Site icon Vistara News

ಮಕ್ಕಳ ಕಥೆ | ರಾಜಕುಮಾರನ ಹೊಟ್ಟೆಯೊಳಗಿನ ಹಾವು

snake prince

ವಿಜಯಗಡ ಎಂಬ ರಾಜ್ಯವನ್ನು ಒಳ್ಳೆಯ ಮನಸ್ಸಿನ ಕರುಣಾಳುವಾದ ರಾಜ ಆಳುತ್ತಿದ್ದ. ಈ ರಾಜನ ಆಳ್ವಿಕೆಯಿಂದ ಪ್ರಜೆಗಳೆಲ್ಲಾ ಸಂತುಷ್ಟರಾಗಿದ್ದರು. ಕಾಲಕಾಲಕ್ಕೆ ಮಳೆ-ಬೆಳೆ ಎಲ್ಲವೂ ಸಮೃದ್ಧವಾಗಿದ್ದು, ರಾಜ್ಯವೂ ಸುಭಿಕ್ಷವಾಗಿತ್ತು.

ಇಷ್ಟೆಲ್ಲಾ ಇದ್ದರೂ, ರಾಜ್ಯದ ರಾಜನ ಮನಸ್ಸಿಗೇ ಸಂತೋಷ ಇರಲಿಲ್ಲ. ಕಾರಣ, ರಾಜಕುಮಾರನ ವಿಚಿತ್ರ ಅನಾರೋಗ್ಯ. ದೆವ್ವ ಮೆಟ್ಟಿದಂತೆ ಹಾವೊಂದು ಆತನ ದೇಹವನ್ನು ಸೇರಿಕೊಂಡು, ಏನೇನೋ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿತ್ತು. ಮದ್ದು, ಮಂತ್ರ, ತಂತ್ರ ಯಾವುದಕ್ಕೂ ಬಗ್ಗದ ಈ ಸಮಸ್ಯೆಯಿಂದಾಗಿ ರಾಜ ಸದಾ ದುಃಖಿತನಾಗಿರುತ್ತಿದ್ದ. ತನ್ನ ಮಗನ ಆರೋಗ್ಯ ಸಮಸ್ಯೆಗೆ ಯಾರಿಂದ ಪರಿಹಾರ ಸಿಕ್ಕೀತು ಎಂಬುದೇ ತಿಳಿಯದೆ ಕಂಗಾಲಾಗಿದ್ದ.

ರಾಜಕುಮಾರ ಬೆಳೆದು ದೊಡ್ಡವನಾದ. ಅವನ ಆರೋಗ್ಯ ಸಮಸ್ಯೆಯೂ ದೊಡ್ಡದಾಯಿತೇ ಹೊರತು ಕಡಿಮೆಯಾಗಲಿಲ್ಲ. ತನ್ನ ಸ್ಥಿತಿಯನ್ನು ಕಂಡು ತೀವ್ರವಾಗಿ ಮನನೊಂದ ರಾಜಕುಮಾರ, ಇತ್ತ ತಂದೆಯ ಶೋಕವನ್ನೂ ನೋಡಲಾರದೆ, ನೆಮ್ಮದಿಯ ಆರೋಗ್ಯವನ್ನೂ ಕಾಣದೆ ಪರಿಹಾರ ಹುಡುಕಿಕೊಂಡು ಮನೆಬಿಟ್ಟು ತೆರಳಿದ. ನಡೆದೂನಡೆದು ಬಹುದೂರ ಸಾಗಿದ. ತನ್ನ ರಾಜ್ಯವನ್ನು ಬಿಟ್ಟು ಪಕ್ಕದ ರಾಜ್ಯಕ್ಕೆ ಹೋದ. ಅಲ್ಲಿನ ರಾಜಧಾನಿಯ ಹೊರಗಿದ್ದ ಹಾಳು ಗುಡಿಯೊಂದರಲ್ಲಿ ವಾಸಿಸತೊಡಗಿದ. ಹೊಟ್ಟೆ ಹೊರೆಯುವುದಕ್ಕಾಗಿ ಭಿಕ್ಷೆ ಬೇಡುತ್ತಿದ್ದ.

ಇದನ್ನೂ ಓದಿ: ಮಕ್ಕಳ ಕಥೆ | ಕಾಗದದ ಒಳಗೆ ಬೆಂಕಿ, ಗಾಳಿ, ಸಂಗೀತ ಹಿಡಿದಿಟ್ಟಳಾ ಹುಡುಗಿ!

ಆ ರಾಜ್ಯದ ರಾಜ ಕ್ರೂರಿ. ಪ್ರಜೆಗಳ ಕಷ್ಟ-ಸುಖದ ಪರಿವೆಯೇ ಇರಲಿಲ್ಲ ಅವನಿಗೆ. ಆದರೆ ಅವನ ಮಗಳಿಗೆ ಈ ಬಗ್ಗೆ ಬಹಳ ಬೇಸರವಿತ್ತು. ತನ್ನ ತಂದೆ ಒಳ್ಳೆಯ ರಾಜನಾಗಲಿ ಎಂದು ಆಕೆ ಸದಾ ಬಯಸುತ್ತಿದ್ದಳು. ಅವನ ಕೆಲಸಗಳು ಸರಿ ಕಾಣದಿದ್ದರೆ ಟೀಕಿಸುತ್ತಿದ್ದಳು. ತನ್ನ ಮಗಳು ತನ್ನಂತೆ ಇಲ್ಲ ಎಂಬುದಕ್ಕೆ ಈ ಕ್ರೂರಿ ರಾಜನಿಗೆ ಬಹಳ ಸಿಟ್ಟು ಬರುತ್ತಿತ್ತು. ಇವಳಿಗೇನಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿದ ರಾಜ, ಇವಳನ್ನೊಬ್ಬ ಭಿಕಾರಿಗೆ ಕೊಟ್ಟು ಮದುವೆ ಮಾಡಬೇಕೆಂದು ಯೋಚಿಸಿದ. ಮರುದಿನ ಬೆಳಗ್ಗೆ ಬೇಡುತ್ತಾ ಬರುವ ಮೊದಲ ಭಿಕಾರಿಯ ಜೊತೆ ಇವಳ ಮದುವೆ ಮಾಡಲು ನಿಶ್ಚಯಿಸಿದ.

