Site icon Vistara News

ಮಕ್ಕಳ ಕಥೆ: ಮರವಾಗಲು ಬಯಸಿದ ಶಿಲ್ಪಿ

sculptor

ಒಂದಾನೊಂದು ಊರಿನಲ್ಲಿ ಶಿಲ್ಪಿಯೊಬ್ಬನಿದ್ದ. ಅವನಿಗೆ ಎಲ್ಲರಿಗಿಂತ ತಾನೇ ಬಲಾಢ್ಯನಾಗಬೇಕು ಎಂಬ ಆಸೆ ಸದಾ ಇತ್ತು. ಇದೊಂದು ಕೊರಗು ಮನದಲ್ಲಿ ಇದ್ದರೂ, ಹತ್ತೂರು ಅಲೆದು ಒಳ್ಳೆಯ ಶಿಲೆಗಳನ್ನು ಹೆಕ್ಕಿ ತಂದು ಶಿಲ್ಪಗಳನ್ನು ಕೊರೆಯುತ್ತಿದ್ದ.

ಒಂದು ದಿನ ಪರ್ವತವೊಂದರ ಬುಡದಲ್ಲಿ ಕುಳಿತು ಶಿಲೆಗಳನ್ನು ಅರಸುತ್ತಿದ್ದ. ಬಿಸಿಲು ಪ್ರಖರವಾಗಿತ್ತು. ದಣಿವಾದಂತಾಗಿ ಸಮೀಪದ ಮರದ ಬುಡದಲ್ಲಿ ಅಡ್ಡಾದ. ಮಲಗಿದ್ದ ಹೊತ್ತಿನಲ್ಲಿ ಮರವನ್ನೇ ಗಮನಿಸುತ್ತಿದ್ದ ಶಿಲ್ಪಿಗೆ, ಮರವೆಂಥಾ ಪುಣ್ಯಶಾಲಿ ಎನಿಸಿತು. ʻಊರೂರು ಅಲೆದು ಕಷ್ಟ ಪಡಬೇಕೆಂದಿಲ್ಲ. ನಿಂತಲ್ಲೇ ಗಾಳಿ, ನೀರು, ಬಿಸಿಲು ಎಲ್ಲವೂ ದೊರೆಯುತ್ತದೆ ಮರಕ್ಕೆ. ಹಾಗೆಯೇ ಅರಸಿ ಬಂದವರಿಗೆ ಆಶ್ರಯ ನೀಡಿದರಾಯಿತು. ನಾನೂ ಒಂದು ಮರವಾಗಿದ್ದರೆʼ ಎನಿಸಿತು ಅವನಿಗೆ. ಅವನ ಮನದ ಮಾತನ್ನೇ ಕೇಳಿಸಿಕೊಳ್ಳುತ್ತಿದ್ದ ದೇವತೆಗಳು, ಅವನನ್ನೊಂದು ಮರವನ್ನಾಗಿ ಮಾಡಿದರು.

ಸ್ವಲ್ಪ ಕಾಲ ಮರ-ಶಿಲ್ಪಿ ನೆಮ್ಮದಿಯಿಂದಿದ್ದ. ಬರಗಾಲ ಬಂತು. ಮಳೆಯಿಲ್ಲದೆ ನೀರಿಲ್ಲದೆ ಮರ ಒಣಗತೊಡಗಿತು. ʻಈ ಮೋಡವೆಷ್ಟು ಬಲಾಢ್ಯ. ಯಾವಾಗ ಬೇಕೆಂದರೆ ಮಳೆ ಸುರಿಸಬಹುದು. ನಾನೂ ಮೋಡವಾಗಿದ್ದರೆʼ ಎಂದುಕೊಂಡ ಆತ. ತಕ್ಷಣವೇ ಮೋಡವಾಗಿದ್ದ. ಬೇಕಾದಲ್ಲಿ ಬೇಕಾದವರಿಗೆ ಬೇಕಾದಷ್ಟು ಮಳೆ ಸುರಿಸಿ ಆತ ನೆಮ್ಮದಿಯಾಗಿದ್ದ. ಮಳೆಗಾಲ ಮುಗಿಯಿತು, ಸೂರ್ಯ ಪ್ರಬಲನಾದ. ಮೋಡ ಚದುರಿತು.

