ಡಾ.ಎಸ್.ಹೇಮಲತಾ ಅವರು ರಚಿಸಿರುವ ʼಪ್ರಾಚೀನ ಭಾರತದ ಮಹರ್ಷಿಗಳುʼ ಕೃತಿ ನಮ್ಮ ನೆಲದಲ್ಲಿ ಆಗಿಹೋದ ಉದ್ದಾಮ ಸಾಧಕರ, ಋಷಿಗಳ, ಮಂತ್ರದ್ರಷ್ಟಾರರ ಕಥೆಗಳನ್ನು ಹೇಳುತ್ತದೆ. ಇದರಿಂದ ಆಯ್ದ ʼಉತ್ತಂಕʼ ಎಂಬ ಮಹರ್ಷಿಯ ಕಥೆ ಇಲ್ಲಿದೆ. ಇದನ್ನು ರಾಷ್ಟ್ರೋತ್ಥಾನ ಪ್ರಕಾಶನ ಪ್ರಕಟಿಸಿದೆ.
- ಡಾ. ಎಸ್. ಹೇಮಲತಾ
ಉತ್ತಂಕನು ಕುಲಪತಿಗಳಾದ ಗೌತಮರ ಬಳಿಯಲ್ಲಿ ಅಧ್ಯಯನ ಮಾಡುತ್ತಿದ್ದನು. ಅವನು ಮಹಾತಪಸ್ವಿಯೂ ತೇಜಸ್ವಿಯೂ ಆಗಿದ್ದನು. ಅವನ ಗುರುಭಕ್ತಿಯೂ ಅಪ್ರತಿಮವಾಗಿದ್ದಿತು. ಅವನು ಗುರುವನ್ನಲ್ಲದೆ ಬೇರೆ ಯಾವ ದೇವರನ್ನೂ ಆರಾಧಿಸುತ್ತಿರಲಿಲ್ಲ. ಉಳಿದ ಶಿಷ್ಯರೆಲ್ಲರೂ ಅವನ ಗುರುಭಕ್ತಿಯನ್ನು ಕಂಡು ಆಶ್ಚರ್ಯಪಡುತ್ತಿದ್ದರು. ಗುರುಗಳಾದ ಗೌತಮರೂ ಉತ್ತಂಕನಲ್ಲಿ ವಿಶೇಷವಾದ ಅಭಿಮಾನವನ್ನು ಇಟ್ಟಿದ್ದು, ಉತ್ತಂಕನ ಇಂದ್ರಿಯಸಂಯಮ, ಅಂತಃಶುದ್ಧಿ, ಶ್ರದ್ಧೆಗಳನ್ನು ಕಂಡು ಅವರು ಬಹಳ ಪ್ರೀತರಾಗಿದ್ದರು. ವಿದ್ಯಾಭ್ಯಾಸ ಮುಗಿಸಿ ಅನೇಕ ಶಿಷ್ಯರು ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರೂ ಗೌತಮರು ಉತ್ತಂಕನಿಗೆ ಮಾತ್ರ ಮನೆಗೆ ತೆರಳಲು ಅನುಮತಿಯನ್ನು ಕೊಡಲಿಲ್ಲ. ಉತ್ತಂಕನನ್ನು ಬಿಟ್ಟುಕೊಡಲು ಅವರಿಗೆ ಇಷ್ಟವಿರಲಿಲ್ಲ.
