ಒಂದಾನೊಂದು ಕಾಡಿನಲ್ಲಿ ಪ್ರಾಣಿಗಳೆಲ್ಲಾ ಕಷ್ಟಪಟ್ಟು ದುಡಿದು ಸಂತೋಷದಿಂದ ವಾಸಿಸುತ್ತಿದ್ದವು. ಅವೆಲ್ಲವುಗಳ ನಡುವೆ ಆಮೆಯೊಂದು ಯಾವ ಕೆಲಸವನ್ನೂ ಮಾಡದೆ ಸೋಮಾರಿತನದಿಂದ ಕಾಲಕಳೆಯುತ್ತಿತ್ತು. ಬಿತ್ತನೆಯ ಹೊತ್ತಿಗೆ ಹೊರಗೆಲ್ಲೂ ಕಾಣದ ಆಮೆ, ಕಟಾವಿನ ಹೊತ್ತಿಗೆ ಎಲ್ಲಾದರೂ ಕಾಣಿಸಿಕೊಂಡು ಯಾರಿಗಾದರೂ ಮೋಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಇದರಿಂದ ಎಲ್ಲಾ ಪ್ರಾಣಿಗಳು ಅದರ ಸಹವಾಸದಿಂದ ದೂರವೇ ಇದ್ದವು. ಯಾರಿಗೂ ಆಮೆಯ ಮೇಲೆ ಪ್ರೀತಿ ಇರಲಿಲ್ಲ.
ಆಮೆಯ ನೆರೆಮನೆಯ ಮರದಲ್ಲಿ ಹಕ್ಕಿಯೊಂದು ವಾಸಿಸುತ್ತಿತ್ತು. ಹಕ್ಕಿಗಳಿಗೆ ಆಮೆಯ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಹಾಗಾಗಿ ಮೆಲ್ಲನೆ ಹಕ್ಕಿಯ ಮನೆಗೆ ಹೋದ ಆಮೆ ಮಾತಿಗೆ ತೊಡಗಿತು. ʻಇತ್ತೀಚೆಗೆ ಹೊರಗೆಲ್ಲೂ ಕಾಣುವುದಿಲ್ಲ ನೀನು. ಏನು ಮಾಡುತ್ತಿದ್ದಿ?ʼ ಆಮೆ ಮಾತಿಗೆ ಶುರುವಿಟ್ಟಿತು. ಆಮೆಯ ಕಲ್ಯಾಣಗುಣಗಳ ಬಗ್ಗೆ ತಿಳಿಯದ ಹಕ್ಕಿ, ʻನಮ್ಮ ಹಕ್ಕಿಗಳಲ್ಲಿ ಈ ಕಾಲಕ್ಕೆ ಔತಣಕೂಟವೊಂದನ್ನು ಏರ್ಪಡಿಸುತ್ತೇವೆ, ಮೋಡಗಳ ನಾಡಿನಲ್ಲಿ. ಅದಕ್ಕಾಗಿ ತುಂಬಾ ಸಿದ್ಧತೆ ಮಾಡಬೇಕು. ಸಮಯವೇ ಸಿಗುತ್ತಿಲ್ಲʼ ಎಂದು ಹೇಳಿತು. ಔತಣ ಎನ್ನುತ್ತಿದ್ದಂತೆ ಆಮೆಯ ಕಿವಿ ನೆಟ್ಟಗಾಯಿತು. ʻಭಾಳಾ ಒಳ್ಳೇದು. ನನಗೂ ನಿಮ್ಮಗಳ ಔತಣ ನೋಡುವ ಆಸೆ. ಕರೆದರೆ ನಾನೂ ಬರ್ತೀನಿʼ ಎಂದಿತು ನಾಚಿಕೆಬಿಟ್ಟು. ʻಅಯ್ಯೋ ಅದಕ್ಕೇನಂತೆ. ಧಾರಾಳವಾಗಿ ಬಾʼ ಎಂದಿತು ಹಕ್ಕಿ.
ಆದರೆ ಇಲ್ಲೊಂದು ಸಮಸ್ಯೆಯಿತ್ತು. ಮೋಡಗಳ ನಾಡಿಗೆ ಆಮೆ ಹೋಗುವುದು ಹೇಗೆ? ಎಲ್ಲಾ ಹಕ್ಕಿಗಳೂ ಸೇರಿ ಒಂದು ನಿರ್ಧಾರಕ್ಕೆ ಬಂದವು. ಪ್ರತಿಯೊಂದು ಹಕ್ಕಿಯೂ ತನ್ನ ಒಂದು ಗರಿಯನ್ನು ಆಮೆಗೆ ನೀಡಬೇಕು. ಇದರಿಂದ ಒಂದು ತಾತ್ಕಾಲಿಕ ರೆಕ್ಕೆಯನ್ನು ಮಾಡಿಕೊಳ್ಳುವ ಆಮೆ, ಔತಣಕೂಟಕ್ಕೆ ಬರಬಹುದು ಎಂದು ತೀರ್ಮಾನಿಸಿದವು. ಇದರಿಂದ ಸಂತೋಷಗೊಂಡ ಆಮೆ, ತನ್ನ ಹೊಸ ತಾತ್ಕಾಲಿಕ ರೆಕ್ಕೆಯೊಂದಿಗೆ ಹಾರಿ ಮೋಡಗಳ ನಾಡಿಗೆ ಹೋಯಿತು.
