ಬೈಕು ಹುಚ್ಚು ಯಾರಿಗಿಲ್ಲ ಹೇಳಿ. ದಿನಂಪ್ರತಿ ಕಚೇರಿಗೆ ಅಲ್ಲಿ ಇಲ್ಲಿ ಅಗತ್ಯಕ್ಕೆ ಮಾತ್ರ ಚಲಾಯಿಸುವವರಿಂದ ಹಿಡಿದು ರೇಸ್‌ವರೆಗೂ ಬೈಕ್ ಬೇಕು. ಬೈಕು ಎತ್ತಿಕೊಂಡು ಒಬ್ಬನೇ ಎಲ್ಲಿಗಾದರೊಮ್ಮೆ ತಿರುಗಾಡಿ ಬರಬೇಕು ಎಂಬುದು ಬಹುತೇಕ ಎಲ್ಲರಿಗೂ ಬದುಕಿನಲ್ಲೊಮ್ಮೆ ಆಸೆ ಹುಟ್ಟಿಯೇ ಇರುತ್ತದೆ. ಈ ಆಸೆ, ಕನಸು ಇನ್ನೂ ಮೊಳೆತು ಗಿಡವಾಗಿ, ಮರವಾಗಿ, ಅದಕ್ಕೆ ಸರಿಯಾಗಿ ಒಂದಿಷ್ಟು ಜೊತೆಗಾರರು ಸಮಾನ ಮನಸ್ಕರೂ ಸಿಕ್ಕಿದರೆಂದರೆ ಮುಗೀತು. ಈ ಸಿಡಿಲ ಹಕ್ಕಿಗಳನ್ನು ಹಿಡಿವವರೇ ಬೇಕಿಲ್ಲ. ಒಮ್ಮೆ ಬೈಕ್ ಹತ್ತಿದರೆಂದರೆ, ನಮ್ಮ ದೇಶದಲ್ಲಂತೂ ಯುವಮನಸ್ಸುಗಳ ಉತ್ಸಾಹಕ್ಕೆ ಇಂಧನವೀಯಬಲ್ಲ ಸಾಹಸಮಯ ಹಾದಿಗಳು ಬೇಕಾದಷ್ಟಿವೆ. ಲಡಾಕ್‌ನಿಂದ ಹಿಡಿದು ಇನ್ನೂ ಹೆಚ್ಚು ಸಮಯ, ಶ್ರಮ ಬೇಡುವ ತಿಂಗಳುಗಟ್ಟಲೆ ಮಾಡಬಹುದಾದ ಪ್ರಯಾಣಗಳಿವೆ. ಇಂತಹ ಬೈಕಿಂಗ್ ಹುಚ್ಚಿನ ಜೀವಗಳು ತಮ್ಮ ಹುಚ್ಚಿಗೆ ಕಿಚ್ಚನ್ನೂ ಹತ್ತಿಸಿಕೊಳ್ಳಬೇಕೆಂದಾದಲ್ಲಿ ಅಂಥವರು ಇವಿಷ್ಟು ಪುಸ್ತಕಗಳ ಬಗ್ಗೆ ತಿಳಿದಿರಲೇಬೇಕು. ಪುಟ ತಿರುವಿಹಾಕಿದರೆ, ಕಳೆದುಹೋಗಬಲ್ಲ, ರೋಮಾಂಚನ ಹುಟ್ಟಿಸಬಲ್ಲ ಕತೆಗಳು ಇಲ್ಲಿವೆ.
