Site icon Vistara News

ಭಗತ್‌ ಸಿಂಗ್‌ ಜನ್ಮದಿನ | ಗಲ್ಲಿಗೇರುವಾಗಲೂ ನಗುತ್ತಾ ದೇಶವೇ ಮೊದಲೆಂದ ಧೀರ

bhagat singh birthday

– ಮಯೂರಲಕ್ಷ್ಮಿ

ಅದು ಬ್ರಿಟಿಷ್ ಆಡಳಿತದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹೊಸ ಆಯಾಮವನ್ನು ಪಡೆದ ಸಮಯ. ಭಾರತದ ಯುವ ಕ್ರಾಂತಿಕಾರೀ ನಾಯಕರು ತಮ್ಮದೇ ಸಂಘಟನೆಯ ಕಾರ್ಯಚಟುವಟಿಕೆಗಳ ಮೂಲಕ ಗುರಿ ತಲುಪಲು ನಿರ್ಧರಿಸಿದ್ದರು. ಅವರು “ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ” (ಹೆಚ್.ಎಸ್.ಆರ್.ಏ) ಎನ್ನುವ ಸೇನೆಯ ಉತ್ಸಾಹೀ ಯುವಕರು. ಬ್ರಿಟಿಷರ ವಿರುದ್ಧ ಹೋರಾಡುವುದರೊಂದಿಗೆ ಸಂಪೂರ್ಣ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಸಾಧಿಸುವುದು ಅವರ ಧ್ಯೇಯವಾಗಿತ್ತು. ಸಶಸ್ತ್ರ ಹೋರಾಟಕ್ಕಾಗಿ ಸೇನೆಯನ್ನು ಸಜ್ಜಾಗಿಸಲು ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಂಡರು. ತಮ್ಮ ಕಾರ್ಯಚಟುವಟಿಕೆಗಳಿಗೆ ಸಾರ್ವಜನಿಕರ ಹಣ ಪಡೆಯದೆ ಬ್ರಿಟಿಷರು ಅನ್ಯಾಯವಾಗಿ ದೋಚಿದ್ದ ಹಣವನ್ನು ಬ್ಯಾಂಕ್ ಮತ್ತು ಖಜಾನೆಗಳಿಂದ ಲೂಟಿ ಮಾಡುವುದು. ಯಾವುದೇ ಸಾವು-ನೋವುಗಳಿಗೆ ಅವಕಾಶ ಕೊಡದೆ ಸರ್ಕಾರಿ ಅಧಿಕಾರಿಗಳು ಮತ್ತು ಪೋಲಿಸರನ್ನು ಧೈರ್ಯವಾಗಿ ಎದುರಿಸುವುದು. ಎಲ್ಲರೂ ತಮ್ಮ ಕರ್ತವ್ಯ ಮತ್ತು ಜವಾವ್ದಾರಿಗಳನ್ನರಿತು ಮುಂದೆ ಹೆಜ್ಜೆಗಳನ್ನಿರಿಸುವುದು ಮೂರನೆಯ ಮತ್ತು ಮುಖ್ಯ ನಿರ್ಣಯ. ಅವರಲ್ಲಿದ್ದ ತುಡಿತ “ದೇಶ ಮೊದಲು” ಎನ್ನುವುದಾಗಿತ್ತು.

ಬ್ರಿಟಿಷರ ಆಳ್ವಿಕೆಯಲ್ಲಿ ಸೋತು ಸೊರಗಿದ್ದ ಭಾರತೀಯರಿಗೆ ಅಂದಿನ ಕ್ರಾಂತಿಕಾರಿಗಳು ಭರವಸೆಯ ಬೆಳಕಾದರು. ಪ್ರತಿಯೊಂದು ಮನೆಯಲ್ಲೂ ಒಬ್ಬ ಯೋಧ ಸಿದ್ಧನಾಗತೊಡಗಿದ. ಅಂತಹುದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮವನ್ನು ಹೊಸ ದಿಶೆಗೆ ಹೊತ್ತೊಯ್ದವನು ಯುವ ನಾಯಕ ಭಗತ್ ಸಿಂಗ್.

