Site icon Vistara News

ವಿಜಯನಗರ ಸಾಮ್ರಾಜ್ಯ ಬಗ್ಗೆ ವೀರ ಸಾವರ್ಕರ್‌ ಹೀಗೆ ಬರೆದಿದ್ದರು!

savarkar book

ಸ್ವಾತಂತ್ರ್ಯವೀರ ಸಾವರ್ಕರ್‌ರ ʼSix Glorious epochs of Indian Historyʼ ಕೃತಿಯನ್ನು ಡಾ.ಎಸ್‌.ಆರ್.ಲೀಲಾ ಅವರು ಕನ್ನಡಕ್ಕೆ ʼಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳುʼ ಎಂದು ಅನುವಾದಿಸಿದ್ದಾರೆ. ಅಧ್ಯಯನಪೂರ್ಣವಾದ ಈ ಕೃತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಬಗ್ಗೆ ಅವರು ಬರೆದಿರುವುದರಿಂದ ಆಯ್ದ ಭಾಗ ಇಲ್ಲಿದೆ:

ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹರಿಹರ ಮತ್ತು ಬುಕ್ಕ ಒಡಯರು ಸಂಗಮನ ಮಕ್ಕಳು. ಸಂಗಮನೂ ಕೂಡ ಪ್ರಾಚೀನ ಯಾದವ ಕುಲಕ್ಕೆ ಸೇರಿದವ. ಆನೆಗೊಂದಿಯ ಅರಮನೆಯಲ್ಲಿ ಅಧಿಕಾರ ಸ್ಥಾನದಲ್ಲಿದ್ದವರು. ಅಲ್ಲಾವುದ್ದೀನ್ ಖಿಲ್ಟಿಯಿಂದಾದ (ಮುಸಲ್ಮಾನರ) ದಕ್ಷಿಣಾಕ್ರಮಣದಲ್ಲಿ ದೇವಗಿರಿ, ವಾರಂಗಲ್, ರಾಜ್ಯಗಳಂತೆ ಆನೆಗೊಂದಿ ರಾಜ್ಯವೂ ವಶವಾಗಿತ್ತು. ಆನೆಗೊಂದಿ ಅಥವಾ ಅದರ ಬಳಿಯ ಒಂದು ಪ್ರದೇಶವನ್ನು ಜಾನಪದೀಯರು ರಾಮಾಯಣ ಕಾಲದ ವಾಲಿಯ ರಾಜ್ಯ ಕಿಷ್ಕಂಧೆ ಎಂದು ಹೇಳುತ್ತಿದ್ದರು. ಆನೆಗೊಂದಿಯು ಮುಸಲ್ಮಾನರ ಕೈಗೆ ಬಿದ್ದಾಗ ಅಲ್ಲಿನ ಸೇನಾಧಿಕಾರಿಗಳಾದ ಹರಿಹರ ಮತ್ತು ಬುಕ್ಕರಾಯರನ್ನು ಬಂಧಿಸಿ ದೆಹಲಿಗೆ ಕರೆದೊಯ್ಯಲಾಯಿತು. ಅವರ ಅಪಾರ ಸಾಮರ್ಥ್ಯ ಮತ್ತು ಸನ್ನಡವಳಿಕೆಯಿಂದ ಸುಲ್ತಾನ ಸುಪ್ರೀತನಾದ. ನಂತರ 1331ರಲ್ಲಿ ಉಳಿದ ಹಿಂದೂಗಳನ್ನು ಯುದ್ಧದಲ್ಲಿ ಸೋಲಿಸಿ ದೆಹಲಿಯ ಕೈ ಬಲಪಡಿಸಲು ಸೂಕ್ತವಾದ ಅಧಿಕಾರವನ್ನು, ಸ್ಥಾನಮಾನಗಳನ್ನು ಒದಗಿಸಿ ಇವರೀರ್ವರನ್ನು ಸೇನಾಸಹಿತವಾಗಿ ಕಳುಹಿಸಲಾಯಿತು.

