ಈ ಕಥೆಯನ್ನು ಇಲ್ಲಿ ಕೇಳಿ:
ಒಂದೂರಿನಲ್ಲೊಬ್ಬ ರಾಜ. ಅವನಿಗಿಬ್ಬರು ಕುಮಾರಿಯರು. ದೊಡ್ಡ ರಾಜಕುಮಾರಿಯ ಹೆಸರು ಕುಪ್ತಿ, ಚಿಕ್ಕವಳ ಹೆಸರು ಇಮಾನಿ. ರಾಜನಿಗೆ ತನ್ನ ಹೆಣ್ಣುಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಪ್ರತೀದಿನ ಗಂಟೆಗಟ್ಟಲೆ ಅವರೊಂದಿಗೆ ಮಾತನಾಡುತ್ತಿದ್ದ. ಹೀಗೆ ಮಾತನಾಡುತ್ತಿರುವಾಗ ಒಮ್ಮೆ ತನ್ನ ಮಕ್ಕಳನ್ನು ಕೇಳಿದ- ʻನಿಮ್ಮ ಬದುಕು ಮತ್ತು ಭವಿಷ್ಯವನ್ನು ನನ್ನ ಕೈಯಲ್ಲಿಟ್ಟಿದ್ದಕ್ಕೆ ನಿಮಗೆ ಸಂತೋಷವಿದೆಯೇ?ʼ
ʻಅದರಲ್ಲಿ ಅನುಮಾನವೇ ಇಲ್ಲ! ನೀವಲ್ಲದಿದ್ದರೆ ಇನ್ಯಾರ ಕೈಯಲ್ಲಿ ಇಡುವುದಕ್ಕೆ ಸಾಧ್ಯ?ʼ ಎಂದಳು ಕುಪ್ತಿ ಅಚ್ಚರಿಯಿಂದ. ರಾಜನಿಗೆ ತುಂಬಾ ಸಂತೋಷವಾಯಿತು.
ಆದರೆ ಇಮಾನಿಯ ಉತ್ತರ ಬೇರೆಯೇ ಇತ್ತು. ʻಹಾಗೇನಿಲ್ಲ! ಅವಕಾಶ ಇದ್ದರೆ ನನ್ನ ಭವಿಷ್ಯವನ್ನು ನನ್ನ ಕೈಯಲ್ಲೇ ಇರಿಸಿಕೊಳ್ಳುತ್ತಿದ್ದೆʼ ಎಂದಳು ಕಿರಿಯ ರಾಜಕುಮಾರಿ. ರಾಜನಿಗೆ ಸಂತೋಷವಾಗುವುದಕ್ಕೆ ಹೇಗೆ ಸಾಧ್ಯ? ʻನಿನ್ನ ಮಾತಿನ ಅರ್ಥ ಆಗುವಷ್ಟು ದೊಡ್ಡವಳು ನೀನಲ್ಲ. ಆದರೂ, ನೀನಂದ ಹಾಗೆಯೇ ಆಗಲಿ. ನಿನ್ನ ಬಯಕೆ ನೆರವೇರುವುದಕ್ಕೆ ಅವಕಾಶ ಕೊಡುತ್ತೇನೆʼ ಎಂದ ರಾಜ.
ಊರಿನ ಹೊರವಲಯದ ಮುರುಕು ಮಂಟಪದಲ್ಲಿ ವಾಸವಾಗಿದ್ದ ಫಕೀರನೊಬ್ಬನಿಗೆ ಬರಹೇಳಿದ ರಾಜ. ʻನೋಡಪ್ಪಾ… ನಿನಗೂ ವಯಸ್ಸಾಗಿದೆ. ಬಡತನವೂ ಇದೆ. ಇಂಥ ಹೊತ್ತಿಗೆ ನಿನ್ನ ಸೇವೆಗಾಗಿ ಚಿಕ್ಕವಯಸ್ಸಿನವರು ಜೊತೆಗಿದ್ದರೆ ಅನುಕೂಲವಲ್ಲವೇ? ಹಾಗಾಗಿ ನನ್ನ ಕಿರಿಯ ಮಗಳನ್ನು ನಿನ್ನ ಜೊತೆ ಕಳುಹಿಸುತ್ತಿದ್ದೇನೆ. ನಿನ್ನಂದಿಗೇ ಇದ್ದು ಆಕೆ ತನ್ನ ಭವಿಷ್ಯ ರೂಪಿಸಿಕೊಳ್ಳುತ್ತಾಳೆʼ ಎಂದು ರಾಜ ಹೇಳಿದರೆ, ಬಡ ಫಕೀರನಿಗೆ ʻಆಗದುʼ ಎನ್ನುವುದಕ್ಕೆ ಬಾಯುಂಟೇ!
