ತುಂಬಾ ಹಿಂದೆ ಚೀನಾದ ಹಳ್ಳಿಯಲ್ಲಿ ಒಂದು ಕುಟುಂಬವಿತ್ತು. ವಯಸ್ಸಾದ ತಂದೆ, ತಾಯಿ, ಹದಿಹರೆಯದ ಮಗಳು ಮತ್ತು ಆಕೆಗೊಬ್ಬ ಪುಟ್ಟ ತಮ್ಮ- ಇಷ್ಟೇ ಮಂದಿ ಆ ಮನೆಯಲ್ಲಿ ಇದ್ದುದು. ಆ ಹುಡುಗಿಯ ಹೆಸರು ಮುಲಾನಾ. ಅವಳೇ ಇಂದಿನ ನಮ್ಮ ಕತೆಯ ನಾಯಕಿ.
ಒಂದು ದಿನ ಹಳ್ಳಿಯಲ್ಲಿ ಡಂಗುರ ಕೇಳಿಸಿತು. ʼʼಯುದ್ಧ ಹತ್ತಿರವಾಗುತ್ತಿದೆ. ಶತ್ರು ಸೈನಿಕರು ನಮ್ಮ ದೇಶದ ಸಮೀಪ ಬರುತ್ತಿದ್ದಾರೆ. ಪ್ರತಿಯೊಂದು ಮನೆಯಿಂದಲೂ ಒಬ್ಬ ಗಂಡಸು ಬಂದು ಸೇನೆಯನ್ನು ಸೇರಿ ಹೋರಾಡಬೇಕು. ಇದು ಚಕ್ರವರ್ತಿಗಳ ಆಜ್ಞೆ. ತಪ್ಪಿಸಿದ ಕುಟುಂಬವನ್ನು ಶಿಕ್ಷಿಸಲಾಗುತ್ತದೆ.ʼʼ
ಇದನ್ನು ಕೇಳಿ ಮುಲಾನಾ ಮನೆಗೆ ಓಡಿಬಂದಳು. ತಂದೆ ಕೂಡ ಈ ಡಂಗುರವನ್ನು ಕೇಳಿಸಿಕೊಂಡಿದ್ದ. ʼʼಅಪ್ಪಾ, ಡಂಗುರ ಕೇಳಿದೆಯಾ?ʼʼ ಎಂದು ಮುಲಾನಾ ಕೇಳಿದಳು.
ʼʼಹೌದು ಮಗಳೇʼʼ
ʼʼಅಪ್ಪಾ, ಏನು ಮಾಡೋಣ?ʼʼ
ʼʼಏನು ಮಾಡಲಿ ಮಗಳೇ, ನಿನ್ನ ಸೋದರ ಸಣ್ಣವನು. ನಾನೇ ಹೋಗಬೇಕು, ಹೋಗುತ್ತೇನೆʼ’
ʼʼತಡಿ ಅಪ್ಪಾ, ಒಂದು ಕ್ಷಣ ಇರುʼʼ ಎಂದವಳೇ ಮುಲಾನಾ ಒಳಕೋಣೆಗೆ ಹೋದಳು. ಒಂದು ಕತ್ತರಿ ತೆಗೆದುಕೊಂಡು ತನ್ನ ಉದ್ದ ತಲೆಕೂದಲನ್ನು ಕತ್ತರಿಸಿದಳು. ತಲೆಗೆ ಟೊಪ್ಪಿ ಇಟ್ಟಳು. ಪ್ಯಾಂಟ್ ಧರಿಸಿದಳು. ಹೊರಗೆ ಬಂದಳು.
ʼʼಅಪ್ಪಾ, ಈಗ ನೋಡು, ನಾನು ಸೈನ್ಯಕ್ಕೆ ಸೇರುತ್ತೇನೆʼʼ
ಅಪ್ಪನಿಗೆ ಗಾಬರಿ ಆಯಿತು. ʼʼಹಾಗೆ ಮಾಡಬೇಡ ಮಗಳೇ. ಕ್ರೂರ ಸೈನಿಕರ ವಿರುದ್ಧ ಹೋರಾಡಲು ನಿನ್ನಿಂದ ಸಾಧ್ಯವೇ?ʼʼ ಎಂದ.
