ಒಂದಾನೊಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಒಂದೂರಿನಲ್ಲಿ ವರ್ತಕನೊಬ್ಬ ವಾಸಿಸುತ್ತಿದ್ದ. ಆತನಿಗೆ ಇಬ್ಬರು ಹೆಂಡತಿಯರಿದ್ದರು. ಇವರಿಬ್ಬರಲ್ಲಿ ಆತನಿಗೆ ಎರಡನೇ ಹೆಂಡತಿ ಮೇಲೆ ಅತೀವ ಪ್ರೇಮವಿತ್ತು. ಅವಳ ತಲೆಯ ಮೇಲೆ ಎರಡು ಗೊಂಚಲು ಕೂದಲಿತ್ತು. ಮೊದಲನೇ ಹೆಂಡತಿಯೆಂದರೆ ವರ್ತಕನಿಗೆ ಅಷ್ಟಕ್ಕಷ್ಟೆ. ಕಾರಣ, ಅವಳ ತಲೆಯ ಮೇಲೆ ಒಂದೇ ಗೊಂಚಲು ಕೂದಲಿತ್ತು. ಹೆಂಡತಿಯರಿಬ್ಬರಲ್ಲೂ ಸಾಮರಸ್ಯ ಇಲ್ಲದಿದ್ದರೂ ಬೇರೆ ದಾರಿಯಿಲ್ಲದೆ ಒಂದೇ ಮನೆಯಲ್ಲಿ ವಾಸವಾಗಿದ್ದರು.
ಒಂದು ದಿನ ಆ ವರ್ತಕ ಸರಕುಗಳನ್ನು ತರುವುದಕ್ಕಾಗಿ ಯಾವುದೋ ಊರಿಗೆ ಹೋಗಬೇಕಾಗಿ ಬಂತು. ಅವನು ಹಾಗೆ ಹೋದಾಗ ಮರಳಿ ಬರುವುದಕ್ಕೆ ನಾಲ್ಕಾರು ದಿನಗಳು ಬೇಕಾಗುತ್ತಿದ್ದವು. ಅಂಥ ಸಂದರ್ಭದಲ್ಲಿ ಮೊದಲ ಪತ್ನಿಯ ಬದುಕು ಸಂಕಷ್ಟಕ್ಕೆ ಸಿಲುಕುತ್ತಿತ್ತು. ಅವಳಿಂದ ಮನೆಯ ಚಾಕರಿಯನ್ನೆಲ್ಲಾ ಮಾಡಿಸುತ್ತಿದ್ದ ಎರಡನೇ ಹೆಂಡತಿ, ಅವಳಿಗೆ ಹೊಟ್ಟೆ ತುಂಬುವಷ್ಟು ಊಟವನ್ನೂ ಕೊಡುತ್ತಿರಲಿಲ್ಲ. ಈ ಬಾರಿಯೂ ಅದೇ ಆಯಿತು. ಮಾತ್ರವಲ್ಲ, ಅವಳಿಗೆ ತನ್ನ ತಲೆ ಬಾಚಲು ಹೇಳಿದಳು ಎರಡನೆಯವಳು. ಹಾಗೆ ಬಾಚುತ್ತಿರುವಾಗ ಮೊದಲನೆಯವಳ ಕೈಯಿಂದ ಆಕಸ್ಮಿಕವಾಗಿ ಒಂದು ಕೂದಲು ತುಂಡಾಗಿ ಹೋಯಿತು. ಇದರಿಂದ ಕೆಂಡಾಮಂಡಲವಾದ ಎರಡನೇ ಹೆಂಡತಿ, ಹಿರಿಯವಳ ತಲೆಯಲ್ಲಿದ್ದ ಒಂದೇಒಂದು ಗೊಂಚಲು ಕೂದಲನ್ನು ಕಿತ್ತು ಮಂಡೆಯನ್ನೆಲ್ಲಾ ಬೋಳುಮಾಡಿದಳು. ಇಷ್ಟೂ ಸಾಲದೆಂಬಂತೆ, ಅವಳನ್ನು ಮನೆಯಿಂದ ಹೊರಗೆ ಹಾಕಿದಳು.
