Site icon Vistara News

ಮಕ್ಕಳ ಕಥೆ: ಹಾಡು ಮಾರಾಟಕ್ಕಿದೆ!

children story

ಬಹಳ ಕಾಲದ ಹಿಂದಿನ ಮಾತಿದು. ಬಹಳ ಅಂದರೆ… ಗೀತ-ನೃತ್ಯಗಳು ಮಾತ್ರವೇ ಮನೋರಂಜನೆಯ ಸಾಧನಗಳು ಎಂದು ಜನ ನಂಬಿದ್ದಷ್ಟು ಹಿಂದಿನ ಕಾಲದ ಮಾತಿದು. ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಮಂಗಲಾ ಎಂಬ ಹುಡುಗಿ ವಾಸಿಸುತ್ತಿದ್ದಳು. ಆ ಹಳ್ಳಿಯ ಎಲ್ಲಾ ಮಹಿಳೆಯರು ಚೆನ್ನಾಗಿ ಹಾಡಿ, ನರ್ತಿಸುತ್ತಿದ್ದರು, ಮಂಗಲಾಳ ಹೊರತಾಗಿ. ಆ ಹಳ್ಳಿಯಲ್ಲಿ ಯಾವುದೇ ಹಬ್ಬ-ಹರಿದಿನ, ಸಭೆ-ಸಮಾರಂಭವಿರಲಿ, ಊರಿನ ಮಹಿಳೆಯರೆಲ್ಲ ಹಾಡುತ್ತಿದ್ದರು. ಆದರೆ ಯಾವುದೇ ಹಾಡು ಬಾರದ ಮಂಗಲಾ, ಈ ಎಲ್ಲದರಿಂದ ದೂರ ಉಳಿಯಬೇಕಾಗುತ್ತಿತ್ತು.

ಇದರಿಂದ ಬೇಸರಗೊಂಡ ಮಂಗಲಾ, ತಾನೂ ಹಾಡು ಕಲಿಯಬೇಕೆಂದುಕೊಂಡಳು. ನೆರೆಮನೆಯಾಕೆಯಲ್ಲಿ ಹೋಗಿ ತನಗೂ ಒಂದು ಹಾಡು ಕಲಿಸಿಕೊಡು ಎಂದು ಕೇಳಿಕೊಂಡಳು. ಆದರೆ ಮನೆ ಕೆಲಸದಲ್ಲಿ ವ್ಯಸ್ತಳಾಗಿದ್ದ ಆಕೆ, ಮಂಗಲಾಳನ್ನು ಹೇಗಾದರೂ ನಿವಾರಿಸಿಕೊಳ್ಳಬೇಕೆಂದುಕೊಂಡು, ʻಹಾಡು…! ಇಲ್ಲೆಲ್ಲಿದೆ? ಪೇಟೆಗೆ ಹೋಗಿ ಹಾಡೊಂದನ್ನು ಕೊಂಡು ತಾʼ ಎಂದು ಕಳುಹಿಸಿಬಿಟ್ಟಳು. ಪಾಪದ ಮಂಗಲಾ, ನೆರೆಮನೆಯಾಕೆಯ ಕುಹಕ ಅರಿಯದಷ್ಟು ಮುಗ್ಧೆಯಾಗಿದ್ದಳು.

ನೇರೆ ಪೇಟೆ ಬೀದಿಗೆ ಹೋದ ಆಕೆ, ಮೊದಲು ಸಿಕ್ಕ ಅಂಗಡಿಯ ಮುಂದೆ ನಿಂತು, ʻನಿಮ್ಮಲ್ಲಿ ಹಾಡು ಮಾರಾಟಕ್ಕಿದೆಯೇ?ʼ ಎಂದು ಕೇಳಿದಳು. ಅಲ್ಲಿದ್ದವರೆಲ್ಲಾ ಬಿದ್ದೂಬಿದ್ದು ನಕ್ಕರು. ಹಾಗೆಯೇ ಒಂದೊಂದೂ ಅಂಗಡಿಗಳಲ್ಲಿ ವಿಚಾರಿಸುತ್ತಾ ನಡೆದ ಮಂಗಲಾ, ಸುತ್ತಲಿನವರಿಗೆಲ್ಲಾ ತಮಾಷೆಯ ವಸ್ತುವಾದಳು. ಆದರೆ ಆಕೆಯ ಮನದಲ್ಲಿ ಹಾಡೊಂದನ್ನು ಕಲಿತೇಬಿಡಬೇಕು ಎಂಬ ಹಠವಿತ್ತಲ್ಲ, ಹಾಗಾಗಿ ಜನರ ಪ್ರತಿಕ್ರಿಯೆಯಿಂದ ಬೇಸರಗೊಳ್ಳದೆ ಹಾಡು ಹುಡುಕುತ್ತ ಮುನ್ನಡೆದಳು.