ವಿನಾಯಕ ದಾಮೋದರ ಸಾವರ್ಕರ್

ಅವರು ಸಂಕೇಶ್ವರಮಠಕ್ಕೆ ಬಂದು ಶ್ರೀಶಂಕರಾಚಾರ್ಯ ವಿದ್ಯಾರಣ್ಯಸ್ವಾಮಿಗಳನ್ನು ಕಂಡರು. ವಿದ್ಯಾರಣ್ಯರು ರಾಜನೀತಿ ಕುಶಲರೂ ಆಗಿದ್ದರು. ಒಡನೆಯೆ ಅವರು ಇವರೀರ್ವರ ಶುದ್ಧಿಕಾರ್ಯ ನೆರವೇರಿಸಿ ಪುನಃ ಹಿಂದೂಧರ್ಮಕ್ಕೆ ಬರಮಾಡಿಕೊಂಡರು. ಹಿಂದೂಗಳಾಗಿ ಸ್ವಾಮಿಗಳ ಆದೇಶ ಮಾರ್ಗದರ್ಶನಗಳನ್ನು ಪಡೆದು ಹಿಂದೂ ಮಹಾಸೈನ್ಯ ಕಟ್ಟಲು ಆರಂಭಿಸಿದರು. ಈ ಸೈನ್ಯ ಸಹಾಯದಿಂದಲೆ ತಮ್ಮ ಹಿಂದಿನ ಮುಸಲ್ಮಾನ ರಾಜನನ್ನು ಸೋಲಿಸಿದರು. ತದನಂತರ ಸ್ವಾಮಿಗಳು ಹಾಗೂ ಇತರ ಹಿಂದೂ ಪ್ರಮುಖ ವೀರರೊಡನೆ ಸಮಾಲೋಚಿಸಿ, ತುಂಗಭದ್ರಾ ನದಿತೀರಪ್ರದೇಶದಲ್ಲಿ ಸ್ವತಂತ್ರ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಲು ಸಂಕಲ್ಪಿಸಿದರು. ಹೊಸದಾದ ರಾಜಧಾನಿಯನ್ನು ನಿರ್ಮಿಸಿದರು. ಸಹಜವಾಗಿಯೆ ಅದು ಹಿಂದೂಗಳ ಗೆಲುವನ್ನು ಸಾರುವ ವಿಜಯನಗರವಾಯಿತು. 1336ರಲ್ಲಿ ಈ ಸಾಮ್ರಾಜ್ಯದ ಮೊದಲ ರಾಜನಾಗಿ ಹರಿಹರನನ್ನು ಸ್ಥಾಪಿಸಲಾಯಿತು; ಸ್ವಾಮಿ ವಿದ್ಯಾರಣ್ಯರೆ ಹರಿಹರನ ಪ್ರಧಾನಾಮಾತ್ಯರಾಗಿ ಅಧಿಕಾರ ವಹಿಸಿಕೊಂಡರು.

ಹೆಚ್ಚಿನ ಓದಿಗಾಗಿ: ಇದು ಮನುಷ್ಯರನ್ನು ಓದೋ ‌ಹ್ಯೂಮನ್‌ ಲೈಬ್ರರಿ!

