ಬೆಂಗಳೂರು: ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ಬರೆದಿರುವ “ಪ್ರೀತಿಯಿಂದ ರಮೇಶ್- ಯಶಸ್ಸಿನ ಸರಳ ಸೂತ್ರಗಳುʼ ಪುಸ್ತಕ ಭಾನುವಾರ ಬೆಂಗಳೂರಿನ ಬಿ. ಪಿ ವಾಡಿಯಾ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಹಿರಿಯ ನಟ ಅನಂತ್ ನಾಗ್, ಜಿ- ಕನ್ನಡ ಚಾನೆಲ್‌ನ ಬಿಸ್ನೆಸ್ ಹೆಡ್ ರಾಘವೇಂದ್ರ ಹುಣಸೂರ್, ಲೇಖಕ-ಪತ್ರಕರ್ತ ಜೋಗಿ ಹಾಗೂ ಕಿಕ್ಕಿರಿದು ತುಂಬಿದ್ದ ಸಭಿಕರ ನಡುವೆ ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ಅನಂತ್‌ನಾಗ್, ಸಾತ್ವಿಕತೆಗೆ ಇನ್ನೊಂದು ಹೆಸರು ಎಂದರೆ ರಮೇಶ್ ಅರವಿಂದ್. ನಟನಾಗಿ, ನಿರ್ದೇಶಕನಾಗಿ, ಪರ್ಸನಾಲ್ಟಿ ಡೆವಲಪರ್, ಲೇಖಕರಾಗಿ ರಮೇಶ್ ಅರವಿಂದ್ ಯಶಸ್ಸು ಸಾಧಿಸಿದ್ದು, ಅವರೊಬ್ಬರು ಆಲ್‌ರೌಂಡರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪುಸ್ತಕಕ್ಕೆ ಓದುಗರನ್ನು ಹಿಡಿದುಕೊಳ್ಳುವ ಗುಣವಿದೆ. ಈ ಪುಸ್ತಕದಲ್ಲಿ ಯಶಸ್ಸಿ ಸರಳ ಸೂತ್ರ ಮಾತ್ರವಲ್ಲ, ಜೀವನದಲ್ಲಿ ಹೇಗಿರಬೇಕೆಂಬುದನ್ನು ರಮೇಶ್ ತಿಳಿಸಿದ್ದಾರೆ. ಈ ಮೂಲಕ ಸಮಾಜದಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಮಕ್ಕಳು ಈ ಪುಸ್ತಕವನ್ನು ಓದಲೇಬೇಕು ಎಂದು ಅನಂತ್ ನಾಗ್ ಹೇಳಿದರು.
ಓದಿದ್ದು, ಕೇಳಿದ್ದನ್ನು ಪುಸ್ತಕವಾಗಿಸಿದ್ದೇನೆ
ತಮ್ಮ ಪುಸ್ತಕದ ಕುರಿತು ಮಾತನಾಡಿದ ನಟ ರಮೇಶ್ ಅರವಿಂದ್ ನಾನು ಓದಿದ್ದು, ಗ್ರಹಿಸಿದ್ದು ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಈ ಪುಸ್ತಕ ಬರೆದಿದ್ದೇನೆ. ಒಬ್ಬ ಮನುಷ್ಯನಿಗೆ ಜೀವನದ ವಿವಿಧ ಹಂತಗಳಲ್ಲಿ ಬೇರೆ ಬೇರೆ ರೀತಿಯ ಯೋಚನೆಗಳು ಬರುತ್ತವೆ. ಒಂದು ಯೋಚನೆಯಿಂದ ಮತ್ತೊಂದು ಯೋಚನೆಗಳಿಗೆ ದಾಟಿಕೊಳ್ಳುತ್ತಾ ವಿಕಾಸವಾಗುವ ದಾರಿ ಹೇಗೆ ಎಂಬುದು ಈ ಪುಸ್ತಕದಲ್ಲಿದೆ ಎಂದು ಅವರು ತಮ್ಮ ಈ ಹೊಸ ಪುಸ್ತಕದ ಪರಿಚಯ ಮಾಡಿಕೊಟ್ಟರು.
ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ಜಾಗ ಎಂದರೆ ಲೈಬ್ರರಿ. ಒಬ್ಬ ಲೇಖನ ಎಲ್ಲ ವಿಚಾರಗಳು ಅವರ ಪುಸ್ತಕಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ದಾಖಲಾಗಿರುತ್ತದೆ. ನಾನು ಓದಿರುವುದು, ಕೇಳಿರುವುದು, ಯಾರೋ ಹೇಳಿರುವುದನ್ನು ಈ ಪುಸಕ್ತದಲ್ಲಿ ದಾಖಲಿಸಿದ್ದೇನೆ. ನಾನು ಶಾಲಾ-ಕಾಲೇಜುಗಳಲ್ಲಿ ಮಾಡಿದ ಭಾಷಣಗಳನ್ನು ದಾಖಲಿಸಬೇಕೆಂಬ ಉದ್ದೇಶದಿಂದ ಈ ಪುಸ್ತಕ ಬರೆಯಲು ಮುಂದಾದೆ ಎಂದು ರಮೇಶ್ ಹೇಳಿದರು.
