ನೈಜೀರಿಯಾ ದೇಶದ ಜನಪದ ಕಥೆಯಿದು. ಈಗ ನಮ್ಮ ಕಣ್ಣಿಗೆ ಗೋಚರಿಸುವ ಕೆಲವು ವಿಷಯಗಳು ಹಾಗೆಯೇ ಏಕಿರುತ್ತವೆ ಎಂಬ ಬಗ್ಗೆ ಹಲವಾರು ಕಥೆಗಳು ಚಾಲ್ತಿಯಲ್ಲಿವೆ. ನಾಯಿಗಳಿಗೆ ಮಾನವರೊಂದಿಗೆ ಸ್ನೇಹವೇಕೆ ಎಂಬ ಬಗ್ಗೆಯೂ ಇಂಥದ್ದೇ ಒಂದು ಚಂದದ ಕಥೆಯಿದೆ.
ಒಂದಾನೊಂದು ಕಾಲದಲ್ಲಿ ಮಾನವರ ಸಾಮ್ರಾಜ್ಯದ ಒಂದು ತುದಿಗೆ ಪ್ರಾಣಿಗಳದ್ದೂ ಒಂದು ರಾಜ್ಯವಿತ್ತು. ಮಹಾರಾಜರ ಸಾಮಂತರ ಹಾಗೆ ಪ್ರಾಣಿಗಳ ರಾಜ್ಯ ಮಾನವರ ರಾಜ್ಯಕ್ಕೆ ಅಧೀನವಾಗಿತ್ತು. ಆದರೆ ಒಂದು ಸಮಸ್ಯೆಯಿತ್ತು. ಈ ಪ್ರಾಣಿಗಳ ಬಗ್ಗೆ ಮಾನವರು ಕನಿಕರ ಉಳ್ಳವರೇನೂ ಆಗಿರಲಿಲ್ಲ. ಯಾವಾಗಲಾದರೂ ಪ್ರಾಣಿ ರಾಜ್ಯದ ಮೇಲೆ ದಾಳಿ ಮಾಡುತ್ತಿದ್ದ ಮಾನವರು, ಆ ಬಡಜೀವಿಗಳ ಬಳಿ ಇದ್ದಿದ್ದನ್ನೆಲ್ಲಾ ಲೂಟಿ ಮಾಡುತ್ತಿದ್ದರು. ಇದರಿಂದಾಗಿ ಪ್ರಾಣಿಗಳು ಬೇಸತ್ತಿದ್ದವು.
ಒಂದು ದಿನ ಮೃಗರಾಜ ಸಿಂಹ ತನ್ನ ಪ್ರಜೆಗಳನ್ನೆಲ್ಲಾ ಒಂದು ತುರ್ತು ಸಭೆಗಾಗಿ ಕರೆಯಿತು. ಪ್ರಾಣಿಗಳಿಗೆ ಮಾನವರಿಂದ ಆಗುತ್ತಿರುವ ಉಪಟಳವನ್ನು ಹೇಗೆ ದೂರ ಮಾಡಬಹುದು ಎಂಬ ಬಗ್ಗೆ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು. ಒಂದೊಂದು ಪ್ರಾಣಿಗಳು ತಮಗೆ ತೋಚಿದಂತೆ ಸಲಹೆ ಇತ್ತವು. ರಾಜ್ಯದ ಗಡಿಯನ್ನು ಬಲಪಡಿಸಬೇಕು, ಮಾನವರಂತೆ ನಾವೂ ಕೋಟೆ-ಕೊತ್ತಲಗಳನ್ನು ರಚಿಸಿಕೊಳ್ಳಬೇಕು, ಸೇನೆಯನ್ನು ಕಾವಲಿರಿಸಬೇಕು ಎಂಬಂಥ ಹಲವಾರು ಸಲಹೆಗಳು ಬಂದವು. ಆದರೆ ಇದ್ಯಾವುದೂ ಸಿಂಹರಾಜನಿಗೆ ಸರಿಕಾಣಲಿಲ್ಲ.
ಈ ಸಮಯದಲ್ಲಿ ಬುದ್ಧಿವಂತ ಆಮೆ ಉಪಾಯವೊಂದನ್ನು ಸೂಚಿಸಿತು. ನಾವೇ ಮಾನವರ ಮೇಲೆ ಅನಿರೀಕ್ಷಿತ ಆಕ್ರಮಣ ಮಾಡಬೇಕು. ಅವರಿಗೆ ಸಿದ್ಧತೆ ಮಾಡಿಕೊಳ್ಳಲು ಅವಕಾಶವನ್ನೇ ಕೊಡದಂತೆ ರಾತೋರಾತ್ರಿ ದಾಳಿ ಮಾಡಿ ಅವರನ್ನು ಹಣ್ಣಗಾಯಿ ನೀರುಗಾಯಿ ಮಾಡಬೇಕು ಎಂಬುದು ಆಮೆಯ ವಿಚಾರವಾಗಿತ್ತು. ಇದು ಸಿಂಹರಾಜನ ಸಹಿತ ಎಲ್ಲಾ ಪ್ರಾಣಿಗಳಿಗೂ ಇಷ್ಟವಾಯಿತು. ಆದರೆ ಈ ವಿಷಯವನ್ನು ಅತ್ಯಂತ ಗೌಪ್ಯವಾಗಿ ಇರಿಸಬೇಕು ಎಂಬುದು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಇಷ್ಟೆಲ್ಲಾ ತೀರ್ಮಾನಗಳನ್ನು ತೆರೆದುಕೊಳ್ಳುವಾಗ ಯಾರೂ ನಾಯಿಯ ಬಗ್ಗೆ ಗಮನಹರಿಸಲೇ ಇಲ್ಲ.
