ಅಲೆಕ್ಸಾಂಡರ್ ಫ್ರೇಟರ್, ಬ್ರಿಟಿಷ್ ಬರಹಗಾರ ಮತ್ತು ಪತ್ರಕರ್ತ. ಭಾರತದಲ್ಲಿ ಮಾನ್ಸೂನ್ ಕಾಲಿಡುವ ವೇಳೆಗೆ ಈತ ಸುತ್ತಾಡಿ, ಮಳೆ ಹೋಗುವಲ್ಲೆಲ್ಲ ತಾನೂ ಹೋಗಿ, ಮಳೆಯ ಚಿತ್ರಣಗಳನ್ನೆಲ್ಲ ಮುಂದಿಟ್ಟು ಬರೆದ “ಚೇಸಿಂಗ್ ದಿ ಮಾನ್ಸೂನ್’ ಕೃತಿ ಪ್ರಸಿದ್ಧವಾಗಿದೆ. ಈ ಕೃತಿಯಿಂದ ಆಯ್ದ ಭಾಗಗಳು ಇಲ್ಲಿವೆ.
ಮೂಲ: ಅಲೆಕ್ಸಾಂಡರ್ ಫ್ರೇಟರ್
ಅನುವಾದ: ಹರೀಶ್ ಕೇರ
ಮಾನ್ಸೂನ್‍ನ ಆರಂಭದ ಹೊರಳಿಕೆ ಶುರುವಾಗಿತ್ತು. ಸೂಚನೆಗಳು ಕಾಣಿಸುತ್ತಿದ್ದವು. ಬಂದರಿನಲ್ಲಿ, ಜಿನೇವಾ ನೋಂದಣಿಯ ದೊಡ್ಡದೊಂದು ಹಡಗು, ತನ್ನ ಸನ್ನೆ ಚಿಹ್ನೆಗಳನ್ನು ಮೆಲ್ಲಗೆ ತೋರಿಸುತ್ತ ಮಳೆಯಲ್ಲೇ ಆಳ ಸಮುದ್ರದ ಆಚೆಗೆ ಸರಿಯತೊಡಗಿತ್ತು. ಇದನ್ನು ನೋಡುತ್ತ, ಕೊಚ್ಚಿನ್‍ನಲ್ಲಿ ಕಂಡ ಇಟಾಲಿಯನ್ ಹಡಗುಗಳು ನೆನಪಾದವು. ಇವೆಲ್ಲ ಭಾರತದಲ್ಲಿ ಶುರುವಾದದ್ದು ಗ್ರೀಕ್ ಸಾಮ್ರಾಜ್ಯದ ಕಾಲದಿಂದ ಎಂಬುದು ನೆನಪಿಗೆ ಬಂತು. ಮಾನ್ಸೂನ್‍ನ ಆರಂಭ ಮತ್ತು ಅಂತ್ಯದ ಕಾಲವನ್ನು ಅನುಸರಿಸಿ ಅವರ ಹಡಗುಗಳು ಆಳ ಸಮುದ್ರದಲ್ಲಿ ಇಲ್ಲಿಗೆ ಬರುವುದೋ ಹೋಗುವುದೋ ನಿರ್ಧರಿಸುತ್ತಿದ್ದವು. ಗ್ರೀಕ್ ಜನರಲ್ಲಿ ಭಾರತದ ಮಸಾಲೆ ಉತ್ಪನ್ನಗಳ ಮೇಲೆ ಇದ್ದ ಅಪಾರವಾದ ಹುಚ್ಚು ಮೋಹ, ಮುಂಗಾರನ್ನು ಅವಲಂಬಿಸಿದ ಇಲ್ಲಿನ ಮಳೆಬೆಳೆಗಳನ್ನು ನೆಚ್ಚಿಕೊಳ್ಳುವಂತೆ ಮಾಡಿತ್ತು ಅವರನ್ನು. ಮಲಬಾರ್‍ನಲ್ಲಿ ಸಾಮಾನ್ಯವಾಗಿದ್ದ ರೋಮನ್ ನಾಣ್ಯಗಳು ಇದನ್ನು ಖಚಿತಪಡಿಸುತ್ತವೆ. ಕರಿಮೆಣಸು, ಲವಂಗ ದಾಲ್ಚಿನ್ನಿ, ಜಾಯಿಕಾಯಿ, ಚಕ್ಕೆ, ಅಕ್ಕಿ, ಹುಣಸೆಹುಳಿ, ತುಪ್ಪ, ಹತ್ತಿ, ಮಸಿನ್, ಶುಂಠಿ, ಜೇನುತುಪ್ಪಗಳೆಂದರೆ ರೋಮನ್ನರು ಮುಗಿಬೀಳುತ್ತಿದ್ದರು.