ಹೀಗೆಯೇ ಅನೇಕ ವರ್ಷಗಳು ಕಳೆದುಹೋದವು. ಉತ್ತಂಕನನ್ನು ಮುಪ್ಪು ಆವರಿಸತೊಡಗಿತು. ಆದರೆ ಗುರುಸೇವೆಯಲ್ಲಿಯೇ ಮಗ್ನನಾಗಿದ್ದ ಅವನಿಗೆ ತನಗೆ ವಯಸ್ಸಾದ ಬಗ್ಗೆಯೂ ಯೋಚನೆಯಿರಲಿಲ್ಲ. ಒಮ್ಮೆ ಅವನು ಕಟ್ಟಿಗೆಯನ್ನು ತರಲು ಕಾಡಿಗೆ ಹೋಗಿದ್ದನು. ಅಲ್ಲಿ ಅವನು ಸಂಗ್ರಹಿಸಿದ ಕಟ್ಟಿಗೆಯ ಹೊರೆಯು ಬಹಳ ಭಾರವಾಯಿತು. ಆದರೂ ಅದನ್ನು ಹೊತ್ತುಕೊಂಡು ಆಶ್ರಮದ ಕಡೆಗೆ ಹೊರಟನು. ಆದರೆ ವಯಸ್ಸಿನ ಕಾರಣದಿಂದ ಅವನಿಗೆ ಅಷ್ಟು ಭಾರವನ್ನು ಹೊತ್ತು ನಡೆಯಲು ಆಗಲೇ ಇಲ್ಲ. ಸೌದೆಯ ಹೊರೆಯನ್ನು ಮೈಮೇಲೆ ಕೆಡವಿಕೊಂಡು ಅವನು ನೆಲದ ಮೇಲೆ ಬಿದ್ದು ಬಿಟ್ಟನು. ಅವನ ಜಟೆಯ ಕೂದಲೂ ಸೌದೆ ಹೊರೆಯ ಮಧ್ಯೆ ಸಿಲುಕಿಕೊಂಡಿತ್ತು. ಅವನು ನೋವಿನಿಂದ ಜೋರಾಗಿ ಅಳತೊಡಗಿದನು.
ಆ ಸಮಯದಲ್ಲಿ ಅಲ್ಲಿಗೆ ಗುರುಗಳು ಪುತ್ರೀಸಮೇತರಾಗಿ ಬಂದರು. ಗುರುಗಳು ಉತ್ತಂಕನ ಕಣ್ಣೀರನ್ನು ಕೈಗಳಲ್ಲಿ ಹಿಡಿಯುವಂತೆ ಮಗಳಿಗೆ ಹೇಳಿದರು. ಗೌತಮರ ಪುತ್ರಿಯು ಅದರಂತೆ ಉತ್ತಂಕನ ಕಣ್ಣೀರಿಗೆ ಬೊಗಸೆಯನ್ನು ಒಡ್ಡಿದಳು. ಕೂಡಲೇ ಅವಳ ಕೈಗಳು ಸುಟ್ಟು ಕಣ್ಣೀರು ಕೆಳಗೆ ಬಿದ್ದಿತು. ಕೆಳಗೆ ಬಿದ್ದ ಅಶ್ರುಬಿಂದುಗಳನ್ನು ಧರಿಸಲು ಭೂದೇವಿಗೂ ಸಾಧ್ಯವಾಗಲಿಲ್ಲ. ಆಗ ಗೌತಮರು ಉತ್ತಂಕನನ್ನು ಅವನ ಶೋಕದ ಕಾರಣವನ್ನು ಕೇಳಿದರು.
ಆಗ ಉತ್ತಂಕನು “ಗುರುದೇವನೇ! ನಾನು ನಿಮ್ಮ ಸೇವೆಯಲ್ಲಿಯೇ ನನ್ನ ಜೀವನವನ್ನು ಕಳೆದೆ, ನನ್ನ ಮನಸ್ಸಿನಲ್ಲಿ ಬೇರೆ ಭಾವನೆಗಳೇ ಇಲ್ಲದುದರಿಂದ ನೂರು ವರ್ಷಗಳನ್ನು ಇಲ್ಲಿ ಕಳೆದುದಾಗಲೀ ನನ್ನನ್ನು ಮುಪ್ಪು ಆವರಿಸಿದುದಾಗಲೀ ನನಗೆ ತಿಳಿಯಲೇ
ಇಲ್ಲ. ನನ್ನ ನಂತರ ಬಂದ ಸಾವಿರಾರು ಶಿಷ್ಯರು ತಮ್ಮ ಅನುಜ್ಞೆಯನ್ನು ಪಡೆದು ಊರಿಗೆ ಹಿಂತಿರುಗಿದರೂ ತಾವು ನನಗೆ ಅಪ್ಪಣೆಯನ್ನೇ ಕೊಡಲಿಲ್ಲ” ಎಂದನು. ಗೌತಮರು, “ಮಗು! ಅನವರತ ನೀನು ಮಾಡುತ್ತಿರುವ ಸೇವೆಯಿಂದ ನನಗೆ ಅತ್ಯಂತ ಪ್ರೀತಿಯುಕ್ತನಾಗಿದ್ದ ನಿನ್ನನ್ನು ಅಗಲಲು ಮನಸ್ಸು ಬರಲೇ ಇಲ್ಲ. ಈಗ ನಿನಗೆ ನಿನ್ನ ಊರಿಗೆ ಹೋಗುವ ಶ್ರದ್ಧೆಯಿದ್ದರೆ ನೀನು ಹೋಗಬಹುದು” ಎಂದು ಹೇಳಿದರು.
