ಕೊಲಂಬೊ: ಶ್ರೀಲಂಕಾದ ಬರಹಗಾರ ಶೆಹನ್ ಕರುಣಾತಿಲಕ ಅವರು ತಮ್ಮ ಎರಡನೇ ಕಾದಂಬರಿ ʼದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾʼಗೆ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
2019ರ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸಾರ್ವಜನಿಕ ಸಮಾರಂಭದಲ್ಲಿ ಕರುಣಾತಿಲಕ ಅವರು ಇಂಗ್ಲಿಷ್ ಭಾಷಾ ಸಾಹಿತ್ಯ ಪ್ರಶಸ್ತಿಯ ಟ್ರೋಫಿಯನ್ನು ಕ್ವೀನ್ ಕಾನ್ಸಾರ್ಟ್ ಕ್ಯಾಮಿಲ್ಲಾ ಅವರಿಂದ ಪಡೆದರು. ಜತೆಗೆ 50,000 ಪೌಂಡ್ (46.70 ಲಕ್ಷ ರೂ) ನಗದು ಬಹುಮಾನವನ್ನೂ ಪಡೆದರು.
ಈ ಕಾದಂಬರಿ, ಯುದ್ಧ ಛಾಯಾಗ್ರಾಹಕನೊಬ್ಬ ಮರಣಾನಂತರದ ಜೀವನದಲ್ಲಿ ಕಾರ್ಯಾಚರಣೆಯೊಂದರಲ್ಲಿ ಭಾಗವಹಿಸುವ ಕತೆಯನ್ನು ಹೊಂದಿದೆ. 1990ರಲ್ಲಿ ಶ್ರೀಲಂಕಾದ ಅಂತರ್ಯುದ್ಧದ ಸಮಯದಲ್ಲಿ ಈ ಕತೆ ನಡೆಯುತ್ತದೆ. ಈ ಯುದ್ಧ ಛಾಯಾಗ್ರಾಹಕ ಜೂಜುಕೋರ, ಸಲಿಂಗಪ್ರೇಮಿ. ತನ್ನ ದೇಶದ ಸಂಘರ್ಷದ ಕ್ರೌರ್ಯವನ್ನು ಬಿಂಬಿಸುವ ಗುಪ್ತ ಫೋಟೋಗಳು ಆತನ ಬಳಿ ಇರುತ್ತವೆ. ʼʼಭವಿಷ್ಯದಲ್ಲಿ ಶ್ರೀಲಂಕಾದಲ್ಲಿ ಇದನ್ನು ಓದಲಾಗುತ್ತದೆ ಎಂಬುದು ನನ್ನ ಭರವಸೆ. ಭ್ರಷ್ಟಾಚಾರ, ಜನಾಂಗೀಯ ದೌರ್ಜನ್ಯ, ವಂಚಕ ವಸಾಹತುಶಾಹಿ ಆಲೋಚನೆಗಳು ಗೆಲ್ಲಲಾರವು ಎಂದು ನಂಬುತ್ತೇನೆʼʼ ಎಂದು ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಕರುಣಾತಿಲಕ ಹೇಳಿದರು.
ಈ ವರ್ಷದ ಬೂಕರ್ ಪ್ರಶಸ್ತಿ ಸ್ಪರ್ಧಿಗಳ ಕಿರುಪಟ್ಟಿಯಲ್ಲಿ ಬ್ರಿಟಿಷ್ ಲೇಖಕ ಅಲನ್ ಗಾರ್ನರ್ ಅವರ “ಟ್ರೇಕಲ್ ವಾಕರ್”, ಜಿಂಬಾಬ್ವೆ ಲೇಖಕಿ ನೊವೈಲೆಟ್ ಬುಲವಾಯೊ ಅವರ “ಗ್ಲೋರಿ”, ಐರಿಶ್ ಬರಹಗಾರ ಕ್ಲೇರ್ ಕೀಗನ್ ಅವರ “ಸ್ಮಾಲ್ ಥಿಂಗ್ಸ್ ಲೈಕ್ ದೀಸ್”, ಯು.ಎಸ್ ಲೇಖಕ ಪರ್ಸಿವಲ್ ಎವೆರೆಟ್ ಅವರ “ದಿ ಟ್ರೀಸ್” ಮತ್ತು ಬ್ರಿಟಿಷ್ ಲೇಖಕಿ ಎಲಿಜಬೆತ್ ಸ್ಟ್ರೌಟ್ ಅವರ “ಓ ವಿಲಿಯಂ” ಸೇರಿದ್ದವು. ʼʼಇದೊಂದು ಮೆಟಾಫಿಸಿಕಲ್ ಥ್ರಿಲ್ಲರ್. ಜೀವನ ಮತ್ತು ಸಾವು, ದೇಹ ಮತ್ತು ಆತ್ಮ, ಪೂರ್ವ ಮತ್ತು ಪಶ್ಚಿಮದ ಗಡಿಗಳನ್ನು ಇದು ಮೀರುತ್ತದೆ” ತೀರ್ಪುಗಾರರು ಕರುಣಾತಿಲಕ ಕೃತಿಯ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ | Booker prize: ಬೂಕರ್ ಸಾಹಿತ್ಯ ಪ್ರಶಸ್ತಿಯ ಪಟ್ಟಿಯಲ್ಲಿ 13 ಕಾದಂಬರಿಗಳು