ಮೊದಲ ಪತ್ನಿಗೆ ಬಹಳ ಬೇಸರವಾಗಿತ್ತು. ಇದ್ದ ಅಲ್ಪಸ್ವಲ್ಪ ಕೂದಲೂ ಕಿತ್ತು ಬೋಳಾಗಿತ್ತು. ʻಮೊದಲೇ ಗಂಡನಿಗೆ ತನ್ನ ಮೇಲೆ ಪ್ರೀತಿಯಿಲ್ಲ, ಇನ್ನಂತೂ ಕೇಳುವುದೂ ಇಲ್ಲ. ಇಷ್ಟಾದ ಮೇಲೆ ಬದುಕಿದ್ದು ಏನು ಪ್ರಯೋಜನʼ ಎಂದು ಯೋಚಿಸಿದ ಅವಳು, ಕಾಡಿಗೆ ಹೋದರೆ ಯಾವುದಾದರೂ ಪ್ರಾಣಿಯ ಊಟಕ್ಕಾದರೂ ಆಗಬಹುದು ಎಂದುಕೊಂಡು ಅರಣ್ಯದತ್ತ ನಡೆದಳು. ದಾರಿಯಲ್ಲಿ ಅವಳಿಗೊಂದು ಹತ್ತಿಯ ತೋಟ ಸಿಕ್ಕಿತು. ಆಚೀಚೆ ಬಿದ್ದಿದ್ದ ಕಡ್ಡಿಗಳನ್ನೆಲ್ಲಾ ಜೋಡಿಸಿಕೊಂಡು ಅದರಲ್ಲೊಂದು ಪೊರಕೆ ಮಾಡಿ, ಸುತ್ತೆಲ್ಲಾ ಗುಡಿಸಿ ಸ್ವಚ್ಛಮಾಡಿದಳು. ಇವರ ಮನೋಧರ್ಮ ಕಂಡು ಹತ್ತಿ ಗಿಡಗಳು ಸಂತೋಷಗೊಂಡು ಹರಸಿದವು. ಮುಂದುವರೆದಾಗ ಅಲ್ಲೊಂದು ಬಾಳೆಯ ತೋಟ ಸಿಕ್ಕಿತು. ಅದನ್ನೂ ಗುಡಿಸಿ ಸ್ವಚ್ಛಗೊಳಿಸಿದಳು. ಬಾಳೆಯ ಹಾರೈಕೆಯನ್ನೂ ಹೊತ್ತು ಮುನ್ನಡೆದಳು. ಅಲ್ಲೊಂದು ಎತ್ತಿನ ಹಟ್ಟಿಯಿತ್ತು. ತನ್ನಲ್ಲಿದ್ದ ಪೊರಕೆಯಿಂದ ಹಟ್ಟಿಯನ್ನೆಲ್ಲಾ ತೊಳೆದು ಶುಚಿ ಮಾಡಿ, ಎತ್ತನ್ನೂ ಸ್ವಚ್ಛಗೊಳಿಸಿದಳು. ಇದರಿಂದ ಸಂತಸಗೊಂಡ ಎತ್ತೂ ಆಕೆಯನ್ನು ಹರಸಿತು. ಮುಂದೆ ಬಂದಾಗ ಸಿಕ್ಕಿದ್ದು ತುಳಸಿ ಗಿಡ. ಅದರ ಸುತ್ತೆಲ್ಲಾ ಶುಚಿಗೊಳಿಸಿದ್ದರಿಂದ ತುಳಸಿಯೂ ಆಕೆಯನ್ನು ಹರಸಿತು.
ಅಲ್ಲಿಂದಲೂ ಆಕೆ ಮುಂದೆ ಬಂದಾಗ ದೊರೆತಿದ್ದು, ಸನ್ಯಾಸಿಯೊಬ್ಬರ ಕುಟೀರ. ಅವರ ಧ್ಯಾನ ಭಂಗ ಮಾಡಬಾರದೆಂಬ ಉದ್ದೇಶದಿಂದ ಸುಮ್ಮನೆ ನಿಂತುಕೊಂಡಳು. ಆಕೆ ಯಾವುದೇ ಶಬ್ದ ಮಾಡದಿದ್ದರೂ, ಅವಳ ಆಗಮನವಾದದ್ದು ಸನ್ಯಾಸಿಗೆ ತಿಳಿಯಿತು. ಆಕೆಯನ್ನು ಕರೆದು ಮಾತಾಡಿಸಿದರು. ಆಕೆ ತನ್ನೆಲ್ಲಾ ಕಷ್ಟಗಳನ್ನೂ ಹೇಳಿಕೊಂಡಳು.. ಕೆಲಕಾಲ ಯೋಚಿಸಿದ ಸನ್ಯಾಸಿಗಳು, ಸಮೀಪದ ಕೊಳದಲ್ಲಿ ಒಮ್ಮೆ ಮುಳುಗೆದ್ದು ಬರುವಂತೆ ಸೂಚಿಸಿದರು.