ಕೊಚ್ಚಿನ್ ಅನ್ನು ರೋಮ್‍ನ ನಕಾಶೆಯಲ್ಲಿ ಸ್ಥಿರಗೊಳಿಸಿದವನು ನೀರೋ. ಆತ ಭಾರತದ ರೇಶ್ಮೆ ವಸ್ತ್ರವನ್ನೇ ಧರಿಸುತ್ತಿದ್ದ, ಇಲ್ಲಿನ ಸುಗಂಧ ಪನ್ನೀರಿನಲ್ಲೇ ಮೀಯುತ್ತಿದ್ದ. ಆತನ ಶಯ್ಯಾಗೃಹ ಭಾರತದ ಮುತ್ತುಗಳಿಂದ, ಅರಮನೆ ಭಾಋತದ ಆಮೆಚಿಪ್ಪು ಹವಳಗಳಿಂದ ಅಲಂಕೃತವಾಗಿತ್ತು. ಆತನ ಸ್ನಾನಗೃಹದ ನೀರಿನ ಪೈಪುಗಳಿಗೂ ಚಿನ್ನಬೆಳ್ಳಿಗಳನ್ನೇ ಅಳವಡಿಸಿದ್ದ! ಅಲ್ಲಿನ ಶ್ರೀಮಂತರಲ್ಲಿ ಐಷಾರಾಮಿ ತೋರಿಕೆಗೆ ಪೈಪೋಟಿಯಿತ್ತು. ಅವರೆಲ್ಲ ಭಾರತದ ಉತ್ಪನ್ನಗಳಿಗಾಗಿ ಹುಚ್ಚರಾಗಿದ್ದರು. ರೋಮನ್ ಸಂಸತ್ತು ಕೂಡ, ಒಂದು ಹಂತದಲ್ಲಿ ಭಾರತೀಯ ಮಹಾರಾಜರುಗಳಂತೆ ತೋರಲು ಶುರುವಾಗಿತ್ತು.
ರೋಮನ್ ಸಾಮ್ರಾಜ್ಯ ಆಮೇಲೆ ಕುಸಿಯಿತು. ಆದರೆ ಕೊಚ್ಚಿನ್‍ನಲ್ಲಿ ವ್ಯಾಪಾರ ಮುಂದುವರಿಯಿತು. ಅಲ್ಲಿನ ಬಂದರು ಮಾನ್ಸೂನ್‍ನ ಅಲೆಗಳನ್ನು ಅವಲಂಬಿಸಿ ಕಾರ್ಯಾಚರಿಸುತ್ತಿತ್ತು. ಡಗಾಮ ಇಲ್ಲಿಗೆ ಸಮೀಪದ ಕ್ಯಾಲಿಕಟ್‍ಗೇ ಬಂದಿಳಿದ, 1498ರಲ್ಲಿ. ತನ್ನ ಹಡಗಿನ ತುಂಬ ಮಸಾಲೆ ಸಾಮಗ್ರಿಗಳನ್ನು ತುಂಬಿಕೊಂಡು ಹೋಗಿ ಲಿಸ್ಬನ್‍ನಲ್ಲಿ ಮಾರಾಟ ಮಾಡಿದ. ಅದು ಆತನಿಗೆ ಶೇ.600ರಷ್ಟು ಲಾಭ ತಂದುಕೊಟ್ಟಿತು. ಪೋರ್ಚುಗೀಸರು ಧಾವಿಸಿ ಬಂದು ಕೊಚ್ಚಿನ್‍ನಲ್ಲಿ ತಮ್ಮ ತಳವೂರಿ ಕರಿಮೆಣಸು, ಶ್ರೀಗಂಧ, ಶುಂಠಿ, ಲವಂಗಗಳನ್ನು ಖರೀದಿಸತೊಡಗಿದರು.
