Site icon Vistara News

Book translation | ದಿನಕ್ಕೊಂದು ಪುಸ್ತಕ ಅನುವಾದಕ್ಕೆ ಮುಂದಾದ ತಮಿಳುನಾಡು ಸರ್ಕಾರ

MK Stalin

ಚೆನ್ನೈ: ದಿನಕ್ಕೊಂದರಂತೆ 365 ಅತ್ಯುತ್ತಮ ಕೃತಿಗಳ ಅನುವಾದ ಮಾಡಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಈ ನಿಟ್ಟನಲ್ಲಿ ಹಲವು ದೇಶಗಳ ಪ್ರಕಾಶಕರೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಹೇಳಿದ್ದಾರೆ.

365ರಲ್ಲಿ ತಮಿಳಿನ 90 ಅತ್ಯುತ್ತಮ ಕೃತಿಗಳ ವಿದೇಶಿ ಭಾಷಾ ಅನುವಾದ, 60 ತಮಿಳು ಕೃತಿಗಳ ಇತರ ಭಾರತೀಯ ಭಾಷಾ ಅನುವಾದ, 170 ಇತರ ಭಾಷಾ ಕೃತಿಗಳ ತಮಿಳು ಅನುವಾದ, 45 ಕೃತಿಗಳ ಅನ್ಯಾನ್ಯ ಭಾಷಾ ಅನುವಾದಗಳು ಬರಲಿವೆ ಎಂದು ಅವರು ತಿಳಿಸಿದ್ದಾರೆ.

ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ 3 ಕೋಟಿ ರೂ. ಅನುವಾದದ ಹಕ್ಕುಗಳಿಗಾಗಿ ತೆಗೆದಿರಿಸಿದೆ. 6 ಕೋಟಿ ರೂ.ಗಳನ್ನು ಪುಸ್ತಕ ಮೇಳಕ್ಕೆ ಮೀಸಲಾಗಿಟ್ಟಿದೆ. ಔದ್ಯಮಿಕ ಬೆಳವಣಿಗೆ, ಚೆಸ್‌ ಒಲಿಂಪಿಯಾಡ್‌, ಎಟಿಪಿ ಟೆನ್ನಿಸ್‌ ಟೂರ್ನಮೆಂಟ್‌ಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ತಮಿಳುನಾಡು ಈಗ ಪುಸ್ತಕಗಳ ಮೂಲಕವೂ ಸೆಳೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ | ಸಂಡೇ ರೀಡ್‌ | ಕ್ಯಾಪ್ಟನ್‌ ಗೋಪಿನಾಥ್‌ ಜೀವನದ ಒಳʼಹರಿವುʼ ತೆರೆದಿಡುವ ಪುಸ್ತಕ ʼನಮ್ಮ ಭಾರತʼ

ಪೆರಿಯಾರ್‌ ಅವರು ಪ್ರಕಾಶನ ಉದ್ಯಮ ಇನ್ನೂ ಬೆಳೆಯುವ ಮುನ್ನವೇ ಕಮ್ಯುನಿಸ್ಟ್‌ ಪುಸ್ತಕಗಳನ್ನು, ಲೆನಿನ್‌ ಕೃತಿಗಳನ್ನು ಭಾಷಾಂತರಿಸಿದ್ದರು. ಜಗತ್ತನ್ನು ತಮಿಳಿಗೆ ತರುವುದು ಹಾಗೂ ತಮಿಳನ್ನು ಜಗತ್ತಿಗೆ ಕೊಂಡೊಯ್ಯುವುದು ಈ ಎರಡೂ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ನಾಯಕರ ಕನಸನ್ನು ನನಸು ಮಾಡಲು ನಾವು ಯತ್ನಿಸುತ್ತಿದ್ದೇವೆ ಎಂದರು. ಕಳೆದ ಒಂದು ವರ್ಷದಲ್ಲಿ ಸರ್ಕಾರ 173 ಕೃತಿಗಳನ್ನು ಪ್ರಕಟಿಸಿದೆ. ಶ್ರೇಷ್ಠ ಕೃತಿಗಳು ಅನುವಾದಗೊಂಡಾಗ, ಭಾಷೆ ಸಹಾ ಬೆಳೆಯುತ್ತದೆ ಎಂದರು.

ಇದನ್ನೂ ಓದಿ | ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು

Exit mobile version