ರಾಜಕುಮಾರಿಯೂ ಬೇಸರ ಮಾಡಿಕೊಳ್ಳದೇ ವೃದ್ಧ ಫಕೀರನೊಂದಿಗೆ ಆತನ ಮುರುಕು ಮಂಟಪಕ್ಕೆ ನಡೆದಳು. ಅರಸನ ಮಗಳು, ಪಾಪ, ತನ್ನ ಮನೆಯಲ್ಲಿ ಇರುವಂತಾಯ್ತು ಎಂದು ಬೇಸರಿಸಿದ ಫಕೀರನಿಗೆ, ಹೇಗಾದರೂ ಅವಳಿಗೆ ಸಹಾಯ ಮಾಡಬೇಕು ಎನಿಸಿತು. ಆದರೆ ಏನು ಮತ್ತು ಹೇಗೆ ಮಾಡುವುದು? ಮುರುಕು ಮನೆಗೆ ಕಾಲಿಡುತ್ತಿದ್ದಂತೆ, ಒಳಗೆ ನೋಡಿದರೆ ಇದ್ದಿದ್ದೇನು? ಮಲಗುವುದಕ್ಕೆ ಒಂದು ಚಾಪೆ, ಅಡಿಕೆ ಮಾಡುವುದಕ್ಕೆ ಎರಡು ಮಣ್ಣಿನ ಪಾತ್ರೆಗಳು ಮತ್ತು ನೀರು ತುಂಬುವುದಕ್ಕೊಂದು ಮಡಿಕೆ- ಇಷ್ಟೆ! ಇದರಲ್ಲಿ ರಾಜಕುಮಾರಿಗೆ ಅನುಕೂಲ ಕಲ್ಪಿಸುವುದು ಹೇಗೆ ಎಂಬ ಚಿಂತೆಯಾಯಿತು ಫಕೀರನಿಗೆ. ತನ್ನ ಮೌನ ಮುರಿದ ರಾಜಕುಮಾರಿ, ʻನಿನ್ನ ಬಳಿ ಎಲ್ಲಾದರೂ ಒಂದೆರಡು ನಾಣ್ಯಗಳಿರಬಹುದೇ?ʼ ಎಂದು ಕೇಳಿದಳು. ʻಹುಡುಕಿ ನೋಡುತ್ತೇನೆʼ ಎಂದ ಫಕೀರನಿಗೆ ಮನೆಯಲ್ಲೊಂದೆರಡು ಕಾಸು ಸಿಕ್ಕಿತು. ಅವನಿಂದ ಆ ನಾಣ್ಯಗಳನ್ನು ಪಡೆದ ಆಕೆ, ತನಗೊಂದು ನೂಲುವ ಚರಕ ಮತ್ತು ಕೈಮಗ್ಗವನ್ನು ಎಲ್ಲಿಂದಲಾದರೂ ಕಡ ತರುವಂತೆ ಕೇಳಿದಳು.
ಇದನ್ನೂ ಓದಿ: ಮಕ್ಕಳ ಕಥೆ: ಮೂವರನ್ನು ರಕ್ಷಿಸಿದವನ ಕತೆ ಏನಾಯಿತು?
ಆತ ತನ್ನ ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದಂತೆ, ಮಾರುಕಟ್ಟೆಯತ್ತ ತೆರಳಿದ ಇಮಾನಿ, ಸ್ವಲ್ಪ ಎಣ್ಣೆ ಮತ್ತು ಹತ್ತಿಯನ್ನು ಖರೀದಿಸಿದಳು. ಚರಕ ಮತ್ತು ಕೈಮಗ್ಗದೊಂದಿಗೆ ಮನೆಗೆ ಹಿಂದಿರುಗಿದ ವೃದ್ಧನನ್ನು ಕೂರಿಸಿ, ಅವನ ದುರ್ಬಲ ಕಾಲುಗಳಿಗೆ ಚನ್ನಾಗಿ ಎಣ್ಣೆ ತಿಕ್ಕಿದಳು. ಹಾಗೆಯೇ ರಾತ್ರಿಡೀ ಕುಳಿತು ಚರಕದಿಂದ ಹತ್ತಿಯ ನೂಲು ತೆಗೆದಳು. ಹಗಲಿಡೀ ಕುಳಿತು ಕೈಮಗ್ಗದಲ್ಲಿ ವಸ್ತ್ರ ನೇಯ್ದಳು. ಅತ್ಯಂತ ಚಂದದ ಬಟ್ಟೆಯನ್ನು ಆಕೆ ನೇಯ್ದಿದ್ದಳು. ʻಇದನ್ನೀಗ ಮಾರುಕಟ್ಟೆಯಲ್ಲಿ ಎರಡು ಚಿನ್ನದ ನಾಣ್ಯಗಳ ಬದಲಿಗೆ ಮಾರಾಟ ಮಾಡಿಬರಬೇಕು. ಅಲ್ಲಿಯವರೆಗೆ ನಾನು ಸ್ವಲ್ಪ ಹೊತ್ತು ವಿಶ್ರಮಿಸುತ್ತೇನೆʼ ಎಂದಳು ಇಮಾನಿ.
ಬಟ್ಟೆಯನ್ನು ಮಾರಾಟಕ್ಕೆಂದು ಫಕೀರ ಮಾರುಕಟ್ಟೆಗೆ ತೆಗೆದುಕೊಂಡು ಹೋದ. ಅದೇ ಸಮಯಕ್ಕೆ ಹಿರಿಯ ರಾಜಕುಮಾರಿ ಕುಪ್ತಿಯ ವಾಹನ ಅದೇ ದಾರಿಯಲ್ಲಿ ಸಾಗುತ್ತಿತ್ತು. ಆ ವಸ್ತ್ರವನ್ನು ನೋಡುತ್ತಿದ್ದಂತೆಯೇ ಆಕೆಗೆ ಅದರ ಮೇಲೆ ಮನಸ್ಸಾಯಿತು. ಎರಡು ಚಿನ್ನದ ನಾಣ್ಯ ನೀಡಿ ಖರೀದಿಸಿಯೇಬಿಟ್ಟಳು ಆಕೆ. ಮರುದಿನವೂ ಇಮಾನಿ ಮಾರುಕಟ್ಟೆಗೆ ಹೋಗಿ ಸ್ವಲ್ಪ ಎಣ್ಣೆ ಮತ್ತು ಹತ್ತಿಯನ್ನು ಖರೀದಿಸಿ, ಎಣ್ಣೆಯನ್ನು ಫಕೀರನ ಕಾಲಿಗೆ ತಿಕ್ಕಿ ಸೇವೆ ಮಾಡಿದಳು. ಹತ್ತಿಯಿಂದ ಅತಿ ಚಂದದ ವಸ್ತ್ರ ತಯಾರಿಸಿದಳು. ಅದನ್ನು ಅತಿಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಬಿಕರಿ ಮಾಡಿದಳು. ಪ್ರತಿದಿನ ಅವರ ದಿನಚರಿಯೇ ಈ ರೀತಿಯಲ್ಲಿ ಬದಲಾಯ್ತು. ದಿನದಿಂದ ದಿನಕ್ಕೆ ಇವರ ಸಂಪತ್ತೂ ವೃದ್ಧಿಯಾಯ್ತು. ವೃದ್ಧನ ಕಾಲುಗಳಲ್ಲಿ ಶಕ್ತಿಯೂ ಬಂತು.