೧. ದಿ ಮೋಟರ್‌ಸೈಕಲ್ ಡೈರೀಸ್- ಅರ್ನೆಸ್ಟೋ ಚೆ ಗೆವೆರಾ: ಈ ಪುಸ್ತಕದ ಬಗ್ಗೆ ಕೇಳದವರು ವಿರಳಾತಿವಿರಳ. ಇದು ಇತಿಹಾಸ ಕಂಡ ಅತ್ಯಂತ ಪ್ರಸಿದ್ಧ ಪುಸ್ತಕಗಳಲ್ಲಿ ಒಂದು. ಬಹಳಷ್ಟು ಜನರು ದೂರ ಪ್ರಯಾಣ ಮಾಡುವುದಷ್ಟೇ ಎಲ್ಲದರಿಂದ ಕಳಚಿಕೊಂಡು ದಕ್ಕಬಹುದಾದ ಸ್ವಾತಂತ್ರ್ಯ ಎಂದುಕೊಳ್ಳುತ್ತಾರೆ. ಆದರೆ ಇಲ್ಲಿ ಚೆ ಗೆವೆರಾ, ಗೊತ್ತಿಲ್ಲದೂರುಗಳಿಗೆ ಯಾವುದೇ ನಿರ್ದಿಷ್ಟ ಗೊತ್ತುಗುರಿಗಳಿಲ್ಲದೆ ಸುತ್ತಾಡುವುದೇ ನಮಗೆ ಅನೇಕ ಹೊಳಹುಗಳನ್ನು ನೀಡುತ್ತದೆ ಎಂದು ತಿರುಗಾಟಕ್ಕೊಂದು ಹೊಸ ಮುಖವನ್ನು ಕೊಟ್ಟವರು. ಚೆ ಗೆವರಾನನ್ನು ಬಹಳವಾಗಿ ಪ್ರೀತಿಸುವವರಿಗೆ ಆತನ ಬದುಕಿನ ಹಲವು ಮುಖಗಳ ಪರಿಚಯ ಮಾಡುವುದೂ ಇದೇ ಪುಸ್ತಕ. ಎಲ್ಲಿಗೆ ಹೋಗುತ್ತೇವೆಂಬುದು ಮುಖ್ಯವಾಗುವುದಿಲ್ಲ, ಇಲ್ಲಿ ಪ್ರಯಾಣವಷ್ಟೆ ಮುಖ್ಯವಾಗುತ್ತದೆ ಎಂಬ ಸಂದೇಶ ಸಾರುವ ಓದಲೇಬೇಕಾದ ಪುಸ್ತಕಗಳಲ್ಲಿ ಇದೂ ಒಂದು.
೨. ಲೋನ್ ರೈಡರ್- ಎಲ್ಸ್‌ಪೆತ್ ಬೀಯರ್ಡ್: ೧೯೮೨ರಲ್ಲಿ ಕಾಲ ಹೀಗಿರಲಿಲ್ಲ. ಆಗಷ್ಟೇ ಬ್ರೇಕಪ್ ಮಾಡಿಕೊಂಡ ನೋವಿನಲ್ಲಿ ೨೩ರ ಹರೆಯದ ಎಲ್ಸ್‌ಪೆತ್ ಬೀಯರ್ಡ್ ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ನೋವು ಮರೆಯಲು ಜಗತ್ತು ಸುತ್ತುವೆ ಎಂದು ಆಗಿನ ಕಾಲಕ್ಕೆ ಅಷ್ಟು ಸುಲಭವೂ ಸರಳವೂ ಅಲ್ಲದ ಹಾದಿ ಹಿಡಿದು ಬೈಕ್ ಹತ್ತಿ ಒಬ್ಬಳೇ ತಿರುಗಾಡಿದ ಕತೆ. ಸೋಲೋ ಮಾಡಬೇಕು ಎಂದು ಆಸೆಪಡುವ ಪ್ರತಿ ಮಹಿಳೆಗೂ ಮೆಟ್ಟಿಲಾಗಬಲ್ಲ ಪುಸ್ತಕ. ಸಾಮಾನ್ಯವಾಗಿ ಮಹಿಳೆಯರು ಒಬ್ಬರೇ, ಅದರಲ್ಲೂ ಬೈಕ್ ಚಲಾಯಿಸಿಕೊಂಡು ಹೋಗಲಾಗದಂಥ ರುದ್ರರಮಣೀಯ ಸ್ಥಳಗಳು, ಯುದ್ಧಗ್ರಸ್ಥ ದೇಶಗಳು ಆಕೆ ತಿರುಗಾಡಿದಂತಹುಗಳು! ಲೈಂಗಿಕ ದೌರ್ಜನ್ಯದಂತಹ ತೊಂದರೆಗಳಿಂದ ಹಿಡಿದು ತಾನು ಎದುರಿಸಿದ ಪ್ರತಿಯೊಂದು ಸವಾಲುಗಳನ್ನೂ ಅಷ್ಟೇ ಸುಂದರವಾಗಿ ಬರೆಯುವಲ್ಲೂ ಯಶಸ್ವಿಯಾದಾಕೆ. ಇಮೇಲ್ ಇಲ್ಲದ, ಮೊಬೈಲು, ಆನ್ಲೈನ್ ಮ್ಯಾಪುಗಳಿಲ್ಲದ, ಕೇವಲ ಪೇಪರ್ ಮ್ಯಾಪ್ ಹಿಡಿದು ಹೋದ ಆಕೆಯ ಸಾಧನೆ, ಎಲ್ಲ ಸೌಲಭ್ಯಗಳಿದ್ದೂ ಸೋಲೋ ಮಾಡಲು ಹಿಂದೇಟು ಹಾಕುವ ಮಹಿಳೆಯರೂ ಕಣ್ತೆರೆಸಬಹುದು!
ಇದನ್ನೂ ಓದಿ: ಹೊಸ ಪುಸ್ತಕ: ಮನುಷ್ಯನನ್ನು ಓಡಿಸಿದ ಬಳಿಕ…
೩. ಜುಪಿಟರ್ಸ್ ಟ್ರಾವೆಲ್ಸ್- ಟೆಡ್ ಸೈಮನ್: ಎಷ್ಟು ದೂರ ಬೈಕ್ ಚಲಾಯಿಸಬೇಕೆಂದರೆ ಆ ಬೈಕೂ ನಿಮ್ಮ ದೇಹದ ಒಂದು ಭಾಗವೇ ಎಂಬಷ್ಟು! ಹೌದು. ಟೆಡ್ ಸೈಮನ್ ಎಂಬ ಅಪ್ರತಿಮ ಬೈಕರ್ ತನ್ನ ೫೦೦ ಸಿಸಿ ಟ್ರಿಯಂಫ್ ಟೈಗರ್ ಬೈಕ್ ಹಿಡಿದು ಸತತ ನಾಲ್ಕು ವರ್ಷ ಪ್ರಪಂಚ ಸುತ್ತುತ್ತಾರೆ. ಆರು ಖಂಡಗಳನ್ನು ದಾಟಿಕೊಂಡು ೧,೨೫,೫೩೦ ಕಿಮೀಗಳಷ್ಟು ದೂರವನ್ನು ಬೈಕಿನಲ್ಲಿ ಕ್ರಮಿಸುವುದು ಎಂದರೆ! ಬೈಕರ್‌ಗೆ ಇರಲೇಬೇಕಾದ ಪ್ರಾಥಮಿಕ ಜ್ಞಾನದಿಂದ ಮೊದಲ್ಗೊಂಡು ತನ್ನ ನಾಲ್ಕು ವರ್ಷಗಳ ಬೈಕಿಂಗ್‌ನ ಎಂದೂ ಮುಗಿಯದ ಅನುಭವವನ್ನು ಈ ಪುಸ್ತಕದಲ್ಲಿ ಕಟ್ಟಿಕೊಡುತ್ತಾರೆ.
