Site icon Vistara News

ಮಕ್ಕಳ ಕಥೆ: ಆಮೆ ಕಾಡಿನ ರಾಜ ಆದದ್ದು ಹೇಗೆ?

children story

ಒಂದಾನೊಂದು ಕಾಡಿನಲ್ಲಿ ರಾಜನಾಗಿ ಸಿಂಹವೊಂದು ಮೆರೆಯುತ್ತಿತ್ತು. ಅದಕ್ಕೆ ತನ್ನ ಬಲ. ಸಾಮರ್ಥ್ಯದ ಬಗ್ಗೆ ಹೇಳಿಕೊಳ್ಳುವುದಕ್ಕೆ ತುಂಬಾ ಹೆಮ್ಮೆಯಿತ್ತು. ಅಗತ್ಯವಿಲ್ಲದಿದ್ದರೂ ಆಗಾಗ ತನ್ನ ಬಲದ ಬಗ್ಗೆ ಕೊಚ್ಚಿಕೊಳ್ಳುತ್ತಿತ್ತು.

ಒಮ್ಮೆ ಮಾಡಲು ಕೆಲಸವಿಲ್ಲದೆ ಬೇಸರದಿಂದ ಕುಳಿತಿದ್ದ ಹೊತ್ತಿನಲ್ಲಿ ಸಿಂಹಕ್ಕೊಂದು ಕಿಡಿಗೇಡಿ ಉಪಾಯ ಬಂತು. ತನ್ನ ಪ್ರಜೆಗಳನ್ನೆಲ್ಲಾ ಕರೆದು, ಅವರಿಗೊಂದು ಸವಾಲು ಹಾಕಿತು. ತಾನು ಒಂದು ಪಾತ್ರೆ ತುಂಬಾ ಕುದಿಯುವ ನೀರು ಕೊಡುವುದಾಗಿಯೂ ಯಾರು ಅದನ್ನು ಗಟಗಟನೇ ಕುಡಿಯುವರೋ ಅವರಿಗೆ ತನ್ನ ಸಿಂಹಾಸನ ನೀಡುವುದಾಗಿಯೂ ಘೋಷಿಸಿತು. ಅಂತೆಯೇ ನೀರು ಕುದಿಸಲಾರಂಭಿಸಿತು.

ಕುದಿಯುತ್ತಿರುವ ನೀರಿನ ಶಬ್ದಕ್ಕೇ ಹೆದರಿದ ಬಡ ಪ್ರಾಣಿಗಳು ಯಾರೂ ಈ ಸವಾಲು ಸ್ವೀಕರಿಸಲು ಮುಂದೆ ಬರಲಿಲ್ಲ. ಸಿಂಹಾಸನವೇನು, ಸೂರ್ಯ-ಚಂದ್ರರನ್ನು ಕೊಟ್ಟರೂ ಬಾಯಿ ಸುಟ್ಟುಕೊಳ್ಳುವುದಿಲ್ಲ ಎಂದು ನಿರ್ಧರಿಸಿದವು. ʻನಾನು ಪ್ರಯತ್ನಿಸಲೇ ಮಹಾಸ್ವಾಮಿ?ʼ ಸಣ್ಣ ಧ್ವನಿಯೊಂದು ಸಭೆಯ ನಡುವಿನಿಂದ ತೂರಿಬಂತು. ನೋಡಿದರೆ ಆಮೆ. ʻಆನೆಗೇ ಆಗದ್ದು ಆಮೆಯಿಂದಾದೀತೆ?ʼ ಎಂದೇ ಸಭೆ ಭಾವಿಸಿದರೂ, ಆಮೆ ರಾಜಗಾಂಭೀರ್ಯದಿಂದ ನಡೆದುಬಂತು.

ʻಯಾರೂ ನನ್ನನ್ನು ಮೋಸಗಾರನೆಂದು ತಿಳಿದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ, ನೀವು ಕುಳಿತಲ್ಲಿಗೇ ಕುದಿ ನೀರಿನ ಪಾತ್ರೆಯನ್ನು ತಂದು ತೋರಿಸುತ್ತೇನೆʼ ಎಂದ ಆಮೆ, ತನ್ನದೇ ವೇಗದಲ್ಲಿ ಎಲ್ಲರ ಮುಂದೆಯೂ ಪಾತ್ರೆಯನ್ನು ತೋರಿಸುತ್ತಾ ಬಂತು. ಅದಷ್ಟು ಮಾಡುವಷ್ಟರಲ್ಲಿ ಕುದಿ ನೀರು ಎಷ್ಟು ತಣ್ಣಗಾಗಿತ್ತು ಎಂಬುದು ಯಾರ ಗಮನಕ್ಕೂ ಬರಲೇ ಇಲ್ಲ. ಸಿಂಹದ ಎದುರಿಗೆ ನಿಂತ ಆಮೆ, ಅಷ್ಟೂ ನೀರನ್ನೂ ಗಟಗಟನೇ ಕುಡಿಯಿತು. ಇಡೀ ಸಭೆ ಸ್ತಬ್ಧವಾಯಿತು. ಅಂದಿನಿಂದ ಆಮೆಯನ್ನೇ ರಾಜ ಎಂದು ಘೋಷಿಸಲಾಯಿತು.

ಇದನ್ನೂ ಓದಿ: ಮಕ್ಕಳ ಕಥೆ: ಆಮೆಯ ಚಿಪ್ಪಿನಲ್ಲಿ ಬಿರುಕು ಏಕಿದೆ?

Exit mobile version