ಇದನ್ನೂ ಓದಿ: ಹೊಸ ಪುಸ್ತಕ : ಯಕ್…!
ಆಗ ಉತ್ತಂಕನು ತಾನು ಗುರುದಕ್ಷಿಣೆಯನ್ನು ಕೊಟ್ಟು ಅಲ್ಲಿಂದ ಹೋಗಲು ಬಯಸುವುದಾಗಿ ಹೇಳಿದನು. ಗೌತಮರು ‘ಶುಶೂಷೆಯಿಂದ ಗುರುಗಳನ್ನು ತೃಪ್ತಿಗೊಳಿಸುವುದೇ ಪರಮೋತ್ಕೃಷ್ಟ ಗುರುದಕ್ಷಿಣೆಯೆಂದೂ ಅದು ತನಗೆ ಸಂದಿದೆಯೆಂದೂ’ ಹೇಳಿ
ಉತ್ತಂಕನಿಗೆ ಮತ್ತೆ ಹದಿನಾರರ ಯೌವನವನ್ನು ಕರುಣಿಸಿ ತಮ್ಮ ಮಗಳನ್ನೇ ವಿವಾಹ ಮಾಡಿಕೊಟ್ಟರು.
ಕುಲಪತಿಗಳಾದ ಗೌತಮರ ಅನುಗ್ರಹದಿಂದ ಯೌವನವನ್ನೂ ಯಶೋವತಿಯಾದ ಪತ್ನಿಯನ್ನೂ ಪಡೆದು ಉತ್ತಂಕನು ಸಂತುಷ್ಟನಾದನು. ಗೌತಮರು ಗುರುದಕ್ಷಿಣೆಯು ಸಂದಿದೆಯೆಂದು ಹೇಳಿದರೂ ಉತ್ತಂಕನಿಗೆ ಸಮಾಧಾನವಾಗಲಿಲ್ಲ. ಅವನು ಗುರುಪತ್ನಿಯ ಬಳಿಗೆ ಹೋಗಿ “ತಾಯಿ! ಗುರುದಕ್ಷಿಣಾರೂಪವಾಗಿ ನಿಮಗೆ ಏನನ್ನು ತಂದುಕೊಡಲಿ?ʼʼ ಎಂದು ಕೇಳಿದನು. ಗುರುಪತ್ನಿಯೂ ಗೌತಮರಂತೆಯೇ ‘ಗುರುಸೇವೆಯಿಂದಲೇ ದಕ್ಷಿಣೆಯು ಸಂದಾಯವಾಗಿದೆಯೆಂದು ಹೇಳಿದರೂ ಉತ್ತಂಕನು ಒಪ್ಪಲಿಲ್ಲ. ನಿಮಗೆ ಪ್ರಿಯವಾದುದೇನನ್ನಾದರೂ ತಂದುಕೊಡುವೆನೆಂದು ಮತ್ತೆ ಮತ್ತೆ ಕೇಳುತ್ತಲೇ ಇದ್ದನು.
ಕೊನೆಗೆ ಗೌತಮ ಪತ್ನಿಯಾದ ಅಹಲ್ಯೆಯು, ಸೌದಾಸ ರಾಜನ ಪತ್ನಿಯು ಎರಡು ದಿವ್ಯವಾದ ಕರ್ಣಕುಂಡಲಗಳನ್ನು ಹೊಂದಿದ್ದಾಳೆಂದೂ ಅವುಗಳನ್ನು ತನಗಾಗಿ ತರಬೇಕೆಂದೂ ಕೇಳಿದಳು. ಉತ್ತಂಕನು ಸಂತೋಷದಿಂದ ಅವುಗಳನ್ನು ತರಲು ಹೊರಟನು.