ಇದನ್ನೂ ಓದಿ: ಮಕ್ಕಳ ಕಥೆ: ಬಾವಲಿಗಳು ರಾತ್ರಿಯಲ್ಲೇ ಹೊರಗೆ ಬರುವುದೇಕೆ?
ಕೊಳದಲ್ಲಿ ಮುಳುಗೆದ್ದು ಬರುವಷ್ಟರಲ್ಲಿ ಆಕೆ ಉದ್ದ ಕೂದಲಿನ ಸುಂದರಿಯಾಗಿ ಬದಲಾಗಿದ್ದಳು. ತನ್ನ ಕುಟೀರದೊಳಗಿದ್ದ ಬಿದಿರಿನ ಬುಟ್ಟಿಗಳ ಪೈಕಿ ಒಂದನ್ನು ತರುವಂತೆ ಆಕೆಗೆ ಸೂಚಿಸಿದರು. ಆಕೆ ಇರುವುದರಲ್ಲೇ ಸಣ್ಣದನ್ನು ತೆಗೆದುಕೊಂಡು ಬಂದಳು. ಸನ್ಯಾಸಿಗಳು ತಮ್ಮೆದುರೇ ಅದನ್ನು ತೆರೆಯುವಂತೆ ಹೇಳಿದರು. ತೆರೆದು ನೋಡಿದರೆ, ಅದರ ತುಂಬಾ ಚಿನ್ನ-ಬೆಳ್ಳಿ, ಮುತ್ತು-ರತ್ನಗಳಿದ್ದವು. ಆಕೆ ಸಂತೋಷದಿಂದ ಮನೆಯತ್ತ ತೆರಳಿದಳು. ಮಾರ್ಗಮಧ್ಯದಲ್ಲಿ, ತುಳಸಿ ಗಿಡ ಆಕೆಗೆ ಗಂಡನ ಪ್ರೀತಿ ಸಿಗಲಿ ಎಂದು ಹರಸಿತು. ಎತ್ತು ಆಕೆಗೆ ಚಿಪ್ಪಿನ ಒಡವೆಗಳನ್ನು ನೀಡಿ, ಇದನ್ನು ಅಲ್ಲಾಡಿಸಿದರೆ ಮತ್ತಷ್ಟು ಒಡವೆಗಳು ದೊರೆಯುವವು ಎಂದು ಹೇಳಿತು. ಬಾಳೆಯ ಗಿಡ ಆಕೆಗೆ ಬಾಳೆಲೆಯೊಂದನ್ನು ನೀಡಿ, ಅದರಿಂದ ಬೇಕಾದಷ್ಟು ರುಚಿಯಾದ ಭಕ್ಷ್ಯಗಳು ದೊರೆಯುವುದಾಗಿ ಹೇಳಿತು. ಹತ್ತಿಯ ಗಿಡ ಆಕೆ ಬೇಕಾದಷ್ಟು ವಸ್ತ್ರಗಳನ್ನು ನೀಡುವ ಕೊಂಬೆಯೊಂದನ್ನು ಕೊಟ್ಟಿತು.
ಇವೆಲ್ಲವನ್ನೂ ಹೊತ್ತು ಮನೆಗೆ ಬಂದ ಆಕೆಯನ್ನು ನೋಡಿ ಎರಡನೇ ಹೆಂಡತಿಗೆ ಪರಮಾಶ್ಚರ್ಯ! ಈಕೆ ತನ್ನ ಕಥೆಯನ್ನೆಲ್ಲ ತಂಗಿಗೆ ಹೇಳಿದಳು. ಮಾತ್ರವಲ್ಲ, ತನ್ನ ಸಂಪತ್ತಿನ ಒಂದು ಪಾಲನ್ನು ತಂಗಿಗೂ ನೀಡಿದಳು. ಆದರೆ ತಂಗಿಯ ದುರಾಸೆಯ ಮನಸ್ಸಿಗೆ ತೃಪ್ತಿಯೆಲ್ಲಿ?