ಶ್ರೀಕೃಷ್ಣದೇವರಾಯ

ಈ ಸಾಮ್ರಾಜ್ಯದ ಅತಿ ಯಶಸ್ವಿ ರಾಜ ಶ್ರೀಕೃಷ್ಣದೇವರಾಯ. ಆದಿಲ್ ಶಾಹಿಯೊಡನೆ ನಡೆದ ಕಠೋರ ಯುದ್ಧದಲ್ಲಿ ಮುಸಲ್ಮಾನರನ್ನು ಪೂರ್ತಿ ಮಣ್ಣುಮುಕ್ಕಿಸಿ, ಹಿಂದೂ ಪ್ರಾಬಲ್ಯವನ್ನು ಮೆರೆದಿದ್ದವ ಈ ಮಹಾರಾಜಾಧಿರಾಜ. ಆತನ ಸೇನೆ ಅತ್ಯಂತ ಪ್ರಬಲವೂ ವಿಶಾಲವೂ ಆಗಿದ್ದಿತು. 7000 ಪದಾತಿಗಳು, 20,000 ಅಶ್ವಗಳು, 551 ಗಜಪಡೆಗಳು ಸದಾ ಯುದ್ಧಸನ್ನದ್ಧ ಸ್ಥಿತಿಯಲ್ಲಿರುತ್ತಿದ್ದವು. ವಿಜಯನಗರ ಸಾಮ್ರಾಜ್ಯ ಈ ರಾಜಾಧಿರಾಜನ ಕಾಲದಲ್ಲಿ ವೈಭವದ ಸಂಪತ್ ಸಮೃದ್ಧಿಯ ಪರಾಕಾಷ್ಠೆಯನ್ನು ಗಳಿಸಿತ್ತು. ಈತನ ಆಸ್ಥಾನಕ್ಕೆ ದೂರ ದೂರದಿಂದ ಬಂದ ಅನೇಕ ಪ್ರವಾಸಿಗಳು ಈ ತಥ್ಯಾಂಶಗಳನ್ನು ಬರೆಹಗಳಲ್ಲಿ ದಾಖಲಿಸಿದ್ದಾರೆ.

ಆಕರ್ಷಕ ರೂಪಿನವನೂ, ಬಲಶಾಲಿಯೂ ಒಮ್ಮೆ ನೋಡಿದವರ ನೋಟವನ್ನು ಸೆಳೆಯುವ ಪ್ರಭಾವಶಾಲಿ ವ್ಯಕ್ತಿತ್ವದವನೂ ಆಗಿದ್ದನಂತೆ ಶ್ರೀಕೃಷ್ಣದೇವರಾಯ. ಸ್ವತಃ ವೈಷ್ಣವನಾದರೂ, ಎಲ್ಲ ಪಂಥಗಳ ಹಿಂದೂಗಳನ್ನು ಸಮಾನವಾಗಿ ಕಂಡು, ಇತರ ಜೈನ, ಲಿಂಗಾಯತ, ಮಹಾನುಭಾವ, ಮುಂತಾದ ಹಿಂದೂ ಸಮಾಜದ ಸಂಖ್ಯಾಬಾಹುಲ್ಯವಿಲ್ಲದ ಸಮುದಾಯಗಳನ್ನು ಸಹಾನುಭೂತಿಯಿಂದ ನಡೆಸಿಕೊಂಡ.
ವಿಜಯನಗರದ ಆರಂಭದ ಕಾಲದಿಂದಲೂ ಮಹಾಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಬೆಳೆಸಿದ ಮಹಾ ಹಿಂದೂ ನಾಯಕರು. ವಿದ್ಯಾರಣ್ಯಸ್ವಾಮಿಗಳು, ಸಂಗಮ ಸೋದರರು, ಸಾಯಣಾಚಾರ್ಯರು ಮುಂತಾದವರೆಲ್ಲ ಹಿಂದೂಗಳಲ್ಲಿ ಸಾಮರಸ್ಯಭಾವವನ್ನು ಬಲಪಡಿಸಿದರು. ಸಹನೆ, ದಯೆ, ತಾಳ್ಮೆ ಮುಂತಾದ ಸದ್ಗುಣಗಳಿಂದ ತಾವೂ ಶೋಭಿತರಾಗಿದ್ದುದರಿಂದ, ಹಿಂದೂ ಧರ್ಮಕ್ಕೆ ಅಪಾರ ಗೌರವ ಸಂದಿತು. ಹಿಂದೂಧರ್ಮ ಮತ್ತು ದೇಶನಿಷ್ಠೆ ಬೆಳೆಯಿತು. ವಿಜಯನಗರದ ಅರಸರೆಲ್ಲರೂ ಸಮಾನತೆ, ಸೌಹಾರ್ದಭಾವಗಳನ್ನು ಬಲವಾಗಿ ಪ್ರತಿಪಾದಿಸಿದರು.

