ಲಂಡನ್: ಐರಿಶ್ ಬರಹಗಾರ ಪಾಲ್ ಲಿಂಚ್ (Paul Lynch) ಅವರ ಕಾದಂಬರಿ ʼಪ್ರೊಫೆಟ್ ಸಾಂಗ್’ಗೆ (Prophet Song) 2023ರ ಸಾಲಿನ ಬೂಕರ್ ಪ್ರಶಸ್ತಿ (Booker Prize 2023) ದೊರೆತಿದೆ.
ಪಾಲ್ ಲಿಂಚ್ ಅವರ ಐದನೆಯ ಕಾದಂಬರಿಯಿದು. ಐರಿಶ್ ಸರ್ಕಾರ ದಬ್ಬಾಳಿಕೆಯ ಆಡಳಿತದತ್ತ ಸಾಗುವುದು, ಕುಟುಂಬ ಮತ್ತು ದೇಶ ದುರಂತದ ಅಂಚಿನಲ್ಲಿರುವುದನ್ನು ಈ ಕೃತಿ ಚಿತ್ರಿಸುತ್ತದೆ. ಪಾಶ್ಚಿಮಾತ್ಯ ದೇಶಗಳ ಪ್ರಜಾಪ್ರಭುತ್ವಗಳಲ್ಲಿನ ಅಶಾಂತಿ, ಸಿರಿಯಾದ ದಂಗೆಗಳಂತಹ ವಿಪತ್ತುಗಳ ಬಗ್ಗೆ ಪಾಶ್ಚಾತ್ಯ ಜಗತ್ತಿನ ಉದಾಸೀನತೆಯನ್ನು ಎತ್ತಿ ತೋರಿಸಲು ಈ ಕೃತಿ ಪ್ರಯತ್ನಿಸಿದೆ.
“ಬಾಗಿಲಿನ ಮೇಲೆ ಮೊದಲ ಬಡಿತದಿಂದಲೇ ʼಪ್ರೊಫೆಟ್ ಸಾಂಗ್ʼ ನಮ್ಮ ಅಸ್ಥಿರಗೊಳಿಸುತ್ತದೆ; ಐರ್ಲೆಂಡ್‌ನಲ್ಲಿ ತನ್ನ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಮಹಿಳೆಯ ಭಯಾನಕ ಅವಸ್ಥೆಯನ್ನು ನಾವು ಅನುಸರಿಸುತ್ತ ಹೋಗುತ್ತೇವೆ” ಎಂದು ಬೂಕರ್ ತೀರ್ಪುಗಾರ ಮಂಡಳಿಯ ಅಧ್ಯಕ್ಷರಾದ ಇಸಿ ಎಡುಗ್ಯಾನ್ ಹೇಳಿದರು. “ಇದು ಭಾವನಾತ್ಮಕ ಕಥೆ ಹೇಳುವಿಕೆ, ದಿಟ್ಟತನ ಮತ್ತು ಕೆಚ್ಚೆದೆಯ ವಿಜಯವಾಗಿದೆ” ಎಂದು ಅವರು ಶ್ಲಾಘಿಸಿದ್ದಾರೆ.
ಪಾಲ್ ಲಿಂಚ್ ಈ ಹಿಂದೆ ಐರ್ಲೆಂಡ್‌ನ ಸಂಡೇ ಟ್ರಿಬ್ಯೂನ್ ಪತ್ರಿಕೆಯ ಮುಖ್ಯ ಚಲನಚಿತ್ರ ವಿಮರ್ಶಕರಾಗಿದ್ದರು. ತಮ್ಮ ಬರವಣಿಗೆಯ ತೀವ್ರವಾದ ವಾಸ್ತವಿಕತೆಯೊಂದಿಗೆ, ಹೆಚ್ಚಿಸಲಾದ ಅರಾಜಕತೆಯೊಂದಿಗೆ, ನಿರಂಕುಶವಾದವನ್ನು ಓದುಗರು ಅರ್ಥಮಾಡಿಕೊಳ್ಳಬೇಕೆಂದು ಲಿಂಚ್ ಬಯಸುತ್ತಾರೆ. “ಪುಸ್ತಕದ ಅಂತ್ಯದ ವೇಳೆಗೆ, ತಮಗೇ ತಿಳಿಯದಂತೆಯೇ ಈ ಸಮಸ್ಯೆಯನ್ನು ಅವರು ಸ್ವತಃ ಅನುಭವಿಸುತ್ತಾರೆ” ಎಂದಿದ್ದಾರೆ ಅವರು.