ಸೌದಾಸನೆಂಬ ಆ ರಾಜನು ಶಾಪದ ಕಾರಣದಿಂದ ರಾಕ್ಷಸತ್ವವನ್ನು ಹೊಂದಿದ್ದನು. ಆದರೂ ಉತ್ತಂಕನು ಧೈರ್ಯವಾಗಿ ಆತನ ಬಳಿಗೆ ಹೊರಟನು. ಗೌತಮರಿಗೆ ಈ ವಿಷಯ ತಿಳಿದಾಗ ಅವರು ಶಿಷ್ಯನ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದರು. ಆದರೆ ಉತ್ತಂಕನಿಗೆ ತನ್ನ ಗುರುಭಕ್ತಿಯು ತನ್ನನ್ನು ಕಾಯುವುದೆಂಬ ವಿಶ್ವಾಸವಿದ್ದಿತು. ಅವನು ಕಾಡಿನಲ್ಲಿ ಮಹಾಭಯಂಕರಾಕೃತಿಯ ಸೌದಾಸ ರಾಜನನ್ನು ಸಂಧಿಸಿದನು. ಸೌದಾಸನು ತಾನು ಆಹಾರಕ್ಕಾಗಿ ಹುಡುಕುತ್ತಿದ್ದ ಸಂದರ್ಭದಲ್ಲಿ ಸಿಕ್ಕಿದ ಉತ್ತಂಕನನ್ನು ಭಕ್ಷಿಸಲು ಮುಂದಾದನು. ಉತ್ತಂಕನು ಸ್ವಲ್ಪವೂ ಗಾಬರಿಗೊಳ್ಳದೆ ತಾನು ಗುರುದಕ್ಷಿಣಾರ್ಥವಾಗಿ ಬಂದಿರುವುದಾಗಿ ತಿಳಿಸಿದನು. ಗುರುದಕ್ಷಿಣೆಯನ್ನು ಗುರುಪತ್ನಿಗೆ ಒಪ್ಪಿಸಿ, ಪುನಃ ಹಿಂದಿರುಗಿ ಬಂದು ರಾಕ್ಷಸನಿಗೆ ಆಹಾರವಾಗುವುದಾಗಿ ಹೇಳಿದನು. ಸೌದಾಸನು ಅದಕ್ಕೆ ಒಪ್ಪಿ ಉತ್ತಂಕನಿಗೆ ಏನು ಬೇಕೆಂದು ಕೇಳಿದಾಗ ಉತ್ತಂಕನು ಗುರುಪತ್ನಿಗಾಗಿ ಮಹಾರಾಣಿಯ ಕರ್ಣಕುಂಡಲಗಳನ್ನು ಯಾಚಿಸಿದನು.
ರಾಜನು ಉತ್ತಂಕನಿಗೆ ರಾಣಿಯ ಬಳಿಗೆ ಹೋಗಿ ತಾನು ಹೇಳಿರುವುದಾಗಿ ತಿಳಿಸಬೇಕೆಂದೂ, ಅದರಂತೆ ಕರ್ಣಕುಂಡಲಗಳನ್ನು ನಿಶ್ಚಿತವಾಗಿ ಕೊಡುತ್ತಾಳೆಂದೂ ಹೇಳಿದನು. ರಾಜನ ಮಾತಿನಂತೆ ಉತ್ತಂಕನು ಮಹಾರಾಣಿಯಾದ ಮದಯಂತಿಯನ್ನು ಹುಡುಕಿಕೊಂಡು ಹೊರಟನು. ಅರಣ್ಯದ ಚಿಲುಮೆಯೊಂದರ ಬಳಿಯಿದ್ದ ಅವಳನ್ನು ಕಂಡು ಸೌದಾಸನ ಸಂದೇಶವನ್ನು ತಿಳಿಸಿದನು. ಮಹಾರಾಣಿಯು ದಿವ್ಯವಾದ ಆ ಎರಡು ಕರ್ಣಕುಂಡಲಗಳ ಮಹಿಮೆಯನ್ನು ಉತ್ತಂಕನಿಗೆ ಹೇಳಿದಳು. ದಿವ್ಯವಾದ ಆ ಮಣಿಕುಂಡಲಗಳನ್ನು ಹೊಂದಲು ದೇವತೆಗಳು, ಯಕ್ಷರು, ನಾಗರು, ಎಲ್ಲರೂ ಕಾಯುತ್ತಿದ್ದರು. ಅವರೆಲ್ಲ ಮದಯಂತಿಯಲ್ಲಿ ದೋಷವನ್ನು ಅರಸಲು ಹೊಂಚುಹಾಕುತ್ತಿದ್ದರು.