೪. ಗೈ ಮಾರ್ಟಿನ್: ಮೈ ಆಟೋಬಯೋಗ್ರಫಿ: ಜಗತ್ತಿನ ಅತ್ಯಂತ ಖತರ್ನಾಕ್ ಮೋಟಾರ್ ಸ್ಪೋರ್ಟ್ಸ್‌ಗಳಲ್ಲಿ ಒಂದು ದಿ ಐಸಲ್ ಆಫ್ ಟಿಟಿ. ನೋಡಿದರೆ ಭಯಾನಕವೆನಿಸುವ ಎಂಜಿನ್‌ಗಳನ್ನು ಹೊತ್ತ ಇವನ್ನು ಚಲಾಯಿಸಿಕೊಂಡು ತೆಗೆದುಕೊಳ್ಳುವ ರಿಸ್ಕ್ ಅಂತಿಂಥದ್ದಲ್ಲ. ಗೈ ಮಾರ್ಟಿನ್ ಈ ವಿಭಾಗದಲ್ಲಿ ಬಹು ದೊಡ್ಡ ಹೆಸರು. ಈತನ ಆತ್ಮಚರಿತ್ರೆಯಾಗಿರುವ ಈ ಪುಸ್ತಕದಲ್ಲಿ, ಜೀವಮಾನದ ಇಂತಹ ಹಲವಾರು ಮೈನವಿರೇಳಿಸುವ ಚಿತ್ರಣಗಳನ್ನು ಪುಸ್ತಕಕ್ಕಿಳಿಸಿದ್ದಾರೆ.
೫. ಲಾಂಗ್ ವೇ ರೌಂಡ್: ಚೇಸಿಂಗ್ ಶ್ಯಾಡೋಸ್ ಎಕ್ರಾಸ್ ದಿ ವರ್ಲ್ಡ್- ಚಾರ್ಲಿ ಬೂರ್ಮ್ಯಾನ್ ಮತ್ತು ಇವಾನ್ ಮೆಕ್ ಗ್ರೆಗರ್: ಒಂದು ಪುಸ್ತಕ ಓದಿಯೇ ಪ್ರೇರಣೆ ಪಡೆದು ಅದು ಅಂಥದ್ದೇ ಒಂದು ಪಯಣಕ್ಕೆ ಕಾರಣವಾದರೆ? ಇದೂ ಅಂಥದ್ದೇ ಕಥೆ. ಮೇಲೆ ಹೇಳಿದ ಟೆಡ್ ಸೈಮನ್ ಅವರ ಜುಪಿಟರ್ಸ್ ಟ್ರಾವೆಲ್ ಕೃತಿಯಿಂದ ಪ್ರೇರಣೆ ಪಡೆದು ಬೈಕಿಂಗ್‌ನಲ್ಲಿ ಅಂತಹ ಅನುಭವವಿಲ್ಲದ ಬ್ರಿಟೀಷ್ ಮೂಲದ ನಟ ಇವಾನ್ ಮೆಕ್‌ಗ್ರೆಗರ್, ಚಾರ್ಲಿ ಬೂರ್ಮ್ಯಾನ್ ಜೊತೆ ೩೧,೦೦೦ ಕಿಮೀಗಳಷ್ಟು ಬೈಕ್‌ನಲ್ಲಿಯೇ ಲಂಡನ್‌ನಿಂದ ನ್ಯೂಯಾರ್ಕ್ ಪಯಣ ಮಾಡುತ್ತಾರೆ. ಈ ಪಯಣದ ಸೊಗಸಾದ ಅನುಭವ ಈ ಪುಸ್ತಕದಲ್ಲಿದೆ. ಇದೇ ಹೆಸರಿನ ಡಾಕ್ಯುಮೆಂಟರಿಯನ್ನೂ ಕೂಡಾ ಇವರೇ ಮಾಡಿದ್ದಾರೆ.
ಇದನ್ನೂ ಓದಿ: ಕೊಚ್ಚಿಯಿಂದ ಲಡಾಕ್‌ವರೆಗೆ ಬೈಕ್ ರೈಡ್! ಇದು ಚಾರ್ಲಿಯಲ್ಲ, ಸ್ನೋಬೆಲ್ ಕತೆ