ವಿದೇಶಿ ಪ್ರವಾಸಿಗರ ಬಣ್ಣನೆ

ಪೋರ್ಚುಗೀಸ್‌ ಪ್ರವಾಸಿಗ ದ್ಯುರಾಟ್ ಬಾರ್‌ಬೋಸ್ ವಿಜಯನಗರಕ್ಕೆ ಬಂದು ಅಲ್ಲಿ ಕೆಲವಾರು ತಿಂಗಳು ಕಳೆದು ತನ್ನ ಅನುಭವವನ್ನು ಬರೆದ. ಅವನು ಅಲ್ಲಿದ್ದ ಧಾರ್ಮಿಕ ಸ್ವಾತಂತ್ರ್ಯ, ಸಜ್ಜನಿಕೆಯ ಜೊತೆಗೆ ಈ ಮಹಾಸಾಮ್ರಾಜ್ಯದ ಅದ್ಭುತವಾದ ಸಮೃದ್ಧಿಯನ್ನು ಕುರಿತು ಅಚ್ಚರಿಯಿಂದ ಹೇಳಿದ್ದಾನೆ. ಅಪಾರ ಸಂಪತ್ತು ವಿಜಯನಗರದ ವೈಶಿಷ್ಟ್ಯವಾಗಿತ್ತು. ಪರ್ಷಿಯದ ರಾಜನ ರಾಯಭಾರಿ ಹೇಳುತ್ತಾನೆ. ʼಈ ಪ್ರಪಂಚದಲ್ಲಿ ಈ ನಗರದಂಥ ಮತ್ತೊಂದು ಅದ್ಭುತನಗರ ಮತ್ತೊಂದಿರಲಾರದು. ಅರಮನೆಗೆ ತಾಗಿದಂತೆ 4 ವಿಧವಾದ ಮಾರುಕಟ್ಟೆಗಳಿದ್ದುವು. ಆಭರಣಗಳು, ಮುತ್ತುರತ್ನಗಳನ್ನು ಅಲ್ಲಿ ಮಾರಾಟ ಮಾಡುತ್ತಿದ್ದರು. ವಿಜಯನಗರದ ಜನರು ಸುಂದರವಾದ
ಆಕರ್ಷಕವಾದ ಆಭರಣಗಳನ್ನು ತೊಡುತ್ತಿದ್ದರು. ಪೋರ್ಚುಗೀಸ್‌ ಪ್ರವಾಸಿ ಪೇಸ್ ಹೇಳುತ್ತಾನೆ, ʼವಿಜಯನಗರವು ರೋಮ್ ಸಾಮ್ರಾಜ್ಯದಷ್ಟು ವಿಸ್ತಾರವಾಗಿತ್ತು’. ಶ್ರೀಕೃಷ್ಣದೇವರಾಯನಿಗಿಂತ ಮೊದಲೂ, ವಿಜಯನಗರವು ದಕ್ಷಿಣದ ಅತ್ಯಂತ ಪ್ರಮುಖ, ಪ್ರಬಲ ಸಾಮ್ರಾಜ್ಯವೆಂದು ವಿಖ್ಯಾತವಾಗಿತ್ತು. ಸುತ್ತಮುತ್ತಲಿದ್ದ ಸಣ್ಣ ಸಣ್ಣ ಮುಸಲ್ಮಾನ ರಾಜ್ಯಗಳು ತಮ್ಮ ಸ್ವಾತಂತ್ರ್ಯವನ್ನುಳಿಸಿಕೊಳ್ಳಲು ಪ್ರಬಲರಾದ ವಿಜಯನಗರದ ರಾಯರ ಸಹಾಯವನ್ನಪೇಕ್ಷಿಸುತ್ತಿದ್ದುವು.

Exit mobile version