದಾರೆ ಕೂಡ. ಕಾಲೇಜ್ ಪ್ರೆಂಡ್ಸ್ ರೀಯೂನಿಯನ್ ಅಲ್ಲಿ ಭೇಟಿ ಆದಾಗ ತನ್ನ ಮೊದಲ ಕ್ರಶ್ ಕಂಡಾಗ, ಅವನನ್ನು ಸೇರಲು ಬಂದಾಗ ಅವನಿಗಾಗುವ ತಳಮಳದಿಂದ ಶುರುವಾಗಿ ತನ್ನ ಹೆಂಡತಿಯ ಪ್ರೇಮ ಸಂಬಂಧ ಬೆಳಕಿಗೆ ಬರುವ ತನಕವೂ ಹಲವು ವಿಭಿನ್ನ ಬಗೆಯಲ್ಲಿ ಪ್ರೀತಿಯನ್ನು ಚಿತ್ರಿಸಲಾಗಿದೆ. ಜೀವನ ಪೂರ್ತಿ ಜೊತೆಗಿರುವ ಪ್ರಮಾಣ ಮಾಡುವುದು ಅಥವಾ ಪ್ರೀತಿ ಎನ್ನುವುದು ಕೇವಲ ಒಂದು ರಾತ್ರಿಗೆ ಸೀಮಿತಗೊಳಿಸುವುದರ ನಡುವಿನ ತಲ್ಲಣಗಳನ್ನು ಸುಂದರವಾಗಿ ನಿರ್ಮಿಸಿದ್ದಾರೆ. ಈ ಎಲ್ಲದರ ನಡುವೆ ಸ್ಟಾರ್ ಆಗಿರುವ ಪಾತ್ರ ಅಂಕಲ್. ಅಂಕಲ್ ಬರುವ ಸನ್ನಿವೇಶ, ಒಂದು ಅಪಾರ್ಟ್‌ಮೆಂಟ್‌ನಲ್ಲಿ ಹುಟ್ಟುವ ಪ್ರೀತಿ, ನಾವು ನಿಜಕ್ಕೂ ಪ್ರೀತಿಸುತ್ತೇವೋ ಅಥವಾ ಪ್ರೀತಿಸಿದ್ದೇವೆ ಅಂತ ಅಂದುಕೊಳ್ಳುತ್ತೇವೋ ಎಂಬ ಜಿಜ್ಞಾಸೆಗೆ ದೂಡುತ್ತದೆ. ಅಷ್ಟು ಅಚ್ಚುಕಟ್ಟಾಗಿ ಆ ಸನ್ನಿವೇಶವನ್ನು ಕಟ್ಟಿಕೊಟ್ಟಿದ್ದಾರೆ.

ಈ ಪುಸ್ತಕಕ್ಕೆ ಖ್ಯಾತ ಸಾಹಿತಿ ಜೋಗಿಯವರು ಸುಂದರವಾದ ಮುನ್ನುಡಿ ಬರೆದಿದ್ದಾರೆ ಹಾಗೂ ಗೋಪಾಲಕೃಷ್ಣ ಕುಂಟಿನಿ, ಪ್ರಶಾಂತ್‌ ಭಟ್‌, ಅರ್ಪಣಾ ಹೆಚ್.ಎಸ್‌, ಹಾಗೂ ಜೋಗಿಯವರು ಪುಸ್ತಕದ ಕುರಿತು ಹೇಳಿದ ಅಭಿಪ್ರಾಯಗಳನ್ನು ಪುಸ್ತಕದ ಬೆನ್ನಲ್ಲಿ ಕಾಣಬಹುದು.

ಈ ಪುಸ್ತಕವನ್ನು ಸುಂದರವಾಗಿ ಪ್ರಕಟಿಸಿ ಹೊರತಂದಿದ್ದು ಸಾವಣ್ಣ ಪ್ರಕಾಶನದವರು. ಒಟ್ಟಿನಲ್ಲಿ ಈ ಪುಸ್ತಕವೂ ಶಿರ್ಷಿಕೆಯಷ್ಟೇ ಕುತೂಹಲ, ಸುಂದರ.

ಪುಸ್ತಕ ಖರೀದಿಸಲು ಇಲ್ಲಿ ಒತ್ತಿ

ಮತ್ತಷ್ಟು ಓದಿ: ಜಿನದತ್ತ ದೇಸಾಯಿ, ಮೊಗಸಾಲೆ, ಸರಸ್ವತಿ ಚಿಮ್ಮಲಗಿ ಸೇರಿ 15 ಸಾಧಕರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Exit mobile version