ಅನಂತ್ ನಾಗ್ ಬೋಧಿವೃಕ್ಷ
ಹಿರಿಯ ನಟ ಅನಂತ್ ನಾಗ್ ಮತ್ತು ತಮ್ಮ ನಡುವಿನ ಸಂಬಂಧವನ್ನು ಲಘುಹಾಸ್ಯದ ಶೈಲಿಯಲ್ಲಿ ವಿವರಿಸುತ್ತಾ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದ ರಮೇಶ್ ಅರವಿಂದ್, ಅನಂತ್ ನಾಗ್ ಮನೆಗೆ ಹೋದರೆ ಬರಲು ಇಷ್ಟವೇ ಆಗುವುದಿಲ್ಲ. ಇದಕ್ಕೆ ಎರಡು ಕಾರಣ. ಒಂದು ಅನಂತ್‌ನಾಗ್ ತಮ್ಮ ಅನುಭವ ಮತ್ತು ವಿದ್ವತ್ತಿನಿಂದ ತಿಳಿಸುವ ವಿಚಾರಗಳು. ಅವರೊಂದು ಬೋಧಿವೃಕ್ಷ. ಅವರ ಬಳಿ ಮಾತನಾಡುತ್ತಾ ಕುಳಿತರೆ ತಿಳಿಯಲು ಬಹಳಷ್ಟು ವಿಷಯಗಳಿರುತ್ತವೆ. ಹಾಗೆಯೇ ಅನಂತ್‌ನಾಗ್ ಅವರ ಪತ್ನಿ ನಟಿ ಗಾಯತ್ರೀ ಅವರು ಮಾಡಿಕೊಡುವ ಬಿಸಿಬಿಸಿ ಬೆಣ್ಣೆ ದೋಸೆ ನಮ್ಮನ್ನು ಹಿಡಿದಿಡುತ್ತದೆ ಎಂದು ವಿವರಿಸಿದರು.
ಜಿ- ಕನ್ನಡ ಚಾನೆಲ್‌ನ ಬಿಸ್ನೆಸ್ ಹೆಡ್ ರಾಘವೇಂದ್ರ ಹುಣಸೂರ್ ಮಾತನಾಡಿ, ರಮೇಶ್ ಅರವಿಂದ್ ತಮ್ಮನ್ನು ಎಂದೂ ಹೊಗಳಿಕೊಂಡಿದ್ದು ನೋಡಿಲ್ಲ. ಹಾಗೆಯೇ ಅವರು ಬೇರೆಯವರನ್ನು ತೆಗಳುವುದೂ ಇಲ್ಲ. ಅವರು ಹೇಗೆ ಖುಷಿ ಖುಷಿಯಾಗಿರುತ್ತಾರೋ ಹಾಗೆಯೇ ಈ ಪುಸ್ತಕವೂ ಇದೆ. ಅವರು ಸದಾ ಖುಷಿಯಿಂದ ನಗುತ್ತಾ ಬದುಕಿಗೊಂದು ಪೋಸ್ ಕೊಡುತ್ತಿರುತ್ತಾರೆ. ರಮೇಶ್ ಎಂದರೆ ಪಾಸಿಟಿವ್ ಎನರ್ಜಿ ಎಂದು ಅವರ ವ್ಯಕ್ತಿತ್ವವನ್ನು ಬಣ್ಣಿಸಿದರಲ್ಲದೆ, ಪುಸ್ತಕ ಬರೆಯುವ ಹಿರೋ ನಮ್ಮಲ್ಲಿದ್ದಾರೆ ಎಂಬುದೇ ಪುಣ್ಯದ ವಿಷಯ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪುಸ್ತಕದ ಕುರಿತು ಮಾತನಾಡಿದ ಲೇಖಕ ಹಾಗೂ ಪತ್ರಕರ್ತ ಜೋಗಿ, ನಾವು ಪತ್ರಕರ್ತರಾಗಿ ರಮೇಶ್ ಅವರ ಬಾಯಿಂದ ಕೆಟ್ಟ ಮಾತು ಬರಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಆದರೆ ಕಳೆದ 24 ವರ್ಷಗಳಿಂದ ಸಾಧ್ಯವಾಗಿಲ್ಲ. ಅವರ ಬಳಿ ಯಾರ ಬಗ್ಗೆಯಾದ್ರೂ ನೆಗೆಟಿವ್ ಮಾತಾಡಿದ್ರೆ ಅದನ್ನವರು ಪಾಸಿಟಿವ್ ಆಗಿ ತಿರುಗಿಸಿ, ಮಾತುಕತೆ ಮುಂದುವರಿಸುತ್ತಾರೆ ಎಂದರು.
ಬಿಡುಗಡೆಯ ದಿನವೇ ಪುಸ್ತಕ ಸೋಲ್ಡ್ ಔಟ್
ಪುಸ್ತಕ ಬಿಡುಗಡೆಯಾದ ದಿನವೇ ಒಂದು ಎಡಿಷನ್‌ನ ಪ್ರತಿಗಳು ಸಂಪೂರ್ಣ ಮಾರಾಟವಾಗಿ ದಾಖಲೆ ಬರೆಯಲಾಗಿದೆ. ಈ ವಿಷಯವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಕಟಿಸುತ್ತಿದ್ದಂತೆಯೇ ಸಭಿಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಈ ಪುಸ್ತಕ ಇಂಗ್ಲಿಷ್‌ನಲ್ಲಿಯೂ ಬರಲಿದೆ ಎಂದು ಸಾವಣ್ಣ ಪ್ರಕಾಶನದ ಜಮೀಲ್ ಪ್ರಕಟಿಸಿದರು. ನಟ, ನಿರ್ದೇಶಕ ಟಿ ಎನ್ ಸೀತಾರಾಮ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ| Sunday Read | ಹೋಗಲೇಬೇಕಾದ ಬುಕ್ ಕೆಫೆಗಳಿವು: ಇಲ್ಲಿ ಕಾಫಿ ಹೀರಿ, ಪುಸ್ತಕ ಓದಿ, ಕೊಳ್ಳಿ!