ಇದೀಗ ಆಕೆ ನಿಂತಿದ್ದು ಸಾಲಿನ ಕೊನೆಯ ಅಂಗಡಿಯ ಮುಂದೆ. ಅದೊಂದು ಚಿತ್ರಕಾರನ ಕುಟೀರವಾಗಿತ್ತು. ಆತ ಯಾವುದೋ ಕೆಲಸದ ಮೇಲೆ ಹೊರಗೆ ಹೋಗಿದ್ದ. ಹಾಗೆ ಹೋಗುವಾಗ, ಅಂಗಡಿಯನ್ನು ನೋಡಿಕೊಳ್ಳುವಂತೆ ಮತ್ತು ಯಾರಾದರೂ ಬಂದರೆ ಸರಿಯಾಗಿ ವ್ಯಾಪಾರ ಕುದುರಿಸುವಂತೆ ತನ್ನಹುಡುಗನಿಗೆ ಹೇಳಿಹೋಗಿದ್ದ. ಮಂಗಲಾ ಅಂಗಡಿ-ಮುಂಗಟ್ಟು ತಿರುಗುವುದನ್ನು ಆ ಯುವಕ ಕೆಲಕಾಲದಿಂದ ನೋಡುತ್ತಿದ್ದ. ಇವಳಿಗೆ ಹೇಗಾದರೂ ಹಾಡೊಂದನ್ನು ಮಾರಾಟ ಮಾಡಬೇಕೆಂದು ಈ ತರುಣನಿಗೆ ಮನಸ್ಸಾದರೂ ಯಾವುದಾದರೂ ಹಾಡು ಬರಬೇಕಲ್ಲ ಹಾಡುವುದಕ್ಕೆ. ಎದುರಿಗಿರುವ ಚಿತ್ರವೊಂದು ಆತನ ಗಮನ ಸೆಳೆಯಿತು.

ಆ ಚಿತ್ರದಲ್ಲಿ ಇಲಿಯೊಂದು ಕುಳಿ ತೋಡುತ್ತಿತ್ತು, ಹಾವೊಂದು ಹರಿದುಹೋಗುತ್ತಿತ್ತು, ಮೊಲವೊಂದು ದೊಡ್ಡ ಕಣ್ಣುಬಿಟ್ಟು ನೋಡುತ್ತಿತ್ತು ಹಾಗೂ ಜಿಂಕೆಯೊಂದ ನೆಗೆದು ಓಡುತ್ತಿತ್ತು. ಇದರ ಮೇಲೆಯೇ ಹಾಡೊಂದನ್ನೇಕೆ ರಚಿಸಬಾರದು ಎಂದು ತೋರಿತು ಆ ಯುವಕನಿಗೆ. ʻಕರ್ ಕರ್ ಕುಳಿ ತೋಡು, ಸರ್ ಸರ್‌ ಹರಿದೋಗು, ಪಿಳ್‌ ಪಿಳ್‌ ಕಣ್ಣುಬಿಡು, ಚಂಗ್‌ ಚಂಗ್‌ ನೆಗೆದೋಡುʼ ಎಂದು ಹಾಡು ಕಟ್ಟಿದ್ದ. ಈ ಹಾಡು ಮಂಗಲಾಳಿಗೆ ಇಷ್ಟವಾಗಿ, ಆಕೆ ಅದನ್ನು ಖರೀದಿಸಿಯೂ ಬಿಟ್ಟಳು!

ಮರುದಿನ ಆ ಊರಿನ ಮುಖಂಡನ ಹೊಸಮನೆಯ ಪ್ರವೇಶವಿತ್ತು. ಅದಕ್ಕೆ ಉಳಿದೆಲ್ಲಾ ಮಹಿಳೆಯರಿಗಿಂತ ಮೊದಲು ತಾನೇ ಈ ಹೊಸ ಹಾಡು ಹಾಡಬೇಕು ಎಂದು ಮಂಗಲಾ ನಿರ್ಧರಿಸಿದಳು. ಈಗಷ್ಟೇ ಕಲಿತಿರುವ ಹಾಡು… ನಾಳೆಗೆ ಮರೆತು ಹೋದರೇನು ಮಾಡುವುದು? ಮಂಗಲಾಳಿಗೆ ಚಿಂತೆಯಾಯಿತು. ಮನೆಗೆ ಬಂದಾಕ್ಷಣ ಕುಳಿತು ಚೆನ್ನಾಗಿ ಹಾಡನ್ನು ಅಭ್ಯಾಸ ಮಾಡಬೇಕು ಎಂದು ನಿರ್ಧರಿಸಿದಳು.

ಇದನ್ನೂ ಓದಿ: ಮಕ್ಕಳ ಕಥೆ: ಹುಲ್ಲನ್ನು ಚಿನ್ನ ಮಾಡುವ ಕಿನ್ನರ!