ಇದನ್ನೂ ಓದಿ: Book Excerpt: ಮೈ ನಡುಗಿಸಿದ ಯೂರಿಯಾ ಪ್ರಕರಣ
ಕುಂಡಲಗಳನ್ನು ನೆಲದ ಮೇಲಿರಿಸಿದರೆ ಸರ್ಪಗಳು ಕೊಂಡೊಯ್ಯುತ್ತವೆಯೆಂದೂ, ಅಶುಚಿಯಾಗಿ ಧಾರಣೆ ಮಾಡಿದರೆ ಅಥವಾ ಅದನ್ನು ಧರಿಸಿ ನಿದ್ದೆ ಮಾಡಿದರೆ ಯಕ್ಷರು ಮತ್ತು ದೇವತೆಗಳು ಅಪಹರಿಸುವರೆಂದೂ ಅವಳು ಹೇಳಿದಳು. ಅದನ್ನು ಧರಿಸಿದವರಿಗೆ ಹಸಿವು ಬಾಯಾರಿಕೆಗಳಿಂದಾಗಲೀ ಅಗ್ನಿ, ವಿಷ ಅಥವಾ ಕಾಡುಪ್ರಾಣಿಗಳಿಂದಾಗಲೀ ಭಯವಿರುವುದಿಲ್ಲ. ಆ ಕುಂಡಲಗಳು ಕುಬ್ಬ ವ್ಯಕ್ತಿ ಧರಿಸಿದರೆ ಚಿಕ್ಕದಾಗುತ್ತವೆ ಮತ್ತು ಸ್ಥೂಲಕಾಯನು ಧರಿಸಿದರೆ ಅವನ ಮೈಗೆ ಹೊಂದಿಕೊಳ್ಳುವ ಗಾತ್ರವನ್ನು ಪಡೆಯುತ್ತವೆ. ಹೀಗೆ ಹೇಳಿದ ಮದಯಂತಿಯು ತಾನು ಅವುಗಳನ್ನು ಕೊಡಲು ಸಿದ್ಧಳಿರುವುದಾಗಿಯೂ ಆದರೆ ತನ್ನ ಪತಿಯಿಂದ ಗುರುತೊಂದನ್ನು ತರುವಂತೆಯೂ ಉತ್ತಂಕನಿಗೆ ಹೇಳಿದಳು.
ಉತ್ತಂಕನು ಪುನಃ ಸೌದಾಸನ ಬಳಿಗೆ ಬಂದು ಅಭಿಜ್ಞಾನವನ್ನು ಪ್ರಾರ್ಥಿಸಿದನು. ಸೌದಾಸನು, “ಪ್ರಿಯೇ! ನಾನೀಗ ಇರುವ ದುಃಸ್ಥಿತಿಯು ಕಲ್ಯಾಣಕರವಾದುದೇನೂ ಅಲ್ಲ. ಈಗಂತೂ ಬೇರೆ ಯಾವ ಮಾರ್ಗವೂ ಇಲ್ಲವಾಗಿದೆ. ನನ್ನ ಅಭಿಪ್ರಾಯವನ್ನು ತಿಳಿದುಕೊಂಡು, ಈ ಬ್ರಾಹ್ಮಣನಿಗೆ ಮಣಿಕುಂಡಲಗಳನ್ನು ಕೊಡು” ಎಂದು ಹೇಳಿಕಳುಹಿಸಿದನು. ಉತ್ತಂಕನು ಅದೇ ಮಾತುಗಳನ್ನು ರಾಣಿಯ ಬಳಿ ಹೋಗಿ ಪುನರುಚ್ಚರಿಸಿದನು. ಆಗ ರಾಣಿಯು ಮಣಿಕುಂಡಲಗಳನ್ನು ಉತ್ತಂಕನಿಗೆ ಕೊಟ್ಟುಬಿಟ್ಟಳು.