ಪಂಜಾಬಿನ ಲ್ಯಾಲಾಪುರ್ ಜಿಲ್ಲೆಯ “ಬಾಂಗಾ” ಎಂಬ ಹಳ್ಳಿಯಲ್ಲಿ 28 ಸೆಪ್ಟೆಂಬರ್, 1907ರಂದು ಸಿಖ್ ಸಮುದಾಯದ ಪರಿವಾರವೊಂದರಲ್ಲಿ ಜನ್ಮ ತಳೆದವನು “ಸರ್ದಾರ್” ಭಗತ್ ಸಿಂಗ್. ಅವನ ಪರಿವಾರದ ಹಿರಿಯರು ಭಾರತದ “ಗದಾರ್” ಪಕ್ಷದಲ್ಲಿ ಕ್ರಾಂತಿಕಾರೀ ಹೋರಾಟಗಾರರಾಗಿದ್ದರು. ಭಗತ್‍ನ ತಂದೆ ಕಿಶನ್ ಸಿಂಗ್ ಮತ್ತು ತಾಯಿ ವಿದ್ಯಾವತಿ. ತಂದೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ತಂದೆಯ ಸಹೋದರ ಸ್ವರ್ಣ ಸಿಂಗ್‍ರವರು ಬ್ರಿಟಿಷರಿಂದ ಸೆರೆಮನೆಯಲ್ಲಿ ಮೃತಪಟ್ಟಿದ್ದರು.

ಭಗತ್ ಬ್ರಿಟಿಷರ ಆಂಗ್ಲ ಶಾಲೆಯನ್ನು ತಿರಸ್ಕರಿಸಿ ದಯಾನಂದ ಸರಸ್ವತಿಯವರ ಆರ್ಯ ಸಮಾಜದ ಸಂಸ್ಕಾರದಲ್ಲಿ ಶಿಕ್ಷಣ ಪಡೆದ. ಬಾಲ್ಯದಿಂದಲೇ ದೇಶಭಕ್ತಿಯ ಕಿಚ್ಚನ್ನು ಹೊತ್ತಿದ್ದ ಭಗತ್ ನಂತರ ಲಾಲಾ ಲಜಪತ್ ರಾಯರ ಕಾಲೇಜು ಸೇರಿ ವಿದ್ಯಾಭ್ಯಾಸ ಮುಂದುವರೆಸಿದ. ಶಾಲಾ-ಕಾಲೇಜು ಹಂತದಲ್ಲಿಯೇ ಭಗತ್ ಸ್ವಾತಂತ್ರ್ಯದ ಕನಸನ್ನು ಹೊತ್ತಿದ್ದು, ನಾಟಕ ಪ್ರಾತ್ಯಕ್ಷಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ, ಅತ್ಯುತ್ತಮ ವಾಗ್ಮಿಯಾಗಿದ್ದ. ದೇಶಭಕ್ತಿಯನ್ನು ಪ್ರತಿಬಿಂಬಿಸುವ ಗೀತೆಗಳನ್ನೂ ರಚಿಸಿ ಹಾಡುತ್ತಿದ್ದ. 1920ರಲ್ಲಿ ಗಾಂಧೀಜಿಯವರೊಂದಿಗೆ ಬ್ರಿಟಿಷರ ವಿರುದ್ಧದ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡ. ಸ್ವಗೃಹವನ್ನೂ ತೊರೆದು ದೇಶದಲ್ಲೆಲ್ಲಾ ಸಂಚರಿಸಿ ಎಲ್ಲರನ್ನೂ ಸಂಘಟಿಸಿಲು ಆರಂಭಿಸಿದ.

ಅವನನ್ನು ಅತ್ಯಂತ ವಿಚಲಿತಗೊಳಿಸಿದ್ದು ಬ್ರಿಟಿಷರ ಅಮಾನುಷ ದೌರ್ಜನ್ಯದಿಂದ ಲಾಲಾ ಲಜಪತ್ ರಾಯ್‍ರವರ ಮೃತ್ಯು. ಸೈಮನ್ ಕಮಿಷನ್ ಭಾರತಕ್ಕೆ ಬರುವುದನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಲಾಠೀ ಚಾರ್ಜ್ ಆಜ್ಞೆಯಿತ್ತವನು ಪೋಲೀಸ್ ಸುಪರಿಂಟೆಂಡೆಂಟ್‌ ಸ್ಕಾಟ್. ಅದರಂತೆ ಲಾಲಾರವರ ಮೇಲೆ ರಕ್ತಸ್ರಾವವಾಗುವಂತೆ ಲಾಠಿಯಿಂದ ಬೀಸಿ ಬೀಸಿ ಹೊಡೆದ ಸ್ಯಾಂಡರ್ಸ್. ಪರಿಣಾಮ ತಮ್ಮ ಹಿರಿಯ ಮಾರ್ಗದರ್ಶಿ ನಾಯಕರನ್ನು ಅವರು ಕಳೆದುಕೊಂಡರು. ಅಂದಿನಿಂದ ಬ್ರಿಟಿಷರ ವಿರುದ್ಧ ಭಗತ್‌ ಸಶಸ್ತ್ರ ಸಮರ ಸಾರಿದರು.