ʼʼಯಾಕಿಲ್ಲ ಅಪ್ಪಾ? ನೀನೇ ನನಗೆ ಕುಂಗ್‌ಫು ಹೇಳಿಕೊಟ್ಟಿದ್ದೀಯ. ಗುರುಗಳಿಂದ ಕತ್ತಿವರಸೆ ಕಲಿತಿದ್ದೇನೆ. ನೋಡುʼʼ ಎಂದು ಕತ್ತಿ ಬೀಸಿ ತನ್ನ ವಿದ್ಯೆ ತೋರಿಸಿದಳು.
ಆದರೂ ಅಪ್ಪನಿಗೆ ಮಗಳನ್ನು ಕಳಿಸಲು ಮನಸ್ಸಿಲ್ಲ. ಮುಲಾನಾ ಕಷ್ಟಪಟ್ಟು ಅವನನ್ನು ಒಪ್ಪಿಸಿದಳು. ಗಂಡಸಿನಂತೆ ವೇಷ ಧರಿಸಿ, ಕುದುರೆ ಏರಿ, ಸೈನ್ಯಾಧಿಕಾರಿ ಬಳಿ ಹೋದಳು. ಕತ್ತಿವರಸೆ, ಕುಂಗ್‌ಫು ಪ್ರದರ್ಶಿಸಿ ಆತನನ್ನು ಮೆಚ್ಚಿಸಿದಳು. ಸೈನ್ಯ ಸೇರಿಕೊಂಡಳು.
ಈ ಕತೆಯನ್ನೂ ಓದಿ: ಮಕ್ಕಳ ಕತೆ : ಮೂವರನ್ನು ರಕ್ಷಿಸಿದವನ ಕತೆ ಏನಾಯಿತು?
ಮುಂದೆ ಕೆಲವೇ ದಿನಗಳಲ್ಲಿ ಶತ್ರು ಸೈನಿಕರ ಜೊತೆಗೆ ಹೋರಾಟ ನಡೆಯಿತು. ಮುಲಾನಾ ಭಯಂಕರವಾಗಿ ಸೆಣಸಿದಳು. ಶತ್ರುಗಳನ್ನು ಚೆಂಡಾಡಿದಳು. ಇದನ್ನು ನೋಡಿ ಸೈನ್ಯಾಧಿಕಾರಿಗಳು ಮೆಚ್ಚಿದರು. ಆಕೆಯನ್ನು ಸೈನ್ಯದ ತುಕಡಿಯ ನಾಯಕಿಯನ್ನಾಗಿ ಮಾಡಿದರು. ಅಲ್ಲೂ ಮುಲಾನಾ ತನ್ನ ನಾಯಕತ್ವ ಗುಣ ತೋರಿಸಿದಳು. ಮುಂದೆ ಆಕೆಗೆ ಇನ್ನೂ ದೊಡ್ಡ ಸ್ಥಾನ ಸಿಕ್ಕಿತು. ಅವಳು ಸೈನ್ಯದ ದೊಡ್ಡ ರೆಜಿಮೆಂಟ್‌ನ ನಾಯಕಿಯಾದಳು.
ಹಾಗೇ ಕೆಲವು ದಿನ ಕಳೆದವು. ಒಂದು ಸಲ ಮುಲಾನಾ ಕಾಯಿಲೆ ಬಿದ್ದಳು. ಆಕೆಯ ಆರೋಗ್ಯ ತಪಾಸಣೆಗೆ ಬಂದ ವೈದ್ಯರಿಗೆ ಈಕೆ ಹೆಣ್ಣು ಎಂಬ ಸತ್ಯ ಗೊತ್ತಾಯಿತು. ಅವರು ಅದನ್ನು ಇತರರಿಗೆ ಹೇಳಿದರು. ರೆಜಿಮೆಂಟ್‌ನಲ್ಲಿ ಕೋಲಾಹಲವೇ ಎದ್ದಿತು.
ʼʼನಮಗೆ ಆಜ್ಞೆ ಮಾಡುವವಳು ಒಬ್ಬಳು ಹೆಣ್ಣೇ! ಛೀ! ಇದು ಅವಮಾನ!ʼʼ ಎಂದು ಬಹಳ ಮಂದಿ ಸಿಡಿದೆದ್ದರು.