ಒಂದು ದಿನ, ʻನಮ್ಮ ಮುರುಕು ಮನೆಯನ್ನು ಸರಿಮಾಡಿಸಬೇಕುʼ ಎಂದು ಯೋಚಿಸಿದ ಇಮಾನಿ, ಊರಿನ ಒಳ್ಳೆಯ ಮೇಸ್ತ್ರಿಯನ್ನು ಕರೆಸಿದಳು. ಆಕೆ ಹೇಳಿದಂತೆಯೇ ಆತ ಚಂದದ ಮನೆಯೊಂದನ್ನು ಕಟ್ಟಿಕೊಟ್ಟ. ಈಗಂತೂ ಇಡೀ ಊರಿನಲ್ಲಿ ಅರಮನೆಯನ್ನು ಬಿಟ್ಟರೆ ಇವರದ್ದೇ ಸುಂದರ ಮನೆ ಎಂಬಂತಾಯ್ತು. ಈ ಮನೆ ರಾಜನ ಕಣ್ಣಿಗೂ ಬಿತ್ತು. ಕುತೂಹಲದಿಂದ ʻಮನೆಯಾರದ್ದು?ʼ ಎಂದು ಆತ ವಿಚಾರಿಸಿದರೆ, ʻತಮ್ಮ ಮಗಳದ್ದು ಮಹಾಸ್ವಾಮಿʼ ಎಂಬ ಉತ್ತರ ಬಂತು. ʻಓಹೋ! ತನ್ನ ಭವಿಷ್ಯ ತಾನೇ ರೂಪಿಸಿಕೊಳ್ಳುವುದಾಗಿ ಹೇಳಿದ್ದಳು. ಅದನ್ನೇ ಮಾಡುತ್ತಿದ್ದಾಳೆ ಎಂದರೆ ಸಂತೋಷʼ ಎಂದುಕೊಂಡ ರಾಜ.
ಇದಾದ ಕೆಲವೇ ದಿನಗಳಲ್ಲಿ ಆತ ಯಾವುದೋ ಕೆಲಸಕ್ಕಾಗಿ ಪಕ್ಕದ ರಾಜ್ಯಕ್ಕೆ ತೆರಳಬೇಕಾಯಿತು. ಹಾಗೆ ಹೋಗುವಾಗ, ʻಅಲ್ಲಿಂದ ನಿನಗೇನು ತರಲಿ?ʼ ಎಂದು ಕುಪ್ತಿಯನ್ನು ಕೇಳಿದ. ʻನನಗೊಂದು ಕೆಂಪು ಹರಳಿನ ಹಾರ ಬೇಕುʼ ಎಂದಳು ಹಿರಿಯ ಹುಡುಗಿ. ಚಿಕ್ಕ ಮಗಳ ನೆನಪಾಗಿ, ಅವಳನ್ನೂ ಕೇಳಿಕೊಂಡು ಬರುವಂತೆ ತನ್ನ ಸೇವಕನೊಬ್ಬನ್ನು ಆಕೆಯ ಮನೆಗೆ ಕಳುಹಿಸಿದ ರಾಜ. ಆ ಸೇವಕ ಬಂದ ಹೊತ್ತಿನಲ್ಲಿ ಮಗ್ಗದ ಮುಂದೆ ಕುಳಿತಿದ್ದ ಇಮಾನಿ, ಗಂಟಾಗಿದ್ದ ನೂಲನ್ನು ಬಿಡಿಸುತ್ತಿದ್ದಳು. ʻರಾಜಕುಮಾರಿಯವರೇ, ಪಕ್ಕದ ರಾಜ್ಯದಿಂದ ಮರಳಿ ಬರುವಾಗ ನಿಮಗಾಗಿ ಏನು ತರಬೇಕು ಎಂದು ಕೇಳಿಕೊಂಡು ಬರುವುದಕ್ಕಾಗಿ ಮಹಾರಾಜರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆʼ ಎಂದು ಆತ ಒಂದೇ ಉಸಿರಿನಲ್ಲಿ ಹೇಳಿದ. ಮೊದಲೇ ನೂಲು ಗಂಟಾಗಿ ಬಿಡಿಸುವುದಕ್ಕೆ ಒದ್ದಾಡುತ್ತಿದ್ದ ಇಮಾನಿ, ʻತಾಳ್ಮೆʼ ಎಂದು ಹೇಳಿ ತನ್ನ ಕೆಲಸ ಮುಂದುವರಿಸಿದಳು. ʻಹೇಳುತ್ತೇನೆ, ಸ್ವಲ್ಪ ತಾಳುʼ ಎಂಬಂತೆ ಉತ್ತರಿಸಿದ್ದಳು ಆಕೆ. ಆದರೆ ಗಡಿಬಿಡಿಯಲ್ಲಿದ್ದ ಸೇವಕ ಮರಳಿ ರಾಜನಲ್ಲಿಗೆ ಹೋಗಿ, ʻಅವರಿಗೆ ತಾಳ್ಮೆಯನ್ನು ತರಬೇಕಂತೆʼ ಎಂದು ತಿಳಿಸಿದ!