ಓಶನ್ ಕಂಟೈನರ್ ಹಡಗು ಸಂಸ್ಥೆಯ ಮಂಜು ಮೆನನ್ ನನ್ನೆದುರು ಕುಳಿತು ಹೇಳತೊಡಗಿದರು.
“ಪೋರ್ಚುಗೀಸರ ಕಾಲದಿಂದ ಇಂದಿಗೆ ಹೆಚ್ಚಿಗೆ ಏನೂ ಬದಲಾಗಿಲ್ಲ. ಅಂದಿನ ಹಾಗೇ ಇಂದಿಗೂ ಮಸಾಲೆ ಸಾಮಗ್ರಿಗಳನ್ನು ನಾವು ಕಳಿಸುತ್ತೇವೆ. ಜೊತೆಗೆ ಒಂದಷ್ಟು ಕೈಮಗ್ಗದ ಉತ್ಪನ್ನಗಳು, ಕಪ್ಪೆ ಕಾಲುಗಳು ಇತ್ಯಾದಿ ಸೇರಿಕೊಂಡಿವೆ. ಇತ್ತೀಚೆಗೆ ಕಪ್ಪೆ ಕಾಲುಗಳ ಮೇಲೆ ನಿಷೇಧ ಹೇರಲಾಯಿತು. ಸೊಳ್ಳೆಗಳ ಸಂಖ್ಯೆ ನಿಯಂತ್ರಣದಲ್ಲಿಡಲಿಕ್ಕೆ ಕಪ್ಪೆಗಳೂ ಬೇಕಲ್ಲವೆ? ಅಂದಹಾಗೆ, ನಿಮಗೆ ಮುಂಗಾರಿನ ಮೇಲೆ ಆಸಕ್ತಿ ತಾನೆ? ಮುಂಗಾರು ಶುರುವಾದರೆ ನಮ್ಮ ವ್ಯಾಪಾರ ನಿಧಾನವಾಗಿಬಿಡುತ್ತದೆ. ಯಾಕೆಂದರೆ ಮಳೆಯಲ್ಲಿ ನಮಗೆ ಲೋಡ್ ಮಾಡೋದಕ್ಕೆ ಆಗುವುದಿಲ್ಲ. ಮಳೆ ಮತ್ತು ಗಾಳಿಯಲ್ಲಿ ಎಲ್ಲ ಗೊಂದಲ ಆಗಿಬಿಡುತ್ತದೆ. ಇಲ್ಲಿನ ಹಲವು ಮಂದಿ ಮಳೆ ರೊಮ್ಯಾಂಟಿಕ್ ಅಂತೆಲ್ಲ ಹೇಳುವುದುಂಟು. ಹಿಂದೂಗಳಲ್ಲಿ ಕೆಲವರು ಮಳೆ ದೇವತೆಗೆ ಪೂಜೆ ಮಾಡುತ್ತಾರೆ. ಅದರಲ್ಲೇನೂ ಸಾಂಕೇತಿಕತೆ, ದೈವಿಕತೆ ಇತ್ಯಾದಿಗಳೆಲ್ಲಾ ನನಗೆ ಕಾಣಿಸುವುದಿಲ್ಲ. ಮಳೆ ಶುರುವಾದರೆ ನಮ್ಮ ಫೋನ್‍ಗಳೆಲ್ಲ ಡೆಡ್ ಆಗುತ್ತವೆ, ಕರೆಂಟ್ ಹೋಗಿಬಿಡುತ್ತದೆ. ವೃದ್ಧರು ಶಾಲು ಸ್ವೆಟರ್ ಎಲ್ಲ ತೆಗೆಯುತ್ತಾರೆ. ಬಟ್ಟೆಗಳನ್ನು ಒಣಗಿಸುವುದು ಸಮಸ್ಯೆ, ಪ್ರತಿ ಕಪ್‍ಬೋರ್ಡ್‍ನಲ್ಲೂ ಒಂದು ಲೈಟ್‍ಬಲ್ಬ್ ಇಡಬೇಕಾಗುತ್ತದೆ. ಬುಕ್‍ಶೆಲ್ಫ್‍ನಲ್ಲಿ ತೇವಾಂಶ, ಬೂಸ್ಟ್ ಬೆಳೆಯುತ್ತದೆ. ಸಮಗ್ರ ಶೇಕ್ಸ್ಪಿಯರ್ ಪುಸ್ತಕ ತೇವ ಹತ್ತಿ ಹಳದಿಯಾಗಿಬಿಡುತ್ತದೆ. ಒಂದು ತಣ್ಣನೆಯ ವಿಷಾದ ಕವಿಯುತ್ತದೆ.”
**********
ಗೋವಾದ ತೀರದಲ್ಲಿರುವ ಎಲ್ಲ ಸಂಗತಿಳಿಗೂ ನೀರೇ ನುಗ್ಗಿ ಬಂದಂತೆ ಇತ್ತು- ತೆಂಗಿನ ತೋಟಗಳು, ಸಣ್ಣ ಪುಟ್ಟ ಊರುಗಳು, ಬಿಳಿಯ ಚರ್ಚುಗಳು, ಸೈಕಲ್ಲನ್ನೇರಿ ಹೋಗುತ್ತಿರುವ ಮನುಷ್ಯರು- ಇತ್ಯಾದಿ. ಹೋದಲ್ಲೆಲ್ಲಾ ತೆಪ್ಪಗಳು, ದೋಣಿಗಳು, ಬೋಟುಗಳು ನೀರಿನಿಂದಾಚೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವು. ಎಲ್ಲವೂ ಮಾನ್ಸೂನ್‍ಗೆ ಸಜ್ಜಾಗಿ ದಡಕ್ಕೆ ಬಂದಿದ್ದವು. ಮೀನುಗಾರ ಸಮುದಾಯವೆಲ್ಲ ದಡಕ್ಕೆ ಹಿಂತಿರುಗಿತ್ತು. ಈ ಅವಧಿಯಲ್ಲಿ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಅವರಲ್ಲೊಬ್ಬ ಹೇಳಿದ್ದ- ನಾವು ಭತ್ತದ ಗದ್ದೆಗಳಲ್ಲಿ ದುಡಿಯುತ್ತೇವೆ. ಹರಿದ ಬಲೆಗಳನ್ನು ಹೊಲಿಯುತ್ತೇವೆ. ಮತ್ತು ಮಕ್ಕಳನ್ನು ಮಾಡುತ್ತೇವೆ. ಅವನ ಕೊನೆಯ ಮಾತಿಗೆ ಅಲ್ಲಿ ನಗೆ ಉಕ್ಕಿತ್ತು.