ಇದನ್ನೂ ಓದಿ | Bhagat Singh Birthday | ಕ್ರಾಂತಿಕಾರಿ ಕುರಿತು ತಿಳಿಯಲೇಬೇಕಾದ 10 ಕುತೂಹಲಕಾರಿ ಸಂಗತಿಗಳು

ಡಿಸೆಂಬರ್ 17, 1928ರಂದು ಭಗತ್ ಸಿಂಗ್ ತನ್ನ ಸ್ನೇಹಿತರಾದ ಆಜಾದ್, ರಾಜಗುರು, ಸುಖದೇವ್ ಮತ್ತು ಜಯಗೋಪಾಲ್‍ರವರೊಂದಿಗೆ ಸ್ಯಾಂಡರ್ಸ್‍ನನ್ನು ಅಂತ್ಯಗೊಳಿಸುವ ಯೋಜನೆ ಹೂಡಿದ. ಲಾಹೋರಿನ ಡಿ.ಏ.ವಿ ಕಾಲೇಜಿನ ಆವರಣದಲ್ಲಿ ತನ್ನ ಮೋಟಾರ್ ಬೈಕಿನಲ್ಲಿ ಬಂದಿಳಿದ ಸ್ಯಾಂಡರ್ಸ್‍ನ ಮೇಲೆ ಮೊದಲು ರಾಜಗುರು ತನ್ನ ರಿವಾಲ್ವರಿನಿಂದ ಗುಂಡು ಹಾರಿಸಿದ. ತಡಮಾಡದೆ ಭಗತ್ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಅವನ ತಲೆ ಚೂರಾಗುವವರೆಗೂ ಸತತವಾಗಿ ಗುಂಡು ಹಾರಿಸಿದ. ಸ್ಯಾಂಡರ್ಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದ.
ಇದು ಭಗತ್ ಮತ್ತವನ ಸೇನೆಯ ಮೊದಲ ಗೆಲುವಾಗಿತ್ತು.

ಮುಂದೆ ಬ್ರಿಟಿಷ್ ಸರ್ಕಾರದ ಕಣ್ಣು ತಪ್ಪಿಸಿ ವೇಷ ಮರೆಸಿಕೊಂಡು ಓಡಾಡತೊಡಗಿದರು. ಅದಕ್ಕೂ ಕಾರಣವಿತ್ತು. ತಮ್ಮೆಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರುವವರೆಗೂ ಬ್ರಿಟಿಷರ ಕೈವಶವಾಗಬಾರದು. ಮತ್ತೊಂದೆಡೆ ರಹಸ್ಯವಾಗಿ ನಡೆಯುತ್ತಿದ್ದ ಬಾಂಬ್ ತಯಾರಿ ಯಶಸ್ವಿಯಾಯಿತು. ಏಪ್ರಿಲ್ 8, 1929. ಸೆಂಟ್ರಲ್ ಅಸೆಂಬ್ಲಿ ಹಾಲ್‍ನಲ್ಲಿ ಸರಕಾರದ ಮುಂದಿನ ನಿರ್ಧಾರಗಳನ್ನು ಕುರಿತು ಅಧಿವೇಶನ ನಡೆಯುತ್ತಿತ್ತು. ಭಗತ್ ಮತ್ತವನ ಸ್ನೇಹಿತ ಬ್ರತುಕೇಶ್ವರ ದತ್ ಸಂಸತ್ ತಲುಪಿ ವೀಕ್ಷಕರ ಆಸನಗಳಲ್ಲಿ ಕುಳಿತಿದ್ದರು. ಭಾಷಣ ಮುಕ್ತಾಯವಾದೊಡನೆ ಸ್ಪೀಕರ್ ಕುಳಿತಿದ್ದ ಸ್ಥಾನದ ಹಿಂದಿನ ಗೋಡೆಯ ಮೇಲೆ ಸರಿಯಾಗಿ ಗುರಿಯಿಟ್ಟು ಬಾಂಬ್ ಎಸೆದರು. ಬೃಹತ್ ಸ್ಫೋಟವಾದರೂ ಯಾವುದೇ ಸಾವು-ನೋವುಗಳಾಗಲಿಲ್ಲ. “ಇನ್‍ಕ್ವಿಲಾಬ್ ಜಿಂದಾಬಾದ್” ಎಂಬ ನಿರಂತರ ಹೋರಾಟದ ಘೋಷಣೆ ಅವರಿಂದ ಕೇಳಿಬಂತು. ಕೂಡಲೇ ಪೋಲೀಸರು ಅವರನ್ನು ಬಂಧಿಸಿದರು.

