Site icon Vistara News

ಮಕ್ಕಳ ಕಥೆ: ಬ್ರಹ್ಮರಾಕ್ಷಸನಿಗೆ ಚಳ್ಳೆಹಣ್ಣು ತಿನ್ನಿಸಿದ ಜಿಪುಣ

children story

ಒಂದಾನೊಂದು ಕಾಲದಲ್ಲಿ ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಸಿರಿವಂತನೊಬ್ಬ ಜಾಣೆಯಾದ ಹೆಂಡತಿಯೊಂದಿಗೆ ವಾಸವಾಗಿದ್ದ. ಅವನ ಬಳಿ ಎಷ್ಟು ಹಣವಿದ್ದರೇನು… ಎಂಜಲು ಕೈಯಲ್ಲಿ ಕಾಗೆಯನ್ನೂ ಓಡಿಸದಷ್ಟು ಜಿಪುಣ! ಆ ಹಳ್ಳಿಯ ಸುತ್ತಮುತ್ತಲು ದೂರದೂರದವರೆಗೆ ಆತನ ಜಮೀನು ಹರಡಿತ್ತು. ಆದರೆ ಆತನ ಭೂಮಿಯನ್ನು ಉಳುಮೆ ಮಾಡಲು ಯಾರೂ ಮುಂದಾಗುತ್ತಿರಲಿಲ್ಲ. ಆತನ ಜಮೀನಿನಲ್ಲಿ ಎಷ್ಟೇ ಕಷ್ಟಪಟ್ಟರೂ, ಆತ ಅತಿಕಡಿಮೆ ಪ್ರತಿಫಲವನ್ನು ಕೊಡುತ್ತಿದ್ದ. ಹಾಗಾಗಿ ಯಾರೂ ಜಮೀನಿನಲ್ಲಿ ಕೃಷಿ ಮಾಡದೆ, ಜಮೀನು ಹಾಳುಬೀಳತೊಡಗಿತು. ಆ ದೊಡ್ಡ ಜಮೀನಿನಲ್ಲಿದ್ದ ಕೆರೆ-ಬಾವಿಗಳು ಬತ್ತಲಾರಂಭಿಸಿದವು. ಇಷ್ಟಾದರೂ ಆತ ತನ್ನ ಜಮೀನಿಗೆ ಹೆಚ್ಚಿನ ಹಣ ಹಾಕಲು ಸಿದ್ಧನಾಗಲಿಲ್ಲ.

ಇದೇ ಸಮಯಕ್ಕೆ ಆತನ ಮನೆಗೆ ಸನ್ಯಾಸಿಯೊಬ್ಬ ಬಂದ. ಚಿಂತೆಯಲ್ಲಿದ್ದ ಆತನ ಮುಖವನ್ನು ಕಂಡ ಸನ್ಯಾಸಿ ನಿನ್ನ ಚಿಂತೆಗೆ ಕಾರಣವೇನು ಎಂದು ಕೇಳಿದ. ತನ್ನ ಜಮೀನಿನ ಸ್ಥಿತಿಯನ್ನು ಹೇಳಿದ ಸಿರಿವಂತ, ಖರ್ಚಿಲ್ಲದೆಯೇ ಅದನ್ನು ಕೃಷಿ ಮಾಡಿಸುವ ದಾರಿಗಾಣದೆ ಚಿಂತೆಯಾಗುತ್ತಿದೆ ಎಂದು ಹೇಳಿದ. ಇವನಿಗೊಂದು ಪಾಠ ಕಲಿಸಬೇಕೆಂದು ನಿರ್ಧರಿಸಿದ ಸನ್ಯಾಸಿ, ʻʼನಿನಗೊಂದು ವಿಶೇಷವಾದ ಮಂತ್ರವನ್ನು ಉಪದೇಶ ಮಾಡುತ್ತೇನೆ. ಅದನ್ನು ಮುಂದಿನ ಮೂರು ತಿಂಗಳ ಕಾಲ ಹಗಲಿರುಳು ಜಪಿಸಬೇಕು ನೀನು. ನಾಲ್ಕನೇ ತಿಂಗಳ ಮೊದಲ ದಿನ, ನಿನ್ನ ಸೇವಕನಾಗಿ ಒಂದು ಬ್ರಹ್ಮರಾಕ್ಷಸ ಪ್ರತ್ಯಕ್ಷನಾಗುತ್ತಾನೆ. ನೂರು ಜನ ಮಾಡುವ ಕೆಲಸವನ್ನು ಅವನೊಬ್ಬನಿಗೆ ಮಾಡುವ ಸಾಮರ್ಥ್ಯ ಇರುತ್ತದೆʼʼ ಎಂದು ನುಡಿದ. ಇದರಿಂದ ಸಿರಿವಂತನಿಗೆ ಮಹದಾನಂದವಾಯಿತು. ಸನ್ಯಾಸಿ ಹೇಳಿದಂತೆ ಮೂರು ತಿಂಗಳ ಕಾಲ ಹಗಲಿರುಳು ಮಂತ್ರ ಜಪಿಸಿದ. ನಿರೀಕ್ಷೆಯಂತೆ ನಾಲ್ಕನೇ ತಿಂಗಳ ಮೊದಲ ದಿನ ಬ್ರಹ್ಮರಾಕ್ಷಸ ಪ್ರತ್ಯಕ್ಷನಾದ.

