Site icon Vistara News

Booker award: ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಕಾದಂಬರಿಗೆ ಮನ್ನಣೆ

booker prize

ಅನುವಾದಕಿ ಡೈಸಿ ರಾಕ್‌ವೆಲ್‌ ಮತ್ತು ಲೇಖಕಿ ಗೀತಾಂಜಲಿ ಶ್ರೀ

ಈ ವರ್ಷದ ಅಂತಾರಾಷ್ಟ್ರೀಯ ಮ್ಯಾನ್‌ ಬೂಕರ್‌ ಸಾಹಿತ್ಯ ಪ್ರಶಸ್ತಿಯು (Booker award) ಹಿಂದಿಯ ಕಾದಂಬರಿಕಾರ್ತಿ ಗೀತಾಂಜಲಿ ಶ್ರೀ ಅವರ ಪಾಲಾಗಿದೆ.

ಗೀತಾಂಜಲಿ ಶ್ರೀ ಅವರು ಹಿಂದಿಯಲ್ಲಿ ʼರೇತ್‌ ಸಮಾಧಿʼ ಎಂಬ ಹೆಸರಿನಲ್ಲಿ ಬರೆದಿರುವ ಕಾದಂಬರಿಯನ್ನು ಡೈಸಿ ರಾಕ್‌ವೆಲ್‌ ಅವರು ʼಟಾಂಬ್‌ ಆಫ್‌ ಸ್ಯಾಂಡ್‌ʼ ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದ ಮಾಡಿದ್ದು, ಈ ಕೃತಿಗೆ ಇಬ್ಬರಿಗೂ ಜಂಟಿಯಾಗಿ ಬೂಕರ್‌ ಪುರಸ್ಕಾರ ಸಂದಿದೆ. ಇದೇ ಮೊದಲ ಬಾರಿಗೆ ಭಾರತೀಯ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಗೊಂಡ ಕೃತಿಯೊಂದಕ್ಕೆ ಬೂಕರ್‌ ಪುರಸ್ಕಾರ ದೊರೆಯುತ್ತಿದೆ.

ಅಂತಾರಾಷ್ಟ್ರೀಯ ಮ್ಯಾನ್‌ ಬೂಕರ್‌ ಪ್ರಶಸ್ತಿಯನ್ನು ಇಂಗ್ಲೆಂಡ್‌ನ ಸಂಸ್ಥೆ ಕೊಡಮಾಡುತ್ತದೆ. ಇಂಗ್ಲೆಂಡ್‌ನಲ್ಲಿ ಪ್ರಕಟವಾದ ಇಂಗ್ಲಿಷ್‌ ಕೃತಿಗಳನ್ನು ಪರಿಗಣಿಸಲಾಗುತ್ತದೆ. ವಿಜೇತರಿಗೆ 50,000 ಪೌಂಡ್‌ (ರೂ. 49,00,000) ಗೌರವಧನ ದೊರೆಯುತ್ತದೆ. ಈ ಕೃತಿಯ ಲೇಖಕಿ ಹಾಗೂ ಅನುವಾದಕಿ ಹಣವನ್ನು ಹಂಚಿಕೊಳ್ಳಲಿದ್ದಾರೆ.

ಟಾಂಬ್‌ ಆಫ್‌ ಸ್ಯಾಂಡ್‌ ಅಥವ ಮರಳ ಸಮಾಧಿ, 80 ವರ್ಷದ ಮಹಿಳೆಯೊಬ್ಬಳ ಕಥಾನಕ. ತನ್ನ ಗಂಡನ ಮರಣದ ನಂತರ ಈ ಕಥಾನಾಯಕಿ ಖಿನ್ನತೆಗೊಳಗಾಗುತ್ತಾಳೆ. ಖಿನ್ನತೆಯಿಂದ ಆಚೆಗೆ ಬರಲು ಪಾಕಿಸ್ತಾನಕ್ಕೆ ತೆರಳಿ, ಅಲ್ಲಿದ್ದ ತನ್ನ ಬದುಕಿನ ಬೇರುಗಳನ್ನು ಅಗೆಯುತ್ತಾ ಸಂಬಂಧಗಳನ್ನು ಶೋಧಿಸುತ್ತಾ, ಅದರಲ್ಲಿ ಅರ್ಥಪೂರ್ಣತೆಯನ್ನು ಕಂಡುಕೊಳ್ಳಲು ಯತ್ನಿಸುತ್ತಾಳೆ. ಕಥೆಯ ಭಿತ್ತಿ ಆಧುನಿಕ, ಭಾರತ ವಿಭಜನೆ ಹಾಗೂ ವಿಭಜನೆಯ ಪೂರ್ವದ ಕಾಲಘಟ್ಟಗಳ ಕತೆಯನ್ನು ಹೊಂದಿದೆ.