ಇದನ್ನೂ ಓದಿ: ಮಕ್ಕಳ ಕಥೆ | ಕಳೆದುಹೋದ ಒಂಟೆಯನ್ನು ತೆನಾಲಿರಾಮ ಹುಡುಕಿದ್ದು ಹೇಗೆ?
ʻಹಾಗೆ ಯಾವುದಾದರೂ ಊರಿನ ಮಾರುಕಟ್ಟೆಯಲ್ಲಿ ದೊರೆಯುವುದೋ ಗೊತ್ತಿಲ್ಲವಲ್ಲ. ನನ್ನ ಬಳಿಯೂ ಇಲ್ಲದ್ದನ್ನು ಅವಳಿಗಾಗಿ ಹುಡುಕಬೇಕಿದೆʼ ಎಂದು ರಾಜ ಚಿಂತಿಸಿದ. ನೆರೆಯ ರಾಜ್ಯದಲ್ಲಿ ತನ್ನ ಕೆಲಸ ಮುಗಿದ ಮೇಲೆ, ಕುಪ್ತಿಗಾಗಿ ಕೆಂಪಿನ ಹಾರ ಖರೀದಿಸಿದ. ಆದರೆ ತಾಳ್ಮೆಯನ್ನು ಎಲ್ಲಿ ಹುಡುಕುವುದು ಎಂಬುದು ತಿಳಿಯಲಿಲ್ಲ. ʻಮಾರುಕಟ್ಟೆಯಲ್ಲಿ ಉಂಟೋ ನೋಡಿ ಬಾʼ ಎಂದು ಸೇವಕನನ್ನು ಕಳುಹಿಸಿದ. ಪಾಪದ ಸೇವಕ ಮಾರುಕಟ್ಟೆಗೆ ಹೋಗಿ ʻತಾಳ್ಮೆ ಸಿಗುತ್ತದೆಯೇ?ʼ ಎಂದು ವಿಚಾರಿಸಲು ಆರಂಭಿಸಿದ. ಕೆಲವರು ನಕ್ಕರು, ಹಲವರು ಗದರಿದರು, ಉಳಿದವರು ತಮಾಷೆ ನೋಡಲಾರಂಭಿಸಿದರು. ಈ ವಿಷಯ ಆ ರಾಜ್ಯದ ಅರಮನೆಗೂ ಮುಟ್ಟಿತು. ಆ ಸೇವಕನನ್ನು ಅರಮನೆಗೆ ಕರೆಸಲಾಯಿತು.
ʻಏನನ್ನು ಖರೀದಿಸಲು ಬಂದೆ?ʼ ನೆರೆರಾಜ್ಯದ ರಾಜ ಕೇಳಿದ. ʻಮಹಾಸ್ವಾಮಿ, ನಮ್ಮ ಒಡೆಯರು ತಮ್ಮ ಮಗಳಿಗಾಗಿ ತಾಳ್ಮೆ ಖರೀದಿಸಲು ಬಯಸಿದ್ದಾರೆʼ ಎಂಬ ಮಾತಿಗೆ ಜೋರಾಗಿ ನಕ್ಕ ನೆರೆರಾಜ್ಯದ ರಾಜ, ʻವಿಚಿತ್ರವಾಗಿದ್ದಾರೆ ನಿನ್ನ ಒಡೆಯ ಮತ್ತವನ ಮಗಳು. ಅವಳಿಗೇಕೆ ಬೇಕಂತೆ ತಾಳ್ಮೆ?ʼ ಎಂದು ಪ್ರಶ್ನಿಸಿದ. ಅಷ್ಟು ಕೇಳುತ್ತಿದ್ದಂತೆ, ʻಅವರಷ್ಟು ಜಾಣೆ, ಚೆಲುವೆ, ದಯಾಪರವಾದ ಹುಡುಗಿ ನಮ್ಮ ರಾಜ್ಯದಲ್ಲೇ ಇನ್ನೊಬ್ಬರಿಲ್ಲ. ಸ್ವಲ್ಪವೂ ಅಹಂಕಾರವಿಲ್ಲದೆ ಸಾಮಾನ್ಯರಂತೆ ಕೆಲಸ ಮಾಡುತ್ತಾರೆ ಆಕೆ…ʼ ಎಂದೆಲ್ಲಾ ತಮ್ಮ ರಾಜಕುಮಾರಿಯ ಗುಣಗಾನಕ್ಕೆ ತೊಡಗಿದ ಸೇವಕ. ನೆರೆರಾಜ್ಯದ ರಾಜನಿಗೆ ಕುತೂಹಲ ಹುಟ್ಟಿತು. ಒಳಗಿನಿಂದ ಸುಂದರವಾದ, ಕಲಾತ್ಮಕ ಕೆತ್ತನೆಗಳಿದ್ದ ಪೆಟ್ಟಿಗೆಯೊಂದನ್ನು ತರಿಸಿದ ಆತ. ಅದಕ್ಕೆ ಬಿಗಿಯಾದ ಮುಚ್ಚಲವಿದ್ದರೂ ಚಿಲಕ, ಬೀಗ ಏನೂ ಇರಲಿಲ್ಲ. ʻಈ ಪೆಟ್ಟಿಗೆಯೊಳಗೆ ನನ್ನ ಹೆಸರಿನ ವಸ್ತುವಿದೆ. ನನ್ನ ಹೆಸರು ಸಬರ್ ಸಿಂಗ್. ಅದರರ್ಥವೂ ತಾಳ್ಮೆ ಎಂದೇ. ಯಾರಿಗೆ ಇದು ಸಲ್ಲಬೇಕೋ ಅವರಿಂದ ಮಾತ್ರ ಈ ಮುಚ್ಚಲ ತೆರೆಯಲಾಗುತ್ತದೆʼ ಎಂದು ಪೆಟ್ಟಿಗೆಯನ್ನು ರಾಜನಿಗೆ ಕೊಟ್ಟುಕಳಿಸಿದ ಸಬರ್ ಸಿಂಗ್.