ಪೋರ್ಟ್ ಅಗುಡಾ ಬೀಚ್ ರೆಸಾರ್ಟ್‍ಗೆ ನಾವು ಬರುತ್ತಿರುವಂತೆ ಮಳೆ ಅಪ್ಪಳಿಸಲು ಶುರುಮಾಡಿತು. ಎಲ್ಲರೂ ಒಳಬದಿಗೆ ಧಾವಿಸಿದೆವು. ರೆಸೆಪ್ಷನ್ ಒಳಭಾಗ ಓಡಾಡುತ್ತಾ ಆಡುತ್ತಿದ್ದ ಮಕ್ಕಳಿಂದಲೂ ಕಾರ್ಡ್ಸ್ ಆಡುತ್ತಿದ್ದ ದೊಡ್ಡವರಿಂದಲೂ ಗೌಜಿಗದ್ದಲಗಳಿಂದಲೂ ತುಂಬಿತ್ತು. ಈ ಸೀಸನ್‍ನಲ್ಲಿ ಹೆಚ್ಚು ಜನಪ್ರಿಯವಾದ ಕಾರ್ಡ್ಸ್ ಆಟಗಳ ಹೆಸರನ್ನು ಕ್ಲರ್ಕ್ ನನಗೆ ಹೇಳಿದ.
ನಾನು ನನ್ನ ಕೊಠಡಿಯಲ್ಲಿ ಸುಮ್ಮನೆ ನಿಂತು ಹೊರಗೆ ಮಳೆಯಲ್ಲಿ ಒದ್ದೆಮುದ್ದೆಯಾಗಿದ್ದ ಉದ್ಯಾನವನವನ್ನು ನೋಡಿದೆ. ಮಳೆ ಶ್ರಬ್ಬರಿ ಮರಗಳ ಮೇಲೆ, ಅದರ ಎಲೆ ಹೂವುಗಳನ್ನೆಲ್ಲಾ ಉದುರಿಸುತ್ತ ಸುರಿಯುತ್ತಿತ್ತು. ಕೆಲಸಗಾರರ ಒಂದು ಸಣ್ಣ ಗುಂಪು, ಮಳೆಯಿಂದ ಆದ ಹಾನಿಯನ್ನು ಸರಿಪಡಿಸುತ್ತಾ ಕೆಲಸ ಮಾಡುತ್ತಿತ್ತು. ದೋಣಿಯ ಡೆಕ್ ಮೇಲೆ ಓಡಾಡುತ್ತಿದ್ದ ಅವರನ್ನು ನೋಡಿದರೆ ರಷ್ಯನ್ ಸೇನೆಯಲ್ಲಿ ಕೆಲಸ ಮಾಡಲು ಹೊರಟವರಂತೆ ಕಾಣುತ್ತಿತ್ತು- ಎತ್ತರದ ಕಪ್ಪು ಬೂಟುಗಳು, ಉದ್ದದ ಬೂದು ಕೋಟುಗಳು, ಎತ್ತರದ ಕಾಲರ್‍ಗಳು, ಬಾಯಿ- ಕಣ್ಣುಗಳನ್ನು ಮಾತ್ರ ಬಿಟ್ಟು ಉಳಿದದ್ದನ್ನೆಲ್ಲ ಮುಚ್ಚಿದ ಹೆಲ್ಮೆಟ್‍ಗಳು ಇತ್ಯಾದಿಗಳೊಂದಿಗೆ. ಕೆಲವರು ಈಜು ಕನ್ನಡಕಗಳನ್ನು ಧರಿಸಿದ್ದರು. ತೋಟದಲ್ಲಿ ಬಿದ್ದ ಹಣ್ಣು ತರಕಾರಿಗಳನ್ನೆಲ್ಲ ಬುಟ್ಟಿಯಲ್ಲಿ ತುಂಬಿಕೊಂಡು ಅವರು ನಿರ್ಗಮಿಸಿದರು.