ಅವುಗಳನ್ನು ಪಡೆದುಕೊಂಡು ಉತ್ತಂಕನು ಹೋಗುತ್ತಿದ್ದಾಗ ದಾರಿಯಲ್ಲಿ ಅವನಿಗೆ ಹಸಿವಾಯಿತು. ಹತ್ತಿರದಲ್ಲೇ ಇದ್ದ ಫಲಭರಿತ ವೃಕ್ಷವೊಂದನ್ನು ನೋಡಿ ಅದರ ಹಣ್ಣುಗಳಿಗಾಗಿ ಮರವನ್ನು ಹತ್ತಿದನು. ತನ್ನ ಕೃಷ್ಣಾಜಿನದಲ್ಲಿ ಕುಂಡಲಗಳನ್ನು ಭದ್ರವಾಗಿ ಕಟ್ಟಿ ಅದನ್ನು ಕೊಂಬೆಯೊಂದಕ್ಕೆ ಬಿಗಿದು ಹಣ್ಣುಗಳನ್ನು ಉದುರಿಸುತ್ತಿದ್ದನು. ಆಗ ಕೃಷ್ಣಾಜಿನವು ಕೊಂಬೆಯಿಂದ ಕಳಚಿಕೊಂಡು ನೆಲಕ್ಕೆ ಬಿದ್ದಿತು. ಇದನ್ನೇ ಕಾಯುತ್ತಿದ್ದ ತಕ್ಷಕನೆಂಬ ಸರ್ಪವು ಅದನ್ನು ಕಚ್ಚಿಕೊಂಡು ಬಿಲವೊಂದಕ್ಕೆ ನುಸುಳಿಬಿಟ್ಟಿತು. ಮರದ ಮೇಲಿದ್ದ ಉತ್ತಂಕನು ಅದನ್ನು ನೋಡಿ ಚಂಗನೆ ನೆಲಕ್ಕೆ ಜಿಗಿದನು. ಆದರೆ ಸರ್ಪವು ಬಿಲದೊಳಗೆ ಹೊರಟುಹೋಗಿತ್ತು.
ಉತ್ತಂಕನು ಅಲ್ಲಿಯೆ ಬಿದ್ದಿದ್ದ ಒಂದು ಕಡ್ಡಿಯನ್ನು ತೆಗೆದುಕೊಂಡು ಹುತ್ತವನ್ನು ಅಗೆಯತೊಡಗಿದನು. ಕೋಪದಿಂದ ಆ ತಪಸ್ವಿಯು ಮೂವತ್ತೈದು ದಿನಗಳ ಕಾಲ ನಿರಂತರವಾಗಿ ಅಗೆಯುತ್ತಲೇ ಇದ್ದಾಗ, ಭೂದೇವಿಯು ನಡುಗತೊಡಗಿದಳು. ಆಗ ಇಂದ್ರನು ಉತ್ತಂಕನ ಬಳಿಗೆ ಬಂದು, “ಉತ್ತಂಕ, ನೀನು ಈ ಕಡ್ಡಿಯಿಂದ ಸಾವಿರಾರು ಮೈಲಿ ಅಗೆದು, ನಾಗಲೋಕಕ್ಕೆ ಮಾರ್ಗವನ್ನು ನಿರ್ಮಿಸಲು ಆಗುವುದಿಲ್ಲ. ಈ ಪ್ರಯತ್ನವನ್ನು ಬಿಡುವುದೇ ಕ್ಷೇಮ” ಎಂದು ಹೇಳಿದನು. ಆಗ ಉತ್ತಂಕನು ‘ʼತಾನು ಈ ಕಾರ್ಯವನ್ನು ಸಾಧಿಸದಿದ್ದರೆ ಗುರುದ್ರೋಹಿಯಾಗುತ್ತೇನೆಂದೂ, ಹಾಗೆ ಬದುಕುವುದಕ್ಕಿಂತ ಮರಣವೇ ಲೇಸೆಂದೂ’ʼ ಹೇಳಿ, ತನ್ನ ಪ್ರಯತ್ನವನ್ನು ಮುಂದುವರಿಸಿದನು.