ತನ್ನ ರಾಜ್ಯಕ್ಕೆ ಹಿಂದಿರುಗಿದ ಮೇಲೆ, ಈ ಪೆಟ್ಟಿಗೆಯನ್ನು ರಾಜ ತನ್ನ ಮಕ್ಕಳಿಗೆ ಕೊಟ್ಟುಕಳಿಸಿದ. ಕೆಂಪಿನ ಹಾರವನ್ನು ಕಂಡು ಕುಪ್ತಿ ಸಂತೋಷಗೊಂಡಳು. ಆದರೆ ಸುಂದರವಾದ ಪೆಟ್ಟಿಗೆಯೊಳಗೆ ತಾನು ಕೇಳಿದ್ದ ʻತಾಳ್ಮೆʼ ಇದೆ ಎಂದಾಗ ಇಮಾನಿ ಅಚ್ಚರಿಗೊಂಡಳು. ತಾನೆಲ್ಲಿ ʻತಾಳ್ಮೆʼ ಬೇಕೆಂದು ಕೇಳಿದ್ದೆ? ಏನು ಬೇಕೆಂದು ಹೇಳುವುದರೊಳಗೇ ಸೇವಕ ಹಿಂದಿರುಗಿದ್ದನಲ್ಲ ಎಂದು ನೆನಪಿಸಿಕೊಂಡಳು. ಆ ಪೆಟ್ಟಿಗೆಯನ್ನು ತೆರೆಯಲು ಫಕೀರ ಯತ್ನಿಸಿದ. ಆದರೆ ಮುಚ್ಚಲ ಎಷ್ಟು ಬಿಗಿಯಾಗಿತ್ತೆಂದರೆ, ಒಂದು ಕೂದಲಿನಷ್ಟೂ ಅಲ್ಲಾಡಲಿಲ್ಲ. ಆದರೆ ಇಮಾನಿ ಆ ಪೆಟ್ಟಿಗೆಯನ್ನು ತೆರೆಯಲು ಯತ್ನಿಸಿದ ಕೂಡಲೆ ಮುಚ್ಚಲ ತೆರೆದುಕೊಂಡಿತು. ಆ ಪೆಟ್ಟಿಗೆಯೊಳಗೆ ಚಂದದೊಂದು ಬೀಸಣಿಗೆಯಿತ್ತು. ಅದರ ಮೇಲೆ ʻಸಬರ್ ಸಿಂಗ್ʼ ಎಂದು ಬರೆದಿತ್ತು. ಅದನ್ನು ಹಿಡಿದು ಬೀಸಿಕೊಳ್ಳುತ್ತಿದ್ದಂತೆಯೇ ಮನೆಯೊಳಗೆ ಸಬರ್ ಸಿಂಗ್ ಪ್ರತ್ಯಕ್ಷನಾದ!
ಇದನ್ನೂ ಓದಿ: ಮಕ್ಕಳ ಕಥೆ | ರಾಜಕುಮಾರಿ ಮತ್ತು ಬುರುಡೆ ಭೂತ
ಇಮಾನಿ ಮತ್ತು ಫಕೀರ ಮುಖ-ಮುಖ ನೋಡಿಕೊಂಡರು. ʻಯಾರು ನೀನು? ಎಲ್ಲಿಂದ ಬಂದೆ? ಯಾಕಾಗಿ ಬಂದೆ?ʼ ಎಂದೆಲ್ಲಾ ಪ್ರಶ್ನಿಸಿದರು. ತನ್ನ ಪರಿಚಯ ಹೇಳಿಕೊಂಡ ಆತ, ಈ ಜಾದೂ ಪೆಟ್ಟಿಗೆಯಲ್ಲಿರುವ ಬೀಸಣಿಕೆ ಬಿಚ್ಚಿ ಬೀಸಿದಲ್ಲಿ ತಾನು ಪ್ರತ್ಯಕ್ಷನಾಗುತ್ತೇನೆ. ಅದನ್ನು ಮಡಿಸಿ ಪೆಟ್ಟಿಗೆಯಲ್ಲಿಟ್ಟರೆ ಮರಳಿ ಮನೆಗೆ ಹೋಗುತ್ತೇನೆ ಎಂದು ವಿವರಿಸಿದ. ತಡ ರಾತ್ರಿಯವರೆಗೆ ಸಬರ್ ಸಿಂಗ್ ಮತ್ತು ಫಕೀರ ಚದುರಂಗ ಆಡಿದರು. ಉಳಿದ ರಾತ್ರಿ ಆತನಿಗಾಗಿಯೇ ಕೋಣೆಯೊಂದನ್ನು ಸಿದ್ಧಪಡಿಸಿಕೊಟ್ಟರು. ಬೆಳಗಾಗುವಷ್ಟರಲ್ಲಿ ಆತನ ಮನೆಗೆ ಮರಳಿದ್ದ. ಹೀಗೆಯೇ ಹಲವಾರು ಬಾರಿ ನಡೆಯಿತು. ಆ ಮನೆಯಲ್ಲಿದ್ದ ಚಂದದ ಕೊಠಡಿಯನ್ನು ಅವನಿಗಾಗಿಯೇ ಮೀಸಲಿಡಲಾಗಿತ್ತು.