ಬೆಳಗಾಗುತ್ತಿದ್ದಂತೆ ಬೇಡುತ್ತಾ ಹೊರಟ ರಾಜಕುಮಾರ, ಅರಮನೆಯ ಬಳಿ ಬಂದ. ಅವನನ್ನು ಕಂಡಾಕ್ಷಣ ಹಿಡಿದು ತರಲು ತನ್ನ ಸೇವಕರಿಗೆ ಆಜ್ಞಾಪಿಸಿದ ರಾಜ, ಒತ್ತಾಯದಿಂದ ತನ್ನ ಮಗಳೊಂದಿಗೆ ಭಿಕಾರಿ ರಾಜಕುಮಾರನ ಮದುವೆ ಮಾಡಿದ. ಬೇರೆ ದಾರಿಯಿಲ್ಲದೆ, ಅವನೊಂದಿಗೆ ಹಾಳುಗುಡಿಯಲ್ಲೇ ರಾಜಕುಮಾರಿಯೂ ವಾಸಿಸತೊಡಗಿದಳು.

ಒಂದು ದಿನ ಕೆಲಸ ಹುಡುಕಿ ಅಲೆದು ಹಾಳುಗುಡಿಗೆ ಹಿಂದಿರುಗಿದ ರಾಜಕುಮಾರಿಗೆ ಆಶ್ಚರ್ಯವೊಂದು ಕಣ್ಣಿಗೆ ಬಿತ್ತು. ಮಲಗಿ ನಿದ್ದೆ ಮಾಡುತ್ತಿದ್ದ ಆಕೆಯ ಗಂಡನ ಬಾಯಿಯಿಂದ ದೊಡ್ಡ ಹಾವೊಂದು ಹೊರಗೆ ಬಂತು. ಅದರ ಪಕ್ಕದಲ್ಲಿ ಕುಳಿತಿದ್ದ ಮತ್ತೊಂದು ಹಾವು, ʻನೀನೇಕೆ ರಾಜಕುಮಾರನ ದೇಹವನ್ನು ಬಿಟ್ಟು ಬರಬಾರದು? ಪಾಪ, ಆತ ಬಹಳ ಒಳ್ಳೆಯವನು. ನಿನ್ನಿಂದ ತುಂಬಾ ಕಷ್ಟಪಡುತ್ತಿದ್ದಾನೆʼ ಎಂದು ಕೇಳಿತು. ಅದಕ್ಕೆ ಉತ್ತರಿಸಿದ ಬಾಯಿಂದ ಬಂದ ಹಾವು, ʻನನಗೆ ಹೇಳುವುದಕ್ಕೆ ನೀನ್ಯಾರು? ದಾರಿ ಬಂದಿಯಲ್ಲಿ ನಿಂತು ಕಂಡವರನ್ನೆಲ್ಲಾ ಕಚ್ಚುವ ನೀನು ಕೆಲಸ ನೋಡಿಕೊ, ಹೋಗುʼ ಎಂದು ದಬಾಯಿಸುತ್ತಿತ್ತು.

ರಾಜಕುಮಾರಿಗೆ ವಿಷಯ ಅಲ್ಪಸ್ವಲ್ಪ ಅರ್ಥವಾಯಿತು. ತಕ್ಷಣವೇ ತನ್ನಲ್ಲಿದ್ದ ಕತ್ತಿಯಿಂದ ಎರಡೂ ಹಾವುಗಳನ್ನು ಆಕೆ ಕೊಂದುಹಾಕಿದಳು. ಈ ಗದ್ದಲಕ್ಕೆ ಎಚ್ಚರಗೊಂಡ ರಾಜಕುಮಾರನಿಗೆ ಆಕೆ ವಿಷಯ ತಿಳಿಸಿದಳು. ಆತನೂ ತನ್ನ ನಿಜವಾದ ಕಥೆಯನ್ನೆಲ್ಲಾ ಆಕೆಗೆ ಹೇಳಿದ. ಇಬ್ಬರೂ ಆತನ ರಾಜ್ಯಕ್ಕೆ ತೆರಳಿದರು. ಕೆಲವೇ ದಿನಗಳಲ್ಲಿ ರಾಜಕುಮಾರ ಸಂಪೂರ್ಣ ಗುಣಮುಖನಾದ. ಇಬ್ಬರೂ ಸಂತೋಷದಿಂದ ರಾಜ್ಯವಾಳಿಕೊಂಡಿದ್ದರು.

ಇದನ್ನೂ ಓದಿ: ಮಕ್ಕಳ ಕಥೆ: ಸಹೋದರರ ಉಗ್ರಾಣದಲ್ಲಿ ಧಾನ್ಯ ಯಾಕೆ ಕಡಿಮೆ ಆಗಲಿಲ್ಲ?

Exit mobile version