ಇದನ್ನೂ ಓದಿ: ಮಕ್ಕಳ ಕಥೆ: ನಕ್ಕು ನಗಿಸಿದ ಪಿಟೀಲಿನ ಹುಡುಗ
ನಾಯಿಗೆ ಮೊದಲಿನಿಂದಲೂ ಮನುಷ್ಯರೊಂದಿಗೆ ಸಖ್ಯವಿತ್ತು. ಕಾಡಿನ ಹಸಿ ಮಾಂಸ ಬೇಸರ ಬಂದಾಗೆಲ್ಲಾ ಮಾನವರ ನಾಡಿನತ್ತ ಹೋಗಿ ರುಚಿಕಟ್ಟಾದ ಅಡುಗೆ ತಿಂದು ಬರುತ್ತಿತ್ತು. ಉಳಿದ ಪ್ರಾಣಿಗಳಿಗೆ ಬೇಯಿಸಿದ ಅಡುಗೆಯ ರುಚಿ ಗೊತ್ತಿರಲಿಲ್ಲ. ಹೂವನ್ನೋ ಹಣ್ಣನ್ನೋ ಬಣ್ಣಿಸಬಹುದು. ರುಚಿಯನ್ನು ವರ್ಣಿಸುವುದು ಹೇಗೆ? ತಿಂದವ ಮಾತ್ರ ಬಲ್ಲ. ಹಾಗಾಗಿ ಗುಟ್ಟಾಗಿ ದಾಳಿ ಮಾಡುವ ವಿಚಾರವನ್ನು ಅದು ಮಾನವರ ಕಿವಿಗೆ ತಲುಪಿಸಿಯೇಬಿಟ್ಟತು. ಅವರೂ ತಡಮಾಡದೆ ದಾಳಿ ಎದುರಿಸಲು ಸಿದ್ಧತೆ ಮಾಡಿಕೊಂಡರು.
ಇತ್ತ, ತಮ್ಮೊಂದಿಗಿದ್ದು ತಮಗೇ ಮೋಸ ಮಾಡಿದೆ ನಾಯಿ ಎಂಬುದನ್ನು ಅರಿಯದ ಪ್ರಾಣಿಗಳು, ಒಂದು ರಾತ್ರಿ ಮಾನವರ ಮೇಲೆ ದಾಳಿ ಮಾಡಿದವು. ಅರೆ! ಈ ಮಾನವರು ಇಷ್ಟೊಂದು ಸಿದ್ಧತೆ ಹೇಗೆ ಮಾಡಿಕೊಂಡಿದ್ದಾರೆ ಎಂದು ಪ್ರಾಣಿಗಳಿಗೆ ಅಚ್ಚರಿಯಾಯಿತು. ಮಾತ್ರವಲ್ಲ, ಮಾನವರಿಂದ ಸಿಕ್ಕಾಪಟ್ಟೆ ಪೆಟ್ಟನ್ನೂ ತಿನ್ನಬೇಕಾಯಿತು. ಮೈ-ಕೈಯೆಲ್ಲಾ ಮುರಿದುಕೊಂಡು ರಕ್ತ ನೆಕ್ಕಿಕೊಳ್ಳುತ್ತಾ ಗೋಳಾಡುತ್ತಾ ಅರಣ್ಯಕ್ಕೆ ಮರಳಿದ ಪ್ರಾಣಿಗಳಿಗೆ, ಈ ವಿಚಾರ ಮನುಷ್ಯರಿಗೆ ತಿಳಿದಿದ್ದು ಹೇಗೆ ಎಂಬುದು ಅರ್ಥವಾಗಲಿಲ್ಲ.
ಎಲ್ಲಾ ಕಡೆ ವಿಚಾರಣೆ ನಡೆಸಿದ ಮೇಲೆ ಇದು ನಾಯಿಯದೇ ಕೆಲಸ ಎಂಬುದು ತಿಳಿಯಿತು. ಇದರಿಂದ ಕುಪಿತರಾದ ಪ್ರಾಣಿಗಳು, ನಾಯಿಯನ್ನು ತಮ್ಮ ಕಾಡಿನಿಂದ ಗಡೀಪಾರು ಮಾಡಿದವು. ಆಗಿನಿಂದ ನಾಯಿ ಕಾಡನ್ನು ಬಿಟ್ಟು ನಾಡಿನಲ್ಲೇ ಮನುಷ್ಯರೊಂದಿಗೆ ವಾಸಿಸುತ್ತಿದೆ.
ಇದನ್ನೂ ಓದಿ: ಮಕ್ಕಳ ಕಥೆ: ಆನೆ ಬಾಲ ಹಿಡಿದು ಸ್ವರ್ಗಕ್ಕೆ ಹೋದ ಗೋಪಾಲ