ತುಂಬಾ ಕುತೂಹಲಕರವಾಗಿ ಓದಿಸಿಕೊಂಡು ಹೋಗುವ, ಹಾಸ್ಯಮಯವಾದ ಕತೆ. ಹಲವಾರು ವಿಷಯಗಳನ್ನೂ ಹೊಂದಿದ್ದರೂ ಭಾರವೆನಿಸದ ಕೃತಿ- ಎಂದು ತೀರ್ಪುಗಾರರು ಇದನ್ನು ಶ್ಲಾಘಿಸಿದ್ದಾರೆ. ಅನುವಾದ ಕೂಡ ಮೂಲದಷ್ಟೇ ಉತ್ತಮವಾಗಿದೆ ಎಂದು ಕೊಂಡಾಡಿದ್ದಾರೆ. Tilted Axis Press ಇದನ್ನು ಪ್ರಕಟಿಸಿದೆ.

ಇದನ್ನೂ ಓದಿ: Book excerpt: ಉರಿದ ಅರಮನೆಯಲ್ಲಿ ವಿಚಿತ್ರ ವಾಸನೆ!

ಗೀತಾಂಜಲಿ ಶ್ರೀ ಈಗಾಗಲೇ ಮೂರು ಕಾದಂಬರಿಗಳನ್ನು ಬರೆದಿದ್ದಾರೆ. ಹಲವರು ಸಣ್ಣ ಕತಾ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇವರ ಕೃತಿಗಳು ಇಂಗ್ಲಿಷ್‌, ಜರ್ಮನ್‌, ಫ್ರೆಂಚ್‌ ಭಾಷೆಗಳಿಗೆ ಅನುವಾದವಾಗಿವೆ.

“ಭಾರತೀಯ ಭಾಷೆಗಳಲ್ಲಿ ಅತ್ಯುತ್ತಮವಾದ ಕೃತಿಗಳು ಬರುತ್ತಿವೆ ಎಂಬುದು ನಮಗೆ ಗೊತ್ತಿದೆ. ಆದರೆ ಸರಿಯಾದ ಅನುವಾದಗಳು, ಅನುವಾದಕರು ಇಲ್ಲದೆ ಅದು ಜಾಗತಿಕ ಓದುಗರಿಗೆ ದೊರೆಯುತ್ತಿಲ್ಲ. ಹೀಗಾಗಿ ತುಂಬಾ ಒಳ್ಳೆಯ ಲೇಖಕರು ನಮ್ಮ ಗಮನಕ್ಕೇ ಬರದೆ ಸರಿದುಹೋಗುತ್ತಿದ್ದಾರೆʼʼ ಎಂದು ಬೂಕರ್‌ ಪ್ರಶಸ್ತಿಯ ತೀರ್ಪುಗಾರರಲ್ಲಿ ಒಬ್ಬರಾದ Frank Wynne ಹೇಳಿದ್ದಾರೆ.

ಈ ಹಿಂದೆ ಭಾರತೀಯ ಮೂಲದ ಲೇಖಕರಾದ ವಿ.ಎಸ್.ನೈಪಾಲ್‌ (ಇನ್‌ ಎ ಫ್ರೀ ಸ್ಟೇಟ್-‌ 1971), ಸಲ್ಮಾನ್‌ ರಶ್ದಿ (ಮಿಡ್‌ನೈಟ್ಸ್‌ ಚಿಲ್ಟ್ರನ್-‌ 1981), ಆರುಂಧತಿ ರಾಯ್‌ (ಗಾಡ್‌ ಆಫ್‌ ಸ್ಮಾಲ್‌ ಥಿಂಗ್ಸ್- 1997)‌, ಕಿರಣ್‌ ದೇಸಾಯಿ (ದಿ ಇನ್‌ಹೆರಿಟೆನ್ಸ್‌ ಆಫ್‌ ಲಾಸ್-‌ 2006), ಅರವಿಂದ ಅಡಿಗ (ದಿ ವೈಟ್‌ ಟೈಗರ್‌- 2008) ಬೂಕರ್‌ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: 88ರ ಹರೆಯದ Ruskin bond ಬದುಕಿನ ಬಗ್ಗೆ ಹೇಳೋದೇನು?

Exit mobile version