ʻʼಮಹಾಸ್ವಾಮಿ, ನಾನು ನಿಮ್ಮ ಸೇವಕ. ಮಹಾಬಲಿಷ್ಠನಾಗಿರುವ ನನ್ನಿಂದ ನೀವು ಯಾವುದೇ ಕೆಲಸವನ್ನೂ ಮಾಡಿಸಿಕೊಳ್ಳಬಹುದು. ಆದರೆ ನನಗೆ ನೀವು ಕೆಲಸ ಹೇಳುತ್ತಲೇ ಇರಬೇಕು. ನಿಲ್ಲಿಸುವಂತಿಲ್ಲ. ಕೆಲಸವಿಲ್ಲದೆ ಖಾಲಿಯಿದ್ದರೆ ನಾನು ಏನಾದರೂ ಅನಾಹುತ ಮಾಡಿಬಿಡುತ್ತೇನೆ. ಕೊನೆಗೆ ನಿಮ್ಮನ್ನೂ ತಿಂದುಬಿಡಬಹುದು. ಈ ಶರತ್ತಿಗೆ ಒಪ್ಪಿಗೆಯಿದ್ದರೆ ನನಗೆ ಕೆಲಸ ಹೇಳಲು ಪ್ರಾರಂಭಿಸಿʼʼ ಎಂದು ಬ್ರಹ್ಮರಾಕ್ಷಸ ನುಡಿದ.

ಇವನಿಗೆ ಕೆಲಸ ಹೇಳುತ್ತಲೇ ಇರಲು ಯಾವ ಸಮಸ್ಯೆಯೂ ಕಾಣಲಿಲ್ಲ ಸಿರಿವಂತನಿಗೆ. ಹೇಗೂ ಹೆಕ್ಟೇರುಗಟ್ಟಳೆ ಜಮೀನು ಹಾಳುಬಿದ್ದಿದೆ. ಎಲ್ಲವನ್ನೂ ಪೈಸೆ ಖರ್ಚಿಲ್ಲದೆ ಸರಿ ಮಾಡಿಸಬಹುದು ಎಂದು ಲೆಕ್ಕ ಹಾಕಿದ. ʻʼವರುಷಗಳಿಂದ ಹಾಳು ಬಿದ್ದಿರುವ ಕೆರೆಯನ್ನು ಸರಿಮಾಡು. ಎಲ್ಲೆಲ್ಲಿ ಕಂಟ ಒಡೆದಿದೆ ನೋಡಿ ಸರಿಮಾಡು. ಹಾಗೆಯೇ ಕೋಡಿಗಳನ್ನು ಸರಿಪಡಿಸಿ, ನೀರು ಹರಿಯುವಂತೆ ಮಾಡುʼʼ ಎಂದು ಆದೇಶಿಸಿದ. ನಾಲ್ಕು ಮೈಲು ಉದ್ದ, ಎರಡು ಮೈಲು ಅಗಲದ ಈ ಕೆರೆಯನ್ನು ಸರಿಪಡಿಸಲು ಇನ್ನೂ ತಿಂಗಳುಗಟ್ಟಳೆ ಬೇಕಾಗುತ್ತದೆ ಎಂಬುದು ಆತನ ಎಣಿಕೆಯಾಗಿತ್ತು. ಮನೆಗೆ ಹೋಗಿ ಊಟ ಮಾಡಿ ಬಂದ ಮೇಲೆ ಈತನ ಕೆಲಸ ನೋಡುತ್ತಾ ಕುಳಿತರಾಯಿತು ಎಂದು ಯೋಚಿಸಿ ನಡೆಯುತ್ತಾ ಮನೆ ತಲುಪುವಷ್ಟರಲ್ಲಿ ಬ್ರಹ್ಮರಾಕ್ಷಸ ಕಾಣಿಸಿಕೊಂಡ.