ಫೋನ್‍ಗೆ ಡೈರೆಕ್ಟರಿ ಇರಲಿಲ್ಲ. ಆಪರೇಟರ್‍ಗೆ ಕರೆ ಮಾಡಿ, ಮಿ.ಬ್ಯಾಪ್ಟಿಸ್ಟಾಗೆ ಕನೆಕ್ಟ್ ಮಾಡುವಂತೆ ಹೇಳಿದೆ. ಆಕೆ ನಕ್ಕುಬಿಟ್ಟಳು. “ಯಾವ ಬ್ಯಾಪ್ಟಿಸ್ಟಾ? ಗೋವಾದಲ್ಲಿ ನೂರಾರು ಬ್ಯಾಪ್ಟಿಸ್ಟಾರಿದ್ದಾರೆ!’ ಎಂದಳು. ನನಗೆ ಆತನ ನಿಖರ ವಿಳಾಸ ಗೊತ್ತಿರಲಿಲ್ಲ. ಆತನ ಮುಂಬಯಿ ವಿಳಾಸಕ್ಕೇ ಕರೆ ಮಾಡೋಣವೆಂದುಕೊಂಡು ನಂಬರ್ ನೀಡಿ ಸಂಪರ್ಕಿಸಲು ತಿಳಿಸಿದೆ. ಆಕೆ ಒಂದೆರಡು ಬಾರಿ ಪ್ರಯತ್ನಿಸಿ, ಸೋತಳು. “ಮಳೆ ಸರ್, ಮಳೆಯಿಂದಾಗಿ ಲೈನುಗಳೆಲ್ಲಾ ಕೈಕೊಟ್ಟಿವೆ. ಆಗುತ್ತಿಲ್ಲ’ ಎಂದು ಕೈಚೆಲ್ಲಿದಳು.
ಇದನ್ನೂ ಓದಿ: Rain News | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ: ತೋಟ, ಮನೆಗಳಿಗೆ ನುಗ್ಗಿದ ನೀರು
ಕಾಂಕ್ರೀಟ್‍ನ ಉದ್ದ ಪ್ಯಾಸೇಜುಗಳು ರೆಸಾರ್ಟ್‍ನ ರೂಮುಗಳಿಗೆ ಸಂಪರ್ಕ ಕಲ್ಪಿಸಿದ್ದವು. ರೆಸಾರ್ಟ್‍ನ ತಗಡಿನ ಛಾವಣಿಗಳ ಮೇಲೆ, ಬೋಗನ್‍ವಿಲ್ಲಾ ಮರಗಳ ಮೇಲೆ ಎಡೆಬಿಡದೆ ಸುರಿದ ಮಳೆ, ನೀರಿನ ಪುಟ್ಟ ಪ್ರವಾಹವನ್ನೇ ಸೃಷ್ಟಿಸಿ ಪ್ಯಾಸೇಜಿಗೆ ತಂದುಬಿಟ್ಟಿತ್ತು. ಬೋಗನ್‍ವಿಲ್ಲಾ ಹೂಗಳು ಅಲ್ಲಲ್ಲಿ ಚದುರಿಬಿದ್ದಿದ್ದವು. ಒಂದು ಯುವಜೋಡಿ, ಬಹುಶಃ ಹನಿಮೂನ್‍ಗೆ ಬಂದವರಿರಬೇಕು, ಅವುಗಳನ್ನೇ ದಿಟ್ಟಿಸುತ್ತಿತ್ತು. “ಈ ಕೇಸರಿ ಬಣ್ಣದ ಹೂವುಗಳಿಗೆ ಮಿಸ್ ಮನಿಲ್ಲಾ ಎನ್ನುತ್ತಾರೆ’ ಎಂದು ಆಕೆ ಹೇಳಿದಳು. ಆತ ತನ್ನ ಕೈಯಲ್ಲಿ ಒಂದಿಷ್ಟು ಹೂವುಗಳನ್ನು ತುಂಬಿಕೊಂಡು ಅವಳಿಗೆ ನೀಡಿದ. ಆಕೆ ಅವನ ಕೈಯನ್ನು ಮುಖಕ್ಕೆ ಒತ್ತಿಕೊಂಡು ಅದರ ಪರಿಮಳದಲ್ಲಿ ಮುಳುಗಿದಳು. ಕೆಲವು ಆಕೆಯ ಮುಖಕ್ಕೆ ಅಂಟಿಕೊಂಡವು. ಆತ ಸಂತೃಪ್ತಭಾವದಲ್ಲಿ ಮುಗುಳ್ನಗುತ್ತ ಅವುಗಳನ್ನು ಕೀಳತೊಡಗಿದ.