ಇವರ ಮನೆಗೊಳಗೆ ಸುಂದರವಾದ ರಾಜನಂತೆ ಕಾಣುವ ಯುವಕನೊಬ್ಬ ಕಾಣಿಸಿಕೊಳ್ಳುತ್ತಾನೆ ಎಂಬ ಸುದ್ದಿ ಅರಮನೆಯಲ್ಲಿದ್ದ ಹಿರಿಯ ರಾಜಕುಮಾರಿ ಕುಪ್ತಿಯ ಕಿವಿಗೂ ಬಿತ್ತು. ಎಂದೂ ಇಲ್ಲದ ಪ್ರೀತಿಯನ್ನು ತಂಗಿಯ ಮೇಲೆ ತೋರಿಸುವವಳಂತೆ ಬಂದ ಆಕೆ, ಒಂದು ರಾಶಿ ಪ್ರೀತಿಯ ಮಾತನ್ನಾಡಿದಳು, ಮನೆಯನ್ನೆಲ್ಲಾ ಓಡಾಡಿದಳು. ಸಬರ್ ಸಿಂಗ್ ಕೋಣೆಯನ್ನು ಪ್ರವೇಶಿಸಿದ ಆಕೆ, ಯಾರಿಗೂ ಗೊತ್ತಾಗದಂತೆ ಹಾಸಿಗೆ ಮೇಲೆಲ್ಲಾ ಗಾಜಿನ ಪುಡಿಯನ್ನು ಚೆಲ್ಲಿದಳು. ಆ ಗಾಜಿನ ಪುಡಿಯೊಂದಿಗೆ ಎಂಥದ್ದೋ ವಿಚಿತ್ರ ಔಷಧಿಯನ್ನೂ ಬೆರೆಸಲಾಗಿತ್ತು. ಕುಪ್ತಿಯ ಕೆಟ್ಟ ಬುದ್ಧಿ ಯಾರ ಗಮನಕ್ಕೂ ಬರಲಿಲ್ಲ, ಇಮಾನಿಯೂ ಸೇರಿದಂತೆ.
ಆ ದಿನ ಮತ್ತೆ ಸಬರ್ ಸಿಂಗ್‌ನನ್ನು ಬರಮಾಡಿಕೊಂಡರು ಫಕೀರ ಮತ್ತು ಇಮಾನಿ. ರಾತ್ರಿ ಬಹಳ ಹೊತ್ತಿನವರೆಗೆ ಚದುರಂಗ ಆಡಿದ ಮೇಲೆ, ಎಂದಿನಂತೆ ತನಗಾಗಿ ಇರಿಸಿದ್ದ ಕೋಣೆಗೆ ತೆರಳಿದ ಸಬರ್ ಸಿಂಗ್. ಹಾಸಿಗೆಯ ಮೇಲೆ ಮಲಗುತ್ತಿದ್ದಂತೆ ಏನೋ ಚುಚ್ಚಲಾರಂಭಿಸಿತು. ಏನೆಂದು ತಿಳಿಯದೆ ಹೊರಳಾಡಿದ ಆತನಿಗೆ ಮೈಯೆಲ್ಲಾ ಗಾಯಗಳಾದವು. ಆ ಗಾಯದ ಮೂಲಕ ಅಲ್ಲಿ ಬೆರೆಸಲಾಗಿದ್ದ ವಿಚಿತ್ರ ಔಷಧಿಯೂ ಆತನ ಮೈ ಸೇರಿತು. ಬೆಳಗಾಗುತ್ತಿದ್ದಂತೆ ಮನೆಗೆ ಮರಳಿದ ಸಬರ್ ಸಿಂಗ್. ಮನೆಗೆ ಹೋದ ಮೇಲೂ ಮೈಯೆಲ್ಲಾ ಉರಿ. ನೋವು ಮುಂದುವರಿಯಿತು. ಯಾವ ವೈದ್ಯರಿಂದಲೂ ಈ ಬಾಧೆ ಕಡಿಮೆಯಾಗಲಿಲ್ಲ. ದಿನದಿಂದ ದಿನಕ್ಕೆ ಆತನ ಆರೋಗ್ಯ ಹಾಳಾಗತೊಡಗಿತು. ಊಟ-ತಿಂಡಿಯೂ ಸೇರದಾಯಿತು. ರಾಜ್ಯದ ಪ್ರಜೆಗಳಿಗೆಲ್ಲಾ ಚಿಂತೆ ಶುರುವಾಯಿತು.