ಇದನ್ನೂ ಓದಿ: ಮಕ್ಕಳ ಕಥೆ: ಮುಲಾನಾ ಎಂಬ ದಿಟ್ಟ ಹುಡುಗಿ

ʻʼಮಹಾಸ್ವಾಮಿ, ಕೆಲಸ ಪೂರ್ಣಗೊಂಡಿದೆ. ನೀವು ಹೇಳಿದ್ದೆಲ್ಲವನ್ನೂ ಮಾಡಿ, ಎರಡು ತೆಂಗಿನ ಮರದಷ್ಟು ಅಗೆದು, ಕೆರೆಯನ್ನೂ ತುಂಬಿಸಿದ್ದೇನೆ. ಮುಂದಿನ ಕೆಲಸ ಹೇಳಿʼʼ ಎಂದು ಯಜಮಾನನ ಎದುರು ಕೈಕಟ್ಟಿ ನಿಂತ. ಸಿರಿವಂತ ಹೌಹಾರಿದ. ಈ ಬ್ರಹ್ಮರಾಕ್ಷಸನಿಗೆ ಕೆಲಸ ಹೇಳುವುದು ಸುಲಭವಲ್ಲ ಎಂಬುದು ಅರಿವಾಯಿತು. ಆದರೆ ಈಗ ಒಪ್ಪಿಕೊಂಡಾಗಿದೆಯಲ್ಲ, ಬೇರೆ ದಾರಿಯಿಲ್ಲ. ತನ್ನ ಅಗಾಧವಾದ ಜಮೀನೆಲ್ಲವನ್ನೂ ಉಳುಮೆ ಮಾಡುವಂತೆ ಆದೇಶಿಸಿದ. ಅದನ್ನು ಎರಡು ಘಳಿಗೆಗಳಲ್ಲಿ ಬ್ರಹ್ಮರಾಕ್ಷಸ ಮಾಡಿ ಮುಗಿಸಿದ. ಒಂದು ಘಳಿಗೆಗೆ 24 ನಿಮಿಷ ಎಂಬ ಲೆಕ್ಕದಲ್ಲಿ 48 ನಿಮಿಷಗಳಲ್ಲಿ ಅಷ್ಟೂ ಜಮೀನು ಉಳುಮೆಯಾಗಿತ್ತು. ಹೀಗೆ ಯಾವುದೇ ಕೆಲಸ ಹೇಳಿದರೂ ಕ್ಷಣ ಮಾತ್ರದಲ್ಲಿ ಅದನ್ನು ಬ್ರಹ್ಮರಾಕ್ಷಸ ಮುಗಿಸಿ ಮರಳಿ ಬರುತ್ತಿದ್ದ. ಇದೀಗ ಯಜಮಾನನಿಗೆ ಪೀಕಲಾಟ ಶುರುವಾಯಿತು.

ಏನು ಮಾಡುವುದೆಂದು ತಿಳಿಯದೆ, ತನ್ನ ಹೆಂಡತಿಯಲ್ಲಿ ಹೇಳಿಕೊಂಡು ಶೋಕಿಸತೊಡಗಿದ. ಸದ್ಯದಲ್ಲೇ ಬ್ರಹ್ಮರಾಕ್ಷಸನ ಬಾಯಿಗೆ ತಾನು ಆಹಾರವಾಗುವುದು ಖಚಿತ ಎಂದು ಗೋಳಾಡಿದ. ವಿಷಯವನ್ನು ತಿಳಿದ ಆತನ ಜಾಣೆ ಹೆಂಡತಿ, ʻʼನಿಮ್ಮ ಕೆಲಸಗಳೆಲ್ಲ ಮುಗಿದ ಮೇಲೆ ಅವನನ್ನು ನನ್ನ ಬಳಿ ಕಳುಹಿಸಿ. ನನಗೂ ಸ್ವಲ್ಪ ಕೆಲಸ ಮಾಡಿಸಿಕೊಳ್ಳುವುದಿದೆʼʼ ಎಂದಳು. ಒಪ್ಪಿದ ಯಜಮಾನ, ಬ್ರಹ್ಮರಾಕ್ಷಸ ಬರುತ್ತಿದ್ದಂತೆಯೇ ʻʼನನ್ನ ಹೆಂಡತಿಗೆ ಒಂದಿಷ್ಟು ಕೆಲಸವಾಗಬೇಕಿದೆಯಂತೆ. ಅವಳಿಗೆ ಸಹಾಯ ಮಾಡು ಹೋಗುʼʼ ಎಂದ.