ಇದನ್ನೂ ಓದಿ | Bhagat Singh | ಜನ್ಮದಿನಕ್ಕೆ 3 ದಿನ ಬಾಕಿ ಇರುವಾಗಲೇ ಚಂಡೀಗಢ ಏರ್‌ಪೋರ್ಟ್‌ಗೆ ಭಗತ್‌ ಸಿಂಗ್ ಹೆಸರು, ಮೋದಿ ಘೋಷಣೆ

ಅವರನ್ನು ಸೆಂಟ್ರಲ್ ಜೈಲಿನಲ್ಲಿರಿಸಲಾಯಿತು. ನಾನಾ ರೀತಿಯ ಚಿತ್ರಹಿಂಸೆಗಳನ್ನು ನೀಡಲಾಯ್ತು. ಆದರೆ ಭಗತ್ ಸಿಂಗ್ ಅಸಾಮಾನ್ಯ ಮನೋಬಲವನ್ನು ಹೊಂದಿದ್ದ ಧೀರ. ಸೆರೆಯಲ್ಲಿದ್ದ ಭಾರತೀಯ ಕೈದಿಗಳನ್ನು ಅಮಾನುಷವಾಗಿ ಬ್ರಿಟಿಷರು ನಡೆಸಿಕೊಳ್ಳುತ್ತಿದ್ದ ರೀತಿಯನ್ನೂ ಕಂಡು ಕ್ರೋಧಗೊಂಡ. ಅವನ ಸ್ನೇಹಿತ ಯತೀಂದ್ರನಾಥ್ ಸತತ ಹಿಂಸೆ ಮತ್ತು ಉಪವಾಸದ ಪರಿಣಾಮವಾಗಿ ಸೆರೆಯಲ್ಲಿ ಮೃತರಾದರು. ಇದನ್ನು ಖಂಡಿಸಿದ ಭಗತ್ ಸಿಂಗ್ ಮತ್ತವನ ಸಹಚರರು ಮತ್ತೊಂದು ಸತ್ಯಾಗ್ರಹಕ್ಕೆ ಮುಂದಾದರು. ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಭಗತ್‍ನ ಕಾರ್ಯವನ್ನು ಜೀವಹಾನಿಗಾಗಿ ಮಾಡಿದ ಕೃತ್ಯವೆಂದು ಬಿಂಬಿಸಲಾಯಿತು. ವೈಸ್‍ರಾಯ್ ನೇತೃತ್ವದಲ್ಲಿ ವಿಚಾರಣೆಗಾಗಿ ವಿಶೇಷ ಟ್ರಿಬ್ಯುನಲ್ ನೇಮಿಸಲಾಯಿತು. ಭಗತ್ ಮತ್ತವನ ಸಂಗಡಿಗ ಬತುಕೇಶ್ವರ ದತ್ತರ ವಿಚಾರಣೆ 1929ರ ಮೇ 7ರಂದು ಆರಂಭವಾಯ್ತು.