ಅವಳು ಮನೆಗೆ ಹಿಂದಿರುಗುವ ಹೊತ್ತಿಗೆ, ಮೂವರು ಕಳ್ಳರ ತಂಡವೊಂದು ಅವರ ಮನೆಯ ಹಿಂದಿನ ಗೋಡೆಯಲ್ಲಿ ಕನ್ನ ಕೊರೆಯಲಾರಂಭಿಸಿತ್ತು. ಮನೆಯಲ್ಲಿ ಒಂದೆಡೆ ಕುಳಿತ ಮಂಗಲಾ, ದೊಡ್ಡ ದನಿಯಲ್ಲಿ ಮೊದಲ ಸಾಲು ʻಕರ್‌ ಕರ್‌ ಕುಳಿತೋಡುʼ ಎಂದು ಹಾಡಲಾರಂಭಿಸಿದಳು. ಮೂವರು ಕಳ್ಳರಿಗೂ ತಮ್ಮನ್ಯಾರೊ ಗಮನಿಸುತ್ತಿದ್ದಾರೆಯೇ ಎಂಬ ಅನುಮಾನ ಬಂತು. ಆಚೀಚೆ ಯಾರೂ ಕಾಣಲಿಲ್ಲ ಅವರಿಗೆ. ತೀರಾ ಹೆದರುವುದು ಬೇಡ ಎಂದುಕೊಂಡ ಮೊದಲ ಕಳ್ಳ, ತಾವು ಕೊರೆದ ಕಿಂಡಿಯ ಒಳಗಿಂದ ಮೆಲ್ಲನೆ ಒಳನುಸುಳಲು ಆರಂಭಿಸಿದ. ʻಸರ್‌ ಸರ್‌ ಹರಿದೋಗುʼ ಎಂದು ಮಂಗಲಾ ತನ್ನ ಹಾಡನ್ನು ಮುಂದುವರಿಸಿದಳು.

ಯಾಕೋ ಎಡವಟ್ಟಾಯ್ತು ಎಂದುಕೊಂಡ ಮೊದಲ ಕಳ್ಳ ತೆವಳುವುದ್ನು ನಿಲ್ಲಿಸಿ ಹಿಂದಿರುಗಿದ. ಎರಡನೇ ಮತ್ತು ಮೂರನೇ ಕಳ್ಳಂದಿರಿಗೆ ವಿಷಯ ತಿಳಿಸಿದ. ನಂಬಿಕೆ ಬಾರದ ಅವರಿಬ್ಬರೂ ಕನ್ನ ಕೊರೆದ ಕಿಂಡಿಯೊಳಗೆ ಮುಖವಿಟ್ಟು ನೋಡತೊಡಗಿದರು. ʻಪಿಳ್‌ ಪಿಳ್‌ ಕಣ್ಣುಬಿಡುʼ ಎಂಬ ಮಂಗಲಾಳ ಹಾಡು ಈಗ ಜೋರಾಗಿಯೇ ಸಾಗುತ್ತಿತ್ತು. ಈಗಂತೂ ಎಲ್ಲರಿಗೂ ಹೆದರಿಕೆಯಾಗತೊಡಗಿತು. ಇಲ್ಲೇ ಇದ್ದರೆ ಸಿಕ್ಕಿಬೀಳುವುದು ಖಚಿತ ಎನಿಸಿತು. ಕನ್ನದ ಕಿಂಡಿಯಿಂದ ಹೊರಗೆ ನೆಗೆದು ಓಡಲು ಅಣಿಯಾದರು. ʻಚಂಗ್‌ ಚಂಗ್‌ ನೆಗೆದೋಡೂ…ʼ ಎನ್ನುವಲ್ಲಂತೂ ಮಂಗಲಾಳ ಹಾಡು ತಾರಕಕ್ಕೇರಿತ್ತು. ಅಷ್ಟಕ್ಕೆ ʻಸಾಕು ಸಹವಾಸʼ ಎಂದುಕೊಂಡ ಕಳ್ಳರು ಕಾಲಿಗೆ ಬುದ್ಧಿ ಹೇಳಿದರು.

ಮಾರನೇ ದಿನ ಈ ವಿಷಯ ಊರಲ್ಲೆಲ್ಲಾ ಹರಡಿತು. ಮಂಗಲಾಳ ಹಾಡಿಗಿಂತಲೂ ಅವಳ ಜಾಣತನ ಮತ್ತು ಧೈರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಇದನ್ನೂ ಓದಿ: ಮಕ್ಕಳ ಕಥೆ: ಬ್ರಹ್ಮರಾಕ್ಷಸನಿಗೆ ಚಳ್ಳೆಹಣ್ಣು ತಿನ್ನಿಸಿದ ಜಿಪುಣ

Exit mobile version