ಇದನ್ನೂ ಓದಿ: ಮಕ್ಕಳ ಕಥೆ: ಮೂವರನ್ನು ರಕ್ಷಿಸಿದವನ ಕತೆ ಏನಾಯಿತು?

ತನ್ನ ಬಳಿಗೆ ಬಂದ ಬ್ರಹ್ಮರಾಕ್ಷಸನಿಗೆ ಉದ್ದನೆಯ ಗುಂಗುರು ಕೂದಲೊಂದನ್ನು ನೀಡಿದ ಸಿರಿವಂತನ ಮಡದಿ, ʻʼಇದನ್ನು ಹರಿಯದೆ, ಮುರಿಯದೆ, ಹಾಳು ಮಾಡದೆ ನೇರ ಮಾಡುʼʼ ಎಂದಳು. ಬ್ರಹ್ಮರಾಕ್ಷಸನಿಗೆ ನಗು ಬಂತು. ʻʼಇಷ್ಟು ಸಣ್ಣ ಕೆಲಸಕ್ಕೆ ಸಹಾಯ ಬೇಕೆ?ʼʼ ಎಂದುಕೊಳ್ಳುತ್ತಾ, ಕೆಲಸ ಆರಂಭಿಸಿದ. ಎಷ್ಟು ಬಾರಿ ನೇರ ಮಾಡಿದರೂ, ಆ ಕೂದಲು ಮತ್ತೆ ಸುರುಳಿಯಾಗುತ್ತಿತ್ತು. ಕೋಲು ಕಟ್ಟಿದ, ದಾರ ಕಟ್ಟಿದ… ಏನಾದರೂ ಪ್ರಯೋಗ ಹೆಚ್ಚಾಗಿ, ಕೂದಲು ತುಂಡಾದರೆ ಎಂಬ ಭಯವೂ ಅವನಲ್ಲಿತ್ತು.

ಏನು ಮಾಡಲಿ ಎಂದು ಯೋಚಿಸುತ್ತಿದ್ದ ಅವನಿಗೆ, ಚಿನ್ನದ ಕೆಲಸ ಮಾಡುವ ಚಿನಿವಾರ ಬೆಂಕಿಯಲ್ಲಿ ಕಾಯಿಸಿ, ತೆಳ್ಳಗಿನ ತಂತಿಯನ್ನು ನೇರ ಮಾಡುತ್ತಿದ್ದುದು ನೆನಪಾಯಿತು. ತಾನೂ ಹಾಗೆಯೇ ಪ್ರಯತ್ನಿಸಬೇಕೆಂದು ತೋರಿತು. ಬೆಂಕಿಯ ಬಳಿಗೆ ಕೂದಲು ಹಿಡಿಯುತ್ತಿದ್ದಂತೆ ಥಟ್ಟನೆ ಕೂದಲು ಸುಟ್ಟು ಬೂದಿಯಾಯಿತು! ಈಗ ಮಾಡುವುದೇನು? ಯಜಮಾನಿ ಹೇಳಿದ್ದನ್ನು ಮಾಡಲಾಗದೆ ಹೆದರಿದ ಬ್ರಹ್ಮರಾಕ್ಷಸ, ಅಲ್ಲಿಂದ ಪಲಾಯನ ಮಾಡಿದ. ಮತ್ತೆಂದೂ ಆತ ತಿರುಗಿ ಬರಲಿಲ್ಲ. ಹಾಗೆಯೇ ಖರ್ಚಿಲ್ಲದೆ ಕೆಲಸ ಮಾಡಿಸಲು ಯತ್ನಿಸಿದರೆ ಅಪಾಯ ಕಟ್ಟಿದ್ದಿದ್ದು ಎಂಬುದು ಸಿರಿವಂತನಿಗೂ ಮನದಟ್ಟಾಗಿ, ಆತ ಒಳ್ಳೆಯ ಮನುಷ್ಯನಾದ.

ಇದನ್ನೂ ಓದಿ: ಮಕ್ಕಳ ಕಥೆ: ಹುಲ್ಲನ್ನು ಚಿನ್ನ ಮಾಡುವ ಕಿನ್ನರ!

Exit mobile version