ಮೊದಲ ಹೆಂಡತಿಯ ಅದೃಷ್ಟಕ್ಕೆ ಕರುಬುತ್ತಾ ತಾನೂ ಅಲ್ಲಿಗೆ ಹೋದರೆ ತನಗೂ ಇದೇ ಥರ ಶ್ರೀಮಂತಿಕೆ ಸಿಗಬಹುದು ಎಂದುಕೊಂಡು ಕಾಡಿನ ಹಾದಿ ಹಿಡಿದಳು ಎರಡನೇ ಹೆಂಡತಿ. ದಾರಿಯಲ್ಲಿ ಅವಳಿಗೂ ಹತ್ತಿ, ಬಾಳೆ, ಎತ್ತು ಮತ್ತು ತುಳಸಿಗಳು ದೊರೆತವು. ಯಾವುದರತ್ತಲೂ ನೋಡದೆ ತನ್ನಷ್ಟಕ್ಕೆ ತಾನು ಸನ್ಯಾಸಿಯ ಕುಟೀರದತ್ತ ನಡೆದಳು. ಅವಳಿಗೂ ಸಮೀಪದ ಕೊಳದಲ್ಲಿ ಒಂದು ಬಾರಿ ಮುಳುಗಿ ಬರುವಂತೆ ಸನ್ಯಾಸಿ ಹೇಳಿದರು. ಒಮ್ಮೆ ಮುಳುಗೇಳುತ್ತಿದ್ದಂತೆ ಆಕೆಯೂ ಉದ್ದಕೂದಲ ಸುಂದರಿಯಾಗಿದ್ದಳು. ಆದರೀಗ ಅಕ್ಕನಿಗಿಂತ ಹೆಚ್ಚು ಚಂದ ಕಾಣಬೇಕಲ್ಲ, ಹಾಗಾಗಿ ಮತ್ತೊಮ್ಮೆ ಮುಳುಗಿದಳು. ಏಳುವಷ್ಟರಲ್ಲಿ ತಲೆಯೆಲ್ಲಾ ಬೋಳಾಗಿ ಕುರೂಪಿಯಾಗಿದ್ದಳು. ಇವಳ ದುರಾಸೆಯ ಬುದ್ಧಿಯಿಂದ ಕುಪಿತರಾದ ಸನ್ಯಾಸಿ, ಅಲ್ಲಿಂದ ಓಡಿಸಿದರು. ಅಳುತ್ತಾ ಮನೆಗೆ ಮರಳಿದ ಆಕೆಯನ್ನು ನೋಡಿ, ವರ್ತಕನಿಗೆ ಅಚ್ಚರಿಯಾಯಿತು. ಆತ ತನ್ನ ತಿರುಗಾಟದಿಂದ ಆಗಷ್ಟೇ ಮರಳಿ ಬಂದಿದ್ದ. ಮೊದಲ ಹೆಂಡತಿ ಚೆಲುವೆಯಾದದ್ದನ್ನು ಕಂಡು ಇನ್ನಷ್ಟು ಆಶ್ಚರ್ಯವಾಯಿತು ಆತನಿಗೆ. ಬಳಿಕ ಕತೆಯೆಲ್ಲಾ ಅವನಿಗೆ ತಿಳಿಯಿತು. ಅಂದಿನಿಂದ ದುರಾಸೆಯ ಎರಡನೇ ಹೆಂಡತಿ ಮನೆಯ ಪರಿಚಾರಕಿಯಂತೆ ಇರಬೇಕಾಯಿತು. ಮೊದಲ ಹೆಂಡತಿ ಮನೆಯ ಯಜಮಾನಿಯಾಳು.
ಇದನ್ನೂ ಓದಿ: ಮಕ್ಕಳ ಕಥೆ: ಬಡವ ಓಂದಾ ಮತ್ತು ಪಿಟೀಲು ಭೂತ