ಇದನ್ನೂ ಓದಿ: ಮಕ್ಕಳ ಕಥೆ: ಆನೆ ಬಾಲ ಹಿಡಿದು ಸ್ವರ್ಗಕ್ಕೆ ಹೋದ ಗೋಪಾಲ

ʻಓಹ್!‌ ಈ ಸೂರ್ಯನೇ ಎಲ್ಲರಿಗಿಂತ ಪ್ರಬಲ. ನಾನೂ ಅವನಾಗಬೇಕುʼ ಎಂದುಕೊಂಡ ಮೋಡ-ಶಿಲ್ಪಿ. ಅವನ ಪ್ರಾರ್ಥನೆ ನೆರವೇರಿತು. ಸೂರ್ಯನ ಪ್ರಖರತೆಗೆ ಎಲ್ಲರೂ ಹೆದರಿದರು. ಶಿಲ್ಪಿಗೆ ಸಂತೋಷವಾಯಿತು. ಕೆಲಕಾಲದ ನಂತರ ತನ್ನ ಬಿಸಿಲಿಗೆ ಹೆದರದೆ ನಿಂತ ದೊಡ್ಡ ಪರ್ವತವೊಂದು ಆತನ ಕಣ್ಣಿಗೆ ಬಿತ್ತು. ʻಅರೆ! ನಾನೆಷ್ಟೇ ಬೆಂಕಿಯಂಥ ಬಿಸಿಲು ಉಗುಳಿದರೂ ಈ ಪರ್ವತ ಲೆಕ್ಕಿಸುತ್ತಲೇ ಇಲ್ಲವಲ್ಲ. ಇದರಂತೆಯೇ ನಾನು ಬಲಾಢ್ಯನಾಗಬೇಕುʼ ಎಂದುಕೊಂಡ ಸೂರ್ಯ-ಶಿಲ್ಪಿ. ಈ ಬಾರಿಯೂ ಅವನ ಪ್ರಾರ್ಥನೆ ನೆರವೇರಿತು.

ಬಿಸಿಲು-ಗಾಳಿ-ಮಳೆ ಯಾವುದಕ್ಕೂ ಜಗ್ಗದ ಪರ್ವತವಾಗಿ ಆತ ಕೆಲಕಾಲ ನೆಮ್ಮದಿಯಿಂದಿದ್ದ. ಒಂದು ದಿನ ಇವನಂತೆಯೇ ಶಿಲ್ಪಿಯೊಬ್ಬ ಉಳಿ, ಸುತ್ತಿಗೆ ತೆಗೆದುಕೊಂಡು ಪರ್ವತದ ಬಳಿ ಬಂದ. ನೋಡನೋಡುತ್ತಿದ್ದಂತೆಯೇ ಪರ್ವತವನ್ನು ತನ್ನ ಉಳಿ-ಸುತ್ತಿಗೆಯಿಂದ ಕುಟ್ಟಿ ತೆಗೆಯತೊಡಗಿದ. ಹೌಹಾರಿದ ಶಿಲ್ಪಿಗೆ ಅರ್ಥವಾಗಿತ್ತು. ತಾನು ಮೊದಲು ಹೇಗಿದ್ದೆನೋ ಅದೇ ಸರಿಯಾಗಿತ್ತು. ಏನೇನೋ ಭ್ರಮೆಯಲ್ಲಿ ಇಷ್ಟು ಕಾಲ ಕಳೆದೆ ಎಂದು. ತನ್ನನ್ನು ಮತ್ತೆ ಮೊದಲಿನಂತೆ ಶಿಲ್ಪಿಯನ್ನಾಗಿ ಮಾಡುವಂತೆ ಆತ ಮೊರೆಯಿಟ್ಟ. ಅವನ ಪ್ರಾರ್ಥನೆ ನೆರವೇರಿತು. ತನ್ನ ಅತೃಪ್ತಿಯನ್ನು ಬದಿಗಿಟ್ಟ ಆತ, ಸಂತೋಷದಿಂದ ಬದುಕತೊಡಗಿದ.   

ಇದನ್ನೂ ಓದಿ: ಮಕ್ಕಳ ಕಥೆ: ನಾಯಿಗಳಿಗೆ ನಮ್ಮೊಂದಿಗೆ ಸ್ನೇಹವೇಕೆ?

Exit mobile version