ಐರಿಸ್ ಮುರ್ಡೋಕ್, ಜಾನ್ ಬಾನ್‌ವಿಲ್ಲೆ, ರಾಡಿ ಡಾಯ್ಲ್ ಮತ್ತು ಆನ್ನೆ ಎನ್‌ರೈಟ್ ನಂತರ ಬೂಕರ್ ಪ್ರಶಸ್ತಿಯನ್ನು ಗೆದ್ದ ಐದನೇ ಐರಿಶ್ ಲೇಖಕರಾಗಿದ್ದಾರೆ ಲಿಂಚ್. ಐರಿಶ್ ಬರಹಗಾರ್ತಿ ಅನ್ನಾ ಬರ್ನ್ಸ್ 2018ರಲ್ಲಿ ಗೆದ್ದಿದ್ದಾರೆ. 1969ರಲ್ಲಿ ಸ್ಥಾಪನೆಯಾದ ಬೂಕರ್ ಪ್ರಶಸ್ತಿಯು ಯು.ಕೆ ಮತ್ತು ಐರ್ಲೆಂಡ್‌ನಲ್ಲಿ ಪ್ರಕಟವಾದ ಯಾವುದೇ ದೇಶದ ಇಂಗ್ಲಿಷ್ ಭಾಷೆಯ ಕಾದಂಬರಿಗಳಿಗೆ ಮುಕ್ತವಾಗಿದೆ. ಮಾರ್ಗರೆಟ್ ಅಟ್‌ವುಡ್, ಸಲ್ಮಾನ್ ರಶ್ದಿ ಮತ್ತು ಯಾನ್ ಮಾರ್ಟೆಲ್‌ರಂಥ ದೊಡ್ಡ ಬರಹಗಾರರು ಇದನ್ನು ಪಡೆದಿದ್ದಾರೆ.
ʼಪ್ರೊಫೆಟ್ ಸಾಂಗ್’ ಅನ್ನು ಒನ್‌ವರ್ಲ್ಡ್ ಯುಕೆ ಪ್ರಕಾಶನ ಪ್ರಕಟಿಸಿದೆ. ಇದೇ ಪ್ರಕಾಶನದ ಮರ್ಲಾನ್ ಜೇಮ್ಸ್ ಅವರ ʼಎ ಬ್ರೀಫ್ ಹಿಸ್ಟರಿ ಆಫ್ ಸೆವೆನ್ ಕಿಲ್ಲಿಂಗ್ಸ್’ 2015ರಲ್ಲಿ ಮತ್ತು ಪಾಲ್ ಬೀಟಿಯ ʼದಿ ಸೆಲ್ಔಟ್’ 2016ರಲ್ಲಿ ಬೂಕರ್ ಪಡೆದಿದ್ದವು. ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಡಬ್ಲಿನ್‌ನ ಲಿಂಚ್ 50,000 ಪೌಂಡ್ ಮೊತ್ತದ (52.53 ಲಕ್ಷ ರೂ.) ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು.
ಇದನ್ನೂ ಓದಿ: Booker Prize 2023: ಭಾರತೀಯ ಮೂಲದ ಚೇತನಾ ಮಾರೂ ಕೃತಿ ʼವೆಸ್ಟರ್ನ್ ಲೇನ್ʼ ಬೂಕರ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ಗೆ