ಇದನ್ನೂ ಓದಿ: ಮಕ್ಕಳ ಕಥೆ: ನಾಯಿಗಳಿಗೆ ನಮ್ಮೊಂದಿಗೆ ಸ್ನೇಹವೇಕೆ?
ಎಲ್ಲರೂ ಆಮೆಯನ್ನು ಸ್ವಾಗತಿಸಿದರು. ಮೋಡದ ಮೇಜಿನ ಮೇಲೆ ಬಗೆಬಗೆಯ ಆಹಾರವನ್ನು ಇರಿಸಲಾಗಿತ್ತು. ಆಮೆಯ ಬಾಯಲ್ಲಿ ನೀರೂರಿತು. ಎಲ್ಲರೂ ತಮ್ಮನ್ನು ಹೊಸದೊಂದು ಹೆಸರಿನಿಂದ ಪರಿಚಯಿಸಿಕೊಳ್ಳುವ ಆಟವನ್ನು ಆಡೋಣ ಎಂದು ಆಮೆ ಹೇಳಿತು. ಎಲ್ಲರೂ ಕುತೂಹಲದಿಂದ ಒಪ್ಪಿಕೊಂಡರು. ಅಂತೆಯೇ ಎಲ್ಲರೂ ತಮಗೆ ಹೊಸದೊಂದು ಹೆಸರಿಟ್ಟು ಕರೆದುಕೊಂಡರು. ಆಮೆ ತನ್ನ ಹೆಸರನ್ನು ʻನಮ್ಮೆಲ್ಲರದ್ದುʼ ಎಂದು ಹೇಳಿಕೊಂಡಿತು.
ಈ ಆಟ ಮುಗಿದ ಮೇಲೆ, ʻಮೇಜಿನ ಮೇಲಿರುವ ಆಹಾರ ಯಾರದ್ದು?ʼ ಎಂದು ಕೇಳಿತು ಆಮೆ. ʻಅದು ನಮ್ಮೆಲ್ಲರದ್ದುʼ ಎಂದು ಹಕ್ಕಿಗಳೆಲ್ಲ ಒಕ್ಕೊರಲಿನಿಂದ ಹೇಳಿದವು. ʻಅಯ್ಯೋ ಹೌದಾ? ತುಂಬಾ ಸಂತೋಷ. ಅದು ನನ್ನದೇ ಹೆಸರುʼ ಎಂದ ಆಮೆ, ಮೇಜಿನ ಮೇಲೆ ಕುಳಿತು ಗಬಗಬನೆ ಆಹಾರವನ್ನು ತಿನ್ನಲಾರಂಭಿಸಿತು. ಇದರಿಂದ ಕುಪಿತರಾದ ಹಕ್ಕಿಗಳು ಔತಣವನ್ನು ಧಿಕ್ಕರಿಸಿದವು. ಆಮೆ ಅದಕ್ಕೆಲ್ಲಾ ಬೇಸರ ಮಾಡಿಕೊಳ್ಳದೆ, ಇದ್ದಷ್ಟನ್ನೂ ಮುಕ್ಕಿತು.
ನಂತರ ಭೂಮಿಗೆ ಬರಬೇಕಲ್ಲ. ಆಮೆಯ ಮೈತೂಕ ಈಗ ತುಂಬಾ ಹೆಚ್ಚಾಗಿತ್ತು. ಅದಕ್ಕಿದ್ದ ರೆಕ್ಕೆಯಲ್ಲಿ ಹಾರಲು ಸಾಧ್ಯವೇ ಇರಲಿಲ್ಲ. ತನಗೆ ಇನ್ನೊಂದಿಷ್ಟು ಪುಕ್ಕಗಳನ್ನು ಕೊಡಬೇಕೆಂದು ಹಕ್ಕಿಗಳನ್ನು ಕೇಳಿಕೊಂಡಿತು. ಮೊದಲೇ ಕೋಪಗೊಂಡಿದ್ದ ಹಕ್ಕಿಗಳು ಆಮೆಯನ್ನು ಬಿಟ್ಟು ಹಾರಿಹೋದವು. ಬೇರೆದಾರಿ ಕಾಣದೆ ಇರುವ ರೆಕ್ಕೆಯಲ್ಲೇ ಹಾರಲು ಯತ್ನಿಸಿತು ಆಮೆ. ಆದರೆ ರೆಕ್ಕೆಯ ಬಲ ಸಾಕಾಗದೆ ಮೇಲಿನಿಂದ ಕುಸಿದು ಭೂಮಿಗೆ ಬಿತ್ತು. ಇದರಿಂದ ಅದರ ಚಿಪ್ಪು ಬಿರುಕು ಬಿಟ್ಟಿದೆ ಎನ್ನುತ್ತದೆ ಈ ಕಥೆ.
ಇದನ್ನೂ ಓದಿ: ಮಕ್ಕಳ ಕಥೆ: ಮರವಾಗಲು ಬಯಸಿದ ಶಿಲ್ಪಿ