“ನಾನು ನಿನ್ನನ್ನು ಕೀಳುತ್ತಿದ್ದೇನೆ ನೋಡು’ ಎಂದ. ಆಕೆ ಗಂಟಲು ಬಿರಿದು ನಕ್ಕಳು.
**********
ಒಬ್ಬ ಪೋರ್ಚುಗೀಸ್ ಯಾತ್ರಿಕ ಹೀಗೆ ಬರೆದಿದ್ದಾನೆ- “ಪೋರ್ಚುಗೀಸರು ಭಾರತದಲ್ಲಿ ಹೊಂದಿರುವ ಪ್ರದೇಶಗಳಲ್ಲಿ ಗೋವಾ ಮುಖ್ಯವಾದುದು. ಇಲ್ಲಿ ವೈಸರಾಯ್ ಕೂಡ ಬಂದು ತಂಗುತ್ತಾರೆ. ಭಾರತೀಯ ನಗರಗಳಿಗೆ ಹೋಲಿಸಿದರೆ ಇದು ಚೆನ್ನಾಗಿದೆ. ತೋಟಗಳು, ತಾಳೆ ತೋಟಗಳು, ಉದ್ಯಾನಗಳನ್ನು ಹೊಂದಿದೆ. ಇಲ್ಲಿ ಮಾನ್ಸೂನ್ ಎಂಬುದು ವಿಶಿಷ್ಟ ಘಟನೆ. ಗೋವಾದಿಂದ ತುಸು ದೂರದ ಪುಟ್ಟ ಊರಿನಲ್ಲಿ ಮಳೆಗಾಲದಲ್ಲಿ ಯಾವ ಚಲನೆಯೂ ಇಲ್ಲ. ಬೀದಿಯಲ್ಲಿ ಓಡಾಡುವ ಕುದುರೆಗಳನ್ನು ಬಿಟ್ಟರೆ ಬೇರೆ ಸದ್ದಿಲ್ಲ. ಈ ಸಂದರ್ಭದಲ್ಲಿ ಅಲೆಗಳು ಎತ್ತರವಾಗಿರುತ್ತವೆ. ಮಳೆಯು ಪಶ್ಚಿಮದ ಗಾಳಿಯೊಂದಿಗೆ ಬರುತ್ತದೆ. ಮಿಂಚು ಗುಡುಗು ಸಿಡಿಲುಗಳು ಅಪ್ಪಳಿಸುತ್ತವೆ. ನಂತರ ನಿಧಾನವಾಗಿ, ನಿರಂತರವಾಗಿ ಮಳೆ ಅಪ್ಪಳಿಸಲು ಶುರುಮಾಡುತ್ತದೆ. ಪೋರ್ಚುಗೀಸರು ಇದನ್ನೇ ಚಳಿಗಾಲ ಎಂದು ಕರೆಯುತ್ತಾರೆ. ಇದಕ್ಕಾಗಿ ಇನ್ನಿಲ್ಲದ ತಯಾರಿಗಳನ್ನು ನಡೆಸುತ್ತಾರೆ. ಆಹಾರ ಮತ್ತು ಧಾನ್ಯಸಂಗ್ರಹ ಮಾಡಿಕೊಳ್ಳುತ್ತಾರೆ. ದೋಣಿಗಳನ್ನು ಸಮುದ್ರದಿಂದ ಹೊರಕ್ಕೆ ಅಥವಾ ನದಿಗಳ ಒಳಬದಿಗೆ ತಂದುಬಿಡುತ್ತಾರೆ. ಎಲ್ಲವನ್ನೂ ಮ್ಯಾಟ್ ಹಾಕಿ ಮುಚ್ಚಿಬಿಡುತ್ತಾರೆ. ಶಾಲುಗಳೂ ದುಪ್ಪಟಿಗಳು ಹೊರಗೆ ಬಂದು ಜಾಗ ಪಡೆಯುತ್ತವೆ. ಸಮುದ್ರ ಮನುಷ್ಯರು ಕೇಳಲೂ ನೋಡಲೂ ಸಾಧ್ಯವಿಲ್ಲದಂತಹ ಅಬ್ಬರದ ದನಿಯ ಅಲೆಗಳ ಘೋಷ ಮತ್ತು ಅಪ್ಪಳಿಕೆಯನ್ನು ಹೊಂದಿರುತ್ತದೆ.”