ಭಗತ್ ತನ್ನ ಪರವಾಗಿ ತಾನೇ ವಾದಿಸಲು ನಿರ್ಧರಿಸಿದ. ಅವನ ವಿಚಾರಸರಣಿ ಮತ್ತು ವಾದಕ್ಕೆ ಎಲ್ಲರೂ ಬೆರಗಾದರು. ಭಗತ್ ತನ್ನ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಎಲ್ಲರ ಮುಂದಿಟ್ಟ. ಚುನಾಯಿತರಾಗಿದ್ದ ಭಾರತೀಯ ಪ್ರತಿನಿಧಿಗಳ ವಿರುದ್ಧ ಬ್ರಿಟಿಷರು ನಡೆಸಿದ ದಬ್ಬಾಳಿಕೆಯ ವಿರುದ್ಧ ತನ್ನದು ಪ್ರತಿರೋಧ ಎಂದು ವಾದಿಸಿದ. ಸತತವಾಗಿ ವಾದ-ಪ್ರತಿವಾದಗಳ ಪ್ರಕ್ರಿಯೆ ಮೇ 7ರಿಂದ ಆರಂಭವಾಗಿ ಅಕ್ಟೋಬರ್ 7ರವರೆಗೂ ಮುಂದುವರೆಯಿತು. 400 ಪುಟಗಳನ್ನು ಹೊತ್ತಿದ್ದ ಟ್ರಿಬ್ಯುನಲ್ ವರದಿ ಅಂತಿಮವಾಗಿ ಸತತ ವಿಚಾರಣೆಗಳ ನಂತರ ತನ್ನ ತೀರ್ಪು ನೀಡಿತು. ಎಲ್ಲೆಡೆ ಭಗತ್ ಸಿಂಗ್‍ನ ಗುಣಗಾನ ಕೇಳಿಬಂದಿತು. ದೇಶದ ನೆಚ್ಚಿನ ಯುವಶಕ್ತಿಯ ಸಂಕೇತವಾಗಿದ್ದ. ಎಲ್ಲಾ ಕೃತ್ಯಗಳ ಹಿಂದೆ ಸುಖದೇವ್ ಕೈವಾಡವಿತ್ತೆಂದು ಅವನನ್ನು ಮತ್ತು ಸಂಘಟನೆಯ ಇತರ ಸಹಚರರನ್ನೂ ಲಾಹೋರಿನಲ್ಲಿ ಬಂಧಿಸಿಟ್ಟರು. ಸ್ಯಾಂಡರ್ಸ್ ಕೊಲೆ ಮತ್ತು ಲಾಹೋರ್ ಕಾನೂನು ವಿರೋಧಿ ಕಾರ್ಯಾಚರಣೆಯ ಆಪಾದನೆ ಹೇರಲಾಗಿತ್ತು. ಅನೇಕ ದಿನಗಳ ವಿಚಾರಣೆಗಳ ನಂತರ ಭಗತ್‍ನ ವಾದಗಳೆಲ್ಲವೂ ತಿರಸ್ಕೃತಗೊಂಡವು. ಭಗತ್ ಸಿಂಗ್, ರಾಜ್‍ಗುರು ಮತ್ತು ಸುಖದೇವ್ ಅವರನ್ನು 24 ಮಾರ್ಚ್ 1931ರಂದು ನೇಣುಕಂಬಕ್ಕೇರಿಸಬೇಕೆಂದು ನ್ಯಾಯಾಲಯ ತೀರ್ಪು ನೀಡಿತು.

ತೀರ್ಪನ್ನು ಆಲಿಸಿದ ಭಗತ್ ಹೆದರಲಿಲ್ಲ. ಭಾರತಮಾತೆಗಾಗಿ ತನ್ನ ತ್ಯಾಗ ಮುಂದಿನ ಕ್ರಾಂತಿಯ ಸಂಕೇತವಾಗಲಿ ಎಂದ. ಗಲ್ಲುಶಿಕ್ಷೆಯನ್ನು ತಡೆಯಲು ಸಂಘಟನೆಯ ನಾಯಕರು ಮತ್ತು ಇತರ ಹೋರಾಟಗಾರರು ನಡೆಸಿದ ಪ್ರಯತ್ನಗಳು ಕಾನೂನಿನ ತೀರ್ಪನ್ನು ಬದಲಿಸಲು ಅಸಮರ್ಥವಾಯಿತು. ಅವಧಿಗೆ ಒಂದು ದಿನ ಮೊದಲೇ ಅಂದರೆ ಮಾರ್ಚ್ 23ರಂದೇ ಅವರನ್ನು ನೇಣುಗಂಬಕ್ಕೆ ಕರೆದೊಯ್ದರು. ಸಾಯುವ ಮುನ್ನ ತನ್ನ ಕೊನೆಯ ಆಸೆ ಭಗತ್ ತಿಳಿಸಿದ ಒಮ್ಮೆ ಜೋರಾಗಿ ತನ್ನ ದೇಶಕ್ಕಾಗಿ ಘೋಷಣೆ ಕೂಗಬೇಕೆಂದ. “ಇನ್‍ಕ್ವಿಲಾಬ್ ಜಿಂದಾಬಾದ್” ಎನ್ನುತ್ತಾ ನಗುನಗುತ್ತಾ ನೇಣುಗಂಬವನ್ನೇರಿದ. ಸ್ವತಃ ತಾನೇ ಕುಣಿಕೆಯನ್ನು ತನ್ನ ಕತ್ತಿಗೆ ಬಿಗಿದುಕೊಂಡು ತನ್ನ ಸ್ನೇಹಿತರೊಂದಿಗೆ ಬಲಿದಾನಿಯಾದ.

Exit mobile version