ಅವನ ಗುರುಭಕ್ತಿಗೆ ಮಾರುಹೋದ ಇಂದ್ರನು, ಉತ್ತಂಕನು ಅಗೆಯುತ್ತಿದ್ದ ಕಡ್ಡಿಗೆ ತನ್ನ ವಜ್ರಾಯುಧದ ಶಕ್ತಿಯನ್ನು ಕರುಣಿಸಿದನು. ಕೂಡಲೇ ನಾಗಲೋಕಕ್ಕೆ ದಾರಿಯು ಕಾಣಿಸಿತು. ಉತ್ತಂಕನು ಆ ಮಾರ್ಗವಾಗಿ ನಾಗಲೋಕವನ್ನು ಪ್ರವೇಶಿದನು. ಅದು ಬಹಳ ವಿಸ್ತಾರವಾಗಿದ್ದು ಮಣಿಕನಕಗಳಿಂದ ತುಂಬಿ ಸಮೃದ್ಧವಾಗಿತ್ತು. ಅಷ್ಟು ವಿಸ್ತಾರವಾದ ಪ್ರದೇಶದಲ್ಲಿ ತನ್ನ ಕುಂಡಲಗಳನ್ನು ಎಲ್ಲಿ ಹುಡುಕಬೇಕೆಂಬುದೇ ತಿಳಿಯದೆ ಅವನು ನಿರುತ್ಸಾಹಿಯಾದನು. ಆ ಸಮಯಕ್ಕೆ ಸರಿಯಾಗಿ ಒಂದು ತೇಜೋಮಯವಾದ
ಕುದುರೆಯು ಅವನ ಬಳಿಗೆ ಬಂದಿತು. ಅದು ತನ್ನನ್ನು ಅಗ್ನಿಯೆಂದು ಪರಿಚಯ ಮಾಡಿಕೊಡುತ್ತ, ಹೋಮಾದಿಗಳಿಂದ ವಿಧಿಪೂರ್ವಕವಾಗಿ ಸಂಪೂಜಿಸುತ್ತಿದ್ದುದರಿಂದ ಅವನಿಗೆ ಸಹಾಯ ಮಾಡಲು ಬಂದಿರುವುದಾಗಿಯೂ ಹೇಳಿತು. ಕುದುರೆಯು ಹೇಳಿದಂತೆ ಉತ್ತಂಕನು ಅದರ ಅಧೋದ್ವಾರದಿಂದ ಗಾಳಿಯನ್ನು ಊದಿದನು.
ಕೂಡಲೇ ನಾಗಲೋಕವೇ ಸುಟ್ಟು ಹೋಗುವಂತೆ ಬೆಂಕಿಯು ಧಗಧಗನೆ ಉರಿಯತೊಡಗಿತು. ಹೊಗೆಯು ಎಲ್ಲೆಡೆಗೆ ವ್ಯಾಪಿಸಿ ವಾಸುಕೀ ಸಹಿತ ನಾಗಪ್ರಮುಖರ ಅರಮನೆಗಳೇ ಕಾಣದಂತಾಯಿತು. ಆ ಅಗ್ನಿಜ್ವಾಲೆಯಿಂದ ಪರಿತಪಿಸಿದ ನಾಗಗಳೆಲ್ಲವೂ ಒಟ್ಟಾಗಿ ಸೇರಿ ಉತ್ತಂಕನ ಬಳಿಗೆ ಬಂದವು. ಎಲ್ಲ ಸರ್ಪಗಳೂ ಅವನಿಗೆ ತಲೆಬಾಗಿ ನಮಸ್ಕರಿಸಿ, ಯಥೋಚಿತವಾಗಿ ಸತ್ಕರಿಸಿದವು. ಅವನನ್ನು ಪ್ರಸನ್ನಗೊಳಿಸಿ, ತಕ್ಷಕನು ತಂದಿದ್ದ ಮಣಿಕುಂಡಲಗಳನ್ನು ಅವನಿಗೆ ಒಪ್ಪಿಸಿದವು. ಉತ್ತಂಕನು ಅಗ್ನಿಯನ್ನು ಪ್ರಾರ್ಥಿಸಿ ನಾಗಲೋಕವನ್ನು ಭಸ್ಮ ಮಾಡದಂತೆ ರಕ್ಷಿಸಿದನು. ಅನಂತರ ಆಶ್ರಮಕ್ಕೆ ಹಿಂದಿರುಗಿ ಬಂದು, ಗುರುಪತ್ನಿಗೆ ಕುಂಡಲಗಳನ್ನು ಅರ್ಪಿಸಿದನು.
ಇದನ್ನೂ ಓದಿ: Book Excerpt: ಬಿದ್ದ ಮೊದಲ ಮಳೆ