Site icon Vistara News

Booker Prize 2023: ಭಾರತೀಯ ಮೂಲದ ಚೇತನಾ ಮಾರೂ ಕೃತಿ ʼವೆಸ್ಟರ್ನ್‌ ಲೇನ್‌ʼ ಬೂಕರ್‌ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ಗೆ

chetna maroo writer

ಹೊಸದಿಲ್ಲಿ: ಭಾರತೀಯ ಮೂಲದ ಲೇಖಕಿ ಚೇತನಾ ಮಾರೂ (Chetna Maroo) ಅವರ ಕಾದಂಬರಿ ʼವೆಸ್ಟರ್ನ್‌ ಲೇನ್‌ʼ (Western lane) ಈ ವರ್ಷದ ಬೂಕರ್‌ ಪ್ರಶಸ್ತಿಯ (Booker Prize 2023) ಶಾರ್ಟ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

ಬೂಕರ್ ಪ್ರಶಸ್ತಿ 2023ರ (Booker Award 2023) ತೀರ್ಪುಗಾರರ ಸಮಿತಿಯು 13 ಕೃತಿಗಳ ಲಾಂಗ್‌ಲಿಸ್ಟ್ ಮಾಡಿದ ಪಟ್ಟಿಯಿಂದ ಆರು ಕಾದಂಬರಿಗಳ ಅಂತಿಮ ಪಟ್ಟಿಯನ್ನು ಗುರುವಾರ ಪ್ರಕಟಿಸಿತು. ಬೂಕರ್‌ ಡಜನ್ ಎಂದು ಇದನ್ನು ಕರೆಯಲಾಗುತ್ತದೆ. ಇವುಗಳನ್ನು ಕಳೆದ ವರ್ಷ ಅಕ್ಟೋಬರ್ ಮತ್ತು ಈ ವರ್ಷದ ಸೆಪ್ಟೆಂಬರ್ ನಡುವೆ ಪ್ರಕಟಿಸಲಾದ 163 ಪುಸ್ತಕಗಳಿಂದ ಆಯ್ಕೆ ಮಾಡಲಾಗಿದೆ.

ಭಾರತೀಯ ಮೂಲದ ಲಂಡನ್‌ ನಿವಾಸಿ ಲೇಖಕಿ ಚೇತನಾ ಮಾರೂ ಅವರ ಚೊಚ್ಚಲ ಕಾದಂಬರಿ ʼವೆಸ್ಟರ್ನ್ ಲೇನ್’ ಪಟ್ಟಿಗೆ ಸೇರಿಕೊಂಡಿದೆ. ಪಟ್ಟಿಯಲ್ಲಿರುವ ಇತರ ಕೃತಿಗಳೆಂದರೆ ಪಾಲ್ ಲಿಂಚ್ (ಐರ್ಲೆಂಡ್) ಅವರ ಪ್ರಾಫೆಟ್ ಸಾಂಗ್, ಪಾಲ್ ಮುರ್ರೆ (ಐರ್ಲೆಂಡ್) ಅವರ ದಿ ಬೀ ಸ್ಟಿಂಗ್, ಸಾರಾ ಬರ್ನ್‌ಸ್ಟೈನ್ (ಕೆನಡಾ) ಅವರ ಸ್ಟಡಿ ಫಾರ್‌ ಒಬೀಡಿಯೆನ್ಸ್‌, ಜೊನಾಥನ್ ಎಸ್ಕೋಫರಿ (ಯುಎಸ್) ಅವರ ಇಫ್‌ ಐ ಸರ್ವೈವ್‌ ಯು, ಮತ್ತು ಪಾಲ್ ಹಾರ್ಡಿಂಗ್ (ಯುಎಸ್) ಅವರ ದಿಸ್‌ ಅದರ್ ಈಡನ್ (ಯುಎಸ್).

ಚೇತನಾ ಮಾರೂ ಅವರ ʼವೆಸ್ಟರ್ನ್ ಲೇನ್’ ಗೋಪಿ ಎಂಬ 11 ವರ್ಷದ ಬ್ರಿಟಿಷ್ ಗುಜರಾತಿ ಹುಡುಗಿ ಮತ್ತು ಅವಳ ಕುಟುಂಬದೊಂದಿಗೆ ಅವಳ ಸಂಬಂಧದ ಸುತ್ತಲಿನ ಕಥೆಯಾಗಿದೆ. ಈ ಕಾದಂಬರಿಯು ವಲಸಿಗ ತಂದೆ ತನ್ನ ಕುಟುಂಬವನ್ನು ಏಕಪೋಷಕನಾಗಿ ಬೆಳೆಸುವ ಕಥೆಯನ್ನು ವಿಸ್ತರಿಸುತ್ತದೆ. ಸ್ಕ್ವಾಷ್ ಕ್ರೀಡೆಯನ್ನು ಸಂಕೀರ್ಣ ಮಾನವ ಭಾವನೆಗಳಿಗೆ ರೂಪಕವಾಗಿ ಬಳಸಿದ್ದಕ್ಕಾಗಿ ಬೂಕರ್ ನ್ಯಾಯಾಧೀಶರು ಈ ಪುಸ್ತಕವನ್ನು ಶ್ಲಾಘಿಸಿದ್ದಾರೆ.

ಚೇತನಾ ಮಾರೂ ಅವರ ಪ್ರಕಾರ ʼʼಇದೊಂದು ಕ್ರೀಡಾ ಕಾದಂಬರಿ. ಇದು ಭವಿಷ್ಯದ ಕಾದಂಬರಿ, ಆಂತರಿಕ ಕಾದಂಬರಿ, ದುಃಖದ ಬಗೆಗಿನ ಕಾದಂಬರಿ, ವಲಸಿಗರ ಅನುಭವದ ಕಾದಂಬರಿ ಎಂದೂ ಕರೆಯಬಹುದು.ʼʼ

ಬೂಕರ್‌ ಪ್ರಶಸ್ತಿಯ ವಿಜೇತರನ್ನು ನವೆಂಬರ್ 26ರಂದು ಘೋಷಿಸಲಾಗುತ್ತದೆ. ಗೆದ್ದವರು £50,000 (50.92 ಲಕ್ಷ ರೂ.) ಬಹುಮಾನ ಪಡೆಯುತ್ತಾರೆ. ಶಾರ್ಟ್ ಲಿಸ್ಟ್‌ನಲ್ಲಿರುವ ಇತರರಿಗೆ £2,500 (2.54 ಲಕ್ಷ ರೂ.) ದೊರೆಯುತ್ತದೆ. ಈ ಪ್ರತಿಷ್ಠಿತ ಪ್ರಶಸ್ತಿಯು ಪ್ರಪಂಚದ ಯಾವುದೇ ಕಡೆ ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟ ಕಾದಂಬರಿಗಳಿಗೆ ಮೀಸಲಾಗಿದೆ.

ಇದನ್ನೂ ಓದಿ: Booker award: ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಕಾದಂಬರಿಗೆ ಮನ್ನಣೆ

Exit mobile version