ಇತ್ತ, ಫಕೀರ ಮತ್ತು ಇಮಾನಿಗೂ ಚಿಂತೆ ಶುರುವಾಗಿತ್ತು. ಅಂದು ಹೋದ ಸಬರ್ ಸಿಂಗ್, ಎಷ್ಟು ಬಾರಿ ಜಾದೂ ಪೆಟ್ಟಿಗೆ ತೆರೆದು ಬೀಸಣಿಕೆ ಬೀಸಿದರೂ ಯಾಕೆ ಬರುತ್ತಿಲ್ಲ ಎಂಬುದು ಅವರಿಗೆ ತಿಳಿಯಲಿಲ್ಲ. ತಾನೇ ಹೋಗಿ ನೋಡಿ ಬರುತ್ತೇನೆ ಎಂದು ಫಕೀರರಂತೆ ವೇಷ ಧರಿಸಿದ ಇಮಾನಿ, ಪಕ್ಕದ ರಾಜ್ಯದೆಡೆಗೆ ಹೊರಟಳು. ಕಾಡಿನ ದಾರಿಯಲ್ಲಿ ವಿಶ್ರಮಿಸಲೆಂದು ಮರದ ಕೆಳಗೆ ಮಲಗಿದ್ದಾಗ, ಮೇಲಿದ್ದ ಎರಡು ಕಪಿಗಳು ಮಾತಾಡಿಕೊಳ್ಳುವುದು ಕೇಳಿಸಿತು. ʻಅರಮನೆಗೆ ಹೋಗಿದ್ದೆಯಲ್ಲ… ಏನು ವಿಷಯ?ʼ ಮೊದಲನೇ ಕಪಿ ಕೇಳಿತು. ʻಏನಂತ ಹೇಳುವುದು? ಮಹಾರಾಜರ ಆರೋಗ್ಯ ಸುಧಾರಿಸುತ್ತಲೇ ಇಲ್ಲ. ಎಲ್ಲಾ ವೈದ್ಯರೂ ಕೈಚೆಲ್ಲಿದ್ದಾರೆ. ಹೀಗೇ ಆದರೆ ಇನ್ನೊಂದು ನಾಲ್ಕಾರು ದಿನ… ಅಷ್ಟೆʼ ಎಂದು ಎರಡನೇ ಕಪಿ ಬೇಸರಿಸಿತು. ʻಈ ಮನುಷ್ಯರಷ್ಟು ಧಡ್ಡರು ಯಾರೂ ಇಲ್ಲ. ಅವರಿಗೆ ಬಂದಿರುವ ರೋಗಕ್ಕೆ, ಈಗ ನಾವು ಕುಳಿತಿರುವ ಮರದ ಹಣ್ಣುಗಳನ್ನು ನೀರಲ್ಲಿ ಚನ್ನಾಗಿ ಕಿವುಚಿ, ಕುದಿಸಿ ಸ್ನಾನ ಮಾಡಿಸಬೇಕು. ಕುಡಿವುದಕ್ಕೂ ಇದರ ಕಷಾಯವನ್ನೇ ಕೊಡಬೇಕು. ಅಷ್ಟಾದರೆ ಅವರು ಸುಧಾರಿಸುತ್ತಾರೆ. ಆದರೆ ಧಡ್ಡ ಮನುಷ್ಯರಿಗೆ ಇದನ್ನು ಹೇಳುವವರಾರು?ʼ ಎಂದು ಎರಡೂ ಕಪಿಗಳು ದುಃಖಿಸಿದವು. ವಿಷಯವೇನು ಎಂಬುದು ಇಮಾನಿಗೆ ಅರ್ಥವಾಗಿತ್ತು.
ತಡಮಾಡದೆ ಆ ಮರದ ಹಣ್ಣುಗಳನ್ನು ತನ್ನ ವಸ್ತ್ರದ ತುಂಬಾ ಕಟ್ಟಿಕೊಂಡಳು. ನೇರ ಅರಮನೆಯತ್ತ ನಡೆದಳು. ಯಾರೋ ಸಣ್ಣ ವಯಸ್ಸಿನ ಫಕೀರ, ಮಹಾರಾಜರ ರೋಗಕ್ಕೆ ಮದ್ದು ಕೊಡುವುದಕ್ಕೆ ಬಂದಿದ್ದಾನೆ ಎಂದು ಊರೆಲ್ಲಾ ಸುದ್ದಿಯಾಯಿತು. ಎಂಥೆಂಥಾ ವೈದ್ಯರಿಗೇ ಆಗದ್ದು, ಈ ಫಕೀರನಿಗೆ ಸಾಧ್ಯವೇ ಎಂದು ಕೆಲವರು ಹೇಳಿದರೆ, ಪ್ರಯತ್ನಿಸಿ ನೋಡಬಹುದು ಎಂದು ಹಲವರು ಹೇಳಿದರು. ಅಂತೂ ಮಹಾರಾಜರ ಕೋಣೆಯೊಳಗೆ ಫಕೀರ ವೇಷದ ಇಮಾನಿಗೆ ಪ್ರವೇಶ ದೊರೆಯಿತು. ರೋಗದ ಬಾಧೆಯಿಂದ ಸಬರ್ ಸಿಂಗ್ ಬಸವಳಿದು ಹೋಗಿದ್ದ. ಇಮಾನಿಗಂತೂ ಅವನನ್ನು ನೋಡಿ ಅಳುವೇ ಬಂದ ಹಾಗಾಯಿತು. ತಕ್ಷಣವೇ ಕೋತಿಗಳು ಹೇಳುತ್ತಿದ್ದ ಕಷಾಯವನ್ನು