ವಾತಾವರಣ ಭಾರ ಮತ್ತು ಒಂದು ಬಗೆಯ ವಿಷಣ್ಣತೆಯಿಂದ ಕೂಡಿತ್ತು. ಪೋರ್ಚುಗೀಸರು ಚಡ್ಡಿ ತುಂಡು ಶರ್ಟುಗಳನ್ನು ಧರಿಸಿ ಕುಳಿತು ಕಾರ್ಡ್ಸ್ ಆಡುತ್ತಾ ಬೋರಾದವರಂತೆ ಇದ್ದರು. ಮುಂಗಾರು ಭಾರತೀಯರಿಗೆ ತರುವ ಅಪಾರ ಖುಷಿ, ಅವರಿಗೆ ಅರ್ಥವಾದಂತಿರಲಿಲ್ಲ. ಅವರು ಆ ಮಳೆಯಲ್ಲಿ ನೆನೆಯುತ್ತಾ, ಒದ್ದೆಯಾದ ಜೋಕಾಲಿಯಲ್ಲಿ ಆಡುತ್ತಾ ಮಕ್ಕಳೊಂದಿಗೆ ಆಡುತ್ತಾ ಸಂಭ್ರಮಿಸುತ್ತಿದ್ದರು.
**********
ಈಗ ಸಮುದ್ರ ಅಪ್ಪಟ ಅಬ್ಬರದೊಂದಿಗೆ ಗರ್ಜಿಸುತ್ತಿತ್ತು. ನೀರಿನಿಂದ 50 ಮೀಟರ್ ದೂರದಲ್ಲಿದ್ದ ಪುಟ್ಟದೊಂದು ಗೋಪುರಕ್ಕೆ ಈಗ ಅಲೆಗಳ ನೀರು ಬಂದು ಬಡಿಯುತ್ತಿತ್ತು. ದಂಡೆಗೆ ಬಂದು ಬಡಿಯುತ್ತಿದ್ದ ಅಲೆಗಳು ನೇರವಾಗಿ ಆಕಾಶದಿಂದಲೇ ಇಳಿದು ಬಂದಂತೆ ಇದ್ದವು. ಬೂದಾ ಬಣ್ಣದ ಆ ನೀರಿನ ಅಲೆಗಳು ನೇರ ಸಮುದ್ರದ ಮಧ್ಯದಿಂದಲೇ ಉತ್ಪತ್ತಿಯಾದಂತಿದ್ದವು. ಸಂಜೆಯ ಬೆಳಕಿನಲ್ಲಿ ಅವು ಮೃದುವಾಗಿ ಹೊಳೆಯುತ್ತಿದ್ದವು. “ಸಮುದ್ರದಲ್ಲಿ ಸ್ನಾನ ಮಾಡುವುದು, ಈಜುವುದು ಹಾನಿಕರ’ ಎಂಬ ಫಲಕ ಇತ್ತು; ಆದರೆ ಈಗ ಅದರ ಅಗತ್ಯವಿರಲಿಲ್ಲ.
ಇದನ್ನೂ ಓದಿ: Monsoon 2022 | ರಾಜ್ಯಕ್ಕೆ ಮುಂಗಾರು ಬಂದರೂ ಹಿಡಿಯದ ಮಳೆಗಾಲ