ʼʼಹೆಣ್ಣಾದರೇನು? ನಾವ್ಯಾರೂ ತೋರಿಸದಂಥ ಶೌರ್ಯ ಪರಾಕ್ರಮಗಳನ್ನು ಅವಳು ತೋರಿಸಿದ್ದಾಳೆ. ಅವಳು ನಮ್ಮ ನಾಯಕಿಯಾಗಲು ತಕ್ಕವಳುʼʼ ಎಂದು ಕೆಲವಷ್ಟು ಮಂದಿ ವಾದಿಸಿದರು.
ಇವರ ವಾದವಿವಾದ ಮುಗಿಯುವ ಮುನ್ನವೇ ಗಡಿಯ ಕಡೆಯಿಂದ ಕೋಲಾಹಲ ಕೇಳಿಸಿತು. ಶತ್ರು ಸೈನಿಕರು ಗಡಿ ದಾಟಿ ಒಳಗೆ ಬಂದುಬಿಟ್ಟಿದ್ದರು. ಇನ್ನು ಒಂದು ಸೇತುವೆ ದಾಟಿದರೆ ಅವರು ದೇಶದೊಳಗೆ ಪೂರ್ತಿಯಾಗಿ ಬಂದುಬಿಡುತ್ತಿದ್ದರು.
ಸೈನಿಕರಿಗೆ ಏನು ಮಾಡುವುದು ಎಂದು ತೋಚದಾಯಿತು. ಕಂಗಾಲಾದರು. ಅಷ್ಟರಲ್ಲಿ ಮುಲಾನಾ ಚೇತರಿಸಿಕೊಂಡು ಎದ್ದಳು. ʼʼಶತ್ರುಸೈನಿಕರು ಸೇತುವೆಯ ಮೇಲೆ ಮುಕ್ಕಾಲುಭಾಗದಷ್ಟು ಬರಲಿ. ನಂತರ ಸೇತುವೆಯನ್ನು ಈ ಕಡೆಯಿಂದ ಕಡಿದುಹಾಕಿʼʼ ಎಂದು ಆದೇಶವಿತ್ತಳು.
ಸೈನಿಕರು ಹಾಗೇ ಮಾಡಿದರು. ಶತ್ರುಸೈನಿಕರ ದೊಡ್ಡ ದಳವೇ ಕಂದಕಕ್ಕೆ ಬಿದ್ದು ನಾಶವಾಯಿತು. ದೇಶಕ್ಕೆ ಬಂದ ದೊಡ್ಡ ಗಂಡಾಂತರ ತಪ್ಪಿತು. ಮುಲಾನಾಳ ಜಾಣ್ಮೆ, ಸಮಯಪ್ರಜ್ಞೆ, ಚುರುಕುತನಕ್ಕೆ ಸೇನಾ ನಾಯಕರೂ, ಚಕ್ರವರ್ತಿಯೂ ತುಂಬಾ ಸಂತೋಷಗೊಂಡರು.
ʼʼನಿನಗೆ ಏನು ಬೇಕು ಕೇಳಿಕೋʼʼ ಎಂದು ಚಕ್ರವರ್ತಿ ಕೇಳಿದ. ʼʼನಾನು ಊರಿಗೆ ಹೋಗಿ ನನ್ನ ಅಪ್ಪ ಅಮ್ಮನನ್ನು ಕಾಣಬೇಕು. ಹಾಗೇ ನನ್ನಂತೆ ಹೋರಾಡಲು ಬಯಸುವ ತರುಣಿಯರಿಗೆ ಸೈನ್ಯದಲ್ಲಿ ಅವಕಾಶ ಇರಬೇಕು. ಹೋರಾಡಲು ಇಷ್ಟವಿಲ್ಲದ ಕುಟುಂಬಗಳ ಮೇಲೆ ಒತ್ತಾಯ ಮಾಡಬಾರದುʼʼ ಎಂದು ಅವಳು ಕೇಳಿದಳು.
ʼʼಆಗಲಿʼʼ ಎಂದು ರಾಜ ಒಪ್ಪಿದ. ಮುಲಾನಾ ಮನೆಗೆ ಹೊರಟಳು.
ಇದನ್ನೂ ಓದಿ: Motivational story: ಕುಂಟ ನಾಯಿ ಮರಿಯ ನೋವು ಆ ಮಗುವಿಗಷ್ಟೇ ಅರ್ಥವಾಯ್ತು…