ಕುದಿಸಿ ಕುಡಿಯಲು ಕೊಟ್ಟಳು. ಹಾಗೆಯೇ ದೊಡ್ಡ ಹಂಡೆಯೊಂದರಲ್ಲಿ ಆ ಹಣ್ಣನ್ನು ಹಾಕಿ ಕಿವುಚಿ, ಚನ್ನಾಗಿ ಕುದಿಸಿದಳು. ಅದರಲ್ಲಿ ಸ್ನಾನ ಮಾಡಿಸುವಂತೆ ಸೇವಕರಿಗೆ ಹೇಳಿದಳು. ಮೊದಲ ದಿನವೇ ಸಬರ್ ಸಿಂಗ್ ಮಾತಾಡುವಷ್ಟು ಗೆಲುವಾದ. ಎರಡನೇ ದಿನದ ಚಿಕಿತ್ಸೆಯಿಂದ ಮಂಚದಿಂದ ಎದ್ದು ನಡೆಯುವಷ್ಟಾದ. ಹೀಗೆ ನಾಲ್ಕಾರು ದಿನಗಳ ಚಿಕಿತ್ಸೆಯಲ್ಲೇ ಆತನ ಆರೋಗ್ಯ ಮರಳಿಬಂದಿತ್ತು. ತನಗೆ ಚಿಕಿತ್ಸೆ ಮಾಡಿದ ಫಕೀರನಿಗೆ ಏನು ಕೇಳಿದರೂ ಕೊಡುವಷ್ಟು ಸಂತೋಷವಾಗಿತ್ತು ಸಬರ್ ಸಿಂಗ್‌ಗೆ. ಆದರೆ ಫಕೀರ ಕೇಳಿದ್ದು ಮಹಾರಾಜರ ಬೆರಳಿನ ಉಂಗುರ ಮತ್ತು ಕರದ ವಸ್ತ್ರ ಮಾತ್ರ.
ಮಹಾರಾಜನ ಉಂಗುರ ಮತ್ತು ಕರವಸ್ತ್ರದೊಂದಿಗೆ ಮನೆಗೆ ಮರಳಿದ ಇಮಾನಿ, ನಡೆದಿದ್ದನ್ನು ಫಕೀರನಿಗೆ ಹೇಳಿದಳು. ಕುಪ್ತಿ ಮಾಡಿದ ಕಿತಾಪತಿಯನ್ನು ಫಕೀರ ಈಗಾಗಲೇ ಕಂಡುಹಿಡಿದಿದ್ದ. ಅಂತೂ ಅಪಾಯ ಕಳೆದಿದ್ದಕ್ಕೆ ಇಬ್ಬರೂ ನೆಮ್ಮದಿಯ ಉಸಿರುಬಿಟ್ಟರು. ಕೆಲವು ದಿನಗಳ ನಂತರ, ಜಾದೂ ಪೆಟ್ಟಿಗೆಯ ಮೂಲಕ ಸಬರ್ ಸಿಂಗ್‌ನನ್ನು ಬರಮಾಡಿಕೊಂಡರು. ಇಷ್ಟು ದಿನ ಕರೆದರೂ ಏಕೆ ಬರಲಿಲ್ಲ ಎಂದು ಏನೂ ಗೊತ್ತಿಲ್ಲದವರಂತೆ ಆತನನ್ನು ಕೇಳಿದ ಫಕೀರ. ತನ್ನ ರೋಗದ ವೃತ್ತಾಂತವನ್ನೆಲ್ಲ ತಿಳಿಸಿದ ಸಬರ್ ಸಿಂಗ್. ಮಾತ್ರವಲ್ಲ, ಕಳೆದ ಬಾರಿ ಇಲ್ಲಿಗೆ ಬಂದು ಮಂಚದ ಮೇಲೆ ಮಲಗಿದಾಗ ಏನೋ ತೊಂದರೆ ಆರಂಭವಾಗಿತ್ತು ಎಂಬುದನ್ನೂ ತಿಳಿಸಿದ. ಇದು ಕುಪ್ತಿಯದೇ ಕಿತಾಪತಿ ಎಂಬುದು ಇಬ್ಬರಿಗೂ ಮತ್ತೊಮ್ಮೆ ಖಾತ್ರಿಯಾಗಿತ್ತು. ʻಇದೇ ಬಹುಮಾನವನ್ನಲ್ಲವೇ ನಿಮ್ಮ ವೈದ್ಯರಿಗೆ ನೀವು ಕೊಟ್ಟಿದ್ದು?ʼ ಎನ್ನುತ್ತಾ ತನ್ನಲ್ಲಿದ್ದ ಉಂಗುರ ಮತ್ತು ಕರವಸ್ತ್ರವನ್ನು ಹಿಮಾನಿ ತಂದು ತೋರಿಸಿದಾಗ ಸಬರ್ ಸಿಂಗ್ ಅಚ್ಚರಿಗೊಂಡ. ಈಕೆಯೇ ತನ್ನನ್ನು ಗುಣಪಡಿಸಿದ್ದು ಎಂಬುದು ತಿಳಿದ ಮೇಲೆ ಅವನ ಸಂತೋಷ ಇನ್ನಷ್ಟು ಹೆಚ್ಚಿತು. ಆಕೆ ಮತ್ತು ಫಕೀರನನ್ನು ತನ್ನ ರಾಜ್ಯಕ್ಕೇ ಕರೆದೊಯ್ದ ಸಬರ್ ಸಿಂಗ್. ಇಮಾನಿ ಮತ್ತು ಸಬರ್ ಸಿಂಗ್ ಇಬ್ಬರೂ ವಿವಾಹವಾಗಿ ಸುಖದಿಂದ ಬದುಕಿದರು.